ಅರಣ್ಯಕಾಂಡ 23 : 1 (ERVKN)
ಬಿಳಾಮನ ಮೊದಲನೆಯ ಸಂದೇಶ ಬಿಳಾಮನು ಬಾಲಾಕನಿಗೆ, “ಇಲ್ಲಿ ನೀನು ಏಳು ಯಜ್ಞವೇದಿಕೆಗಳನ್ನು ನನಗೆ ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ನನಗೆ ಸಿದ್ಧಪಡಿಸು” ಅಂದನು.
ಅರಣ್ಯಕಾಂಡ 23 : 2 (ERVKN)
ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯೊಂದು ಯಜ್ಞವೇದಿಕೆಯ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದಾಗ,
ಅರಣ್ಯಕಾಂಡ 23 : 3 (ERVKN)
ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು. ನಾನು ಸ್ವಲ್ಪದೂರ ಹೋಗಿ ಬರುತ್ತೇನೆ. ಒಂದುವೇಳೆ ಯೆಹೋವನು ನನ್ನನ್ನು ಸಂಧಿಸಲು ಬರಬಹುದು. ಆತನು ನನಗೆ ಪ್ರಕಟಿಸುವುದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ದಿಣ್ಣೆಗೆ ಹೋದನು.
ಅರಣ್ಯಕಾಂಡ 23 : 4 (ERVKN)
ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.
ಅರಣ್ಯಕಾಂಡ 23 : 5 (ERVKN)
ಆಗ ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ತಿರುಗಿಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.
ಅರಣ್ಯಕಾಂಡ 23 : 6 (ERVKN)
ಬಿಳಾಮನು ಬಾಲಾಕನ ಬಳಿಗೆ ತಿರುಗಿಬಂದಾಗ ಬಾಲಾಕನು ಯಜ್ಞವೇದಿಕೆಯ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನೊಡನೆ ನಿಂತಿದ್ದರು.
ಅರಣ್ಯಕಾಂಡ 23 : 7 (ERVKN)
ಆಗ ಬಿಳಾಮನು ಹೀಗೆ ಹೇಳಿದನು: “ಮೋವಾಬ್ಯರ ಅರಸನಾದ ಬಾಲಾಕನು ನನ್ನನ್ನು ಅರಾಮಿನ ಪೂರ್ವ ದಿಕ್ಕಿನ ಬೆಟ್ಟಗಳಿಂದ ನನ್ನನ್ನು ಕರೆಸಿದನು. ‘ನೀನು ಬಂದು ನನಗೋಸ್ಕರ ಯಾಕೋಬ್ಯರನ್ನು ಶಪಿಸು; ಇಸ್ರೇಲರ ವಿರುದ್ಧ ಮಾತನಾಡು’ ಎಂದು ಬಾಲಾಕನು ಹೇಳಿದನು.
ಅರಣ್ಯಕಾಂಡ 23 : 8 (ERVKN)
ಆದರೆ ದೇವರು ಅವರನ್ನು ಆಶೀರ್ವದಿಸಿರುವಾಗ ನಾನು ಅವರನ್ನು ಶಪಿಸಲು ಆಗುವುದಿಲ್ಲ. ಯೆಹೋವನು ಅವರ ಮೇಲೆ ನಾಶನವನ್ನು ಬರಮಾಡಲಿಲ್ಲ. ಆದ್ದರಿಂದ ನಾಶನವು ಅವರ ಮೇಲೆ ಇಳಿದುಬರುವಂತೆ ಮಾಡಲು ನನಗೆ ಸಾಧ್ಯವಿಲ್ಲ.
ಅರಣ್ಯಕಾಂಡ 23 : 9 (ERVKN)
ಬೆಟ್ಟದ ಶಿಖರದಿಂದ ಅವರನ್ನು ನಾನು ನೋಡಿದೆನು; ಗುಡ್ಡದಿಂದ ಅವರನ್ನು ಕಂಡೆನು. ಅವರು ತಮ್ಮನ್ನು ಇತರ ಜನಾಂಗಗಳಿಗಿಂತ ಬೇರೆಯಾದವರು ಎಂದು ಪರಿಗಣಿಸಿಕೊಂಡಿದ್ದಾರೆ.
ಅರಣ್ಯಕಾಂಡ 23 : 10 (ERVKN)
ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವುದಕ್ಕೆ ಯಾರಿಂದಾದೀತು; ಇಸ್ರೇಲರ ಕಾಲು ಭಾಗವನ್ನಾದರೂ ಯಾರೂ ಲೆಕ್ಕಿಸಲಾರರು. ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಲು ಬಯಸುವೆ. ಅವರಿಗುಂಟಾಗುವ ಅಂತ್ಯ ನನಗೂ ಉಂಟಾಗಲಿ.”
ಅರಣ್ಯಕಾಂಡ 23 : 11 (ERVKN)
ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು! ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟೆ” ಎಂದು ಹೇಳಿದನು.
ಅರಣ್ಯಕಾಂಡ 23 : 12 (ERVKN)
ಅದಕ್ಕೆ ಬಿಳಾಮನು, “ಯೆಹೋವನು ನನಗೆ ತಿಳಿಸುವುದನ್ನು ನಾನು ಹೇಳಬಾರದೇ?” ಎಂದು ಕೇಳಿದನು.
ಅರಣ್ಯಕಾಂಡ 23 : 13 (ERVKN)
ಆಗ ಬಾಲಾಕನು, “ದಯಮಾಡಿ ನನ್ನೊಂದಿಗೆ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸದೆ ಕಡೇ ಭಾಗವು ಮಾತ್ರ ಕಾಣಿಸುವುದು. ಅಲ್ಲಿಂದ ನನಗೋಸ್ಕರ ಅವರನ್ನೇ ಶಪಿಸಬೇಕು” ಎಂದು ಹೇಳಿದನು.
ಅರಣ್ಯಕಾಂಡ 23 : 14 (ERVKN)
ಹೀಗೆ ಬಾಲಾಕನು ಬಿಳಾಮನನ್ನು “ಕಾವಲುಗಾರರ ಬೆಟ್ಟಗಳು” ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಇದು ಪಿಸ್ಗಾ ಪರ್ವತಶ್ರೇಣಿಯ ತುದಿಯಲ್ಲಿತ್ತು. ಅಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಪ್ರತಿಯೊಂದು ವೇದಿಕೆಯಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದನು.
ಅರಣ್ಯಕಾಂಡ 23 : 15 (ERVKN)
ಬಿಳಾಮನು ಬಾಲಾಕನಿಗೆ, “ನೀನು ನಿನ್ನ ಯಜ್ಞವೇದಿಕೆಯ ಬಳಿಯಲ್ಲಿರು. ನಾನು ಆ ಕಡೆ ಹೋಗಿ ಯೆಹೋವನನ್ನು ಸಂಧಿಸುವೆನು” ಎಂದು ಹೇಳಿದನು.
ಅರಣ್ಯಕಾಂಡ 23 : 16 (ERVKN)
ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹೋಗಿ ಹೀಗೆ ಹೇಳಬೇಕು” ಅಂದನು.
ಅರಣ್ಯಕಾಂಡ 23 : 17 (ERVKN)
ಬಿಳಾಮನು ಬಾಲಾಕನ ಬಳಿಗೆ ಬಂದಾಗ ಅವನು ಇನ್ನೂ ಯಜ್ಞಪೀಠದ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದು ಕೇಳಿದನು.
ಅರಣ್ಯಕಾಂಡ 23 : 18 (ERVKN)
ಬಿಳಾಮನ ಎರಡನೆಯ ಸಂದೇಶ ಆಗ ಬಿಳಾಮನು ಈ ಸಂಗತಿಗಳನ್ನು ಹೇಳಿದನು, “ಬಾಲಾಕನೇ, ಎದ್ದುನಿಂತು ನಾನು ಹೇಳುವುದನ್ನು ಕೇಳು. ಚಿಪ್ಪೋರನ ಮಗನಾದ ಬಾಲಾಕನೇ, ಕೇಳು:
ಅರಣ್ಯಕಾಂಡ 23 : 19 (ERVKN)
ದೇವರು ಮನುಷ್ಯನಲ್ಲ; ಆತನು ಸುಳ್ಳಾಡುವುದಿಲ್ಲ. ದೇವರು ಮಾನವನಲ್ಲ; ಆತನ ಉದ್ದೇಶಗಳು ಬದಲಾಗುವುದಿಲ್ಲ. ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ, ಅದನ್ನು ಮಾಡಿಯೇ ಮಾಡುತ್ತಾನೆ. ಯೆಹೋವನು ವಾಗ್ದಾನ ಮಾಡಿದರೆ, ಅದನ್ನು ನೆರವೇರಿಸುತ್ತಾನೆ.
ಅರಣ್ಯಕಾಂಡ 23 : 20 (ERVKN)
ಆ ಜನರನ್ನು ಆಶೀರ್ವದಿಸಬೇಕೆಂದು ಯೆಹೋವನು ನನಗೆ ಆಜ್ಞಾಪಿಸಿದನು; ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ. ಅದನ್ನು ಬದಲಾಯಿಸಲು ನನಗೆ ಸಾಧ್ಯವಿಲ್ಲ.
ಅರಣ್ಯಕಾಂಡ 23 : 21 (ERVKN)
ಯಾಕೋಬನ ಜನರಲ್ಲಿ ಯಾವ ದೋಷವೂ ಇಲ್ಲ. ಇಸ್ರೇಲಿನ ಜನರಲ್ಲಿ ಯಾವ ಆಪತ್ತು ಕಾಣುತ್ತಿಲ್ಲ. ಯೆಹೋವನೇ ಅವರ ದೇವರು. ಆತನು ಅವರೊಂದಿಗಿದ್ದಾನೆ.
ಅರಣ್ಯಕಾಂಡ 23 : 22 (ERVKN)
ದೇವರು ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವರು ಕಾಡು ಕೋಣದಂತೆ ಬಲಿಷ್ಠರಾಗಿದ್ದಾರೆ.
ಅರಣ್ಯಕಾಂಡ 23 : 23 (ERVKN)
ನಿಜವಾಗಿಯೂ ಯಾಕೋಬನ ಜನರ ಮಧ್ಯದಲ್ಲಿ ಶಕುನ ನೋಡುವವರು ಇಲ್ಲ. ಇಸ್ರೇಲಿನಲ್ಲಿ ಕಣಿ ಹೇಳುವವರು ಇಲ್ಲ. ಜನರು, ಯಾಕೋಬನ ಮತ್ತು ಇಸ್ರೇಲರ ಬಗ್ಗೆ ಹೀಗೆ ಹೇಳುವರು: ‘ದೇವರು ಮಾಡಿದ ಮಹಾಕಾರ್ಯಗಳನ್ನು ನೋಡಿರಿ!’
ಅರಣ್ಯಕಾಂಡ 23 : 24 (ERVKN)
ಆ ಜನರು ಪ್ರಾಯಸಿಂಹದಂತೆ ಬಲಿಷ್ಠರು. ಅವರು ಸಿಂಹದಂತೆ ಹೋರಾಡುತ್ತಾರೆ. ಆ ಸಿಂಹ ತನ್ನ ವೈರಿಯನ್ನು ತಿಂದುಬಿಡುವತನಕ ವಿಶ್ರಮಿಸುವುದಿಲ್ಲ. ಆ ಸಿಂಹವು ತನಗೆ ಬಲಿಯಾದವರ ರಕ್ತವನ್ನು ಹೀರುವವರೆಗೆ ಎಂದಿಗೂ ವಿಶ್ರಮಿಸುವುದಿಲ್ಲ.”
ಅರಣ್ಯಕಾಂಡ 23 : 25 (ERVKN)
ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ” ಎಂದು ಹೇಳಿದನು.
ಅರಣ್ಯಕಾಂಡ 23 : 26 (ERVKN)
ಅದಕ್ಕೆ ಬಿಳಾಮನು, “ಯೆಹೋವನು ಹೇಳುವುದನ್ನೇ ನಾನು ಮಾಡುತ್ತೇನೆ ಎಂದು ನಾನು ನಿನಗೆ ಮೊದಲೇ ಹೇಳಲಿಲ್ಲವೆ?” ಅಂದನು.
ಅರಣ್ಯಕಾಂಡ 23 : 27 (ERVKN)
ಆಮೇಲೆ ಬಾಲಾಕನು ಬಿಳಾಮನಿಗೆ, “ಸರಿ, ಇನ್ನೊಂದು ಸ್ಥಳಕ್ಕೆ ಬಾ. ಒಂದುವೇಳೆ ನೀನು ಅವರನ್ನು ಶಪಿಸಬೇಕೆಂದು ದೇವರು ಅಪೇಕ್ಷೆಪಡಬಹುದು” ಎಂದು ಹೇಳಿದನು.
ಅರಣ್ಯಕಾಂಡ 23 : 28 (ERVKN)
ಬಾಲಾಕನು ಬಿಳಾಮನನ್ನು “ಪೆಗೋರ್” ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿಂದ ಕೆಳಗಿರುವ ಮರುಭೂಮಿಯು ಕಾಣಿಸುತ್ತದೆ.
ಅರಣ್ಯಕಾಂಡ 23 : 29 (ERVKN)
ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು” ಎಂದು ಹೇಳಿದನು.
ಅರಣ್ಯಕಾಂಡ 23 : 30 (ERVKN)
ಬಾಲಾಕನು ಅವನ ಅಪ್ಪಣೆಯ ಮೇರೆಗೆ ಪ್ರತಿಯೊಂದನ್ನು ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಅರ್ಪಿಸಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30