ನೆಹೆಮಿಯ 4 : 1 (ERVKN)
ಸನ್ಬಲ್ಲಟ್ ಮತ್ತು ಟೋಬೀಯ ನಾವು ಜೆರುಸಲೇಮಿನ ಗೋಡೆ ಕಟ್ಟುತ್ತಿದ್ದೇವೆ ಎಂಬುದನ್ನು ಕೇಳಿದ ಸನ್ಬಲ್ಲಟನು ಹೊಟ್ಟೆಕಿಚ್ಚಿನಿಂದ ಕೋಪಗೊಂಡನು. ಅವನು ಯೆಹೂದ್ಯರನ್ನು ಹಾಸ್ಯ ಮಾಡಿದನು.
ನೆಹೆಮಿಯ 4 : 2 (ERVKN)
ಸಮಾರ್ಯದಲ್ಲಿರುವ ಅವನ ಸ್ನೇಹಿತರೊಡನೆ ಮತ್ತು ಸಮಾರ್ಯದ ಸೈನ್ಯದವರೊಡನೆ ಮಾತನಾಡಿ, “ಈ ಬಲಹೀನ ಯೆಹೂದ್ಯರು ಮಾಡುತ್ತಿರುವುದೇನು? ನಾವು ಇವರನ್ನು ಹೀಗೇಯೇ ಬಿಟ್ಟುಬಿಡುತ್ತೇವೆಂದು ತಿಳಿದುಕೊಂಡಿದ್ದಾರೆಯೇ? ತಾವು ಯಜ್ಞಗಳನ್ನು ಅರ್ಪಿಸುವುದಾಗಿ ತಿಳಿದುಕೊಂಡಿರುವರೇ? ಒಂದೇ ದಿನದಲ್ಲಿ ಕಟ್ಟಿಮುಗಿಸುವುದಾಗಿ ಅವರು ತಿಳಿದುಕೊಂಡಿರಬಹುದು. ಆ ತಿಪ್ಪೆಗುಂಡಿಯೊಳಗಿನ ಕಲ್ಲುಗಳ ರಾಶಿಗೆ ಜೀವಕೊಡಲು ಅವರಿಗೆ ಸಾಧ್ಯವಿಲ್ಲ. ಅವು ಕೇವಲ ಬೂದಿ ಮತ್ತು ಹೊಲಸುಗಳ ಗುಡ್ಡೆಗಳಾಗಿವೆ!” ಎಂದು ಹೇಳಿದನು.
ನೆಹೆಮಿಯ 4 : 3 (ERVKN)
ಅವನ ಜೊತೆಯಲ್ಲಿದ್ದ ಅಮ್ಮೋನಿಯನಾದ ಟೋಬೀಯನು, “ಈ ಯೆಹೂದ್ಯರು ಕಟ್ಟುತ್ತಿರುವುದೇನು? ಆ ಗೋಡೆಯ ಮೇಲೆ ಒಂದು ನರಿ ಹಾರಿದರೂ ಗೋಡೆಯು ಕುಸಿದುಬೀಳುವುದು” ಎಂದು ವ್ಯಂಗ್ಯವಾಗಿ ಹೇಳಿದನು.
ನೆಹೆಮಿಯ 4 : 4 (ERVKN)
ನೆಹೆಮೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ, “ನಮ್ಮ ದೇವರೇ, ನಮ್ಮ ಪ್ರಾರ್ಥನೆಗೆ ಕಿವಿಗೊಡು. ಆ ಮನಷ್ಯರು ನಮ್ಮನ್ನು ದ್ವೇಷಿಸುತ್ತಾರೆ. ಸನ್ಬಲ್ಲಟನು ಮತ್ತು ಟೋಬೀಯನು ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಆ ಕೇಡುಗಳು ಅವರಿಗೇ ಸಂಭವಿಸಲಿ. ಅವರು ನಾಚಿಕೆಯಿಂದ ತಲೆತಗ್ಗಿಸಲಿ; ಸೆರೆಹಿಡಿಯಲ್ಪಟ್ಟವರಂತೆ ಅವಮಾನ ಹೊಂದಲಿ.
ನೆಹೆಮಿಯ 4 : 5 (ERVKN)
ಅವರು ನಿನ್ನ ದೃಷ್ಟಿಯಲ್ಲಿ ಮಾಡಿದ ಪಾಪಗಳನ್ನು ಮನ್ನಿಸಬೇಡ. ಅವರು ಗೋಡೆಯನ್ನು ಕಟ್ಟುವ ನಿನ್ನ ದಾಸರನ್ನು ನಿಂದಿಸಿ ಅವರನ್ನು ನಿರುತ್ಸಾಹಗೊಳಿಸಿದ್ದಾರೆ.”
ನೆಹೆಮಿಯ 4 : 6 (ERVKN)
ಜೆರುಸಲೇಮಿನ ಗೋಡೆಯನ್ನು ನಾವು ಕಟ್ಟಿ ಮುಗಿಸಿದೆವು. ಪಟ್ಟಣದ ಸುತ್ತಲೂ ಪೌಳಿಗೋಡೆಯನ್ನು ಕಟ್ಟಿದೆವು. ಆದರೆ ಅದರ ಎತ್ತರ ಇರಬೇಕಾದಷ್ಟು ಇರದೆ ಅರ್ಧದ ತನಕ ಇದ್ದವು. ನಮ್ಮ ಜನರು ತಮ್ಮ ಹೃದಯ ಪೂರ್ವಕವಾಗಿ ಕೆಲಸ ಮಾಡಿದ್ದುದರಿಂದ ನಮಗೆ ಅಷ್ಟಾದರೂ ಮಾಡುವುದಕ್ಕೆ ಆಯಿತು.
ನೆಹೆಮಿಯ 4 : 7 (ERVKN)
ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು.
ನೆಹೆಮಿಯ 4 : 8 (ERVKN)
ಅವರೆಲ್ಲಾ ಸೇರಿ ಜೆರುಸಲೇಮಿಗೆ ವಿರುದ್ಧವಾಗಿ ಗಲಭೆ ಎಬ್ಬಿಸುವ ಹಂಚಿಕೆಯನ್ನು ಹೂಡಿದರು; ಯುದ್ಧ ಮಾಡುವ ಯೋಚನೆ ಮಾಡಿದರು.
ನೆಹೆಮಿಯ 4 : 9 (ERVKN)
ನಾವು ದೇವರಿಗೆ ಪ್ರಾರ್ಥಿಸಿದೆವು ಮತ್ತು ನಮ್ಮ ಮೇಲೆ ಬೀಳಲು ಬರುವ ಶತ್ರುಗಳಿಗೆ ನಾವು ತಯಾರಿರುವಂತೆ ಹಗಲು ರಾತ್ರಿ ಪಹರೆ ಮಾಡಲು ಗೋಡೆಯ ಮೇಲೆ ಕಾವಲುಗಾರರನ್ನು ನೇಮಿಸಿದೆವು.
ನೆಹೆಮಿಯ 4 : 10 (ERVKN)
ಆ ಸಮಯದಲ್ಲಿ ಯೆಹೂದದ ಜನರು, “ಕೆಲಸಗಾರರು ಆಯಾಸಗೊಳ್ಳುತ್ತಿದ್ದಾರೆ; ದಾರಿಯಲ್ಲೆಲ್ಲಾ ತುಂಬಾ ಧೂಳು ಮತ್ತು ಕಸ ಇರುವುದರಿಂದ ನಾವು ಗೋಡೆಕಟ್ಟಡ ಕೆಲಸವನ್ನು ಮುಂದುವರಿಸಲು ಸಾಧ್ಯವಿಲ್ಲ.
ನೆಹೆಮಿಯ 4 : 11 (ERVKN)
ಅಲ್ಲದೆ ನಮ್ಮ ವೈರಿಗಳು, ‘ನಾವು ಅವರ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡುವುದರಿಂದ ನಾವು ಅವರ ಮಧ್ಯದಲ್ಲಿರುವ ತನಕ ಅವರಿಗೆ ಗೊತ್ತಾಗುವುದೂ ಇಲ್ಲ ಕಾಣುವುದೂ ಇಲ್ಲ. ನಾವು ಅವರನ್ನು ಕೊಂದಾಗ ಕೆಲಸ ತಾನಾಗಿಯೇ ನಿಂತುಹೋಗುವುದು’ ಎಂದು ಹೇಳುತ್ತಿದ್ದಾರೆ” ಎಂದರು.
ನೆಹೆಮಿಯ 4 : 12 (ERVKN)
ಅನ್ಯಜನರ ಮಧ್ಯೆ ವಾಸಿಸುವ ಯೆಹೂದ್ಯರು ನಮ್ಮ ಬಳಿಗೆ ಬಂದು ಹತ್ತು ಬಾರಿ ನಮಗೆ ತಿಳಿಸಿದರು. “ವೈರಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ನಾವು ಎತ್ತ ತಿರುಗಿದರೂ ಅಲ್ಲಿ ಅವರಿದ್ದಾರೆ” ಎಂದರು.
ನೆಹೆಮಿಯ 4 : 13 (ERVKN)
ಆದ್ದರಿಂದ ನಮ್ಮ ಜನರಲ್ಲಿ ಕೆಲವರನ್ನು ಕುಟಂಬ ಸಮೇತವಾಗಿ ಖಡ್ಗ, ಬರ್ಜಿ ಮತ್ತು ಬಿಲ್ಲುಗಳೊಡನೆ ಗೋಡೆಯ ಉದ್ದಕ್ಕೂ ಇದ್ದ ತಗ್ಗಾದ ಸ್ಥಳಗಳಲ್ಲಿಯೂ ಗೋಡೆಗಳಲ್ಲಿದ್ದ ಕಿಂಡಿಗಳ ಬಳಿಯಲ್ಲಿಯೂ ಇರಿಸಿದೆನು.
ನೆಹೆಮಿಯ 4 : 14 (ERVKN)
ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪುಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”
ನೆಹೆಮಿಯ 4 : 15 (ERVKN)
ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ವೈರಿಗಳಿಗೆ ತಿಳಿದಾಗ ದೇವರೇ ಅವರ ಯೋಜನೆಯನ್ನು ನಿಷ್ಫಲಮಾಡಿದನೆಂದು ಅವರು ತಿಳಿದರು. ಮತ್ತೆ ನಾವೆಲ್ಲಾ ಕಟ್ಟುವ ಕೆಲಸಕ್ಕೆ ಕೈಹಾಕಿದೆವು. ಅವರವರ ಭಾಗಕ್ಕೆ ಜನರು ತೆರಳಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು.
ನೆಹೆಮಿಯ 4 : 16 (ERVKN)
ಆ ದಿವಸದಿಂದ ನನ್ನ ಜನರು ಅರ್ಧಭಾಗ ಗೋಡೆಯ ಕೆಲಸದಲ್ಲಿ ನಿರತರಾದರು; ಉಳಿದ ಅರ್ಧ ಜನರು ಭರ್ಜಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಕಾವಲಾಗಿದ್ದರು; ಗೋಡೆಯನ್ನು ಕಟ್ಟುತ್ತಿದ್ದ ಯೆಹೂದದ ಜನರ ಹಿಂಭಾಗದಲ್ಲಿ ಸೈನ್ಯಾಧಿಕಾರಿಗಳು ನಿಂತುಕೊಂಡಿದ್ದರು.
ನೆಹೆಮಿಯ 4 : 17 (ERVKN)
ಗೋಡೆ ಕಟ್ಟುವವರೂ ಅವರ ಸಹಾಯಕರೂ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕೆಲಸ ಮಾಡುತ್ತಿದ್ದರು.
ನೆಹೆಮಿಯ 4 : 18 (ERVKN)
ಕೆಲಸಗಾರರು ತಮ್ಮ ಖಡ್ಗಗಳನ್ನು ಸೊಂಟಕ್ಕೆ ಬಿಗಿದೂಕೊಂಡೇ ಕೆಲಸ ಮಾಡಿದರು. ಜನರನ್ನು ಎಚ್ಚರಗೊಳಿಸಲು ತುತ್ತೂರಿ ಊದುವವನು ನನ್ನ ಬಳಿಯಲ್ಲಿಯೇ ನಿಂತಿರುತ್ತಿದ್ದನು.
ನೆಹೆಮಿಯ 4 : 19 (ERVKN)
ಆಗ ನಾನು ಪ್ರಮುಖ ಕುಟುಂಬಗಳವರನ್ನೂ ಅಧಿಕಾರಿಗಳನ್ನೂ ಮತ್ತು ಉಳಿದ ಜನರನ್ನೂ ಕರೆದು, “ನಾವು ಮಾಡುತ್ತಿರುವುದು ಬಹು ದೊಡ್ಡ ಕಾರ್ಯ; ಗೋಡೆಯ ಉದ್ದಕ್ಕೂ ಚದರಿ ಒಬ್ಬರಿಗೊಬ್ಬರು ತುಂಬಾ ದೂರದಲ್ಲಿದ್ದೇವೆ.
ನೆಹೆಮಿಯ 4 : 20 (ERVKN)
ತುತ್ತೂರಿಯ ಶಬ್ದ ಕೇಳಿದ ಕೂಡಲೇ ನೀವು ಅಲ್ಲಿಗೆ ಹೋಗಬೇಕು. ನಾವೆಲ್ಲಾ ಆ ಸ್ಥಳದಲ್ಲಿ ಒಟ್ಟಾಗಿ ಸೇರಬೇಕು. ನಮ್ಮ ದೇವರು ನಮಗಾಗಿ ಯುದ್ಧ ಮಾಡುವನು” ಎಂದೆನು.
ನೆಹೆಮಿಯ 4 : 21 (ERVKN)
ಹೀಗೆ ನಾವು ಗೋಡೆ ಕಟ್ಟುವ ಕಾರ್ಯವನ್ನು ಮುಂದುವರಿಸಿದೆವು. ಅರ್ಧ ಜನರು ಭರ್ಜಿಗಳನ್ನು ಹಿಡಿದುಕೊಂಡರು. ಮುಂಜಾನೆಯ ಸೂರ್ಯನ ಕಿರಣ ಬೀಳುವ ಹೊತ್ತಿನಿಂದ ಹಿಡಿದು ರಾತ್ರಿ ನಕ್ಷತ್ರಗಳು ಕಾಣುವ ತನಕ ನಾವು ಕೆಲಸದಲ್ಲಿ ನಿರತರಾಗಿರುತ್ತಿದ್ದೆವು.
ನೆಹೆಮಿಯ 4 : 22 (ERVKN)
“ಪ್ರತಿಯೊಬ್ಬ ಕೆಲಸಗಾರನೂ ಅವನ ಸಹಾಯಕನೂ ಜೆರುಸಲೇಮಿನೊಳಗೇ ರಾತ್ರಿಯನ್ನು ಕಳೆಯಬೇಕು. ರಾತ್ರಿ ಕಾಲದಲ್ಲಿ ಅವರು ಪಹರೆಯವರಾಗಿಯೂ ಹಗಲಲ್ಲಿ ಗೋಡೆ ಕಟ್ಟುವವರಾಗಿಯೂ ಇರಬೇಕು” ಎಂದು ನಾನು ಜನರಿಗೆ ಹೇಳಿದೆನು.
ನೆಹೆಮಿಯ 4 : 23 (ERVKN)
ಇದರಿಂದಾಗಿ ಯಾರೂ ತಮ್ಮ ವಸ್ತ್ರಗಳನ್ನು ಬದಲಾಯಿಸಲಿಲ್ಲ. ನಾನಾಗಲಿ ನನ್ನ ಬಂಧುಗಳಾಗಲಿ ನನ್ನ ಜನರಾಗಲಿ ಪಹರೆಯವರಾಗಲಿ ವಸ್ತ್ರಗಳನ್ನು ಬದಲಾಯಿಸದೆ ಆಯುಧಗಳನ್ನು ಧರಿಸಿಕೊಂಡೇ ಇದ್ದೆವು. ನೀರು ಕುಡಿಯುವಾಗಲೂ ಆಯುಧ ಸನ್ನದ್ಧರಾಗಿರುತ್ತಿದ್ದೆವು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23