ಯಾಜಕಕಾಂಡ 9 : 1 (ERVKN)
ದೇವರು ಯಾಜಕರನ್ನು ಸ್ವೀಕರಿಸಿದನು ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಇಸ್ರೇಲರ ಹಿರಿಯರನ್ನೂ ಕರೆದನು.
ಯಾಜಕಕಾಂಡ 9 : 2 (ERVKN)
ಮೋಶೆಯು ಆರೋನನಿಗೆ ಹೀಗೆಂದನು; “ಒಂದು ಎಳೆಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊ. ಆ ಪಶುಗಳಲ್ಲಿ ಏನೂ ದೋಷವಿರಬಾರದು. ಹೋರಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಟಗರನ್ನು ಸರ್ವಾಂಗಹೋಮವಾಗಿಯೂ ಯೆಹೋವನಿಗೆ ಸಮರ್ಪಿಸು.
ಯಾಜಕಕಾಂಡ 9 : 3 (ERVKN)
ಇಸ್ರೇಲರಿಗೆ ಹೀಗೆ ಹೇಳು: ‘ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ತೆಗೆದುಕೊಳ್ಳಿರಿ; ಸರ್ವಾಂಗಹೋಮಕ್ಕಾಗಿ ಕರುವನ್ನೂ ಕುರಿಮರಿಯನ್ನೂ ತೆಗೆದುಕೊಳ್ಳಿರಿ. ಕರುವೂ ಕುರಿಮರಿಯೂ ಒಂದು ವರ್ಷದ್ದಾಗಿರಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷವಿರಬಾರದು.
ಯಾಜಕಕಾಂಡ 9 : 4 (ERVKN)
ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ಈ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.’ ”
ಯಾಜಕಕಾಂಡ 9 : 5 (ERVKN)
ಆದ್ದರಿಂದ ಜನರೆಲ್ಲರೂ ದೇವದರ್ಶನಗುಡಾರಕ್ಕೆ ಬಂದರು. ಮೋಶೆಯು ಆಜ್ಞಾಪಿಸಿದ ವಸ್ತುಗಳನ್ನು ಅವರು ತಂದರು. ಎಲ್ಲಾ ಜನರು ಯೆಹೋವನ ಸನ್ನಿಧಿಯಲ್ಲಿ ನಿಂತರು.
ಯಾಜಕಕಾಂಡ 9 : 6 (ERVKN)
ಮೋಶೆಯು, “ಯೆಹೋವನು ಆಜ್ಞಾಪಿಸಿದವುಗಳನ್ನು ನೀವು ಮಾಡಿದರೆ ಯೆಹೋವನ ಮಹಿಮೆಯು ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.
ಯಾಜಕಕಾಂಡ 9 : 7 (ERVKN)
ಮೋಶೆಯು ಆರೋನನಿಗೆ, “ಯೆಹೋವನು ಆಜ್ಞಾಪಿಸಿದವುಗಳನ್ನು ಮಾಡು. ಯಜ್ಞವೇದಿಕೆಯ ಬಳಿಗೆ ಹೋಗಿ ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಅರ್ಪಿಸು. ನಿನ್ನನ್ನೂ ಜನರನ್ನೂ ಶುದ್ಧಿಮಾಡುವ ಆ ಕಾರ್ಯಗಳನ್ನು ಮಾಡು. ಜನರು ತಂದದ್ದನ್ನು ತೆಗೆದುಕೊಂಡು ಅವರಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ ಅವರನ್ನು ಶುದ್ಧಿಮಾಡು” ಎಂದು ಹೇಳಿದನು.
ಯಾಜಕಕಾಂಡ 9 : 8 (ERVKN)
ಆದ್ದರಿಂದ ಆರೋನನು ಯಜ್ಞವೇದಿಕೆಯ ಬಳಿಗೆ ಹೋದನು. ಅವನು ತನಗೋಸ್ಕರ ಪಾಪಪರಿಹಾರಕ ಯಜ್ಞವಾಗಿ ಎಳೆ ಹೋರಿಯನ್ನು ವಧಿಸಿದನು.
ಯಾಜಕಕಾಂಡ 9 : 9 (ERVKN)
ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನ ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯಜ್ಞವೇದಿಕೆಯ ಮೂಲೆಗಳಿಗೆ ಹಚ್ಚಿದನು. ಬಳಿಕ ಆರೋನನು ರಕ್ತವನ್ನು ಯಜ್ಞವೇದಿಕೆಯ ಬುಡದಲ್ಲಿ ಸುರಿದನು.
ಯಾಜಕಕಾಂಡ 9 : 10 (ERVKN)
ಆರೋನನು ಪಾಪಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಮತ್ತು ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನು ತೆಗೆದುಕೊಂಡನು. ಅವನು ಆ ವಸ್ತುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು.
ಯಾಜಕಕಾಂಡ 9 : 11 (ERVKN)
ಬಳಿಕ ಆರೋನನು ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟುಹಾಕಿದನು.
ಯಾಜಕಕಾಂಡ 9 : 12 (ERVKN)
ನಂತರ ಆರೋನನು ಸರ್ವಾಂಗಹೋಮದ ಪಶುವನ್ನು ವಧಿಸಿದನು. ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು.
ಯಾಜಕಕಾಂಡ 9 : 13 (ERVKN)
ಆರೋನನ ಪುತ್ರರು ಸರ್ವಾಂಗಹೋಮದ ಪಶುವಿನ ಮಾಂಸದ ತುಂಡುಗಳನ್ನು ಮತ್ತು ತಲೆಯನ್ನು ಆರೋನನಿಗೆ ಕೊಟ್ಟರು. ಬಳಿಕ ಆರೋನನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
ಯಾಜಕಕಾಂಡ 9 : 14 (ERVKN)
ಆರೋನನು ಸರ್ವಾಂಗಹೋಮದ ಪಶುವಿನ ಒಳಗಿನ ಭಾಗಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
ಯಾಜಕಕಾಂಡ 9 : 15 (ERVKN)
ತರುವಾಯ ಆರೋನನು ಜನರು ಅರ್ಪಿಸುವ ಪಶುಗಳನ್ನು ತರಿಸಿದನು. ಅವನು ಜನರಿಗಾಗಿ ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ವಧಿಸಿದನು. ಅವನು ಮೊದಲಿನ ಪಶುವನ್ನು ಸಮರ್ಪಿಸಿದ ರೀತಿಯಲ್ಲಿ ಪಾಪಪರಿಹಾರಕ್ಕಾಗಿ ಹೋತವನ್ನು ಸಮರ್ಪಿಸಿದನು.
ಯಾಜಕಕಾಂಡ 9 : 16 (ERVKN)
ಆರೋನನು ಸರ್ವಾಂಗಹೋಮಕ್ಕಾಗಿ ಪಶುವನ್ನು ತರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಅರ್ಪಿಸಿದನು.
ಯಾಜಕಕಾಂಡ 9 : 17 (ERVKN)
ಆರೋನನು ಧಾನ್ಯನೈವೇದ್ಯವನ್ನು ಯಜ್ಞವೇದಿಕೆಯ ಬಳಿಗೆ ತಂದನು. ಅವನು ಒಂದು ಹಿಡಿ ಧಾನ್ಯವನ್ನು ತೆಗೆದುಕೊಂಡು ದಿನಂಪ್ರತಿ ಹೊತ್ತಾರೆಯ ವೇಳೆಯಲ್ಲಿ ಅರ್ಪಿಸುವ ಯಜ್ಞವಲ್ಲದೆ ಇದನ್ನೂ ಕೂಡ ಅರ್ಪಿಸಿದನು.
ಯಾಜಕಕಾಂಡ 9 : 18 (ERVKN)
ಆರೋನನು ಜನರಿಗಾಗಿ ಸಮಾಧಾನಯಜ್ಞವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ಈ ರಕ್ತವನ್ನು ಯಜ್ಞವೇದಿಕೆಯ ಸುತ್ತಲೂ ಚಿಮಿಕಿಸಿದನು.
ಯಾಜಕಕಾಂಡ 9 : 19 (ERVKN)
ಆರೋನನ ಪುತ್ರರು ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಆರೋನನ ಬಳಿಗೆ ತಂದರು. ಇವರು ಬಾಲದ ಕೊಬ್ಬನ್ನೂ ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೂ ಮೂತ್ರಪಿಂಡಗಳನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತಂದರು.
ಯಾಜಕಕಾಂಡ 9 : 20 (ERVKN)
ಅವರು ಈ ಕೊಬ್ಬಿನ ಭಾಗಗಳನ್ನು ಹೋರಿಯ ಮತ್ತು ಟಗರಿನ ಎದೆಯ ಭಾಗಗಳ ಮೇಲೆ ಇಟ್ಟರು. ಆರೋನನು ಅವೆಲ್ಲವನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು.
ಯಾಜಕಕಾಂಡ 9 : 21 (ERVKN)
ಮೋಶೆಯು ಆಜ್ಞಾಪಿಸಿದಂತೆ ಎದೆಯ ಭಾಗಗಳನ್ನು ಮತ್ತು ಬಲತೊಡೆಯನ್ನು ಆರೋನನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
ಯಾಜಕಕಾಂಡ 9 : 22 (ERVKN)
ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಮತ್ತು ಸಮಾಧಾನಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.
ಯಾಜಕಕಾಂಡ 9 : 23 (ERVKN)
ಮೋಶೆಯು ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.
ಯಾಜಕಕಾಂಡ 9 : 24 (ERVKN)
ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24