ಯಾಜಕಕಾಂಡ 5 : 1 (ERVKN)
ತಿಳಿಯದೆ ಮಾಡುವ ಪಾಪಗಳು “ನ್ಯಾಯಾಧಿಕಾರಿಯು ತಿಳಿಸಬೇಕೆಂದು ಕೇಳಿದರೂ ಒಬ್ಬನು ತಾನು ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ತಿಳಿಸದೆ ಹೋದರೆ ಅವನು ಪಾಪಕ್ಕೆ ಗುರಿಯಾಗಿದ್ದಾನೆ.
ಯಾಜಕಕಾಂಡ 5 : 2 (ERVKN)
“ಯಾವನಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವನ್ನಾಗಲಿ ಅಥವಾ ಬೇರೆ ಯಾವ ಅಶುದ್ಧ ವಸ್ತುವನ್ನಾಗಲಿ ಮುಟ್ಟಿದರೆ ತಾನು ಮುಟ್ಟಿದ್ದು ತಿಳಿಯದಿದ್ದರೂ ಅವನು ಅಶುದ್ಧನೂ ದೋಷಿಯೂ ಆಗಿರುವನು.
ಯಾಜಕಕಾಂಡ 5 : 3 (ERVKN)
“ಒಬ್ಬನು ಮತ್ತೊಬ್ಬನ ದೇಹದೊಳಗಿಂದ ಬರುವ ಯಾವುದಾದರೂ ಅಶುದ್ಧ ವಸ್ತುವನ್ನು ತಿಳಿಯದೆ ಮುಟ್ಟಿದರೂ, ತಿಳಿದುಬಂದಾಗ ಅವನು ದೋಷಿಯಾಗುವನು.
ಯಾಜಕಕಾಂಡ 5 : 4 (ERVKN)
“ಒಬ್ಬನು ಆಲೋಚಿಸದೆ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಮಾತುಕೊಟ್ಟು ಮರೆತುಬಿಟ್ಟರೆ, ಅದು ಅವನ ನೆನಪಿಗೆ ಬಂದಾಗ ಅವನು ದೋಷಿಯಾಗುವನು.
ಯಾಜಕಕಾಂಡ 5 : 5 (ERVKN)
ಈ ವಿಷಯಗಳಲ್ಲಿ ಯಾವುದಾದರೊಂದರಲ್ಲಿ ದೋಷಿಯಾದರೆ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಅರಿಕೆ ಮಾಡಬೇಕು.
ಯಾಜಕಕಾಂಡ 5 : 6 (ERVKN)
ಅವನು ದೋಷಪರಿಹಾರಕ್ಕಾಗಿ ಹೆಣ್ಣು ಕುರಿಮರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ ಯಜ್ಞವಾಗಿ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.
ಯಾಜಕಕಾಂಡ 5 : 7 (ERVKN)
“ಅವನು ಕುರಿಮರಿಯನ್ನು ಕೊಡುವುದಕ್ಕೆ ಶಕ್ತನಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಅವುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವನ್ನಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಸಮರ್ಪಿಸಬೇಕು. ತಿಳಿಯದೆ ಮಾಡುವ ಪಾಪಗಳು
ಯಾಜಕಕಾಂಡ 5 : 8 (ERVKN)
ಅವನು ಅವುಗಳನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಮೊದಲು ಒಂದು ಪಕ್ಷಿಯನ್ನು ಪಾಪಪರಿಹಾರಕ ಯಜ್ಞವನ್ನಾಗಿ ಅರ್ಪಿಸುವನು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿಯುವನು. ಆದರೆ ಯಾಜಕನು ಪಕ್ಷಿಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದಿಲ್ಲ.
ಯಾಜಕಕಾಂಡ 5 : 9 (ERVKN)
ಯಾಜಕನು ಪಾಪಪರಿಹಾರಕ ಯಜ್ಞದಿಂದ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬದಿಯಲ್ಲಿ ಚಿಮಿಕಿಸಬೇಕು. ಬಳಿಕ ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ.
ಯಾಜಕಕಾಂಡ 5 : 10 (ERVKN)
ತರುವಾಯ ಯಾಜಕನು ಎರಡನೆಯ ಪಕ್ಷಿಯನ್ನು ಸರ್ವಾಂಗಹೋಮದ ವಿಧಿಗಳಿಗನುಸಾರವಾಗಿ ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಅವನನ್ನು ಕ್ಷಮಿಸುವನು.
ಯಾಜಕಕಾಂಡ 5 : 11 (ERVKN)
“ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅವನು ಶಕ್ತನಾಗಿಲ್ಲದಿದ್ದರೆ, ಆಗ ಅವನು ಎಂಟು ಬಟ್ಟಲು* ಎಂಟು ಬಟ್ಟಲು ಅಕ್ಷರಶಃ, “1/10 ಏಫಾ.” ಶ್ರೇಷ್ಠ ಗೋಧಿಹಿಟ್ಟನ್ನು ತರಬೇಕು. ಇದು ಅವನ ಪಾಪಪರಿಹಾರಕ ಯಜ್ಞವಾಗಿರುವುದು. ಅವನು ಹಿಟ್ಟಿಗೆ ಎಣ್ಣೆಯನ್ನು ಹಾಕಬಾರದು. ಅವನು ಅದರ ಮೇಲೆ ಸುಗಂಧ ಧೂಪವನ್ನು ಇಡಬಾರದು, ಯಾಕೆಂದರೆ ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ.
ಯಾಜಕಕಾಂಡ 5 : 12 (ERVKN)
ಅವನು ಹಿಟ್ಟನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಒಂದು ಹಿಡಿಹಿಟ್ಟನ್ನು ಅದರಿಂದ ತೆಗೆದು ದೇವಾರ್ಪಿತವಾಯಿತೆಂದು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿರುವುದು. ಅದು ಪಾಪಪರಿಹಾರಕ ಸಮರ್ಪಣೆಯಾಗಿದೆ.
ಯಾಜಕಕಾಂಡ 5 : 13 (ERVKN)
ಹೀಗೆ ಆ ವ್ಯಕ್ತಿಯನ್ನು ಅವನ ದೋಷಗಳಿಂದ ಶುದ್ಧೀಕರಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು. ಧಾನ್ಯನೈವೇದ್ಯದಲ್ಲಿರುವಂತೆಯೇ ಯಜ್ಞದಲ್ಲಿ ಉಳಿದ ಭಾಗವು ಯಾಜಕನಿಗೆ ಸೇರಿದೆ. ಧಾನ್ಯಸಮರ್ಪಣೆಯಲ್ಲಿಯೂ ಉಳಿದ ಭಾಗವು ಯಾಜಕನಿಗೆ ಸೇರಿದೆ.”
ಯಾಜಕಕಾಂಡ 5 : 14 (ERVKN)
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ಯಾಜಕಕಾಂಡ 5 : 15 (ERVKN)
“ಒಬ್ಬನು ಯೆಹೋವನ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮೀರಿ ನಡೆದು ತಿಳಿಯದೆ ತಪ್ಪು ಮಾಡಿದರೆ ಅವನು ಅಂಗದೋಷವಿಲ್ಲದ ಟಗರನ್ನು ತರಬೇಕು. ಇದು ಅವನಿಗಾಗಿ ಯೆಹೋವನಿಗೆ ಸಮರ್ಪಣೆಯಾಗುವ ದೋಷಪರಿಹಾರಕ ಯಜ್ಞ. ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಟಗರಿನ ಬೆಲೆಯನ್ನು ಗೊತ್ತುಮಾಡಬೇಕು.”
ಯಾಜಕಕಾಂಡ 5 : 16 (ERVKN)
ಆ ವ್ಯಕ್ತಿಯೂ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮಾಡಿದ ಪಾಪಕ್ಕಾಗಿ ಈ ಬೆಲೆಯನ್ನು ತೆರಬೇಕು. ಇದಲ್ಲದೆ ಆ ಬೆಲೆಯ ಐದನೆಯ ಒಂದು ಭಾಗವನ್ನು ಸೇರಿಸಿ ಆ ಹಣವನ್ನು ಯಾಜಕನಿಗೆ ಕೊಡಬೇಕು. ಈ ರೀತಿಯಾಗಿ ಯಾಜಕನು ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವುದರ ಮೂಲಕ ಅವನನ್ನು ಶುದ್ಧಿಮಾಡುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
ಯಾಜಕಕಾಂಡ 5 : 17 (ERVKN)
“ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದಾದರೊಂದನ್ನು ಮಾಡಿ ದೋಷಕ್ಕೆ ಗುರಿಯಾಗಿದ್ದರೆ, ಅದು ಅವನಿಗೆ ತಿಳಿದಿಲ್ಲದಿದ್ದರೂ ಅವನು ಆ ಪಾಪಫಲವನ್ನು ಅನುಭವಿಸಬೇಕು.
ಯಾಜಕಕಾಂಡ 5 : 18 (ERVKN)
ಅವನು ಅಂಗದೋಷವಿಲ್ಲದ ಮತ್ತು ಸರಿಯಾದ ಬೆಲೆಬಾಳುವ ಟಗರನ್ನು ಯಾಜಕನ ಬಳಿಗೆ ತರಬೇಕು. ಟಗರು ದೋಷಪರಿಹಾರಕ ಯಜ್ಞವಾಗಿರುವುದು. ಹೀಗೆ ಯಾಜಕನು ತಿಳಿಯದೆ ಮಾಡಿದ ಪಾಪದಿಂದ ಅವನನ್ನು ಶುದ್ಧಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು.
ಯಾಜಕಕಾಂಡ 5 : 19 (ERVKN)
ಅವನು ದೋಷಿಯಾದ್ದರಿಂದ ಯೆಹೋವನಿಗೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಬೇಕು.”

1 2 3 4 5 6 7 8 9 10 11 12 13 14 15 16 17 18 19