ಮತ್ತಾಯನು 12 : 1 (ERVKN)
ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ (ಮಾರ್ಕ 2:23-28; ಲೂಕ 6:1-5) ಅಂದು ಸಬ್ಬತ್ ದಿನ. ಯೇಸು ಧಾನ್ಯದ ಹೊಲಗಳ ಮಾರ್ಗವಾಗಿ ನಡೆದುಹೋಗುತ್ತಿದ್ದನು. ಯೇಸುವಿನ ಶಿಷ್ಯರು ಆತನೊಂದಿಗಿದ್ದರು. ಅವರು ಹಸಿದಿದ್ದರು. ಆದ್ದರಿಂದ ಶಿಷ್ಯರು ತೆನೆಗಳನ್ನು ಕಿತ್ತುಕೊಂಡು ತಿನ್ನತೊಡಗಿದರು.
ಮತ್ತಾಯನು 12 : 2 (ERVKN)
ಇದನ್ನು ಕಂಡ ಫರಿಸಾಯರು ಯೇಸುವಿಗೆ, “ನೋಡು! ಸಬ್ಬತ್‌ದಿನದಂದು ಮಾಡತಕ್ಕ ಕಾರ್ಯಗಳನ್ನು ಕುರಿತು ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ವಿಧಿಸಿರುವ ನಿಯಮಗಳಿಗೆ ವಿರುದ್ಧವಾಗಿ ನಿನ್ನ ಶಿಷ್ಯರು ಮಾಡುತ್ತಿದ್ದಾರೆ” ಎಂದು ಹೇಳಿದರು.
ಮತ್ತಾಯನು 12 : 3 (ERVKN)
ಅದಕ್ಕೆ ಯೇಸು, “ತಾನೂ ತನ್ನೊಂದಿಗಿದ್ದ ಜನರೂ ಹಸಿದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೇ?
ಮತ್ತಾಯನು 12 : 4 (ERVKN)
ದಾವೀದನು ದೇವರ ಮಂದಿರದೊಳಗೆ ಹೋದನು. ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ದಾವೀದನು ಮತ್ತು ಅವನೊಂದಿಗಿದ್ದ ಜನರು ತಿಂದರು. ಅವರು ಆ ರೊಟ್ಟಿಯನ್ನು ತಿನ್ನುವುದು ಧರ್ಮಶಾಸ್ತ್ರಕ್ಕೆ ವಿರೋಧವಾಗಿತ್ತು. ಅದನ್ನು ತಿನ್ನಲು ಯಾಜಕರಿಗೆ ಮಾತ್ರ ಅವಕಾಶವಿತ್ತು.
ಮತ್ತಾಯನು 12 : 5 (ERVKN)
ಪ್ರತಿಯೊಂದು ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಮೀರಿದರೂ ತಪ್ಪಿತಸ್ಥರಾಗುವುದಿಲ್ಲವೆಂದು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ?
ಮತ್ತಾಯನು 12 : 6 (ERVKN)
ಆದರೆ ದೇವಾಲಯಕ್ಕಿಂತಲೂ ಹೆಚ್ಚಿನವನು ಇಲ್ಲಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ.
ಮತ್ತಾಯನು 12 : 7 (ERVKN)
‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’ ಉಲ್ಲೇಖನ: ಹೋಶೇಯ 6:6. ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.
ಮತ್ತಾಯನು 12 : 8 (ERVKN)
“ಮನುಷ್ಯಕುಮಾರನು ಸಬ್ಬತ್‌ ದಿನಕ್ಕೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.
ಮತ್ತಾಯನು 12 : 9 (ERVKN)
ಕೈಬತ್ತಿದವನಿಗೆ ಆರೋಗ್ಯದಾನ (ಮಾರ್ಕ 3:1-6; ಲೂಕ 6:6-11) ಯೇಸು ಆ ಸ್ಥಳವನ್ನು ಬಿಟ್ಟು ಅವರ ಸಭಾಮಂದಿರದೊಳಕ್ಕೆ ಹೋದನು.
ಮತ್ತಾಯನು 12 : 10 (ERVKN)
ಆ ಸಭಾಮಂದಿರದಲ್ಲಿ ಒಬ್ಬನ ಕೈ ಊನವಾಗಿತ್ತು. ಯೆಹೂದ್ಯರಲ್ಲಿ ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸುವುದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೇಸುವಿಗೆ “ಸಬ್ಬತ್‌ದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಕೇಳಿದರು.
ಮತ್ತಾಯನು 12 : 11 (ERVKN)
ಯೇಸು, “ನಿಮ್ಮಲ್ಲಿ ಯಾರ ಬಳಿಯಾದರೂ ಒಂದು ಕುರಿಯಿದ್ದು, ಆ ಕುರಿಯು ಸಬ್ಬತ್ ದಿನದಂದು ಕುಣಿಯೊಳಕ್ಕೆ ಬಿದ್ದರೆ, ನೀವು ಆ ಕುರಿಯನ್ನು ಕುಣಿಯಿಂದ ಮೇಲಕ್ಕೆ ಎತ್ತುವಿರಿ.
ಮತ್ತಾಯನು 12 : 12 (ERVKN)
ಮನುಷ್ಯನು ಕುರಿಗಿಂತ ಎಷ್ಟೋ ಬೆಲೆಯುಳ್ಳವನಾಗಿದ್ದಾನೆ. ಆದ್ದರಿಂದ ಸಬ್ಬತ್‌ದಿನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾದದ್ದು” ಎಂದು ಉತ್ತರಕೊಟ್ಟನು.
ಮತ್ತಾಯನು 12 : 13 (ERVKN)
ನಂತರ ಯೇಸು ಕೈ ಊನವಾಗಿದ್ದ ಮನುಷ್ಯನಿಗೆ, “ನಿನ್ನ ಕೈ ತೋರಿಸು” ಎಂದನು. ಅವನು ತನ್ನ ಕೈಯನ್ನು ಆತನ ಕಡೆಗೆ ಚಾಚಿದನು. ಕೂಡಲೇ, ಅವನ ಕೈ ಮತ್ತೊಂದು ಕೈಯಂತೆ ಸರಿಯಾಯಿತು.
ಮತ್ತಾಯನು 12 : 14 (ERVKN)
ಆದರೆ ಫರಿಸಾಯರು ಹೊರಟುಹೋಗಿ, ಯೇಸುವನ್ನು ಕೊಲ್ಲಲು ಉಪಾಯಗಳನ್ನು ಮಾಡಿಕೊಂಡರು.
ಮತ್ತಾಯನು 12 : 15 (ERVKN)
ಯೇಸು ದೇವರಿಂದ ಆರಿಸಲ್ಪಟ್ಟ ಸೇವಕ ಫರಿಸಾಯರು ಏನು ಮಾಡುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಆ ಸ್ಥಳವನ್ನು ಬಿಟ್ಟುಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿದರು. ಆತನು ಎಲ್ಲಾ ರೋಗಿಗಳನ್ನು ಗುಣಪಡಿಸಿದನು.
ಮತ್ತಾಯನು 12 : 16 (ERVKN)
ಆದರೆ ತಾನು ಯಾರೆಂಬುದನ್ನು ಬೇರೆ ಜನರಿಗೆ ಹೇಳಬಾರದೆಂದು ಆತನು ಜನರನ್ನು ಎಚ್ಚರಿಸಿದನು.
ಮತ್ತಾಯನು 12 : 17 (ERVKN)
ಪ್ರವಾದಿಯಾದ ಯೆಶಾಯನು ಹೇಳಿದ್ದನ್ನು ನೆರವೇರಿಸುವುದಕ್ಕಾಗಿ ಯೇಸು ಇವುಗಳನ್ನು ಮಾಡಿದನು. ಯೆಶಾಯನು ಹೇಳಿದ್ದೇನೆಂದರೆ:
ಮತ್ತಾಯನು 12 : 18 (ERVKN)
“ಇಗೋ, ನನ್ನ ಸೇವಕನು. ನಾನು ಆತನನ್ನು ಆರಿಸಿಕೊಂಡಿದ್ದೇನೆ.
ಆತನನ್ನು ಪ್ರೀತಿಸುತ್ತೇನೆ, ಆತನನ್ನು ಮೆಚ್ಚಿದ್ದೇನೆ.
ಆತನ ಮೇಲೆ ನನ್ನ ಆತ್ಮವನ್ನು ಇರಿಸುವೆನು. ಆತನು ಜನಾಂಗಗಳಿಗೆ ನ್ಯಾಯವಾದ ತೀರ್ಪು ಮಾಡುವನು.
ಮತ್ತಾಯನು 12 : 19 (ERVKN)
ಆತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ. ಬೀದಿಗಳಲ್ಲಿ ಆತನ ಶಬ್ದ ಕೇಳಿಸುವುದಿಲ್ಲ.
ಮತ್ತಾಯನು 12 : 20 (ERVKN)
ಬಾಗಿಹೋದ ದಂಟನ್ನು ಆತನು ಮುರಿಯುವುದಿಲ್ಲ; ಆರಿಹೋಗುತ್ತಿರುವ ದೀಪವನ್ನು ಆತನು ನಂದಿಸುವುದಿಲ್ಲ. ನ್ಯಾಯವಾದ ತೀರ್ಪು ಜಯಗಳಿಸುವಂತೆ ಆತನು ಮಾಡುವನು.
ಮತ್ತಾಯನು 12 : 21 (ERVKN)
ಎಲ್ಲಾ ಜನರು ಆತನಲ್ಲಿ ಭರವಸೆ ಇಡುವರು.” ಯೆಶಾಯ 42:1-4]
ಮತ್ತಾಯನು 12 : 22 (ERVKN)
ಯೇಸುವಿನ ಅಧಿಕಾರ ದೇವರದೇ (ಮಾರ್ಕ 3:20-30 ಲೂಕ 11:14-23; 12:10) ಆಗ ಕೆಲವು ಜನರು ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಕುರುಡನಾಗಿದ್ದನು ಮತ್ತು ಮೂಕನಾಗಿದ್ದನು. ಯೇಸು ಆ ಮನುಷ್ಯನನ್ನು ಗುಣಪಡಿಸಿದ್ದರಿಂದ ಮಾತನಾಡುವುದಕ್ಕೂ ನೋಡುವುದಕ್ಕೂ ಸಾಧ್ಯವಾಯಿತು.
ಮತ್ತಾಯನು 12 : 23 (ERVKN)
ಜನರೆಲ್ಲರೂ ಬೆರಗಾದರು. “ದೇವರು ಕಳುಹಿಸಿಕೊಡುವುದಾಗಿ ನಮಗೆ ವಾಗ್ದಾನಮಾಡಿದ್ದ ದಾವೀದನ ಕುಮಾರನು ಈತನೇ (ಯೇಸು) ಆಗಿರಬಹುದು” ಎಂದು ಮಾತಾಡಿಕೊಂಡರು.
ಮತ್ತಾಯನು 12 : 24 (ERVKN)
ಜನರು ಹೀಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡ ಫರಿಸಾಯರು, “ಯೇಸು ಬೆಲ್ಜೆಬೂಲನ ಶಕ್ತಿಯ ಮೂಲಕ ಜನರನ್ನು ದೆವ್ವಗಳಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದರು.
ಮತ್ತಾಯನು 12 : 25 (ERVKN)
ಫರಿಸಾಯರು ಆಲೋಚಿಸುತ್ತಿದ್ದ ಸಂಗತಿಗಳು ಯೇಸುವಿಗೆ ತಿಳಿದಿದ್ದವು. ಆದ್ದರಿಂದ ಯೇಸು ಅವರಿಗೆ, “ತನಗೆ ವಿರೋಧವಾಗಿ ತಾನೇ ಹೋರಾಡುವ ರಾಜ್ಯವು ನಾಶವಾಗುವುದು. ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವು ಸ್ಥಿರವಾಗಿರುವುದಿಲ್ಲ. ಭೇದಭಾವ ಹೊಂದಿರುವ ಪ್ರತಿಯೊಂದು ಕುಟುಂಬವು ಅಭಿವೃದ್ಧಿಯಾಗುವುದಿಲ್ಲ.
ಮತ್ತಾಯನು 12 : 26 (ERVKN)
ಹೀಗಿರಲು ಸೈತಾನನು ತನ್ನ ಸ್ವಂತ ದೆವ್ವಗಳನ್ನೇ ಹೊರಗೆ ಓಡಿಸಿದರೆ ಅವನು ತನ್ನಲ್ಲಿಯೇ ಒಡಕನ್ನು ಮಾಡಿದಂತಾಯಿತು. ಆಗ ಅವನು ಮತ್ತು ಅವನ ರಾಜ್ಯವು ಸ್ಥಿರವಾಗಿರಲು ಹೇಗೆ ಸಾಧ್ಯ?
ಮತ್ತಾಯನು 12 : 27 (ERVKN)
ನಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತೇನೆ ಎಂದು ನೀವು ಹೇಳುತ್ತೀರಿ. ಅದು ನಿಜವಾದರೆ, ನಿಮ್ಮ ಜನರು ಯಾವ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನ್ನು ತಪ್ಪಿತಸ್ಥರೆಂದು ನಿರೂಪಿಸುತ್ತಾರೆ.
ಮತ್ತಾಯನು 12 : 28 (ERVKN)
ಆದರೆ ನಾನು ದೇವರಾತ್ಮನ ಶಕ್ತಿಯ ಮೂಲಕ ದೆವ್ವಗಳನ್ನು ಬಿಡಿಸುತ್ತೇನೆ. ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ.
ಮತ್ತಾಯನು 12 : 29 (ERVKN)
ಒಬ್ಬ ವ್ಯಕ್ತಿಯು ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಅವನ ಸ್ವತ್ತನ್ನು ಕದಿಯಬೇಕಿದ್ದರೆ, ಮೊದಲು ಅವನು ಆ ಬಲಿಷ್ಠನನ್ನು ಕಟ್ಟಿಹಾಕಬೇಕು. ಆಗ ಆ ಬಲಿಷ್ಠನ ಮನೆಯ ಸ್ವತ್ತನ್ನು ಕದಿಯಲು ಅವನಿಗೆ ಸಾಧ್ಯವಾಗುವುದು.
ಮತ್ತಾಯನು 12 : 30 (ERVKN)
ನನ್ನೊಂದಿಗೆ ಇಲ್ಲದವನು ನನಗೆ ವಿರೋಧಿಯಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.
ಮತ್ತಾಯನು 12 : 31 (ERVKN)
“ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಜನರು ಮಾಡುವ ಪ್ರತಿಯೊಂದು ಪಾಪಕ್ಕೂ ಹೇಳುವ ಪ್ರತಿಯೊಂದು ದೂಷಣೆ ಮಾತಿಗೂ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆ ಇಲ್ಲವೇ ಇಲ್ಲ.
ಮತ್ತಾಯನು 12 : 32 (ERVKN)
ಮನುಷ್ಯಕುಮಾರನಿಗೆ ವಿರೋಧವಾಗಿ ಮಾತನಾಡಿದರೂ ಅದಕ್ಕೆ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ ಅದಕ್ಕೆ ಕ್ಷಮಾಪಣೆಯು ಇಹದಲ್ಲಾಗಲಿ ಪರದಲ್ಲಾಗಲಿ ಇಲ್ಲವೇ ಇಲ್ಲ.
ಮತ್ತಾಯನು 12 : 33 (ERVKN)
ನಿಮ್ಮ ನಿಜಸ್ಥಿತಿಗೆ ನಿಮ್ಮ ಕಾರ್ಯಗಳೇ ಸಾಕ್ಷಿ (ಲೂಕ 6:43-45) “ನಿಮಗೆ ಒಳ್ಳೆಯ ಫಲ ಬೇಕಾಗಿದ್ದರೆ ನೀವು ಒಳ್ಳೆಯ ಮರ ಹೊಂದಿರಬೇಕು. ನಿಮ್ಮ ಮರ ಒಳ್ಳೆಯದಾಗಿಲ್ಲದಿದ್ದರೆ ಅದು ಕೆಟ್ಟ ಫಲವನ್ನೇ ಬಿಡುವುದು. ಮರವನ್ನು ಅದರಲ್ಲಿ ಬಿಡುವ ಫಲದಿಂದಲೇ ತಿಳಿದುಕೊಳ್ಳಬಹುದು.
ಮತ್ತಾಯನು 12 : 34 (ERVKN)
ನೀವು ಹಾವುಗಳು! ನೀವು ದುಷ್ಟರು! ಒಳ್ಳೆಯದನ್ನು ನೀವು ಹೇಗೆ ಹೇಳುವಿರಿ? ನಿಮ್ಮ ಹೃದಯದಲ್ಲಿ ತುಂಬಿರುವುದನ್ನೇ ನಿಮ್ಮ ಬಾಯಿ ಮಾತಾಡುತ್ತದೆ.
ಮತ್ತಾಯನು 12 : 35 (ERVKN)
ಒಳ್ಳೆಯವನು ತನ್ನ ಹೃದಯದಲ್ಲಿ ಒಳ್ಳೆಯವುಗಳನ್ನು ಇಟ್ಟುಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಒಳ್ಳೆಯವುಗಳನ್ನೇ ಮಾತಾಡುತ್ತಾನೆ. ಆದರೆ ದುಷ್ಟನು ತನ್ನ ಹೃದಯದಲ್ಲಿ ಕೆಟ್ಟವುಗಳನ್ನು ಶೇಖರಿಸಿಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಕೆಟ್ಟವುಗಳನ್ನೇ ಮಾತಾಡುತ್ತಾನೆ.
ಮತ್ತಾಯನು 12 : 36 (ERVKN)
ಜನರು ನಿರ್ಲಕ್ಷ್ಯಭಾವದಿಂದ ಆಡಿದ ಪ್ರತಿಯೊಂದು ಮಾತಿಗೂ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕಾಗುವುದು.
ಮತ್ತಾಯನು 12 : 37 (ERVKN)
ನಿಮ್ಮ ಮಾತುಗಳಿಂದಲೇ ನಿಮಗೆ ನೀತಿವಂತರೆಂದಾಗಲಿ ಅಪರಾಧಿಗಳೆಂದಾಗಲಿ ತೀರ್ಪು ನೀಡಲಾಗುವುದು” ಎಂದನು.
ಮತ್ತಾಯನು 12 : 38 (ERVKN)
ಸೂಚಕಕಾರ್ಯಕ್ಕಾಗಿ ಯೆಹೂದ್ಯರ ಬೇಡಿಕೆ (ಮಾರ್ಕ 8:11-12; ಲೂಕ 11:29-32) ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.
ಮತ್ತಾಯನು 12 : 39 (ERVKN)
ಯೇಸು, “ದುಷ್ಟರು ಮತ್ತು ಪಾಪಿಗಳು ಸೂಚಕಕಾರ್ಯವನ್ನು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಒಂದು ಸೂಚಕಕಾರ್ಯವನ್ನೂ ಗುರುತಿಗಾಗಿ ತೋರಿಸಲಾಗುವುದಿಲ್ಲ.
ಮತ್ತಾಯನು 12 : 40 (ERVKN)
ಪ್ರವಾದಿಯಾದ ಯೋನನು ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟೆಯಲ್ಲಿ ಹೇಗಿದ್ದನೋ ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರೆ ಯಾವ ಸೂಚಕಕಾರ್ಯವನ್ನು ಅವರಿಗೆ ತೋರಿಸಲಾಗುವುದಿಲ್ಲ.
ಮತ್ತಾಯನು 12 : 41 (ERVKN)
ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.
ಮತ್ತಾಯನು 12 : 42 (ERVKN)
“ನ್ಯಾಯತೀರ್ಪಿನ ದಿನದಂದು ದಕ್ಷಿಣ ದೇಶದ ರಾಣಿಯು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರೆಂದು (ಅಪರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಣಿಯು ಸೊಲೊಮೋನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದೂರದಿಂದ ಬಂದಳು. ನಾನಾದರೋ ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.
ಮತ್ತಾಯನು 12 : 43 (ERVKN)
ಇಂದಿನ ದುಷ್ಟಜನರ ಸ್ಥಿತಿ (ಲೂಕ 11:24-26) “ದುರಾತ್ಮವು ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತದೆ. ಆದರೆ ಆ ದುರಾತ್ಮಕ್ಕೆ ಬೇಕಾದ ವಿಶ್ರಾಂತಿ ಸ್ಥಳ ಸಿಕ್ಕುವುದಿಲ್ಲ.
ಮತ್ತಾಯನು 12 : 44 (ERVKN)
ಆಗ ಅದು, ‘ನಾನು ಬಿಟ್ಟುಬಂದ ಮನೆಗೇ ಹಿಂತಿರುಗಿ ಹೋಗುತ್ತೇನೆ’ ಎಂದು ಅಂದುಕೊಳ್ಳುತ್ತದೆ. ಬಳಿಕ ಅದು ಅವನ ಬಳಿಗೆ ಮತ್ತೆ ಬಂದಾಗ ಆ ಮನೆಯು ಇನ್ನೂ ಬರಿದಾಗಿರುತ್ತದೆ. ಚೊಕ್ಕಟವಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುತ್ತದೆ.
ಮತ್ತಾಯನು 12 : 45 (ERVKN)
ಆಗ ಅದು ಹೊರಗೆ ಹೋಗಿ ತನಗಿಂತಲೂ ಹೆಚ್ಚು ದುಷ್ಟರಾದ ಏಳು ದುರಾತ್ಮಗಳನ್ನು ಕರೆದುಕೊಂಡು ಬರುತ್ತದೆ. ಆ ದುರಾತ್ಮಗಳೆಲ್ಲಾ ಆ ಮನುಷ್ಯನೊಳಗೆ ಸೇರಿಕೊಂಡು ವಾಸಮಾಡಲಾರಂಭಿಸುತ್ತವೆ. ಆಗ ಆ ಮನುಷ್ಯನಿಗೆ ಮೊದಲಿಗಿಂತಲೂ ಹೆಚ್ಚಿನ ಕಷ್ಟಗಳು ಉಂಟಾಗುತ್ತವೆ. ಈ ದಿನಗಳಲ್ಲಿ ಜೀವಿಸುವ ದುಷ್ಟ ಜನರಿಗೆ ಅದೇ ರೀತಿ ಆಗುವುದು” ಎಂದನು.
ಮತ್ತಾಯನು 12 : 46 (ERVKN)
ಯೇಸುವಿನ ಶಿಷ್ಯರೇ ಆತನ ಕುಟುಂಬ (ಮಾರ್ಕ 3:31-35; ಲೂಕ 8:19-21) ಯೇಸುವು ಜನರೊಂದಿಗೆ ಮಾತಾಡುತ್ತಿರುವಾಗ, ಆತನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡರು. ಅವರು ಆತನೊಂದಿಗೆ ಮಾತಾಡಬೇಕೆಂದಿದ್ದರು.
ಮತ್ತಾಯನು 12 : 47 (ERVKN)
ಒಬ್ಬನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾದಿದ್ದಾರೆ, ಅವರು ನಿನ್ನೊಂದಿಗೆ ಮಾತಾಡಬೇಕೆಂದಿದ್ದಾರೆ” ಎಂದನು.
ಮತ್ತಾಯನು 12 : 48 (ERVKN)
ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಟ್ಟು,
ಮತ್ತಾಯನು 12 : 49 (ERVKN)
ತನ್ನ ಶಿಷ್ಯರ ಕಡೆಗೆ ಕೈ ತೋರಿಸಿ, “ನೋಡಿ! ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.
ಮತ್ತಾಯನು 12 : 50 (ERVKN)
ಪರಲೋಕದಲ್ಲಿರುವ ನನ್ನ ತಂದೆ ಇಚ್ಛಿಸುವಂಥವುಗಳನ್ನು ಮಾಡುವವನೇ ನನ್ನ ನಿಜವಾದ ಸಹೋದರ, ಸಹೋದರಿ ಮತ್ತು ತಾಯಿ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50