ಲೂಕನು 16 : 1 (ERVKN)
ನಿಜವಾದ ಐಶ್ವರ್ಯ ಯೇಸು ತನ್ನ ಶಿಷ್ಯರಿಗೆ ಹೀಗೆಂದನು: “ಒಂದಾನೊಂದು ಕಾಲದಲ್ಲಿ ಒಬ್ಬ ಐಶ್ವರ್ಯವಂತನಿದ್ದನು. ಈ ಐಶ್ವರ್ಯವಂತನು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿದನು. ಸ್ವಲ್ಪಕಾಲದ ನಂತರ, ಆ ಮೇಲ್ವಿಚಾರಕನು ತನಗೆ ಮೋಸಮಾಡುತ್ತಿದ್ದಾನೆಂಬುದು ಐಶ್ವರ್ಯವಂತನಿಗೆ ತಿಳಿಯಿತು.
ಲೂಕನು 16 : 2 (ERVKN)
ಆದ್ದರಿಂದ ಅವನು ಆ ಮೇಲ್ವಿಚಾರಕನನ್ನು ಕರೆದು, ‘ನಿನ್ನ ಬಗ್ಗೆ ನನಗೆ ದೂರುಗಳು ಬಂದಿವೆ. ನನ್ನ ಹಣವನ್ನು ನೀನು ಯಾವುದಕ್ಕಾಗಿ ಖರ್ಚು ಮಾಡಿರುವೆ? ನನಗೆ ವರದಿ ಒಪ್ಪಿಸು. ಇನ್ನು ಮೇಲೆ ನನ್ನ ವ್ಯಾಪಾರಕ್ಕೆ ನೀನು ಮೇಲ್ವಿಚಾರಕನಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದನು.
ಲೂಕನು 16 : 3 (ERVKN)
“ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ.
ಲೂಕನು 16 : 4 (ERVKN)
ಈಗ ನಾನೇನು ಮಾಡಬೇಕೆಂಬುದು ನನಗೆ ಗೊತ್ತಿದೆ! ನಾನು ಕೆಲಸವನ್ನು ಕಳೆದುಕೊಂಡ ಮೇಲೆ ಬೇರೆ ಜನರು ನನ್ನನ್ನು ತಮ್ಮ ಮನೆಗಳಿಗೆ ಸೇರಿಸಿಕೊಳ್ಳುವಂಥ ಕಾರ್ಯವೊಂದನ್ನು ನಾನು ಈಗ ಮಾಡುವೆ’ ಅಂದುಕೊಂಡನು.
ಲೂಕನು 16 : 5 (ERVKN)
“ಆಮೇಲೆ ಆ ಮೇಲ್ವಿಚಾರಕನು, ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದನು. ಅವನು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲ ಕೊಡಬೇಕು?’ ಎಂದು ಕೇಳಿದನು.
ಲೂಕನು 16 : 6 (ERVKN)
ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.
ಲೂಕನು 16 : 7 (ERVKN)
“ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.
ಲೂಕನು 16 : 8 (ERVKN)
“ಬಳಿಕ ಯಜಮಾನನು ಮೋಸಗಾರನಾದ ಮೇಲ್ವಿಚಾರಕನಿಗೆ, ‘ನೀನು ಜಾಣತನ ಮಾಡಿದೆ’ ಎಂದು ಹೇಳಿದನು. ಹೌದು, ಲೌಕಿಕ ಜನರು ತಮ್ಮ ಜನರೊಡನೆ ವ್ಯಾಪಾರದಲ್ಲಿ ದೈವಿಕ ಜನರಿಗಿಂತಲೂ ಜಾಣರಾಗಿದ್ದಾರೆ.
ಲೂಕನು 16 : 9 (ERVKN)
“ಈ ಲೋಕದಲ್ಲಿ ನೀವು ಹೊಂದಿರುವಂಥವುಗಳಿಂದ ದೇವರಿಗೆ ಸ್ನೇಹಿತರನ್ನು ಮಾಡಿಕೊಡಿರಿ. ನೀವು ಹೀಗೆ ಮಾಡಿದರೆ, ಈ ಲೋಕದವುಗಳು ನಿಮ್ಮ ಕೈಬಿಟ್ಟು ಹೋದಾಗ ನಿಮ್ಮನ್ನು ಶಾಶ್ವತವಾದ ಮನೆಗೆ ಸ್ವೀಕರಿಸಿಕೊಳ್ಳಲಾಗುವುದು.
ಲೂಕನು 16 : 10 (ERVKN)
ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು. ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗಿರುವನು.
ಲೂಕನು 16 : 11 (ERVKN)
ಲೌಕಿಕ ಐಶ್ವರ್ಯಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ಪರಲೋಕದ ಐಶ್ವರ್ಯಗಳಲ್ಲಿಯೂ ನೀವು ನಂಬಿಗಸ್ತರಾಗಿರುವುದಿಲ್ಲ.
ಲೂಕನು 16 : 12 (ERVKN)
ಮತ್ತೊಬ್ಬನ ಸ್ವತ್ತುಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ನಿಮ್ಮ ಸ್ವಂತ ಸ್ವತ್ತುಗಳನ್ನೇ ನಿಮಗೆ ಯಾರೂ ಕೊಡುವುದಿಲ್ಲ.
ಲೂಕನು 16 : 13 (ERVKN)
“ಯಾವ ಸೇವಕನೂ ಒಂದೇ ಸಮಯದಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು ಅಥವಾ ಒಬ್ಬನಿಗೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುವನು. ನೀವು ಒಂದೇ ಸಮಯದಲ್ಲಿ ದೇವರ ಮತ್ತು ಹಣದ ಸೇವೆಮಾಡಲಾರಿರಿ.”
ಲೂಕನು 16 : 14 (ERVKN)
ದೇವರ ಧರ್ಮಶಾಸ್ತ್ರ ಬದಲಾಗಲಾರದು (ಮತ್ತಾಯ 11:12-13) ಫರಿಸಾಯರು ಈ ಎಲ್ಲಾ ಸಂಗತಿಗಳನ್ನು ಕೇಳುತ್ತಿದ್ದರು. ಫರಿಸಾಯರೆಲ್ಲರು ಹಣದಾಸೆ ಉಳ್ಳವರಾಗಿದ್ದರಿಂದ ಅವರು ಯೇಸುವನ್ನು ಟೀಕಿಸಿದರು.
ಲೂಕನು 16 : 15 (ERVKN)
ಯೇಸು ಫರಿಸಾಯರಿಗೆ ಹೀಗೆಂದನು, “ನೀವು ಜನರ ಮುಂದೆ ನಿಮ್ಮನ್ನು ಒಳ್ಳೆಯವರೆಂದು ತೋರಿಸಿಕೊಳ್ಳುತ್ತೀರಿ. ಆದರೆ ನಿಜವಾಗಿಯೂ ನಿಮ್ಮ ಹೃದಯದಲ್ಲಿರುವುದು ದೇವರಿಗೆ ಗೊತ್ತು. ಜನರ ದೃಷ್ಟಿಯಲ್ಲಿ ಅಮೂಲ್ಯವಾದುವುಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ.
ಲೂಕನು 16 : 16 (ERVKN)
“ಜನರು ಮೋಶೆಯ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಗ್ರಂಥಗಳಿಗೂ ಅನುಸಾರವಾಗಿ ಜೀವಿಸಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಸ್ನಾನಿಕನಾದ ಯೋಹಾನನು ಬಂದ ಕಾಲದಿಂದ ದೇವರ ರಾಜ್ಯದ ಸುವಾರ್ತೆಯು ತಿಳಿಸಲ್ಪಡುತ್ತಿದೆ. ಅನೇಕ ಜನರು ದೇವರ ರಾಜ್ಯದೊಳಗೆ ಹೋಗಲು ಬಹಳ ಪ್ರಯಾಸಪಡುತ್ತಿದ್ದಾರೆ.
ಲೂಕನು 16 : 17 (ERVKN)
ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮ್ಯಾಕಾಶಗಳು ಅಳಿದುಹೋಗುವುದು ಸುಲಭ.
ಲೂಕನು 16 : 18 (ERVKN)
ವಿವಾಹವಿಚ್ಛೇದನ ಮತ್ತು ಪುನರ್ವಿವಾಹ “ತನ್ನ ಪತ್ನಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. ವಿವಾಹವಿಚ್ಛೇದನ ಹೊಂದಿದ ಸ್ತ್ರೀಯನ್ನು ಮದುವೆ ಆಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.”
ಲೂಕನು 16 : 19 (ERVKN)
ಐಶ್ವರ್ಯವಂತನು ಮತ್ತು ಲಾಜರನು ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು.
ಲೂಕನು 16 : 20 (ERVKN)
ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು.
ಲೂಕನು 16 : 21 (ERVKN)
ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
ಲೂಕನು 16 : 22 (ERVKN)
“ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು.
ಲೂಕನು 16 : 23 (ERVKN)
ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ,
ಲೂಕನು 16 : 24 (ERVKN)
‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.
ಲೂಕನು 16 : 25 (ERVKN)
“ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ.
ಲೂಕನು 16 : 26 (ERVKN)
ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.
ಲೂಕನು 16 : 27 (ERVKN)
“ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು!
ಲೂಕನು 16 : 28 (ERVKN)
ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.
ಲೂಕನು 16 : 29 (ERVKN)
“ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.
ಲೂಕನು 16 : 30 (ERVKN)
“ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.
ಲೂಕನು 16 : 31 (ERVKN)
“ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’ ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31