ಕೀರ್ತನೆಗಳು 28 : 1 (ERVKN)
ಯೆಹೋವನೇ, ನೀನೇ ನನ್ನ ಬಂಡೆ. ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ. ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ ಜನರು ನನ್ನನ್ನು ಪರಿಗಣಿಸುವರು.
ಕೀರ್ತನೆಗಳು 28 : 2 (ERVKN)
ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು. ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
ಕೀರ್ತನೆಗಳು 28 : 3 (ERVKN)
ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ. ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತರೆ. *ಅವರು … ಮಾಡುತ್ತಾರೆ ಇದು ಶ್ಲೇಷ ಮಾತುಗಳ ಸರಣಿ. ಹೀಬ್ರೂ ಭಾಷೆಯಲ್ಲಿ “ನೆರೆಯವನು” ಎಂಬ ಪದವು “ದುಷ್ಟನು” ಎಂಬ ಪದದಂತೆ ಕಂಡುಬರುತ್ತದೆ. “ಸಮಾಧಾನ” ಎಂಬ ಪದಕ್ಕೆ ಹೀಬ್ರೂ ಭಾಷೆಯಲ್ಲಿ “ಶಾಲೋಮ್” ಎನ್ನುತ್ತಾರೆ. ಈ ಪದವನ್ನು ಒಬ್ಬರನ್ನೊಬ್ಬರು ಅಭಿನಂದಿಸುವಾಗ ಉಪಯೆಗಿಸುತ್ತಾರೆ.
ಕೀರ್ತನೆಗಳು 28 : 4 (ERVKN)
ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು. ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು. ಅವರಿಗೆ ತಕ್ಕ ದಂಡನೆಯನ್ನು ಕೊಡು.
ಕೀರ್ತನೆಗಳು 28 : 5 (ERVKN)
ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ ನಿತ್ಯನಾಶಮಾಡುವನು.
ಕೀರ್ತನೆಗಳು 28 : 6 (ERVKN)
ಯೆಹೋವನಿಗೆ ಸ್ತೋತ್ರವಾಗಲಿ! ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
ಕೀರ್ತನೆಗಳು 28 : 7 (ERVKN)
ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ. ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ
ಆತನು ನನಗೆ ಸಹಾಯಮಾಡಿದನು. ಆದಕಾರಣ ನನ್ನ ಹೃದಯವು ಹರ್ಷಿಸುವುದು; ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
ಕೀರ್ತನೆಗಳು 28 : 8 (ERVKN)
ಯೆಹೋವನು ತನ್ನ ಜನರಿಗೆ ಬಲವೂ ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
ಕೀರ್ತನೆಗಳು 28 : 9 (ERVKN)
ಯೆಹೋವನೇ, ನಿನ್ನ ಜನರನ್ನು ರಕ್ಷಿಸು, ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು! ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.

1 2 3 4 5 6 7 8 9