ಯಾಜಕಕಾಂಡ 8 : 1 (ERVKN)
ಮೋಶೆಯಿಂದ ಯಾಜಕರ ಸಿದ್ಧತೆ ಯೆಹೋವನು ಮೋಶೆಗೆ,
ಯಾಜಕಕಾಂಡ 8 : 2 (ERVKN)
“ಆರೋನನನ್ನೂ ಅವನ ಪುತ್ರರನ್ನೂ ಕರೆದುಕೊಂಡು ಅವರೊಂದಿಗೆ ಯಾಜಕ ವಸ್ತ್ರಗಳನ್ನೂ ಅಭಿಷೇಕ ತೈಲವನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ರೊಟ್ಟಿಯಿಂದ ತುಂಬಿರುವ ಪುಟ್ಟಿಯನ್ನೂ ತೆಗೆದುಕೊಂಡು ಬಾ.
ಯಾಜಕಕಾಂಡ 8 : 3 (ERVKN)
ಮತ್ತು ಜನರನ್ನು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಿಗೆ ಎದುರಿನಲ್ಲಿ ಸೇರಿಸು” ಎಂದು ಹೇಳಿದನು.
ಯಾಜಕಕಾಂಡ 8 : 4 (ERVKN)
ಯೆಹೋವನು ಆಜ್ಞಾಪಿಸಿದ್ದನ್ನು ಮೋಶೆಯು ಮಾಡಿದನು. ಜನರು ಒಟ್ಟಾಗಿ ದೇವದರ್ಶನಗುಡಾರದ ಬಾಗಿಲಲ್ಲಿ ಸೇರಿ ಬಂದರು.
ಯಾಜಕಕಾಂಡ 8 : 5 (ERVKN)
ಆಗ ಮೋಶೆಯು ಜನರಿಗೆ, “ನಾನು ಈಗ ಮಾಡುವ ಕಾರ್ಯವನ್ನು ಯೆಹೋವನೇ ಆಜ್ಞಾಪಿಸಿದನು” ಎಂದು ಹೇಳಿದನು.
ಯಾಜಕಕಾಂಡ 8 : 6 (ERVKN)
ತರುವಾಯ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಕರೆದನು. ಅವನು ಅವರಿಗೆ ನೀರಿನಿಂದ ಸ್ನಾನ ಮಾಡಿಸಿದನು;
ಯಾಜಕಕಾಂಡ 8 : 7 (ERVKN)
ನಿಲುವಂಗಿಯನ್ನು ಆರೋನನಿಗೆ ತೊಡಿಸಿದನು; ನಡುಕಟ್ಟನ್ನು ಕಟ್ಟಿದನು; ಮೇಲಂಗಿಯನ್ನು ತೊಡಿಸಿದನು. ಏಫೋದನ್ನು ಹಾಕಿಸಿ ಕವಚದ ಮೇಲಿನ ವಿಶೇಷವಾದ ನಡುಕಟ್ಟನ್ನು ಕಟ್ಟಿದನು; ಎದೆಕವಚವನ್ನು ಬಿಗಿದನು.
ಯಾಜಕಕಾಂಡ 8 : 8 (ERVKN)
ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿದನು.
ಯಾಜಕಕಾಂಡ 8 : 9 (ERVKN)
ಅವನ ತಲೆಗೆ ಮುಂಡಾಸವನ್ನು ಇಟ್ಟನು; ಮುಂಡಾಸದ ಮುಂಭಾಗದಲ್ಲಿ ಚಿನ್ನದ ಪಟ್ಟಿಯನ್ನು ಕಟ್ಟಿದನು. ಈ ಚಿನ್ನದ ಪಟ್ಟಿಯು ಪವಿತ್ರಕಿರೀಟವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
ಯಾಜಕಕಾಂಡ 8 : 10 (ERVKN)
ತರುವಾಯ ಮೋಶೆಯು ಅಭಿಷೇಕತೈಲವನ್ನು ತೆಗೆದುಕೊಂಡು ಪವಿತ್ರಗುಡಾರದ ಮೇಲೆ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳ ಮೇಲೆ ಚಿಮಿಕಿಸಿದನು. ಈ ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
ಯಾಜಕಕಾಂಡ 8 : 11 (ERVKN)
ಮೋಶೆಯು ಅಭಿಷೇಕತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ವೇದಿಕೆಯ ಮೇಲೆ ಏಳು ಸಲ ಚಿಮಿಕಿಸಿದನು. ಮೋಶೆಯು ತೈಲವನ್ನು ವೇದಿಕೆಯ ಮೇಲೆ, ಅದರ ಎಲ್ಲಾ ಉಪಕರಣಗಳ ಮೇಲೆ ಚಿಮಿಕಿಸಿದನು. ಮೋಶೆಯು ತೈಲವನ್ನು ಗಂಗಾಳ ಮತ್ತು ಅದರ ಪೀಠದ ಮೇಲೂ ಚಿಮಿಕಿಸಿದನು. ಈ ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
ಯಾಜಕಕಾಂಡ 8 : 12 (ERVKN)
ಬಳಿಕ ಮೋಶೆಯು ಸ್ವಲ್ಪ ಅಭಿಷೇಕತೈಲವನ್ನು ಆರೋನನ ತಲೆಗೆ ಹೊಯಿದು ಅವನನ್ನು ಪವಿತ್ರಗೊಳಿಸಿದನು.
ಯಾಜಕಕಾಂಡ 8 : 13 (ERVKN)
ಬಳಿಕ ಮೋಶೆಯು ಆರೋನನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ ನಡುಕಟ್ಟನ್ನು ಕಟ್ಟಿದನು. ಬಳಿಕ ಅವರ ತಲೆಗಳಿಗೆ ಮುಂಡಾಸಗಳನ್ನು ಇಟ್ಟನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
ಯಾಜಕಕಾಂಡ 8 : 14 (ERVKN)
ತರುವಾಯ ಮೋಶೆಯು ಪಾಪಪರಿಹಾರಕ್ಕಾಗಿ ಯಜ್ಞದ ಹೋರಿಯನ್ನು ತಂದನು. ಆರೋನನು ಮತ್ತು ಅವನ ಪುತ್ರರು ಆ ಪಾಪಪರಿಹಾರಕ ಯಜ್ಞದ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
ಯಾಜಕಕಾಂಡ 8 : 15 (ERVKN)
ಬಳಿಕ ಮೋಶೆಯು ಹೋರಿಯನ್ನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ವೇದಿಕೆಯ ಎಲ್ಲಾ ಮೂಲೆಗಳಿಗೆ ರಕ್ತವನ್ನು ಹಚ್ಚಿದನು. ಹೀಗೆ ಮೋಶೆಯು ವೇದಿಕೆಯನ್ನು ಯಜ್ಞಗಳಿಗಾಗಿ ಶುದ್ಧಗೊಳಿಸಿ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದನು; ಜನರನ್ನು ಶುದ್ಧಿಮಾಡುವ ಯಜ್ಞಗಳನ್ನು ಸಮರ್ಪಿಸುವುದಕ್ಕಾಗಿ ವೇದಿಕೆಯನ್ನು ಪ್ರತಿಷ್ಠೆಗೊಳಿಸಿದನು.
ಯಾಜಕಕಾಂಡ 8 : 16 (ERVKN)
ಮೋಶೆಯು ಹೋರಿಯ ಒಳಗಿನ ಭಾಗಗಳ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಆವರಿಸಿರುವ ಕೊಬ್ಬನ್ನೂ ತೆಗೆದುಕೊಂಡು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
ಯಾಜಕಕಾಂಡ 8 : 17 (ERVKN)
ಹೋರಿಯ ಚರ್ಮ, ಅದರ ಮಾಂಸ ಮತ್ತು ಅದರ ಶರೀರದ ಕಲ್ಮಶವನ್ನು ಅವನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಬೆಂಕಿಯಿಂದ ಸುಟ್ಟುಹಾಕಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
ಯಾಜಕಕಾಂಡ 8 : 18 (ERVKN)
ಬಳಿಕ ಮೋಶೆಯು ಸರ್ವಾಂಗಹೋಮದ ಟಗರನ್ನು ತಂದನು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು.
ಯಾಜಕಕಾಂಡ 8 : 19 (ERVKN)
ಆಗ ಮೋಶೆಯು ಟಗರನ್ನು ವಧಿಸಿ ಅದರ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು.
ಯಾಜಕಕಾಂಡ 8 : 20 (ERVKN)
(20-21)ಮೋಶೆಯು ಟಗರನ್ನು ತುಂಡುತುಂಡಾಗಿ ಕಡಿದು ಅದರ ಒಳಗಿನ ಭಾಗಗಳನ್ನು ಮತ್ತು ಕಾಲುಗಳನ್ನು ನೀರಿನಿಂದ ತೊಳೆದನು; ಇಡೀ ಟಗರನ್ನು ವೇದಿಕೆಯ ಮೇಲೆ ಹೋಮಮಾಡಿದನು. ಮೋಶೆಯು ಅದರ ತಲೆ, ತುಂಡುಗಳು ಮತ್ತು ಕೊಬ್ಬನ್ನು ಹೋಮಮಾಡಿದನು. ಅದು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿಸಲ್ಪಟ್ಟ ಸುಗಂಧಕರವಾದ ಸರ್ವಾಂಗಹೋಮವಾಗಿದೆ. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
ಯಾಜಕಕಾಂಡ 8 : 21 (ERVKN)
ಯಾಜಕಕಾಂಡ 8 : 22 (ERVKN)
ಬಳಿಕ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವುದಕ್ಕೆ ವಧಿಸಬೇಕಾದ ಎರಡನೆಯ ಟಗರನ್ನು ತಂದನು. ಆರೋನನೂ ಅವನ ಪುತ್ರರೂ ತಮ್ಮ ಕೈಗಳನ್ನು ಟಗರಿನ ತಲೆಯ ಮೇಲೆ ಇಟ್ಟರು.
ಯಾಜಕಕಾಂಡ 8 : 23 (ERVKN)
ಆಗ ಮೋಶೆ ಟಗರನ್ನು ವಧಿಸಿ ಅದರ ಸ್ವಲ್ಪ ರಕ್ತವನ್ನು ಆರೋನನ ಬಲಗಿವಿಯ ತುದಿಗೂ ಅವನ ಬಲಗೈಯ ಹೆಬ್ಬೆರಳಿಗೂ ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.
ಯಾಜಕಕಾಂಡ 8 : 24 (ERVKN)
ಬಳಿಕ ಮೋಶೆಯು ಆರೋನನ ಪುತ್ರರನ್ನು ವೇದಿಕೆಯ ಸಮೀಪಕ್ಕೆ ಕರೆಸಿ ಸ್ವಲ್ಪ ರಕ್ತವನ್ನು ಅವರ ಬಲಗಿವಿಗಳ ತುದಿಗೂ ಅವರ ಬಲಗೈಗಳ ಹೆಬ್ಬೆರಳಿಗೂ ಮತ್ತು ಅವರ ಬಲಗಾಲುಗಳ ಹೆಬ್ಬೆಟ್ಟಿಗೂ ಹಚ್ಚಿದನು; ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು;
ಯಾಜಕಕಾಂಡ 8 : 25 (ERVKN)
ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನೂ ಒಳಗಿನ ಭಾಗಗಳ ಮೇಲಿರುವ ಕೊಬ್ಬೆಲ್ಲವನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮತ್ತು ಬಲತೊಡೆಯನ್ನೂ ತೆಗೆದುಕೊಂಡನು.
ಯಾಜಕಕಾಂಡ 8 : 26 (ERVKN)
ಪ್ರತಿದಿನ ಯೆಹೋವನ ಸನ್ನಿಧಿಯಲ್ಲಿ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯು ಇಡಲ್ಪಡುತ್ತಿತ್ತು. ಮೋಶೆಯು ರೊಟ್ಟಿಯಲ್ಲಿ ಒಂದು ತುಂಡನ್ನೂ ಎಣ್ಣೆ ಬೆರಸಿದ ರೊಟ್ಟಿಯಲ್ಲಿ ಒಂದು ತುಂಡನ್ನೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡನು. ಮೋಶೆಯು ಆ ರೊಟ್ಟಿಯ ತುಂಡುಗಳನ್ನು ಕೊಬ್ಬಿನ ಮತ್ತು ಟಗರಿನ ಬಲತೊಡೆಯ ಮೇಲೆ ಇಟ್ಟನು.
ಯಾಜಕಕಾಂಡ 8 : 27 (ERVKN)
ಬಳಿಕ ಮೋಶೆಯು ಅವೆಲ್ಲವುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿ ಇಟ್ಟನು. ಮೋಶೆಯು ತುಂಡುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
ಯಾಜಕಕಾಂಡ 8 : 28 (ERVKN)
ಬಳಿಕ ಮೋಶೆಯು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿರುವ ಈ ವಸ್ತುಗಳನ್ನು ತೆಗೆದುಕೊಂಡನು. ಮೋಶೆಯು ಅವುಗಳನ್ನು ವೇದಿಕೆಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಅವುಗಳನ್ನು ಹೋಮಮಾಡಿದನು. ಅದು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವ ಸಮರ್ಪಣೆಯಾಗಿತ್ತು. ಹೋಮವಾಗಿ ಅರ್ಪಿಸಲ್ಪಟ್ಟ ಈ ಯಜ್ಞವು ಯೆಹೋವನಿಗೆ ಸುಗಂಧಕರವಾಗಿದೆ.
ಯಾಜಕಕಾಂಡ 8 : 29 (ERVKN)
ಮೋಶೆಯು ಎದೆಯ ಭಾಗವನ್ನು ತೆಗೆದುಕೊಂಡು ಯೆಹೋವನ ಮುಂದೆ ನೈವೇದ್ಯವಾಗಿ ನಿವಾಳಿಸಿದನು. ಅದು ಯಾಜಕರನ್ನು ನೇಮಿಸುವುದಕ್ಕಾಗಿ ಅರ್ಪಿಸಲ್ಪಟ್ಟ ಟಗರಿನಲ್ಲಿ ಮೋಶೆಯ ಪಾಲಾಗಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಮಾಡಿದನು.
ಯಾಜಕಕಾಂಡ 8 : 30 (ERVKN)
ಮೋಶೆಯು ಸ್ವಲ್ಪ ಅಭಿಷೇಕತೈಲವನ್ನು ಮತ್ತು ವೇದಿಕೆಯ ಮೇಲಿದ್ದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮೇಲೆ ಮತ್ತು ಅವನ ಯಾಜಕವಸ್ತ್ರದ ಮೇಲೆ ಚಿಮಿಕಿಸಿದನು; ಆರೋನನ ಜೊತೆ ಇದ್ದ ಅವನ ಪುತ್ರರ ಮೇಲೆ ಮತ್ತು ಅವರ ಬಟ್ಟೆಗಳ ಮೇಲೆ ಚಿಮಿಕಿಸಿದನು. ಹೀಗೆ ಮೋಶೆಯು ಆರೋನನನ್ನೂ ಅವನ ಯಾಜಕವಸ್ತ್ರವನ್ನೂ ಅವನ ಪುತ್ರರನ್ನೂ ಅವರ ಯಾಜಕ ವಸ್ತ್ರಗಳನ್ನೂ ಪವಿತ್ರಗೊಳಿಸಿದನು.* ಪವಿತ್ರಗೊಳಿಸಿದನು ಅಕ್ಷರಶಃ, “ಪ್ರತಿಷ್ಠಿಸಿದನು.”
ಯಾಜಕಕಾಂಡ 8 : 31 (ERVKN)
ತರುವಾಯ ಮೋಶೆಯು ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳಿದನು: “ನೀವು ಮಾಂಸವನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಬೇಯಿಸಿ ತಿನ್ನಬೇಕು. ಪ್ರತಿಷ್ಠೆಕಾಣಿಕೆಯ ಬುಟ್ಟಿಯಲ್ಲಿರುವ ರೊಟ್ಟಿಯೊಡನೆ ಅದನ್ನು ಅಲ್ಲಿ ತಿನ್ನಿರಿ. ಮಾಂಸವನ್ನೂ ರೊಟ್ಟಿಯನ್ನೂ ಆ ಸ್ಥಳದಲ್ಲಿ ತಿನ್ನಿರಿ. ನಾನು ಹೇಳುವ ಹಾಗೆ ಇದನ್ನು ಮಾಡಿರಿ.
ಯಾಜಕಕಾಂಡ 8 : 32 (ERVKN)
ಮಾಂಸವಾಗಲಿ ರೊಟ್ಟಿಯಾಗಲಿ ಉಳಿದರೆ ಅದನ್ನು ಸುಟ್ಟುಹಾಕಿರಿ.
ಯಾಜಕಕಾಂಡ 8 : 33 (ERVKN)
ಯಾಜಕರಾಗಿ ಪ್ರತಿಷ್ಠಿಸುವ ಆಚಾರವಿಧಿಯು ಏಳು ದಿನಗಳವರೆಗೆ ಇರುವುದು. ಆ ಸಮಯ ಮುಗಿಯುವವರೆಗೆ ನೀವು ದೇವದರ್ಶನಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು.
ಯಾಜಕಕಾಂಡ 8 : 34 (ERVKN)
ಈ ದಿನದಲ್ಲಿ ಮಾಡಿದ ಸಕಲಕಾರ್ಯಗಳನ್ನು ಏಳು ದಿನವೂ ಮಾಡಬೇಕು.
ಯಾಜಕಕಾಂಡ 8 : 35 (ERVKN)
ನೀವು ಏಳು ದಿನಗಳು ಹಗಲುರಾತ್ರಿ ದೇವದರ್ಶನಗುಡಾರದ ಬಾಗಿಲಿನಲ್ಲಿ ಇರಬೇಕು. ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾಗದಿದ್ದರೆ ಸಾಯುವಿರಿ! ಯೆಹೋವನು ಆ ಆಜ್ಞೆಗಳನ್ನು ನನಗೆ ಕೊಟ್ಟನು.”
ಯಾಜಕಕಾಂಡ 8 : 36 (ERVKN)
ಆದ್ದರಿಂದ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಆರೋನನೂ ಅವನ ಪುತ್ರರೂ ಮಾಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36