ಕೀರ್ತನೆಗಳು 105 : 1 (ERVKN)
ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ. ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಕೀರ್ತನೆಗಳು 105 : 2 (ERVKN)
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ. ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಕೀರ್ತನೆಗಳು 105 : 3 (ERVKN)
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ. ಯೆಹೋವನ ಆರಾಧಕರೇ, ಸಂತೋಷಪಡಿರಿ.
ಕೀರ್ತನೆಗಳು 105 : 4 (ERVKN)
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ; ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಕೀರ್ತನೆಗಳು 105 : 5 (ERVKN)
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ. ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ಕೀರ್ತನೆಗಳು 105 : 6 (ERVKN)
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ; ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಕೀರ್ತನೆಗಳು 105 : 7 (ERVKN)
ಯೆಹೋವನೇ ನಮ್ಮ ದೇವರು. ಆತನು ಇಡೀ ಪ್ರಪಂಚವನ್ನು ಆಳುವನು. *ಯೆಹೋವನೇ … ಆಳುವನು ಅಕ್ಷರಶಃ, “ಆತನ ಆಜ್ಞೆಗಳು ಇಡೀ ಪ್ರಪಂಚದಲ್ಲಿವೆ.”
ಕೀರ್ತನೆಗಳು 105 : 8 (ERVKN)
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು. ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಕೀರ್ತನೆಗಳು 105 : 9 (ERVKN)
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು. ಆತನು ಇಸಾಕನಿಗೆ ವಾಗ್ದಾನ ಮಾಡಿದನು.
ಕೀರ್ತನೆಗಳು 105 : 10 (ERVKN)
ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು. ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
ಕೀರ್ತನೆಗಳು 105 : 11 (ERVKN)
“ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು. ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
ಕೀರ್ತನೆಗಳು 105 : 12 (ERVKN)
ಅಬ್ರಹಾಮನ ಕುಟುಂಬವು ಚಿಕ್ಕದಾಗಿದ್ದಾಗ ಅವರು ಪ್ರಯಾಣಿಕರಂತೆ ಕಾನಾನಿನಲ್ಲಿ ವಾಸವಾಗಿದ್ದಾಗ, ಆತನು ಅವರಿಗೆ ಈ ವಾಗ್ದಾನವನ್ನು ಮಾಡಿದನು.
ಕೀರ್ತನೆಗಳು 105 : 13 (ERVKN)
ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಪ್ರಯಾಣ ಮಾಡಿದರು.
ಕೀರ್ತನೆಗಳು 105 : 14 (ERVKN)
ಆದರೆ ಅವರಿಗೆ ಯಾರಿಂದಲೂ ಅನ್ಯಾಯವಾಗದಂತೆ ನೋಡಿಕೊಂಡನು. ಅವರನ್ನು ನೋಯಿಸಕೂಡದೆಂದು ಆತನು ರಾಜರುಗಳಿಗೆ ಎಚ್ಚರಿಕೆ ನೀಡಿದನು.
ಕೀರ್ತನೆಗಳು 105 : 15 (ERVKN)
“ನಾನು ಆರಿಸಿಕೊಂಡಿರುವ ಜನರಿಗೆ ಕೇಡುಮಾಡಬೇಡಿ. ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡಬೇಡಿ” ಎಂದು ಆತನು ಹೇಳಿದನು.
ಕೀರ್ತನೆಗಳು 105 : 16 (ERVKN)
ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು. ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
ಕೀರ್ತನೆಗಳು 105 : 17 (ERVKN)
ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು. ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
ಕೀರ್ತನೆಗಳು 105 : 18 (ERVKN)
ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು; ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
ಕೀರ್ತನೆಗಳು 105 : 19 (ERVKN)
ಅವನ ಪ್ರವಾದನೆಯು ನೆರವೇರುವವರೆಗೆ ಅವನು ಗುಲಾಮನಾಗಿದ್ದನು. ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
ಕೀರ್ತನೆಗಳು 105 : 20 (ERVKN)
ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು. ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
ಕೀರ್ತನೆಗಳು 105 : 21 (ERVKN)
ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು. ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
ಕೀರ್ತನೆಗಳು 105 : 22 (ERVKN)
ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು; ಹಿರಿಯರಿಗೆ ಉಪದೇಶಿಸಿದನು.
ಕೀರ್ತನೆಗಳು 105 : 23 (ERVKN)
ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು. ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
ಕೀರ್ತನೆಗಳು 105 : 24 (ERVKN)
ಯಾಕೋಬನ ಕುಟುಂಬ ಬಹು ದೊಡ್ಡದಾಯಿತು. ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
ಕೀರ್ತನೆಗಳು 105 : 25 (ERVKN)
ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು. ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
ಕೀರ್ತನೆಗಳು 105 : 26 (ERVKN)
ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.
ಕೀರ್ತನೆಗಳು 105 : 27 (ERVKN)
ಹಾಮನ ದೇಶದಲ್ಲಿ ದೇವರು ಅನೇಕ ಮಹತ್ಕಾರ್ಯಗಳನ್ನು ಮೋಶೆ ಆರೋನರ ಮೂಲಕವಾಗಿ ಮಾಡಿದನು.
ಕೀರ್ತನೆಗಳು 105 : 28 (ERVKN)
ದೇವರು ಕಾರ್ಗತ್ತಲೆಯನ್ನು ಕಳುಹಿಸಿದನು; ಆದರೂ ಈಜಿಪ್ಟಿನವರು ಆತನಿಗೆ ಕಿವಿಗೊಡಲಿಲ್ಲ.
ಕೀರ್ತನೆಗಳು 105 : 29 (ERVKN)
ಆದ್ದರಿಂದ ಆತನು ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದನು, ಆಗ ಅವರ ಮೀನುಗಳೆಲ್ಲಾ ಸತ್ತುಹೋದವು.
ಕೀರ್ತನೆಗಳು 105 : 30 (ERVKN)
ಬಳಿಕ ಈಜಿಪ್ಟಿನವರ ದೇಶವು ಕಪ್ಪೆಗಳಿಂದ ತುಂಬಿಹೋಯಿತು. ರಾಜನು ಮಲಗುವ ಕೋಣೆಯಲ್ಲಿಯೂ ಕಪ್ಪೆಗಳಿದ್ದವು.
ಕೀರ್ತನೆಗಳು 105 : 31 (ERVKN)
ಆತನು ಆಜ್ಞಾಪಿಸಲು ವಿಷದ ಹುಳಗಳೂ ಹೇನುಗಳೂ ಬಂದವು. ಅವು ಎಲ್ಲೆಲ್ಲಿಯೂ ಹರಡಿಕೊಂಡವು.
ಕೀರ್ತನೆಗಳು 105 : 32 (ERVKN)
ಆತನು ಮಳೆಯನ್ನು ಕಲ್ಮಳೆಯನ್ನಾಗಿ ಪರಿವರ್ತಿಸಿದನು. ಅವರ ದೇಶದಲ್ಲಿ ಸಿಡಿಲುಗಳು ಹೊಡೆದವು.
ಕೀರ್ತನೆಗಳು 105 : 33 (ERVKN)
ದೇವರು ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡಿದನು. ಅವರ ದೇಶದ ಪ್ರತಿಯೊಂದು ಮರವನ್ನೂ ಆತನು ನಾಶಮಾಡಿದನು.
ಕೀರ್ತನೆಗಳು 105 : 34 (ERVKN)
ಆತನು ಆಜ್ಞಾಪಿಸಲು ಮಿಡತೆಗಳೂ ಜಿಟ್ಟೆಹುಳಗಳೂ ಅಸಂಖ್ಯಾತವಾಗಿ ಬಂದವು.
ಕೀರ್ತನೆಗಳು 105 : 35 (ERVKN)
ಮಿಡತೆಗಳೂ ಜಿಟ್ಟೆಹುಳಗಳೂ ದೇಶದಲ್ಲಿದ್ದ ಸಸಿಗಳನ್ನೆಲ್ಲಾ ತಿಂದುಬಿಟ್ಟವು. ಭೂಮಿಯ ಮೇಲಿದ್ದ ಬೆಳೆಗಳನ್ನೆಲ್ಲಾ ಅವು ತಿಂದುಬಿಟ್ಟವು.
ಕೀರ್ತನೆಗಳು 105 : 36 (ERVKN)
ಬಳಿಕ ದೇವರು ಈಜಿಪ್ಟ್ ದೇಶದ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಕೊಂದುಹಾಕಿದನು.
ಕೀರ್ತನೆಗಳು 105 : 37 (ERVKN)
ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು. ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು. ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
ಕೀರ್ತನೆಗಳು 105 : 38 (ERVKN)
ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು; ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
ಕೀರ್ತನೆಗಳು 105 : 39 (ERVKN)
ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು; ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
ಕೀರ್ತನೆಗಳು 105 : 40 (ERVKN)
ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು; ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
ಕೀರ್ತನೆಗಳು 105 : 41 (ERVKN)
ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು; ಅರಣ್ಯದಲ್ಲಿ ನದಿಯು ಹರಿಯತೊಡಗಿತು!
ಕೀರ್ತನೆಗಳು 105 : 42 (ERVKN)
ಆತನು ತನ್ನ ಸೇವಕನಾದ ಆಬ್ರಹಾಮನಿಗೆ ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
ಕೀರ್ತನೆಗಳು 105 : 43 (ERVKN)
ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು. ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
ಕೀರ್ತನೆಗಳು 105 : 44 (ERVKN)
ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು. ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
ಕೀರ್ತನೆಗಳು 105 : 45 (ERVKN)
ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು. ಯೆಹೋವನನ್ನು ಕೊಂಡಾಡಿರಿ.
❮
❯