ಮತ್ತಾಯನು 25 : 1 (ERVKN)
ಹತ್ತು ಮಂದಿ ಕನ್ನಿಕೆಯರನ್ನು ಕುರಿತ ಸಾಮ್ಯ “ಆ ದಿನಗಳಲ್ಲಿ ಪರಲೋಕರಾಜ್ಯವು ಹೇಗಿರುತ್ತದೆ ಎನ್ನುವುದಕ್ಕೆ ಈ ಸಾಮ್ಯವು ಉದಾಹರಣೆಯಾಗಿದೆ. ಹತ್ತು ಮಂದಿ ಕನ್ನಿಕೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳಲು ಹೊರಟರು.
ಮತ್ತಾಯನು 25 : 2 (ERVKN)
ಅವರಲ್ಲಿ ಐದು ಮಂದಿ ಬುದ್ಧಿಹೀನರಾಗಿದ್ದರು. ಇನ್ನುಳಿದ ಐದು ಮಂದಿ ಬುದ್ಧಿವಂತೆಯರಾಗಿದ್ದರು.
ಮತ್ತಾಯನು 25 : 3 (ERVKN)
ಬುದ್ಧಿಹೀನ ಕನ್ನಿಕೆಯರು ತಮ್ಮ ದೀಪಾರತಿಗಳನ್ನು ತಂದರೇ ಹೊರತು ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
ಮತ್ತಾಯನು 25 : 4 (ERVKN)
ಬುದ್ಧಿವಂತೆಯರು ತಮ್ಮ ದೀಪಗಳೊಂದಿಗೆ ಬೇಕಾದಷ್ಟು ಎಣ್ಣೆಯನ್ನೂ ತೆಗೆದುಕೊಂಡರು.
ಮತ್ತಾಯನು 25 : 5 (ERVKN)
ಮದುಮಗನ ಆಗಮನ ತಡವಾಯಿತು. ಅವರೆಲ್ಲರೂ ಆಯಾಸದಿಂದ ತೂಕಡಿಸುತ್ತಾ ನಿದ್ರೆಹೋದರು.
ಮತ್ತಾಯನು 25 : 6 (ERVKN)
“ಮಧ್ಯರಾತ್ರಿಯಲ್ಲಿ, ‘ಮದುಮಗನು ಬರುತ್ತಿದ್ದಾನೆ! ಬನ್ನಿರಿ, ಆತನನ್ನು ಸಂಧಿಸಿರಿ!’ ಎಂದು ಯಾರೋ ಒಬ್ಬನು ಪ್ರಕಟಿಸಿದನು.
ಮತ್ತಾಯನು 25 : 7 (ERVKN)
“ಆಗ ಕನ್ನಿಕೆಯರೆಲ್ಲ ಎಚ್ಚರಗೊಂಡು ತಮ್ಮ ದೀಪಾರತಿಗಳನ್ನು ಸಿದ್ಧಮಾಡಿಕೊಂಡರು.
ಮತ್ತಾಯನು 25 : 8 (ERVKN)
ಬುದ್ಧಿಹೀನ ಕನ್ನಿಕೆಯರು ಬುದ್ಧಿವಂತ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿ. ನಮ್ಮ ದೀಪಾರತಿಗಳಲ್ಲಿದ್ದ ಎಣ್ಣೆಯೆಲ್ಲಾ ಮುಗಿಯಿತು’ ಎಂದರು.
ಮತ್ತಾಯನು 25 : 9 (ERVKN)
“ಬುದ್ಧಿವಂತೆಯರು, ‘ಇಲ್ಲ! ನಮ್ಮಲ್ಲಿರುವ ಎಣ್ಣೆ ನಮಗೇ ಸಾಕಾಗದಿರಬಹುದು. ಅಂಗಡಿಗೆ ಹೋಗಿ ಕೊಂಡುಕೊಳ್ಳಿರಿ’ ಎಂದು ಉತ್ತರಕೊಟ್ಟರು.
ಮತ್ತಾಯನು 25 : 10 (ERVKN)
“ಆದ್ದರಿಂದ ಐದು ಮಂದಿ ಬುದ್ಧಿಹೀನ ಕನ್ನಿಕೆಯರು ಎಣ್ಣೆ ಕೊಂಡುಕೊಳ್ಳುವುದಕ್ಕೆ ಹೋದರು. ಅವರು ಹೋಗುತ್ತಿರುವಾಗ, ಮದುಮಗನು ಬಂದನು. ಸಿದ್ಧವಾಗಿದ್ದ ಕನ್ನಿಕೆಯರು ಮದುಮಗನ ಜೊತೆಯಲ್ಲಿ ಔತಣಕ್ಕೆ ಹೋದರು. ನಂತರ ಬಾಗಿಲು ಮುಚ್ಚಲಾಯಿತು.
ಮತ್ತಾಯನು 25 : 11 (ERVKN)
“ತರುವಾಯ ಬುದ್ಧಿಹೀನ ಕನ್ನಿಕೆಯರು ಬಂದು, ‘ಸ್ವಾಮೀ, ಸ್ವಾಮೀ, ಒಳಗೆ ಬರಲು ನಮಗೆ ಬಾಗಿಲು ತೆರೆ’ ಅಂದರು.
ಮತ್ತಾಯನು 25 : 12 (ERVKN)
“ಆದರೆ ಮದುಮಗನು, ‘ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನೀವು ಯಾರೋ ನನಗೆ ಗೊತ್ತಿಲ್ಲ’ ಎಂದು ಉತ್ತರಕೊಟ್ಟನು.
ಮತ್ತಾಯನು 25 : 13 (ERVKN)
“ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ಮನುಷ್ಯಕುಮಾರನು ಬರುವ ದಿನವಾಗಲಿ ಸಮಯವಾಗಲಿ ನಿಮಗೆ ಗೊತ್ತಿಲ್ಲ.
ಮತ್ತಾಯನು 25 : 14 (ERVKN)
ಮೂವರು ಸೇವಕರನ್ನು ಕುರಿತ ಸಾಮ್ಯ (ಲೂಕ 19:11-27) “ಪರಲೋಕರಾಜ್ಯವು, ತನ್ನ ಮನೆಯನ್ನು ಬಿಟ್ಟು ಬೇರೆ ಸ್ಥಳವನ್ನು ಸಂದರ್ಶಿಸುವುದಕ್ಕೆ ಪ್ರಯಾಣ ಮಾಡಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆ ಮನುಷ್ಯನು ತಾನು ಹೊರಡುವುದಕ್ಕೆ ಮುಂಚೆ ತನ್ನ ಸೇವಕರೊಂದಿಗೆ ಮಾತನಾಡಿ, ತನ್ನ ಆಸ್ತಿಯನ್ನು ನೋಡಿಕೊಳ್ಳಲು ಅವರಿಗೆ ಹೇಳಿದನು.
ಮತ್ತಾಯನು 25 : 15 (ERVKN)
ಅವನು ಆ ಸೇವಕರ ಸಾಮರ್ಥ್ಯಕ್ಕನುಸಾರವಾಗಿ ಎಷ್ಟೆಷ್ಟು ಜವಾಬ್ದಾರಿಕೆಯನ್ನು ಕೊಡಬೇಕೆಂಬುದನ್ನು ನಿರ್ಧರಿಸಿದನು. ಅವನು ಒಬ್ಬ ಸೇವಕನಿಗೆ ಐದು ತಲಾಂತು *ತಲಾಂತು ಒಂದು ತಲಾಂತು ಅಂದರೆ 30,000 ದಿನಾರಿ. ಒಂದು ದಿನಾರಿ ಅಂದರೆ ಒಬ್ಬನ ಒಂದು ದಿನದ ಸಂಬಳ. ಮತ್ತೊಬ್ಬನಿಗೆ ಎರಡು ತಲಾಂತು ಕೊಟ್ಟನು. ಮೂರನೇ ಸೇವಕನಿಗೆ ಒಂದು ತಲಾಂತು ಕೊಟ್ಟನು. ಬಳಿಕ ಅವನು ಬೇರೆ ಸ್ಥಳಕ್ಕೆ ಹೊರಟುಹೋದನು.
ಮತ್ತಾಯನು 25 : 16 (ERVKN)
ಐದು ತಲಾಂತು ತೆಗೆದುಕೊಂಡ ಸೇವಕನು ತಕ್ಷಣವೇ ಹೋಗಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಸಂಪಾದಿಸಿದನು.
ಮತ್ತಾಯನು 25 : 17 (ERVKN)
ಎರಡು ತಲಾಂತು ಹೊಂದಿದ ಸೇವಕನೂ ಅದೇ ರೀತಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಎರಡು ತಲಾಂತು ಸಂಪಾದಿಸಿದನು.
ಮತ್ತಾಯನು 25 : 18 (ERVKN)
ಆದರೆ ಒಂದು ತಲಾಂತು ಹೊಂದಿದವನು ಹೊರಟುಹೋಗಿ ನೆಲದಲ್ಲಿ ಒಂದು ಗುಂಡಿ ತೋಡಿ ಆ ಹಣವನ್ನು ಅಡಗಿಸಿಟ್ಟನು.
ಮತ್ತಾಯನು 25 : 19 (ERVKN)
“ಬಹುಕಾಲದ ನಂತರ ಯಜಮಾನನು ಮನೆಗೆ ಬಂದನು. ತಾನು ಕೊಟ್ಟಿದ್ದ ಹಣದ ಕುರಿತಾಗಿ ಅವನು ಸೇವಕರನ್ನು ವಿಚಾರಿಸಿ ಲೆಕ್ಕ ಕೇಳಿದನು.
ಮತ್ತಾಯನು 25 : 20 (ERVKN)
ಐದು ತಲಾಂತು ಪಡೆದ ಸೇವಕನು ಇನ್ನೂ ಐದು ತಲಾಂತನ್ನು ತನ್ನ ಯಜಮಾನನ ಬಳಿಗೆ ತಂದು, ‘ಧಣಿಯೇ, ನೀನು ನನ್ನಲ್ಲಿ ಭರವಸೆಯಿಟ್ಟು ಐದು ತಲಾಂತನ್ನು ಕೊಟ್ಟೆ. ನಾನು ಅದನ್ನು ವಿನಿಯೋಗಿಸಿ ಇನ್ನೂ ಐದು ತಲಾಂತು ಸಂಪಾದಿಸಿದ್ದೇನೆ’ ಎಂದನು.
ಮತ್ತಾಯನು 25 : 21 (ERVKN)
“ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.
ಮತ್ತಾಯನು 25 : 22 (ERVKN)
“ಆಮೇಲೆ ಎರಡು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ನನಗೆ ಎರಡು ತಲಾಂತು ಕೊಟ್ಟೆ. ನಾನು ಆ ಹಣವನ್ನು ಉಪಯೋಗಿಸಿ ಇನ್ನೂ ಎರಡು ತಲಾಂತು ಸಂಪಾದಿಸಿರುವೆ’ ಅಂದನು.
ಮತ್ತಾಯನು 25 : 23 (ERVKN)
“ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ನೀನು ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು, ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.
ಮತ್ತಾಯನು 25 : 24 (ERVKN)
“ಬಳಿಕ ಒಂದು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ಬಹಳ ಕಠಿಣ ಮನುಷ್ಯನು ಎಂದು ನಾನು ಬಲ್ಲೆ. ನೀನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನು.
ಮತ್ತಾಯನು 25 : 25 (ERVKN)
ಆದ್ದರಿಂದ ನಾನು ಹೆದರಿಕೊಂಡು ನಿನ್ನ ಹಣವನ್ನು ಭೂಮಿಯಲ್ಲಿ ಅಡಗಿಸಿಟ್ಟೆನು. ನೀನು ನನಗೆ ಕೊಟ್ಟ ಹಣ ಇಲ್ಲಿದೆ, ತೆಗೆದುಕೊ’ ಅಂದನು.
ಮತ್ತಾಯನು 25 : 26 (ERVKN)
“ಅದಕ್ಕೆ ಯಜಮಾನನು, ‘ನೀನು ಸೋಮಾರಿಯಾದ ಕೆಟ್ಟ ಸೇವಕ! ನಾನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನೆಂದು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನೆಂದು ನಿನಗೆ ಗೊತ್ತಿತ್ತೇ?
ಮತ್ತಾಯನು 25 : 27 (ERVKN)
ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ಆಗ ನಾನು ಅಸಲಿನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆನು’ ಎಂದು ಉತ್ತರಕೊಟ್ಟನು.
ಮತ್ತಾಯನು 25 : 28 (ERVKN)
“ಬಳಿಕ ಯಜಮಾನನು ತನ್ನ ಬೇರೆ ಸೇವಕರಿಗೆ, ‘ಅವನ ಒಂದು ತಲಾಂತನ್ನು ತೆಗೆದುಕೊಂಡು ಐದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ.
ಮತ್ತಾಯನು 25 : 29 (ERVKN)
ತನ್ನಲ್ಲಿರುವುದನ್ನು ವಿನಿಯೋಗಿಸುವ ಪ್ರತಿಯೊಬ್ಬನಿಗೂ ಹೆಚ್ಚಾಗಿ ಕೊಡಲ್ಪಡುವುದು, ಆದರೆ ತನ್ನಲ್ಲಿರುವುದನ್ನು ವಿನಿಯೋಗಿಸದಿರುವ ವ್ಯಕ್ತಿಯಿಂದ ಇದ್ದದ್ದನ್ನೂ ಕಸಿದುಕೊಳ್ಳಲಾಗುವುದು’ ಎಂದು ಹೇಳಿದನು.
ಮತ್ತಾಯನು 25 : 30 (ERVKN)
ಬಳಿಕ ಆ ಯಜಮಾನನು, ‘ಕೆಲಸಕ್ಕೆ ಬಾರದ ಆ ಸೇವಕನನ್ನು, ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವ ಕಗ್ಗತ್ತಲೆಯ ಸ್ಥಳಕ್ಕೆ ದಬ್ಬಿರಿ’ ಎಂದು ಆಜ್ಞಾಪಿಸಿದನು.
ಮತ್ತಾಯನು 25 : 31 (ERVKN)
ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ.
ಮತ್ತಾಯನು 25 : 32 (ERVKN)
ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು;
ಮತ್ತಾಯನು 25 : 33 (ERVKN)
ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
ಮತ್ತಾಯನು 25 : 34 (ERVKN)
“ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ.
ಮತ್ತಾಯನು 25 : 35 (ERVKN)
ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ.
ಮತ್ತಾಯನು 25 : 36 (ERVKN)
ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.
ಮತ್ತಾಯನು 25 : 37 (ERVKN)
“ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು?
ಮತ್ತಾಯನು 25 : 38 (ERVKN)
ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು?
ಮತ್ತಾಯನು 25 : 39 (ERVKN)
ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.
ಮತ್ತಾಯನು 25 : 40 (ERVKN)
“ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.
ಮತ್ತಾಯನು 25 : 41 (ERVKN)
“ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ.
ಮತ್ತಾಯನು 25 : 42 (ERVKN)
ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ.
ಮತ್ತಾಯನು 25 : 43 (ERVKN)
ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.
ಮತ್ತಾಯನು 25 : 44 (ERVKN)
“ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.
ಮತ್ತಾಯನು 25 : 45 (ERVKN)
“ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.
ಮತ್ತಾಯನು 25 : 46 (ERVKN)
“ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46