ಮತ್ತಾಯನು 26 : 1 (ERVKN)
ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಆಲೋಚನೆ (ಮಾರ್ಕ 14:1-2; ಲೂಕ 22:1-2; ಯೋಹಾನ 11:45-53) ಯೇಸು ಈ ಸಂಗತಿಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ, ತನ್ನ ಶಿಷ್ಯರಿಗೆ,
ಮತ್ತಾಯನು 26 : 2 (ERVKN)
“ನಾಳಿದ್ದು ಪಸ್ಕಹಬ್ಬವೆಂಬುದು ನಿಮಗೆ ತಿಳಿದಿದೆ. ಅಂದು ಮನುಷ್ಯಕುಮಾರನನ್ನು ಶಿಲುಬೆಗೇರಿಸಲು ವೈರಿಗಳಿಗೆ ಒಪ್ಪಿಸುವರು” ಎಂದನು.
ಮತ್ತಾಯನು 26 : 3 (ERVKN)
ಇತ್ತ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಪ್ರಧಾನಯಾಜಕನ ಭವನದಲ್ಲಿ ಸಭೆ ಸೇರಿದರು. ಪ್ರಧಾನಯಾಜಕನ ಹೆಸರು ಕಾಯಫ.
ಮತ್ತಾಯನು 26 : 4 (ERVKN)
ಆ ಸಭೆಯಲ್ಲಿ ಅವರು ಯೇಸುವನ್ನು ಉಪಾಯದಿಂದ ಬಂಧಿಸಿ ಕೊಲ್ಲಲು ಸಮಾಲೋಚಿಸಿದರು.
ಮತ್ತಾಯನು 26 : 5 (ERVKN)
ಆದರೆ ಸಭಿಕರು, “ನಾವು ಪಸ್ಕಹಬ್ಬದ ಕಾಲದಲ್ಲಿ ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ ಜನರು ಕೋಪಗೊಂಡು ದಂಗೆ ಏಳಬಹುದು” ಎಂದು ಹೇಳಿದರು.
ಮತ್ತಾಯನು 26 : 6 (ERVKN)
ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ (ಮಾರ್ಕ 14:9; ಯೋಹಾನ 12:1-8) ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು.
ಮತ್ತಾಯನು 26 : 7 (ERVKN)
ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.
ಮತ್ತಾಯನು 26 : 8 (ERVKN)
ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ?
ಮತ್ತಾಯನು 26 : 9 (ERVKN)
ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.
ಮತ್ತಾಯನು 26 : 10 (ERVKN)
ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು.
ಮತ್ತಾಯನು 26 : 11 (ERVKN)
ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.
ಮತ್ತಾಯನು 26 : 12 (ERVKN)
ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು.
ಮತ್ತಾಯನು 26 : 13 (ERVKN)
ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.
ಮತ್ತಾಯನು 26 : 14 (ERVKN)
ಯೇಸುವಿನ ಶತ್ರು ಯೂದ (ಮಾರ್ಕ 14:10-11; ಲೂಕ 22:3-6) ನಂತರ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಮಹಾಯಾಜಕರ ಬಳಿಗೆ ಹೋಗಿ,
ಮತ್ತಾಯನು 26 : 15 (ERVKN)
“ಯೇಸುವನ್ನು ನಿಮಗೆ ಹಿಡಿದುಕೊಟ್ಟರೆ ನೀವು ನನಗೆ ಎಷ್ಟು ಹಣ ಕೊಡುವಿರಿ?” ಎಂದು ಕೇಳಿದನು. ಮಹಾಯಾಜಕರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು.
ಮತ್ತಾಯನು 26 : 16 (ERVKN)
ಅಂದಿನಿಂದ ಯೇಸುವನ್ನು ಹಿಡಿದುಕೊಡಲು ಯೂದನು ಸಮಯ ಕಾಯುತ್ತಿದ್ದನು. (ಮಾರ್ಕ 14:21-22; ಲೂಕ 22:7-14, 21-23; ಯೋಹಾನ 13:21-30)
ಮತ್ತಾಯನು 26 : 17 (ERVKN)
ಪಸ್ಕಹಬ್ಬದ ಆಚರಣೆಗೆ ಸಿದ್ಧತೆ ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಂದು ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವು ನಿನಗಾಗಿ ಪಸ್ಕಹಬ್ಬದ ಊಟವನ್ನು ಎಲ್ಲಿ ಸಿದ್ಧಪಡಿಸಬೇಕು?” ಎಂದು ಕೇಳಿದರು.
ಮತ್ತಾಯನು 26 : 18 (ERVKN)
ಅದಕ್ಕೆ ಯೇಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೇಟಿಮಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಪಿಸಿತು. ನಾನು ಪಸ್ಕಹಬ್ಬದ ಊಟವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಯರೊಂದಿಗೆ ಮಾಡುತ್ತೇನೆ ಎಂದು ಉಪದೇಶಕನು ಹೇಳುತ್ತಾನೆ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಕೊಟ್ಟನು.
ಮತ್ತಾಯನು 26 : 19 (ERVKN)
ಯೇಸು ಹೇಳಿದಂತೆಯೇ ಶಿಷ್ಯರು ಮಾಡಿ ಪಸ್ಕಹಬ್ಬದ ಊಟವನ್ನು ಏರ್ಪಡಿಸಿದರು.
ಮತ್ತಾಯನು 26 : 20 (ERVKN)
ಸಾಯಂಕಾಲದಲ್ಲಿ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತಿದ್ದನು.
ಮತ್ತಾಯನು 26 : 21 (ERVKN)
ಅವರೆಲ್ಲರೂ ಊಟ ಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿರುವ ಹನ್ನೆರಡು ಮಂದಿಯಲ್ಲಿ ಒಬ್ಬನು ನನ್ನನ್ನು ವೈರಿಗಳಿಗೆ ಒಪ್ಪಿಸುತ್ತಾನೆ” ಎಂದು ಹೇಳಿದನು.
ಮತ್ತಾಯನು 26 : 22 (ERVKN)
ಶಿಷ್ಯರು ಇದನ್ನು ಕೇಳಿ ಬಹಳ ದುಃಖಪಟ್ಟರು. ಪ್ರತಿಯೊಬ್ಬ ಶಿಷ್ಯನು ಯೇಸುವಿಗೆ, “ಪ್ರಭುವೇ, ನಿಜವಾಗಿಯೂ ನಾನಲ್ಲ!” ಎಂದು ಹೇಳಿದರು.
ಮತ್ತಾಯನು 26 : 23 (ERVKN)
ಯೇಸು, “ಬಟ್ಟಲಲ್ಲಿ ನನ್ನ ಸಂಗಡ ತನ್ನ ಕೈಗಳನ್ನು ಅದ್ದುವವನೇ ನನಗೆ ವಿರೋಧವಾಗಿದ್ದಾನೆ.
ಮತ್ತಾಯನು 26 : 24 (ERVKN)
ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಒಪ್ಪಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಹೇಳಿದನು.
ಮತ್ತಾಯನು 26 : 25 (ERVKN)
ಆಗ, ಯೇಸುವನ್ನು ಆತನ ಶತ್ರುಗಳಿಗೆ ಒಪ್ಪಿಸಿಕೊಡಲಿದ್ದ ಯೂದನು, “ಗುರುವೇ, ನಿನಗೆ ವಿರೋಧವಾಗಿರುವವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಹೌದು, ಅವನು ನೀನೇ?” ಎಂದು ಉತ್ತರಿಸಿದನು.
ಮತ್ತಾಯನು 26 : 26 (ERVKN)
ಪ್ರಭುವಿನ ಭೋಜನ (ಮಾರ್ಕ 14:22-26; 22:15-20; 1 ಕೊರಿಂಥ 11:23-25) ಅವರು ಊಟಮಾಡುತ್ತಿದ್ದಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಯರಿಗೆ ಕೊಟ್ಟನು.
ಮತ್ತಾಯನು 26 : 27 (ERVKN)
ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರಸಲ್ಲಿಸಿ, “ನೀವೆಲ್ಲರೂ ಇದನ್ನು ಕುಡಿಯಿರಿ.
ಮತ್ತಾಯನು 26 : 28 (ERVKN)
ಇದು ಹೊಸ ಒಡಂಬಡಿಕೆಯನ್ನು ಸ್ಥಾಪಿಸುವ ನನ್ನ ರಕ್ತ. ಇದು ಅನೇಕ ಜನರ ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ.
ಮತ್ತಾಯನು 26 : 29 (ERVKN)
ನಾನು ನನ್ನ ತಂದೆಯ ರಾಜ್ಯದಲ್ಲಿ ಮತ್ತೆ ಒಟ್ಟಾಗಿ ಸೇರಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ತನಕ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ ಜನರಿಗೆ ಕುಡಿಯಲು ಕೊಟ್ಟನು.
ಮತ್ತಾಯನು 26 : 30 (ERVKN)
ಆಗ ಶಿಷ್ಯರೆಲ್ಲರೂ ಪಸ್ಕಹಬ್ಬದ ಹಾಡನ್ನು ಹಾಡಿದರು. ಬಳಿಕ ಅವರು ಆಲಿವ್ ಗುಡ್ಡಕ್ಕೆ ಹೋದರು.
ಮತ್ತಾಯನು 26 : 31 (ERVKN)
ಶಿಷ್ಯರ ವಿಶ್ವಾಸದ್ರೋಹದ ಮುನ್ಸೂಚನೆ (ಮಾರ್ಕ 14:27-31; ಲೂಕ 22:31-34; ಯೋಹಾನ 13:36-38) ಆಗ ಯೇಸು ತನ್ನ ಶಿಷ್ಯರಿಗೆ, “ಇಂದು ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ‘ನಾನು ಕುರುಬನನ್ನು ಕೊಲ್ಲುವೆನು, ಆಗ ಕುರಿಗಳೆಲ್ಲಾ ಚದರಿಹೋಗುತ್ತವೆ’ ಜೆಕರ್ಯ 13:7 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
ಮತ್ತಾಯನು 26 : 32 (ERVKN)
ಆದರೆ ನಾನು ಸತ್ತಮೇಲೆ ಜೀವಂತನಾಗಿ ಎದ್ದುಬರುವೆನು. ನಂತರ ನಾನು ಗಲಿಲಾಯಕ್ಕೆ ಹೋಗುವೆನು. ನೀವು ಅಲ್ಲಿಗೆ ಹೋಗುವುದಕ್ಕಿಂತ ಮುಂಚೆಯೇ ನಾನು ಅಲ್ಲಿರುವೆನು” ಎಂದು ಹೇಳಿದನು.
ಮತ್ತಾಯನು 26 : 33 (ERVKN)
ಪೇತ್ರನು, “ಉಳಿದ ಶಿಷ್ಯರೆಲ್ಲರೂ ನಿನ್ನ ದೆಸೆಯಿಂದ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರೆ ನಾನು ಮಾತ್ರ ಹಾಗೆ ಮಾಡುವುದಿಲ್ಲ” ಎಂದು ಉತ್ತರಕೊಟ್ಟನು.
ಮತ್ತಾಯನು 26 : 34 (ERVKN)
ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಇಂದು ರಾತ್ರಿ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನ ವಿಷಯದಲ್ಲಿ ಆತನು ನನಗೆ ಗೊತ್ತೇ ಇಲ್ಲ ಎಂಬುದಾಗಿ ಮೂರು ಸಲ ಹೇಳುವೆ” ಅಂದನು.
ಮತ್ತಾಯನು 26 : 35 (ERVKN)
ಆದರೆ ಪೇತ್ರನು, “ನಾನು ನಿನ್ನೊಂದಿಗೆ ಸತ್ತರೂ ಸರಿ, ನಿನ್ನನ್ನು ನಿರಾಕರಿಸುವುದಿಲ್ಲ” ಅಂದನು. ಉಳಿದ ಶಿಷ್ಯರು ಸಹ ಅದೇ ರೀತಿ ಹೇಳಿದರು.
ಮತ್ತಾಯನು 26 : 36 (ERVKN)
ಯೇಸುವಿನ ಸಂಕಟದ ಪ್ರಾರ್ಥನೆ (ಮಾರ್ಕ 14:32-42; ಲೂಕ 22:39-46) ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ನಾನು ಅಲ್ಲಿಗೆ ಹೋಗಿ, ಪ್ರಾರ್ಥಿಸಿ ಬರುವ ತನಕ ಇಲ್ಲಿಯೇ ಇರಿ” ಎಂದು ಹೇಳಿದನು.
ಮತ್ತಾಯನು 26 : 37 (ERVKN)
ಯೇಸುವು ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಆಗ ಯೇಸು ಬಹಳ ದುಃಖದಿಂದ ಮನಗುಂದಿದವನಾಗಿ
ಮತ್ತಾಯನು 26 : 38 (ERVKN)
ಅವರಿಗೆ, “ನನ್ನ ಆತ್ಮವು ದುಃಖದಿಂದ ತುಂಬಿಹೋಗಿದೆ. ನನ್ನ ಹೃದಯವು ದುಃಖದಿಂದ ಒಡೆದುಹೋಗುವಂತಿದೆ. ನೀವು ನನ್ನೊಂದಿಗೆ ಎಚ್ಚರವಾಗಿದ್ದು ಇಲ್ಲೇ ಇರಿ” ಎಂದು ಹೇಳಿದನು.
ಮತ್ತಾಯನು 26 : 39 (ERVKN)
ಬಳಿಕ ಯೇಸು ಅವರಿಂದ ಸ್ವಲ್ಪದೂರ ಹೋಗಿ ನೆಲದ ಮೇಲೆ ಬೋರಲಬಿದ್ದು, “ನನ್ನ ತಂದೆಯೇ, ಸಾಧ್ಯವಿದ್ದರೆ, ಸಂಕಟದ ಈ ಪಾತ್ರೆಯನ್ನು ನನಗೆ ಕೊಡಬೇಡ. ಆದರೆ ನನ್ನ ಇಷ್ಟದಂತಲ್ಲ, ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
ಮತ್ತಾಯನು 26 : 40 (ERVKN)
ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದನು. ಅವರು ನಿದ್ರಿಸುತ್ತಿರುವುದನ್ನು ಕಂಡು ಆತನು ಪೇತ್ರನಿಗೆ, “ನೀವು ನನ್ನೊಂದಿಗೆ ಒಂದು ಗಂಟೆಯ ಕಾಲ ಎಚ್ಚರವಾಗಿರಲು ಸಾಧ್ಯವಿಲ್ಲವೇ?
ಮತ್ತಾಯನು 26 : 41 (ERVKN)
ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಮನಸ್ಸೇನೋ ಸಿದ್ಧವಾಗಿದೆ ಆದರೆ ದೇಹಕ್ಕೆ ಬಲಸಾಲದು” ಎಂದು ಹೇಳಿದನು.
ಮತ್ತಾಯನು 26 : 42 (ERVKN)
ಯೇಸು ಎರಡನೆಯ ಸಾರಿ ಸ್ಪಲ್ಪದೂರ ಹೋಗಿ ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಂಕಟದ ಈ ಪಾತ್ರೆಯನ್ನು ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದರೆ ಮತ್ತು ನಾನು ಅದನ್ನು ನೆರವೇರಿಸಲೇಬೇಕಿದ್ದರೆ, ನಿನ್ನ ಇಷ್ಟದಂತೆಯೇ ಆಗಲಿ” ಎಂದನು.
ಮತ್ತಾಯನು 26 : 43 (ERVKN)
ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ಮತ್ತೆ ನಿದ್ರೆ ಮಾಡುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು.
ಮತ್ತಾಯನು 26 : 44 (ERVKN)
ಆದ್ದರಿಂದ ಯೇಸು ಮತ್ತೊಮ್ಮೆ ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ಮೂರನೆಯ ಸಾರಿ ಅದೇ ರೀತಿ ಪ್ರಾರ್ಥಿಸಿದನು.
ಮತ್ತಾಯನು 26 : 45 (ERVKN)
ಬಳಿಕ ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ, “ನೀವು ಇನ್ನೂ ನಿದ್ರೆ ಮಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಷ್ಠರಾದ ಜನರಿಗೆ ಮನುಷ್ಯಕುಮಾರನನ್ನು ಒಪ್ಪಿಸುವ ಕಾಲ ಸಮೀಪಿಸಿದೆ.
ಮತ್ತಾಯನು 26 : 46 (ERVKN)
ನಾವು ಹೋಗಬೇಕು. ಎದ್ದೇಳಿ! ನನ್ನನ್ನು ವೈರಿಗಳಿಗೆ ಒಪ್ಪಿಸುವ ಮನುಷ್ಯನು ಇಲ್ಲಿಯೇ ಬರುತ್ತಿದ್ದಾನೆ” ಎಂದು ಹೇಳಿದನು.
ಮತ್ತಾಯನು 26 : 47 (ERVKN)
ಯೇಸುವಿನ ಬಂಧನ (ಮಾರ್ಕ 14:43-50; ಲೂಕ 22:47-53; ಯೋಹಾನ 18:3-12) ಯೇಸು ಮಾತಾಡುತ್ತಿರವಷ್ಟರಲ್ಲೇ ಯೂದನು ಅಲ್ಲಿಗೆ ಬಂದನು. ಯೂದನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಮಹಾಯಾಜಕರು ಮತ್ತು ಹಿರಿಯ ನಾಯಕರು ಕಳುಹಿಸಿದ್ದ ಅನೇಕ ಜನರು ಅವನೊಂದಿಗಿದ್ದರು. ಅವರು ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡಿದ್ದರು.
ಮತ್ತಾಯನು 26 : 48 (ERVKN)
ಯೇಸು ಯಾರೆಂಬುದನ್ನು ತಿಳಿದುಕೊಳ್ಳಲು ಯೂದನು ಅವರಿಗೆ ಒಂದು ಗುರುತು ಹೇಳಿಕೊಟ್ಟಿದ್ದನು.
ಮತ್ತಾಯನು 26 : 49 (ERVKN)
ಅಂತೆಯೇ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ, ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
ಮತ್ತಾಯನು 26 : 50 (ERVKN)
ಆಗ ಯೇಸು, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ?” ಎಂದನು. ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು.
ಮತ್ತಾಯನು 26 : 51 (ERVKN)
ಆಗ ಯೇಸುವಿನ ಶಿಷ್ಯರಲ್ಲೊಬ್ಬನು ತನ್ನ ಖಡ್ಗವನ್ನು ಹೊರಕ್ಕೆ ಸೆಳೆದು ಮಹಾಯಾಜಕನ ಸೇವಕನಿಗೆ ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.
ಮತ್ತಾಯನು 26 : 52 (ERVKN)
ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಕತ್ತಿಯನ್ನು ಬಳಸುವ ಜನರು ಕತ್ತಿಯಿಂದಲೇ ಸಾಯುತ್ತಾರೆ.
ಮತ್ತಾಯನು 26 : 53 (ERVKN)
ನಾನು ನನ್ನ ತಂದೆಯನ್ನು ಕೇಳಿದ್ದರೆ, ಆತನು ನನಗೆ ದೇವದೂತರ ಹನ್ನೆರಡು ಸೇನಾದಳಗಳನ್ನು ನೀಡುತ್ತಿದ್ದನೆಂಬುದು ನಿನಗೆ ಗೊತ್ತೇ ಇದೆ.
ಮತ್ತಾಯನು 26 : 54 (ERVKN)
ಆದರೆ ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದು ಈ ರೀತಿಯಲ್ಲೇ ಆಗಬೇಕಾಗಿದೆ” ಎಂದು ಹೇಳಿದನು.
ಮತ್ತಾಯನು 26 : 55 (ERVKN)
ನಂತರ ಯೇಸು ಆ ಜನರಿಗೆ, “ನೀವು ಅಪರಾಧಿಯನ್ನು ಬಂಧಿಸುವವರಂತೆ ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದಿದ್ದೀರಿ. ನಾನು ಪ್ರತಿದಿನವೂ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಅಲ್ಲಿ ಬಂಧಿಸಲೇ ಇಲ್ಲ.
ಮತ್ತಾಯನು 26 : 56 (ERVKN)
ಆದರೆ ಪ್ರವಾದಿಗಳು ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು. (ಮಾರ್ಕ 14:53-65; ಲೂಕ 22:54-55, 63-71; ಯೋಹಾನ 18:13-14, 19-24)
ಮತ್ತಾಯನು 26 : 57 (ERVKN)
ಯೆಹೂದ್ಯ ನಾಯಕರ ಎದುರಿನಲ್ಲಿ ಯೇಸು ಬಳಿಕ ಯೇಸುವನ್ನು ಬಂಧಿಸಿದ್ದವರು ಆತನನ್ನು ಪ್ರಧಾನ ಯಾಜಕನಾದ ಕಾಯಫನ ಮನೆಗೆ ಕರೆದೊಯ್ದರು. ಅಲ್ಲಿ ಧರ್ಮೋಪದೇಶಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಒಟ್ಟಿಗೆ ಸೇರಿದ್ದರು.
ಮತ್ತಾಯನು 26 : 58 (ERVKN)
ಯೇಸುವಿಗೆ ಏನಾಗುತ್ತದೋ ಎಂಬುದನ್ನು ನೋಡಲು ಪೇತ್ರನು ಆತನನ್ನು ದೂರದಿಂದ ಹಿಂಬಾಲಿಸುತ್ತಾ ಪ್ರಧಾನಯಾಜಕನ ಭವನದ ಅಂಗಳದೊಳಗೆ ಬಂದು ಕಾವಲುಗಾರರೊಂದಿಗೆ ಕುಳಿತುಕೊಂಡನು.
ಮತ್ತಾಯನು 26 : 59 (ERVKN)
ಮಹಾಯಾಜಕರು ಮತ್ತು ಯೆಹೂದ್ಯರ ಸಮಿತಿಯವರು ಯೇಸುವಿಗೆ ಮರಣದಂಡನೆ ವಿಧಿಸಲು ಅಗತ್ಯವಾದ ಸುಳ್ಳುಸಾಕ್ಷಿಗಳನ್ನು ಹುಡುಕಿದರು.
ಮತ್ತಾಯನು 26 : 60 (ERVKN)
ಅನೇಕರು ಬಂದು, ಯೇಸುವಿನ ವಿಷಯವಾಗಿ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಯೇಸುವನ್ನು ಕೊಲ್ಲಲು ಬಲವಾದ ಕಾರಣವೊಂದೂ ಸಮಿತಿಗೆ ಸಿಗಲಿಲ್ಲ. ಆಗ ಇಬ್ಬರು ಬಂದು,
ಮತ್ತಾಯನು 26 : 61 (ERVKN)
“ಈ ಮನುಷ್ಯನು, ‘ನಾನು ದೇವರ ಆಲಯವನ್ನು ಕೆಡವಿ ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ’ ಎಂದು ಹೇಳಿದನು” ಎಂಬುದಾಗಿ ತಿಳಿಸಿದರು.
ಮತ್ತಾಯನು 26 : 62 (ERVKN)
ಪ್ರಧಾನಯಾಜಕನು ಎದ್ದುನಿಂತು ಯೇಸುವಿಗೆ, “ಈ ಜನರು ನಿನ್ನ ಮೇಲೆ ಹೊರಿಸಿರುವ ಆಪಾದನೆಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯಾ? ಇವರು ಹೇಳುತ್ತಿರುವುದೆಲ್ಲಾ ನಿಜವೇ?” ಎಂದು ಕೇಳಿದನು.
ಮತ್ತಾಯನು 26 : 63 (ERVKN)
ಆದರೆ ಯೇಸು ಮೌನವಾಗಿದ್ದನು. ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.
ಮತ್ತಾಯನು 26 : 64 (ERVKN)
ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು. ಆದರೆ ನಿನಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೋಡಗಳ ಮೇಲೆ ಕುಳಿತು ಬರುವುದನ್ನೂ ನೀವು ಕಾಣುವಿರಿ” ಎಂದು ಹೇಳಿದನು.
ಮತ್ತಾಯನು 26 : 65 (ERVKN)
ಪ್ರಧಾನಯಾಜಕನು ಇದನ್ನು ಕೇಳಿ ಬಹಳ ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವೂ ಇಲ್ಲ. ಇವನು ಮಾಡಿದ ದೇವದೂಷಣೆಯನ್ನು ನೀವೇ ಕೇಳಿದಿರಿ.
ಮತ್ತಾಯನು 26 : 66 (ERVKN)
ನಿಮ್ಮ ತೀರ್ಮಾನವೇನು?” ಎಂದು ಕೇಳಿದನು. ಯೆಹೂದ್ಯರು, “ಇವನು ಅಪರಾಧಿ. ಇವನು ಸಾಯಲೇಬೇಕು” ಎಂದು ಉತ್ತರಕೊಟ್ಟರು.
ಮತ್ತಾಯನು 26 : 67 (ERVKN)
ನಂತರ ಜನರು ಅಲ್ಲಿಯೇ ಯೇಸುವಿನ ಮುಖದ ಮೇಲೆ ಉಗುಳಿದರು. ಮುಷ್ಠಿಯಿಂದ ಆತನನ್ನು ಗುದ್ದಿದರು. ಆತನ ಕೆನ್ನೆಗೆ ಹೊಡೆದರು.
ಮತ್ತಾಯನು 26 : 68 (ERVKN)
ಅವರು, “ಕ್ರಿಸ್ತನೇ, ನಮಗೆ ಪ್ರವಾದನೆ ಹೇಳು! ನಿನಗೆ ಹೊಡೆದವರು ಯಾರು?” ಎಂದು ಅಪಹಾಸ್ಯ ಮಾಡಿದರು. (ಮಾರ್ಕ 14:66-72; ಲೂಕ 22:56-62; ಯೋಹಾನ 18:15-18, 25-27)
ಮತ್ತಾಯನು 26 : 69 (ERVKN)
ಪೇತ್ರನ ವಿಶ್ವಾಸದ್ರೋಹ ಇತ್ತ ಪೇತ್ರನು ಅಂಗಳದಲ್ಲಿ ಕುಳಿತಿದ್ದನು. ಸೇವಕಿಯೊಬ್ಬಳು ಪೇತ್ರನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೇಸುವಿನೊಂದಿಗಿದ್ದವನು” ಎಂದು ಹೇಳಿದಳು.
ಮತ್ತಾಯನು 26 : 70 (ERVKN)
ಆದರೆ ಪೇತ್ರನು, ಅಲ್ಲಿದ್ದ ಜನರೆಲ್ಲರ ಎದುರಿನಲ್ಲಿ ಆಕೆಗೆ, “ನೀನು ಏನು ಹೇಳುತ್ತಿರುವೆಯೋ ನನಗೆ ಗೊತ್ತೇ ಇಲ್ಲ” ಎಂದು ನಿರಾಕರಿಸಿದನು.
ಮತ್ತಾಯನು 26 : 71 (ERVKN)
ಬಳಿಕ ಪೇತ್ರನು ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿಗೆ ಬಂದಾಗ ಮತ್ತೊಬ್ಬ ಸೇವಕಿಯು ಅವನನ್ನು ನೋಡಿ ಅಲ್ಲಿದ್ದ ಜನರಿಗೆ, “ಈ ಮನುಷ್ಯನು ನಜರೇತಿನ ಯೇಸುವಿನೊಂದಿಗಿದ್ದನು” ಎಂದು ಹೇಳಿದಳು.
ಮತ್ತಾಯನು 26 : 72 (ERVKN)
ಆಗ ಪೇತ್ರನು, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಯೇಸುವೆಂಬ ಮನುಷ್ಯನು ತಿಳಿದೇ ಇಲ್ಲ!” ಎಂದು ನಿರಾಕರಿಸಿದನು.
ಮತ್ತಾಯನು 26 : 73 (ERVKN)
ಸ್ವಲ್ಪ ಸಮಯದ ತರುವಾಯ, ಅಲ್ಲಿ ನಿಂತಿದ್ದ ಕೆಲವು ಜನರು ಪೇತ್ರನ ಸಮೀಪಕ್ಕೆ ಹೋಗಿ, “ಯೇಸುವನ್ನು ಹಿಂಬಾಲಿಸಿಕೊಂಡು ಬಂದ ಜನರಲ್ಲಿ ನೀನೂ ಒಬ್ಬನಾಗಿರುವೆ ಎಂಬುದನ್ನು ನೀನು ಮಾತಾಡುವ ರೀತಿಯೇ ತೋರಿಸುತ್ತದೆ” ಎಂದು ಹೇಳಿದರು.
ಮತ್ತಾಯನು 26 : 74 (ERVKN)
ಆಗ ಪೇತ್ರನು ಶಪಿಸಿಕೊಳ್ಳತೊಡಗಿ, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಯೇಸುವೆಂಬ ಮನುಷ್ಯನು ನನಗೆ ತಿಳಿದೇ ಇಲ್ಲ!” ಎಂದು ಹೇಳಿದನು. ಆ ಕೂಡಲೇ ಕೋಳಿ ಕೂಗಿತು.
ಮತ್ತಾಯನು 26 : 75 (ERVKN)
“ಆತನು ಯಾರೋ ನನಗೆ ಗೊತ್ತೇ ಇಲ್ಲ ಎಂಬುದಾಗಿ ಕೋಳಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಲ ಹೇಳುವೆ” ಎಂದು ತನಗೆ ಯೇಸು ಹೇಳಿದ್ದ ಮಾತನ್ನು ಪೇತ್ರನು ನೆನಪು ಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75