ಅರಣ್ಯಕಾಂಡ 21 : 1 (ERVKN)
ಕಾನಾನ್ಯನಾಗಿದ್ದ ಅರಾದಿನ ರಾಜನು ನೆಗೆವ್‌ನಲ್ಲಿದ್ದುಕೊಂಡು ರಾಜ್ಯಭಾರ ಮಾಡುತ್ತಿದ್ದನು. ಇಸ್ರೇಲರು ಅತಾರೀಮಿನ ಮಾರ್ಗವಾಗಿ ಬರುತ್ತಾರೆಂಬ ಸುದ್ದಿಯು ಅವನಿಗೆ ಮುಟ್ಟಿತು. ಆದ್ದರಿಂದ ಅವನು ಹೋಗಿ ಇಸ್ರೇಲರೊಡನೆ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಹಿಡಿದನು.
ಅರಣ್ಯಕಾಂಡ 21 : 2 (ERVKN)
ಇಸ್ರೇಲರು ಯೆಹೋವನಿಗೆ ಹರಕೆಯನ್ನು ಮಾಡಿಕೊಂಡು, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಪೂರ್ಣವಾಗಿ ಹಾಳುಮಾಡಿ ಯೆಹೋವನಿಗಾಗಿಯೇ ಬಿಟ್ಟುಬಿಡುತ್ತೇವೆ” ಅಂದರು.
ಅರಣ್ಯಕಾಂಡ 21 : 3 (ERVKN)
ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸಲು ಸಹಾಯಮಾಡಿದ್ದರಿಂದ ಅವರು ಕಾನಾನ್ಯರನ್ನೂ ಅವರ ಗ್ರಾಮಗಳನ್ನೂ ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಆದುದರಿಂದ ಆ ಪ್ರದೇಶಕ್ಕೆ ಹೊರ್ಮಾ ಎಂದು ಹೆಸರಾಯಿತು.
ಅರಣ್ಯಕಾಂಡ 21 : 4 (ERVKN)
ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು.
ಅರಣ್ಯಕಾಂಡ 21 : 5 (ERVKN)
ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.
ಅರಣ್ಯಕಾಂಡ 21 : 6 (ERVKN)
ಆದುದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು.
ಅರಣ್ಯಕಾಂಡ 21 : 7 (ERVKN)
ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು.
ಅರಣ್ಯಕಾಂಡ 21 : 8 (ERVKN)
ಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು.
ಅರಣ್ಯಕಾಂಡ 21 : 9 (ERVKN)
ಆದುದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು.
ಅರಣ್ಯಕಾಂಡ 21 : 10 (ERVKN)
ಇಸ್ರೇಲರು ಪ್ರಯಾಣವನ್ನು ಮುಂದುವರಿಸಿ ಓಬೋತ್ ಎಂಬ ಸ್ಥಳದಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 21 : 11 (ERVKN)
ಬಳಿಕ ಅವರು ಓಬೋತಿನಿಂದ ಇಯ್ಯೇ ಅಬಾರೀಮಿಗೆ ಹೋದರು. ಇದು ಮೋವಾಬಿನ ಪೂರ್ವದಲ್ಲಿರುವ ಮರುಭೂಮಿಯ ಪ್ರದೇಶದಲ್ಲಿತ್ತು.
ಅರಣ್ಯಕಾಂಡ 21 : 12 (ERVKN)
ಬಳಿಕ ಜನರು ಅಲ್ಲಿಂದ ಹೊರಟು ಜೆರೆದ್ ಕಣಿವೆಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು.
ಅರಣ್ಯಕಾಂಡ 21 : 13 (ERVKN)
ಅವರು ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆ ಕಡೆಯಲ್ಲಿ ಅಂದರೆ ಅಮೋರಿಯರ ಪ್ರದೇಶದೊಳಗೆ ವಿಸ್ತರಿಸಿರುವ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು. ಅರ್ನೋನ್ ನದಿಯು ಮೋವಾಬ್ಯರಿಗೂ ಅಮೋರಿಯರಿಗೂ ಗಡಿಯಾಗಿದೆ.
ಅರಣ್ಯಕಾಂಡ 21 : 14 (ERVKN)
ಅದಕ್ಕನುಸಾರವಾಗಿ “ಯೆಹೋವನ ಯುದ್ಧಗಳು” ಎಂಬ ಗ್ರಂಥದಲ್ಲಿ, “ಸೂಫದಲ್ಲಿರುವ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಕಣಿವೆಗಳನ್ನು ಮತ್ತು
ಅರಣ್ಯಕಾಂಡ 21 : 15 (ERVKN)
ಆರ್ ವಸತಿ ಪ್ರದೇಶಕ್ಕೆ ನಡೆಸುವ ಮೋವಾಬಿನ ಗಡಿಯ ಉದ್ದಕ್ಕೂ ಇರುವ ಕಣಿವೆಗಳನ್ನು ದಾಟಿದ್ದಾಯಿತು” ಎಂದು ಬರೆದಿದೆ.
ಅರಣ್ಯಕಾಂಡ 21 : 16 (ERVKN)
ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಕೂಡಿಸಿಕೊ, ನಾನು ಅವರಿಗೆ ನೀರನ್ನು ಕೊಡುವೆನು” ಎಂದು ಯೆಹೋವನು ಮೋಶೆಗೆ ಹೇಳಿದ್ದು ಈ ಬಾವಿಯ ಸ್ಥಳದಲ್ಲೇ.
ಅರಣ್ಯಕಾಂಡ 21 : 17 (ERVKN)
ಆಗ ಇಸ್ರೇಲರು ಈ ಹಾಡನ್ನು ಹಾಡಿದರು: “ಬಾವಿಯೇ, ಉಕ್ಕುತ್ತಾ ಬಾ! ಜನರೇ, ಅದರ ಕುರಿತು ಹಾಡಿ!
ಅರಣ್ಯಕಾಂಡ 21 : 18 (ERVKN)
ಪ್ರಧಾನರು ಈ ಬಾವಿಯನ್ನು ತೋಡಿದರು. ಪ್ರಮುಖ ನಾಯಕರು ಈ ಬಾವಿಯನ್ನು ತೋಡಿದರು. ಅವರು ತಮ್ಮ ದೊಣ್ಣೆಗಳಿಂದ ಮತ್ತು ಕೋಲುಗಳಿಂದ ಈ ಬಾವಿಯನ್ನು ಅಗೆದರು.” ಆಮೇಲೆ ಜನರು “ಮತ್ತಾನ” ಎಂಬ ಮರುಭೂಮಿಯಿಂದ ಹೊರಟರು.
ಅರಣ್ಯಕಾಂಡ 21 : 19 (ERVKN)
ಬಳಿಕ ಅವರು ಮತ್ತಾನದಿಂದ ನಹಲೀಯೇಲಿಗೆ ಪ್ರಯಾಣ ಮಾಡಿದರು. ಬಳಿಕ ಅವರು ನಹಲೀಯೇಲಿನಿಂದ ಬಾಮೋತಿಗೆ ಪ್ರಯಾಣ ಮಾಡಿದರು.
ಅರಣ್ಯಕಾಂಡ 21 : 20 (ERVKN)
ಜನರು ಬಾಮೋತಿನಿಂದ ಮೋವಾಬ್ಯರ ಪ್ರದೇಶದ ಕಣಿವೆಗೆ ಪ್ರಯಾಣ ಮಾಡಿದರು. ಪಿಸ್ಗಾ ಬೆಟ್ಟದ ತುದಿಯ ಸಮೀಪದಲ್ಲಿ ನಿಂತುಕೊಂಡರೆ ಮರುಭೂಮಿಯು ಕಾಣುವುದು.
ಅರಣ್ಯಕಾಂಡ 21 : 21 (ERVKN)
ಇಸ್ರೇಲರು ಸಂದೇಶಕರನ್ನು ಅಮೋರಿಯರ ಅರಸನಾದ ಸೀಹೋನನ ಬಳಿಗೆ ಕಳುಹಿಸಿದರು. ಅವರು ಅರಸನಿಗೆ,
ಅರಣ್ಯಕಾಂಡ 21 : 22 (ERVKN)
“ನಿಮ್ಮ ದೇಶವನ್ನು ಹಾದುಹೋಗುವುದಕ್ಕೆ ನಮಗೆ ಅಪ್ಪಣೆಕೊಡು. ನಿಮ್ಮ ಹೊಲಗಳಿಗಾಗಲಿ ದ್ರಾಕ್ಷಿತೋಟಗಳಿಗಾಗಲಿ ನಾವು ತಿರುಗಿಕೊಳ್ಳುವುದಿಲ್ಲ. ನಿನ್ನ ಯಾವ ಬಾವಿಗಳಿಂದಲೂ ನಾವು ನೀರು ಕುಡಿಯುವುದಿಲ್ಲ. ನಾವು ನಿಮ್ಮ ದೇಶವನ್ನು ದಾಟಿಹೋಗುವ ತನಕ ರಾಜ ಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇವೆ” ಎಂದು ಹೇಳಿದರು.
ಅರಣ್ಯಕಾಂಡ 21 : 23 (ERVKN)
ಆದರೆ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ದೇಶದ ಮೂಲಕ ಹಾದುಹೋಗಲು ಬಿಡಲಿಲ್ಲ. ಅರಸನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಮರುಭೂಮಿಯ ಕಡೆಗೆ ಹೊರಟನು. ಅವನು ಯಹಜ್ ಎಂಬಲ್ಲಿಗೆ ಬಂದನು; ಅಲ್ಲಿ ರಾಜನ ಸೈನ್ಯವು ಇಸ್ರೇಲರಿಗೆ ವಿರೋಧವಾಗಿ ಯುದ್ಧಮಾಡಿತು.
ಅರಣ್ಯಕಾಂಡ 21 : 24 (ERVKN)
ಆದರೆ ಇಸ್ರೇಲರು ಅರಸನನ್ನು ಕೊಂದುಹಾಕಿದರು. ಬಳಿಕ ಅವರು ಅರ್ನೋನ್ ನದಿಯಿಂದ ಹಿಡಿದು ಯಬ್ಬೋಕ್ ನದಿಯವರೆಗಿರುವ ಅವನ ಭೂಮಿಯನ್ನು ವಶಪಡಿಸಿಕೊಂಡರು. ಅವರು ಅಮ್ಮೋನಿಯರ ಮೇರೆಯವರೆಗಿರುವ ಪ್ರದೇಶವನ್ನೆಲ್ಲಾ ವಶಪಡಿಸಿಕೊಂಡರು. ಅಮ್ಮೋನಿಯರು ತಮ್ಮ ಗಡಿಯನ್ನು ಭದ್ರವಾಗಿ ರಕ್ಷಿಸಿಕೊಂಡದ್ದರಿಂದ ಇಸ್ರೇಲರು ಮುಂದಕ್ಕೆ ಹೋಗಲಿಲ್ಲ.
ಅರಣ್ಯಕಾಂಡ 21 : 25 (ERVKN)
ಇಸ್ರೇಲರು ಅಮೋರಿಯರ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡು ಅವುಗಳಲ್ಲಿ ವಾಸಿಸಿದರು. ಅವರು ಹೆಷ್ಬೋನನ್ನು ಮತ್ತು ಅದರ ಸುತ್ತಲಿರುವ ಎಲ್ಲಾ ಚಿಕ್ಕ ಪಟ್ಟಣಗಳನ್ನು ಸಹ ವಶಪಡಿಸಿಕೊಂಡರು.
ಅರಣ್ಯಕಾಂಡ 21 : 26 (ERVKN)
ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು.
ಅರಣ್ಯಕಾಂಡ 21 : 27 (ERVKN)
ಆದಕಾರಣ ಹಾಡುವವರು ಈ ಗೀತೆಯನ್ನು ಹಾಡುತ್ತಾರೆ: “ಹೆಷ್ಬೋನಿಗೆ, ಬಾ! ಮತ್ತೆ ಅದನ್ನು ನಿರ್ಮಿಸು! ಸೀಹೋನನ ಪಟ್ಟಣವನ್ನು ಮತ್ತೆ ಸ್ಥಾಪಿಸಿರಿ.”
ಅರಣ್ಯಕಾಂಡ 21 : 28 (ERVKN)
ಹೆಷ್ಬೋನಿನಲ್ಲಿ ಬೆಂಕಿಯುಂಟಾಯಿತು. ಆ ಬೆಂಕಿ ಸೀಹೋನನ ಪಟ್ಟಣದಲ್ಲಿ ಉಂಟಾಯಿತು. ಆ ಬೆಂಕಿಯು ಮೋವಾಬಿನಲ್ಲಿರುವ ‘ಆರ್’ ಪಟ್ಟಣವನ್ನು ನಾಶಮಾಡಿತು. ಅದು ಅರ್ನೋನ್ ನದಿಯ ಬಳಿಯಲ್ಲಿರುವ ಬೆಟ್ಟಗಳನ್ನು ಸುಟ್ಟುಹಾಕಿತು.
ಅರಣ್ಯಕಾಂಡ 21 : 29 (ERVKN)
ಮೋವಾಬೇ, ಇದು ನಿನಗೆ ಕೆಟ್ಟದ್ದಾಗಿದೆ. ಕೆಮೋಷಿನ ಜನರೇ, ನೀವು ನಾಶವಾದಿರಿ. ಅವನ ಪುತ್ರರು ಓಡಿಹೋದರು. ಅಮೋರಿಯ ರಾಜನಾದ ಸೀಹೋನನು ಅವನ ಪುತ್ರಿಯರನ್ನು ಸೆರೆ ಒಯ್ದನು.
ಅರಣ್ಯಕಾಂಡ 21 : 30 (ERVKN)
ಆದರೆ ನಾವು ಆ ಅಮೋರಿಯರನ್ನು ಸೋಲಿಸಿದೆವು. ಹೆಷ್ಬೋನಿನಿಂದ ದೀಬೋನಿನವರೆಗಿರುವ ಅವರ ಪಟ್ಟಣಗಳನ್ನೂ ನಾಶೀಮಿನಿಂದ ನೋಫಹದ (ಮೇದೆಬಾದ ಹತ್ತಿರ) ವರೆಗಿರುವ ಪಟ್ಟಣಗಳನ್ನೂ ನಾವು ನಾಶಮಾಡಿದೆವು.”
ಅರಣ್ಯಕಾಂಡ 21 : 31 (ERVKN)
ಹೀಗೆ ಇಸ್ರೇಲರು ಅಮೋರಿಯರ ದೇಶದಲ್ಲಿ ತಮ್ಮ ಪಾಳೆಯ ಹಾಕಿದರು.
ಅರಣ್ಯಕಾಂಡ 21 : 32 (ERVKN)
ಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು.
ಅರಣ್ಯಕಾಂಡ 21 : 33 (ERVKN)
ಬಳಿಕ ಇಸ್ರೇಲರು ಬೇರೆ ದಿಕ್ಕಿಗೆ ತಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣಮಾಡಿದರು. ಆಗ ಬಾಷಾನಿನ ಅರಸನಾದ ಓಗನು ಎದ್ರೈ ಎಂಬಲ್ಲಿ ಇಸ್ರೇಲರೊಂದಿಗೆ ಯುದ್ಧಮಾಡಲು ತನ್ನ ಸೈನ್ಯ ಸಮೇತವಾಗಿ ಬಂದನು.
ಅರಣ್ಯಕಾಂಡ 21 : 34 (ERVKN)
ಆದರೆ ಯೆಹೋವನು ಮೋಶೆಗೆ, “ಆ ಅರಸನಿಗೆ ಹೆದರಬೇಡ. ನೀನು ಅವನನ್ನು ಸೋಲಿಸುವಂತೆ ಮಾಡುವೆನು. ನೀನು ಅವನ ಸೈನ್ಯವನ್ನು ಮತ್ತು ಅವನ ದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವೆ. ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದಂತೆ ಇವನಿಗೂ ಸಹ ಮಾಡುವಿರಿ” ಅಂದನು.
ಅರಣ್ಯಕಾಂಡ 21 : 35 (ERVKN)
ಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: