ಮಾರ್ಕನು 13 : 1 (ERVKN)
ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.
ಮಾರ್ಕನು 13 : 2 (ERVKN)
ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.
ಮಾರ್ಕನು 13 : 3 (ERVKN)
ನಂತರ ಯೇಸು ಆಲಿವ್ ಮರಗಳ ಗುಡ್ಡದ ಮೇಲೆ, ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರ ಸಂಗಡ ಕುಳಿತಿದ್ದನು. ಅವರೆಲ್ಲರಿಗೂ ಅಲ್ಲಿಂದ ದೇವಾಲಯ ಕಾಣುತಿತ್ತು.
ಮಾರ್ಕನು 13 : 4 (ERVKN)
ಆ ಶಿಷ್ಯರು ಯೇಸುವಿಗೆ, “ಈ ಸಂಗತಿಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಅವುಗಳು ನಡೆಯುವ ಕಾಲಕ್ಕೆ ಸೂಚನೆಯೇನು?” ಎಂದು ಕೇಳಿದರು.
ಮಾರ್ಕನು 13 : 5 (ERVKN)
ಅದಕ್ಕೆ ಯೇಸು, “ಎಚ್ಚರಿಕೆಯಿಂದಿರಿ! ನಿಮಗೆ ಮೋಸ ಮಾಡಲು ಯಾರಿಗೂ ಆಸ್ಪದ ಕೊಡಬೇಡಿ.
ಮಾರ್ಕನು 13 : 6 (ERVKN)
ಅನೇಕ ಜನರು ಬಂದು, ‘ನಾನೇ ಕ್ರಿಸ್ತನು; ‘ನಾನೇ ಕ್ರಿಸ್ತನು’ ಎನ್ನುತ್ತಾ ಅನೇಕ ಜನರನ್ನು ಮೋಸಗೊಳಿಸುತ್ತಾರೆ.
ಮಾರ್ಕನು 13 : 7 (ERVKN)
ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು.
ಮಾರ್ಕನು 13 : 8 (ERVKN)
ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.
ಮಾರ್ಕನು 13 : 9 (ERVKN)
“ಎಚ್ಚರಯಿಂದಿರಿ! ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಬಂಧಿಸಿ, ನ್ಯಾಯವಿಚಾರಣೆಗೆ ಕೊಂಡೊಯ್ಯುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ರಾಜರ ಮತ್ತು ಅಧಿಪತಿಗಳ ಮುಂದೆ ನಿಮ್ಮನ್ನು ನಿಲ್ಲಿಸಿ ನನ್ನ ವಿಷಯದಲ್ಲಿ ಸಾಕ್ಷಿಕೊಡಲು ನಿಮ್ಮನ್ನು ಬಲವಂತಪಡಿಸುವರು.
ಮಾರ್ಕನು 13 : 10 (ERVKN)
ಈ ಸಂಗತಿಗಳು ಸಂಭವಿಸುವುದಕ್ಕಿಂತ ಮೊದಲು ನೀವು ಜನರಿಗೆಲ್ಲ ಸುವಾರ್ತೆಯನ್ನು ತಿಳಿಸಬೇಕು.
ಮಾರ್ಕನು 13 : 11 (ERVKN)
ನೀವು ಬಂಧಿಸಲ್ಪಟ್ಟು ನ್ಯಾಯವಿಚಾರಣೆಗೆ ಒಳಗಾಗುವಿರಿ. ಆದರೆ ನೀವು ಏನು ಹೇಳಬೇಕೆಂಬುದರ ಬಗ್ಗೆ ಯೋಚಿಸಬೇಡಿ, ಆ ಸಮಯದಲ್ಲಿ ದೇವರು ನಿಮಗೆ ತಿಳಿಸಿಕೊಡುವುದನ್ನೇ ಹೇಳಿರಿ. ಆಗ ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ.
ಮಾರ್ಕನು 13 : 12 (ERVKN)
“ಸಹೋದರರು ಸಹೋದರರನ್ನೇ, ತಂದೆಗಳು ತಮ್ಮ ಸ್ವಂತ ಮಕ್ಕಳನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ತಮ್ಮ ಸ್ವಂತ ತಂದೆತಾಯಂದಿರ ವಿರುದ್ಧ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು.
ಮಾರ್ಕನು 13 : 13 (ERVKN)
ನೀವು ನನ್ನನ್ನು ಹಿಂಬಾಲಿಸುವ ಕಾರಣ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೆ ಕೊನೆಯವರೆಗೆ ತಾಳುವವನು ರಕ್ಷಣೆ ಹೊಂದುವನು.
ಮಾರ್ಕನು 13 : 14 (ERVKN)
“ವಿನಾಶವನ್ನು ಉಂಟುಮಾಡುವ ಭಯಂಕರ ವಸ್ತುವನ್ನು ನೀವು ನೋಡುತ್ತೀರಿ. ಇದು ನಿಂತುಕೊಳ್ಳಬಾರದಂಥ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುವವನು ಇದರ ಅರ್ಥವನ್ನು ತಿಳಿದುಕೊಳ್ಳಬೇಕು) ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಬೇಕು.
ಮಾರ್ಕನು 13 : 15 (ERVKN)
ಮಾಳಿಗೆಯ ಮೇಲಿರುವವನು ಕೆಳಗಿಳಿದು ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ.
ಮಾರ್ಕನು 13 : 16 (ERVKN)
ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂತಿರುಗದಿರಲಿ.
ಮಾರ್ಕನು 13 : 17 (ERVKN)
ಆ ಸಮಯವು ಗರ್ಭಿಣಿ ಸ್ತ್ರೀಯರಿಗೆ ಹಾಗೂ ಎಳೆಕೂಸುಗಳನ್ನು ಹೊಂದಿರುವ ತಾಯಂದಿರಿಗೆ ಬಹಳ ಸಂಕಟಕರವಾಗಿರುತ್ತದೆ.
ಮಾರ್ಕನು 13 : 18 (ERVKN)
ಈ ಸಂಗತಿಗಳು ಚಳಿಗಾಲದಲ್ಲಿ ನಡೆಯದಂತೆ ಪ್ರಾರ್ಥನೆ ಮಾಡಿರಿ.
ಮಾರ್ಕನು 13 : 19 (ERVKN)
ಏಕೆಂದರೆ ಆ ದಿನಗಳು ಬಹಳ ಸಂಕಟದಿಂದ ತುಂಬಿರುತ್ತವೆ. ದೇವರು ಈ ಲೋಕವನ್ನು ಸೃಷ್ಟಿಮಾಡಿದಂದಿನಿಂದ ಅಂಥ ಸಂಕಟ ಇದುವರೆಗೂ ಆಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ.
ಮಾರ್ಕನು 13 : 20 (ERVKN)
ದೇವರು ಆ ಭಯಂಕರ ಕಾಲವನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾನೆ. ಇಲ್ಲವಾಗಿದ್ದರೆ, ಯಾವ ಮನುಷ್ಯನೂ ಬದುಕಿ ಉಳಿಯಲು ಸಾಧ್ಯವಿಲ್ಲ. ಆದರೆ ದೇವರು ತಾನು ಆರಿಸಿಕೊಂಡ ವಿಶೇಷ ಜನರಿಗೆ ಸಹಾಯ ಮಾಡಲು ಆ ಸಮಯವನ್ನು ಕಡಿಮೆ ಮಾಡುವನು.
ಮಾರ್ಕನು 13 : 21 (ERVKN)
ಆ ಸಮಯದಲ್ಲಿ , ಯಾರಾದರೂ ನಿಮಗೆ ‘ಕ್ರಿಸ್ತನು ಅಲ್ಲಿದ್ದಾನೆ, ನೋಡು’ ಎನ್ನಬಹುದು. ಅಥವಾ ಇನ್ನೊಬ್ಬನು, ‘ಆತನು ಇಲ್ಲಿದ್ದಾನೆ’ ಎನ್ನಬಹುದು. ಆದರೆ ಅವರನ್ನು ನಂಬಬೇಡಿ.
ಮಾರ್ಕನು 13 : 22 (ERVKN)
ದೇವರು ಆರಿಸಿಕೊಂಡ ಜನರನ್ನು ಮೋಸಗೊಳಿಸುವುದಕ್ಕಾಗಿ ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ಮಹಾಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡುತ್ತಾರೆ.
ಮಾರ್ಕನು 13 : 23 (ERVKN)
ಆದ್ದರಿಂದ ಎಚ್ಚರಿಕೆಯಿಂದಿರಿ, ಇದು ನಡೆಯುವ ಮುಂಚೆ ಇದೆಲ್ಲದರ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೇನೆ.
ಮಾರ್ಕನು 13 : 24 (ERVKN)
“ಈ ಸಂಕಟವು ತೀರಿದ ಮೇಲೆ, ‘ಸೂರ್ಯನು ಕತ್ತಲಾಗುತ್ತಾನೆ. ಚಂದ್ರನು ಬೆಳಕನ್ನು ಕೊಡುವುದಿಲ್ಲ.
ಮಾರ್ಕನು 13 : 25 (ERVKN)
ನಕ್ಷತ್ರಗಳು ಆಕಾಶದಿಂದ ಬೀಳುವವು, ಮತ್ತು ಆಕಾಶದಲ್ಲಿರುವ ಶಕ್ತಿಗಳು ನಡುಗುವವು.’ ಯೆಶಾಯ 13:10; 34:4
ಮಾರ್ಕನು 13 : 26 (ERVKN)
“ಆಗ ಮನುಷ್ಯಕುಮಾರನು ಅಧಿಕಾರದಿಂದಲೂ ಮಹಾಮಹಿಮೆಯೊಡನೆಯೂ ಮೇಘಗಳಲ್ಲಿ ಬರುವುದನ್ನು ಜನರು ನೋಡುತ್ತಾರೆ.
ಮಾರ್ಕನು 13 : 27 (ERVKN)
ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸಿ ತಾನು ಆರಿಸಿಕೊಂಡ ಜನರನ್ನು ಭೂಮಿಯ ಕಟ್ಟಕಡೆಗಳಿಂದ ಒಟ್ಟುಗೂಡಿಸುವರು.
ಮಾರ್ಕನು 13 : 28 (ERVKN)
“ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸಿರಾಗಿ ಮೃದುವಾದಾಗ, ಮತ್ತು ಹೊಸ ಎಲೆಗಳು ಬೆಳೆಯಲು ಪ್ರಾರಂಭಿಸಿದಾಗ, ಬೇಸಿಗೆಕಾಲ ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
ಮಾರ್ಕನು 13 : 29 (ERVKN)
ಅಂತೆಯೇ ನಾನು ನಿಮಗೆ ಹೇಳಿದ ಈ ಸಂಗತಿಗಳು ನೆರವೇರುವುದನ್ನು ನೀವು ನೋಡುವಾಗ, ಸಮಯವು ಹತ್ತಿರವಾಗಿದೆಯೆಂದೂ ಬರಲು ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳಿರಿ.
ಮಾರ್ಕನು 13 : 30 (ERVKN)
ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಬದುಕಿರುವಾಗಲೇ ಈ ಎಲ್ಲಾ ಸಂಗತಿಗಳು ನಡೆಯುತ್ತವೆ.
ಮಾರ್ಕನು 13 : 31 (ERVKN)
ಭೂಮ್ಯಾಕಾಶಗಳು ನಾಶವಾಗುತ್ತವೆ. ಆದರೆ ನಾನು ಹೇಳಿದ ಮಾತುಗಳು ಎಂದೆಂದಿಗೂ ನಾಶವಾಗುವುದಿಲ್ಲ.
ಮಾರ್ಕನು 13 : 32 (ERVKN)
“ಆ ದಿನವಾಗಲಿ ಸಮಯವಾಗಲಿ ಯಾವಾಗ ಬರುತ್ತದೆಂಬುದು ಪರಲೋಕದಲ್ಲಿರುವ ಮಗನಿಗಾಗಲಿ ದೇವದೂತರಿಗಾಗಲಿ ತಿಳಿದಿಲ್ಲ. ತಂದೆಗೆ ಮಾತ್ರ ತಿಳಿದಿದೆ.
ಮಾರ್ಕನು 13 : 33 (ERVKN)
ಎಚ್ಚರಿಕೆಯಿಂದಿರಿ! ಯಾವಾಗಲೂ ಸಿದ್ಧರಾಗಿರಿ! ಆ ಸಮಯ ಯಾವಾಗ ಬರುತ್ತದೆಂದು ನಿಮಗೆ ತಿಳಿದಿಲ್ಲ.
ಮಾರ್ಕನು 13 : 34 (ERVKN)
ತನ್ನ ಮನೆಯನ್ನು ಬಿಟ್ಟು ಪ್ರವಾಸಕ್ಕಾಗಿ ಹೋದ ಮನುಷ್ಯನಿಗೆ ಇದು ಹೋಲಿಕೆಯಾಗಿದೆ. ಅವನು ತನ್ನ ಮನೆಯನ್ನು ನೋಡಿಕೊಳ್ಳುವುದಕ್ಕಾಗಿ ಸೇವಕರಿಗೆ ಒಪ್ಪಿಸಿಕೊಟ್ಟನು. ಅವನು ಪ್ರತಿಯೊಬ್ಬ ಸೇವಕನಿಗೂ ಒಂದೊಂದು ವಿಶೇಷ ಕೆಲಸವನ್ನು ಕೊಟ್ಟು ದ್ವಾರಪಾಲಕನಿಗೆ, ‘ನೀನು ಯಾವಾಗಲೂ ಸಿದ್ಧವಾಗಿರು’ ಎಂದು ಹೇಳಿದನು. ಅಂತೆಯೇ ನಾನೂ ನಿಮಗೆ ಹೇಳುವುದೇನೆಂದರೆ,
ಮಾರ್ಕನು 13 : 35 (ERVKN)
ಯಾವಾಗಲೂ ಸಿದ್ಧವಾಗಿರಿ. ಮನೆಯ ಯಜಮಾನನು ಯಾವಾಗ ಹಿಂತಿರುಗಿ ಬರುವನೊ ನಿಮಗೆ ತಿಳಿದಿಲ್ಲ. ಅವನು ಮಧ್ಯಾಹ್ನದಲ್ಲಾಗಲಿ ಮಧ್ಯರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಸೂರ್ಯೋದಯದಲ್ಲಾಗಲಿ ಬರಬಹುದು.
ಮಾರ್ಕನು 13 : 36 (ERVKN)
ಯಜಮಾನನು ಬೇಗನೆ ಹಿಂತಿರುಗಿ ಬರಬಹುದು. ನೀವು ಯಾವಾಗಲೂ ಸಿದ್ಧವಾಗಿದ್ದರೆ, ಅವನು ಬಂದಾಗ ನೀವು ನಿದ್ರಿಸುತ್ತಿರುವುದಿಲ್ಲ.
ಮಾರ್ಕನು 13 : 37 (ERVKN)
ನಾನು ನಿಮಗೂ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ‘ಸಿದ್ಧರಾಗಿರಿ!”‘

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37

BG:

Opacity:

Color:


Size:


Font: