ಮತ್ತಾಯನು 11 : 1 (ERVKN)
ಶ್ರೇಷ್ಠನಾದ ಸ್ನಾನಿಕ ಯೋಹಾನ (ಲೂಕ 7:18-35) ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಈ ಸಂಗತಿಗಳನ್ನು ಹೇಳಿದ ನಂತರ ಅಲ್ಲಿಂದ ಹೊರಟು ಬೋಧಿಸುವುದಕ್ಕೆ ಮತ್ತು ಉಪದೇಶಿಸುವುದಕ್ಕೆ ಗಲಿಲಾಯ ಪಟ್ಟಣಕ್ಕೆ ಹೋದನು.
ಮತ್ತಾಯನು 11 : 2 (ERVKN)
ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು.
ಮತ್ತಾಯನು 11 : 3 (ERVKN)
ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರುನೋಡಬೇಕೋ?” ಎಂದು ಕೇಳಿದರು.
ಮತ್ತಾಯನು 11 : 4 (ERVKN)
ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ.
ಮತ್ತಾಯನು 11 : 5 (ERVKN)
ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ; ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ.
ಮತ್ತಾಯನು 11 : 6 (ERVKN)
ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ” ಎಂದು ಉತ್ತರಕೊಟ್ಟನು.
ಮತ್ತಾಯನು 11 : 7 (ERVKN)
ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ!
ಮತ್ತಾಯನು 11 : 8 (ERVKN)
ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ.
ಮತ್ತಾಯನು 11 : 9 (ERVKN)
ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
ಮತ್ತಾಯನು 11 : 10 (ERVKN)
ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ: ‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ.
ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’ ಮಲಾಕಿ 3:1
ಮತ್ತಾಯನು 11 : 11 (ERVKN)
“ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
ಮತ್ತಾಯನು 11 : 12 (ERVKN)
ಸ್ನಾನಿಕ ಯೋಹಾನನು ಬಂದ ಸಮಯದಿಂದ ಇಲ್ಲಿಯವರೆಗೂ ಪರಲೋಕರಾಜ್ಯ ಪ್ರಬಲವಾದ ಆಕ್ರಮಣಗಳಿಗೆ ಒಳಗಾಗಿದೆ. ಬಲಾತ್ಕಾರವನ್ನು ಉಪಯೋಗಿಸಿ ಜನರು ರಾಜ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ.
ಮತ್ತಾಯನು 11 : 13 (ERVKN)
ಎಲ್ಲಾ ಪ್ರವಾದನೆಗಳು ಮತ್ತು ಮೋಶೆಯ ಧರ್ಮಶಾಸ್ತ್ರವು ಯೋಹಾನನು ಬರುವ ತನಕ ಪರಲೋಕರಾಜ್ಯದ ಕುರಿತಾಗಿ ಮುಂತಿಳಿಸಿದವು.
ಮತ್ತಾಯನು 11 : 14 (ERVKN)
ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳು ಹೇಳಿದ್ದನ್ನು ನೀವು ನಂಬುವುದಾದರೆ ಈ ಯೋಹಾನನೇ ಎಲೀಯನು. ಅವನು ಬರುತ್ತಾನೆಂದು ಧರ್ಮಶಾಸ್ತ್ರವೂ ಹೇಳಿದೆ.
ಮತ್ತಾಯನು 11 : 15 (ERVKN)
ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ!
ಮತ್ತಾಯನು 11 : 16 (ERVKN)
“ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:
ಮತ್ತಾಯನು 11 : 17 (ERVKN)
‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು. ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು, ನೀವು ದುಃಖಿಸಲಿಲ್ಲ.’
ಮತ್ತಾಯನು 11 : 18 (ERVKN)
ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.
ಮತ್ತಾಯನು 11 : 19 (ERVKN)
ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”
ಮತ್ತಾಯನು 11 : 20 (ERVKN)
ನಂಬದ ಜನರಿಗೆ ಯೇಸುವಿನ ಎಚ್ಚರಿಕೆ (ಲೂಕ 10:13-15) ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೋ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ.
ಮತ್ತಾಯನು 11 : 21 (ERVKN)
ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು.
ಮತ್ತಾಯನು 11 : 22 (ERVKN)
ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.
ಮತ್ತಾಯನು 11 : 23 (ERVKN)
“ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು.
ಮತ್ತಾಯನು 11 : 24 (ERVKN)
ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”
ಮತ್ತಾಯನು 11 : 25 (ERVKN)
ಯೇಸು ಜನರಿಗೆ ವಿಶ್ರಾಂತಿದಾಯಕ (ಲೂಕ 10:21-22) ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ.
ಮತ್ತಾಯನು 11 : 26 (ERVKN)
ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.
ಮತ್ತಾಯನು 11 : 27 (ERVKN)
“ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೋ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.
ಮತ್ತಾಯನು 11 : 28 (ERVKN)
“ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ.
ಮತ್ತಾಯನು 11 : 29 (ERVKN)
ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
ಮತ್ತಾಯನು 11 : 30 (ERVKN)
ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30