ಕೀರ್ತನೆಗಳು 18 : 1 (ERVKN)
ನನ್ನ ಬಲವಾಗಿರುವ ಯೆಹೋವನೇ, ನಿನ್ನನ್ನೇ ಪ್ರೀತಿಸುವೆನು!
ಕೀರ್ತನೆಗಳು 18 : 2 (ERVKN)
ಯೆಹೋವನು ನನ್ನ ಬಂಡೆಯೂ *ಬಂಡೆ ದೇವರ ಹೆಸರು. ಆತನು ಕೋಟೆಯಂತಿದ್ದಾನೆ ಅಥವಾ ಬಲವಾದ ಸುರಕ್ಷಿತ ಸ್ಥಳದಂತಿದ್ದಾನೆ ಎಂಬುದನ್ನು ಇದು ತೋರಿಸುತ್ತದೆ. ನನ್ನ ಕೋಟೆಯೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.
ಕೀರ್ತನೆಗಳು 18 : 3 (ERVKN)
ಯೆಹೋವನಿಗೆ ಸ್ತೋತ್ರವಾಗಲಿ! ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಕೀರ್ತನೆಗಳು 18 : 4 (ERVKN)
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು. ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಕೀರ್ತನೆಗಳು 18 : 5 (ERVKN)
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು. ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಕೀರ್ತನೆಗಳು 18 : 6 (ERVKN)
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು; ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು; ನನ್ನ ಮೊರೆಗೆ ಕಿವಿಗೊಟ್ಟನು.
ಕೀರ್ತನೆಗಳು 18 : 7 (ERVKN)
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು; ಪರ್ವತಗಳ ಬುನಾದಿಗಳು ಕಂಪಿಸಿದವು.
ಕೀರ್ತನೆಗಳು 18 : 8 (ERVKN)
ಆತನ ಮೂಗಿನಿಂದ ಹೊಗೆಯು ಬಂದಿತು; ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಕೀರ್ತನೆಗಳು 18 : 9 (ERVKN)
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು. ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
ಕೀರ್ತನೆಗಳು 18 : 10 (ERVKN)
ಕೆರೂಬಿಗಳ ಮೇಲೆ ಆಸೀನನಾಗಿ ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
ಕೀರ್ತನೆಗಳು 18 : 11 (ERVKN)
ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ ಆತನು ಮರೆಯಾದನು.
ಕೀರ್ತನೆಗಳು 18 : 12 (ERVKN)
ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
ಕೀರ್ತನೆಗಳು 18 : 13 (ERVKN)
ಯೆಹೋವನು ಆಕಾಶದಲ್ಲಿ ಗುಡುಗಿದನು; ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
ಕೀರ್ತನೆಗಳು 18 : 14 (ERVKN)
ಆತನು ಬಾಣಗಳನ್ನು †ಬಾಣಗಳು ಅಂದರೆ “ಮಿಂಚು.” ಎಸೆದು ವೈರಿಗಳನ್ನು ಚದರಿಸಿಬಿಟ್ಟನು; ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.
ಕೀರ್ತನೆಗಳು 18 : 15 (ERVKN)
ಯೆಹೋವನೇ, ನೀನು ಆಜ್ಞಾಪಿಸಿದಾಗ ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು. ಭೂಮಿಯ ಅಸ್ತಿವಾರಗಳೂ ಕಾಣಿಸಿದವು.
ಕೀರ್ತನೆಗಳು 18 : 16 (ERVKN)
ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು. ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
ಕೀರ್ತನೆಗಳು 18 : 17 (ERVKN)
ನನ್ನನ್ನು ದ್ವೇಷಿಸುವ ವೈರಿಗಳು ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
ಕೀರ್ತನೆಗಳು 18 : 18 (ERVKN)
ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು, ಯೆಹೋವನು ನನಗೆ ಸಹಾಯಕನಾಗಿ ಬಂದನು.
ಕೀರ್ತನೆಗಳು 18 : 19 (ERVKN)
ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು; ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.
ಕೀರ್ತನೆಗಳು 18 : 20 (ERVKN)
ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು; ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
ಕೀರ್ತನೆಗಳು 18 : 21 (ERVKN)
ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು; ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
ಕೀರ್ತನೆಗಳು 18 : 22 (ERVKN)
ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಯಾವಾಗಲೂ ಜ್ಞಾಪಿಸಿಕೊಳ್ಳುವೆ.
ಕೀರ್ತನೆಗಳು 18 : 23 (ERVKN)
ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು. ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
ಕೀರ್ತನೆಗಳು 18 : 24 (ERVKN)
ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.
ಕೀರ್ತನೆಗಳು 18 : 25 (ERVKN)
ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ ನೀನೂ ನಂಬಿಗಸ್ತನಾಗಿರುವೆ.
ಕೀರ್ತನೆಗಳು 18 : 26 (ERVKN)
ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ; ದುಷ್ಟರಿಗಾದರೋ ಶತ್ರುವಾಗಿರುವೆ.
ಕೀರ್ತನೆಗಳು 18 : 27 (ERVKN)
ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ. ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
ಕೀರ್ತನೆಗಳು 18 : 28 (ERVKN)
ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ. ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
ಕೀರ್ತನೆಗಳು 18 : 29 (ERVKN)
ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ. ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.
ಕೀರ್ತನೆಗಳು 18 : 30 (ERVKN)
ದೇವರ ಮಾರ್ಗಗಳು ನಿಷ್ಕಳಂಕವಾಗಿವೆ; ಯೆಹೋವನ ಮಾತುಗಳು ಸತ್ಯವಾಗಿವೆ. ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
ಕೀರ್ತನೆಗಳು 18 : 31 (ERVKN)
ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ. ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
ಕೀರ್ತನೆಗಳು 18 : 32 (ERVKN)
ಆತನೇ, ನನಗೆ ಬಲವನ್ನು ಕೊಡುವನು; ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.
ಕೀರ್ತನೆಗಳು 18 : 33 (ERVKN)
ಆತನು ನನ್ನ ಪಾದಗಳನ್ನು ಜಿಂಕೆಯಂತೆ ‡ಜಿಂಕೆ ಅಕ್ಷರಶಃ, “ಹೆಣ್ಣುಜಿಂಕೆ.” ವೇಗಗೊಳಿಸುವನು. ಆತನು ನನ್ನನ್ನು ಸ್ಥಿರಗೊಳಿಸುವನು; ಎತ್ತರವಾದ ಸ್ಥಳಗಳಲ್ಲಿ ಬೀಳದಂತೆ ದೃಢಪಡಿಸುವನು.
ಕೀರ್ತನೆಗಳು 18 : 34 (ERVKN)
ಆತನು ನನ್ನನ್ನು ಯುದ್ಧಕ್ಕೆ ತರಬೇತಿಗೊಳಿಸುವನು. ಆದ್ದರಿಂದ ನನ್ನ ತೋಳುಗಳು ದೊಡ್ಡ ಬಿಲ್ಲಿನಿಂದ ಬಾಣವನ್ನು ಎಸೆಯಬಲ್ಲವು. ಆದ್ದರಿಂದ ನಾನು ಬಲವಾದ ಬಿಲ್ಲಿನ ತಂತಿಯನ್ನು ಎಸೆಯಬಲ್ಲೆ.
ಕೀರ್ತನೆಗಳು 18 : 35 (ERVKN)
ದೇವರೇ, ನಿನ್ನ ವಿಜಯದ ಗುರಾಣಿಯನ್ನು ನೀನು ನನಗೆ ಕೊಟ್ಟಿರುವೆ. ನಿನ್ನ ಬಲಗೈ ನನಗೆ ಆಧಾರ ನೀಡುತ್ತದೆ. ನೀನು ನನ್ನನ್ನು ಪದೇಪದೇ ಬಲಗೊಳಿಸಿರುವೆ.
ಕೀರ್ತನೆಗಳು 18 : 36 (ERVKN)
ದೇವರೇ, ನಾನು ಮುಗ್ಗರಿಸದೆ ನಡೆಯಲು ನನ್ನ ಕಾಲುಗಳನ್ನೂ ಹರಡುಗಳನ್ನೂ ಬಲಗೊಳಿಸು.
ಕೀರ್ತನೆಗಳು 18 : 37 (ERVKN)
ಆಗ ನಾನು ಶತ್ರುಗಳನ್ನು ಬೆನ್ನಟ್ಟಿ ಹಿಡಿಯಲು ಶಕ್ತನಾಗುವೆ. ಅವರನ್ನು ನಾಶಮಾಡುವ ತನಕ ನಾನು ಹಿಂತಿರುಗಿ ಬರುವುದಿಲ್ಲ.
ಕೀರ್ತನೆಗಳು 18 : 38 (ERVKN)
ನಾನು ನನ್ನ ಶತ್ರುಗಳನ್ನು ಸೋಲಿಸಿ ಅವರನ್ನು ಏಳಲಾರದಂತೆ ಮಾಡುವೆನು; ನನ್ನ ಶತ್ರುಗಳು ನನ್ನ ಪಾದಗಳ ಕೆಳಗೇ ಇರುವರು.
ಕೀರ್ತನೆಗಳು 18 : 39 (ERVKN)
ದೇವರೇ, ಯುದ್ಧದಲ್ಲಿ ನೀನು ನನ್ನನ್ನು ಬಲಿಷ್ಠನನ್ನಾಗಿ ಮಾಡಿದೆ; ಎಲ್ಲಾ ಶತ್ರುಗಳು ನನ್ನ ಎದುರಿನಲ್ಲಿ ಬೀಳುವಂತೆ ಮಾಡಿದೆ.
ಕೀರ್ತನೆಗಳು 18 : 40 (ERVKN)
ನನ್ನ ಶತ್ರುಗಳಿಗೆ ಕತ್ತಿನ ಮೇಲೆ ಹೊಡೆದು ಕೆಳಗುರುಳಿಸಲು ನೀನು ನನಗೆ ಅವಕಾಶನೀಡಿದೆ.
ಕೀರ್ತನೆಗಳು 18 : 41 (ERVKN)
ನನ್ನ ಶತ್ರುಗಳು ಸಹಾಯಕ್ಕಾಗಿ ಕೂಗಿಕೊಂಡರು. ಆದರೆ ಅವರನ್ನು ರಕ್ಷಿಸಲು ಯಾರೂ ಇರಲಿಲ್ಲ.
ಅವರು ಯೆಹೋವನನ್ನೂ ಕೂಗಿಕೊಂಡರು; ಆದರೆ ಆತನೂ ಅವರಿಗೆ ಉತ್ತರಿಸಲಿಲ್ಲ.
ಕೀರ್ತನೆಗಳು 18 : 42 (ERVKN)
ನಾನು ನನ್ನ ಶತ್ರುಗಳನ್ನು ಹೊಡೆದು ತುಂಡುತುಂಡು ಮಾಡುವೆನು; ಜಜ್ಜಿ ಪುಡಿಪುಡಿ ಮಾಡುವೆನು; ಗಾಳಿ ಬಡಿದುಕೊಂಡು ಹೋಗುವ ಧೂಳಿನಂತೆ ಅವರಾಗುವರು.
ಕೀರ್ತನೆಗಳು 18 : 43 (ERVKN)
ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು. ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು. ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
ಕೀರ್ತನೆಗಳು 18 : 44 (ERVKN)
ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು. ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
ಕೀರ್ತನೆಗಳು 18 : 45 (ERVKN)
ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ ತಮ್ಮ ಕೋಟೆಗಳಿಂದ ಬರುವರು.
ಕೀರ್ತನೆಗಳು 18 : 46 (ERVKN)
ಯೆಹೋವನು ಜೀವಸ್ವರೂಪನಾಗಿದ್ದಾನೆ. ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು. ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
ಕೀರ್ತನೆಗಳು 18 : 47 (ERVKN)
ದೇವರು ನನ್ನ ವೈರಿಗಳನ್ನು ದಂಡಿಸಿ ಅವರನ್ನು ನನಗೆ ಅಧೀನಪಡಿಸಿದ್ದಾನೆ.
ಕೀರ್ತನೆಗಳು 18 : 48 (ERVKN)
ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ. ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ; ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
ಕೀರ್ತನೆಗಳು 18 : 49 (ERVKN)
ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು; ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.
ಕೀರ್ತನೆಗಳು 18 : 50 (ERVKN)
ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು; ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು. ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.
❮
❯