ಕೀರ್ತನೆಗಳು 139 : 1 (ERVKN)
ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ಸಂಪೂರ್ಣವಾಗಿ ತಿಳಿದುಕೊಂಡಿರುವೆ.
ಕೀರ್ತನೆಗಳು 139 : 2 (ERVKN)
ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ. ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
ಕೀರ್ತನೆಗಳು 139 : 3 (ERVKN)
ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ. ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
ಕೀರ್ತನೆಗಳು 139 : 4 (ERVKN)
ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
ಕೀರ್ತನೆಗಳು 139 : 5 (ERVKN)
ನೀನು ನನ್ನ ಸುತ್ತಲೂ ಆವರಿಸಿರುವೆ; ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
ಕೀರ್ತನೆಗಳು 139 : 6 (ERVKN)
ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ, ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
ಕೀರ್ತನೆಗಳು 139 : 7 (ERVKN)
ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ! ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
ಕೀರ್ತನೆಗಳು 139 : 8 (ERVKN)
ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ. ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
ಕೀರ್ತನೆಗಳು 139 : 9 (ERVKN)
ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
ಕೀರ್ತನೆಗಳು 139 : 10 (ERVKN)
ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು. ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.
ಕೀರ್ತನೆಗಳು 139 : 11 (ERVKN)
ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ, “ಹಗಲು ಹೋಗಿ ಕತ್ತಲಾಯಿತು, ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
ಕೀರ್ತನೆಗಳು 139 : 12 (ERVKN)
ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ. ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
ಕೀರ್ತನೆಗಳು 139 : 13 (ERVKN)
ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ. ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
ಕೀರ್ತನೆಗಳು 139 : 14 (ERVKN)
ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು. ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
ಕೀರ್ತನೆಗಳು 139 : 15 (ERVKN)
ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ. ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
ಕೀರ್ತನೆಗಳು 139 : 16 (ERVKN)
ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ. ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
ಕೀರ್ತನೆಗಳು 139 : 17 (ERVKN)
ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ. ಅವು ಅಸಂಖ್ಯಾತವಾಗಿವೆ.
ಕೀರ್ತನೆಗಳು 139 : 18 (ERVKN)
ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ. ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
ಕೀರ್ತನೆಗಳು 139 : 19 (ERVKN)
ಯೆಹೋವನೇ, ದುಷ್ಟರನ್ನು ಸಂಹರಿಸು.
ಆ ಕೊಲೆಗಾರರನ್ನು ನನ್ನಿಂದ ದೂರಮಾಡು.
ಕೀರ್ತನೆಗಳು 139 : 20 (ERVKN)
ಆ ದುಷ್ಟರು ನಿನ್ನನ್ನು ದೂಷಿಸುತ್ತಾರೆ. ಅಯೋಗ್ಯಕ್ಕಾಗಿ ನಿನ್ನ ಹೆಸರನ್ನು ಹೇಳುತ್ತಾರೆ.
ಕೀರ್ತನೆಗಳು 139 : 21 (ERVKN)
ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನೂ ದ್ವೇಷಿಸುವೆನು. ನಿನ್ನನ್ನು ವಿರೋಧಿಸುವವರನ್ನು ನಾನೂ ವಿರೋಧಿಸುವೆನು.
ಕೀರ್ತನೆಗಳು 139 : 22 (ERVKN)
ನಾನು ಅವರನ್ನು ಸಂಪೂರ್ಣವಾಗಿ ದ್ವೇಷಿಸುವೆನು! ನಿನ್ನ ವೈರಿಗಳನ್ನು ನನ್ನ ವೈರಿಗಳೆಂದೇ ಪರಿಗಣಿಸಿದ್ದೇನೆ.
ಕೀರ್ತನೆಗಳು 139 : 23 (ERVKN)
ದೇವರೇ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೊ. ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗ್ರಹಿಸಿಕೊ.
ಕೀರ್ತನೆಗಳು 139 : 24 (ERVKN)
ನನ್ನಲ್ಲಿ ದುರಾಲೋಚನೆಗಳಿದ್ದರೆ ಕಂಡುಕೊ. ನನ್ನನ್ನು ಸನಾತನ ಮಾರ್ಗದಲ್ಲಿ ನಡೆಸು.

1 2 3 4 5 6 7 8 9 10 11 12 13 14 15 16 17 18 19 20 21 22 23 24