ಯಾಜಕಕಾಂಡ 27 : 1 (ERVKN)
ಹರಕೆಗಳು ಪ್ರಾಮುಖ್ಯವಾಗಿವೆ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ಯಾಜಕಕಾಂಡ 27 : 2 (ERVKN)
“ಇಸ್ರೇಲರಿಗೆ ಹೀಗೆ ಹೇಳು: ಯಾವನಾದರೂ ಯೆಹೋವನಿಗೆ ಒಬ್ಬ ವ್ಯಕ್ತಿಯನ್ನು ಪ್ರತಿಷ್ಠಿಸುವುದಕ್ಕಾಗಿ ಹರಕೆ ಮಾಡಿಕೊಂಡರೆ ಅವನಿಗೆ ಒಂದು ಬೆಲೆಯನ್ನು ನಿಗದಿಮಾಡಬೇಕು. ಅವನನ್ನು ಯೆಹೋವನಿಂದ ಮರಳಿ ಕೊಂಡುಕೊಳ್ಳ ಬಯಸುವವರು ಆ ಬೆಲೆಯನ್ನು ಕೊಡಬೇಕು.
ಯಾಜಕಕಾಂಡ 27 : 3 (ERVKN)
ಇಪ್ಪತ್ತರಿಂದ ಅರವತ್ತು ವರ್ಷದ ಒಳಗಿರುವ ಮನುಷ್ಯನ ಬೆಲೆ ಐವತ್ತು ಶೆಕೆಲ್ ಬೆಳ್ಳಿಯಾಗಿದೆ. (ಬೆಳ್ಳಿಯನ್ನು ಅಳೆಯಲು ಅಧಿಕೃತ ಅಳತೆಯನ್ನು ಉಪಯೋಗಿಸಬೇಕು.)
ಯಾಜಕಕಾಂಡ 27 : 4 (ERVKN)
ಇಪ್ಪತ್ತರಿಂದ ಅರವತ್ತು ವರ್ಷದೊಳಗಿರುವ ಸ್ತ್ರೀಯ ಬೆಲೆ ಮೂವತ್ತು ಶೆಕೆಲ್‌ಗಳಾಗಿದೆ.
ಯಾಜಕಕಾಂಡ 27 : 5 (ERVKN)
ಐದರಿಂದ ಇಪ್ಪತ್ತು ವರ್ಷದೊಳಗಿರುವ ಗಂಡಸಿನ ಬೆಲೆ ಇಪ್ಪತ್ತು ಶೆಕೆಲ್‌ಗಳಾಗಿದೆ. ಐದರಿಂದ ಇಪ್ಪತ್ತು ವರ್ಷದೊಳಗಿರುವ ಸ್ತ್ರೀಯ ಬೆಲೆ ಹತ್ತು ಶೆಕೆಲ್‌ಗಳಾಗಿದೆ.
ಯಾಜಕಕಾಂಡ 27 : 6 (ERVKN)
ಒಂದು ತಿಂಗಳಿಂದ ಐದು ವರ್ಷದೊಳಗಿನ ಗಂಡು ಮಗುವಿನ ಬೆಲೆ ಐದು ಶೆಕೆಲ್‌ಗಳಾಗಿದೆ. ಹೆಣ್ಣುಮಗುವಿನ ಬೆಲೆ ಮೂರು ಶೆಕೆಲ್‌ಗಳು.
ಯಾಜಕಕಾಂಡ 27 : 7 (ERVKN)
ಅರವತ್ತು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ಪುರುಷನ ಬೆಲೆ ಹದಿನೈದು ಶೆಕೆಲ್‌ಗಳು. ಸ್ತ್ರೀಯ ಬೆಲೆ ಹತ್ತು ಶೆಕೆಲ್‌ಗಳು.
ಯಾಜಕಕಾಂಡ 27 : 8 (ERVKN)
“ಒಬ್ಬನು ಬೆಲೆಯನ್ನು ಕೊಡಲಾಗದಷ್ಟು ಬಡವನಾಗಿದ್ದರೆ, ಅವನನ್ನು ಯಾಜಕನ ಬಳಿಗೆ ತನ್ನಿರಿ. ಅವನು ಎಷ್ಟು ಹಣ ಕೊಡಲು ಶಕ್ತನಾಗಿದ್ದಾನೆಂದು ಯಾಜಕನು ತೀರ್ಮಾನಿಸುವನು.
ಯಾಜಕಕಾಂಡ 27 : 9 (ERVKN)
ಯೆಹೋವನಿಗೆ ಕಾಣಿಕೆ “ಒಬ್ಬನು ಪಶುಗಳನ್ನು ಯೆಹೋವನಿಗೆ ಯಜ್ಞಕ್ಕಾಗಿ ಪ್ರತಿಷ್ಠಿಸಬಹುದು. ಯಾವನಾದರೂ ಅಂಥ ಪಶುವನ್ನು ತಂದರೆ, ಅದು ಪವಿತ್ರವಾಗುವುದು.
ಯಾಜಕಕಾಂಡ 27 : 10 (ERVKN)
ಯಾಕೆಂದರೆ ಅದನ್ನು ಪ್ರತಿಷ್ಠಿಸಿದ ವ್ಯಕ್ತಿ ಅದನ್ನು ಯೆಹೋವನಿಗೆ ಅರ್ಪಿಸುತ್ತೇನೆಂದು ಹರಕೆ ಮಾಡಿರುತ್ತಾನೆ. ಆದ್ದರಿಂದ ಅವನು ಅದರ ಬದಲು ಇನ್ನೊಂದು ಪಶುವನ್ನು ಕೊಡಲು ಪ್ರಯತ್ನಿಸಬಾರದು; ಅದನ್ನು ಬದಲಾಯಿಸಲು ಪ್ರಯತ್ನಿಸಬಾರದು. ಅವನು ಒಳ್ಳೆಯ ಪಶವಿನ ಬದಲಾಗಿ ಕೆಟ್ಟ ಪಶುವನ್ನು ಕೊಡಲು ಪ್ರಯತ್ನಿಸಬಾರದು. ಅವನು ಪಶುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ಆ ಎರಡು ಪಶುಗಳೂ ಪವಿತ್ರವಾಗುತ್ತವೆ. ಅವೆರಡೂ ಯೆಹೋವನದಾಗಿರುತ್ತವೆ.
ಯಾಜಕಕಾಂಡ 27 : 11 (ERVKN)
“ಯೆಹೋವನಿಗೆ ಸಮರ್ಪಿಸಕೂಡದ ಕೆಲವು ಪ್ರಾಣಿಗಳಿರುವವು. ಒಬ್ಬನು ಅಂಥ ಅಶುದ್ಧ ಪಶುಗಳಲ್ಲೊಂದನ್ನು ಯೆಹೋವನಿಗಾಗಿ ಪ್ರತಿಷ್ಠಿಸಿದರೆ, ಅದನ್ನು ಯಾಜಕನ ಬಳಿಗೆ ತರಬೇಕು.
ಯಾಜಕಕಾಂಡ 27 : 12 (ERVKN)
ಯಾಜಕನು ಆ ಪಶುವಿಗೆ ಬೆಲೆಯನ್ನು ಗೊತ್ತುಮಾಡುವನು. ಪಶುವು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ.
ಯಾಜಕಕಾಂಡ 27 : 13 (ERVKN)
ಹರಕೆ ಮಾಡಿದವನು ಪಶುವನ್ನು ಮರಳಿ ಕೊಂಡುಕೊಳ್ಳಬೇಕೆಂದಿದ್ದರೆ, ಅದರ ಬೆಲೆಯೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು.
ಯಾಜಕಕಾಂಡ 27 : 14 (ERVKN)
ಮನೆಯ ಬೆಲೆ “ಒಬ್ಬನು ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದಕ್ಕೆ ಬೆಲೆಯನ್ನು ನಿರ್ಣಯಿಸುವನು. ಮನೆಯು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ.
ಯಾಜಕಕಾಂಡ 27 : 15 (ERVKN)
ಆದರೆ ಹರಕೆ ಮಾಡಿದವನು ಮನೆಯನ್ನು ಹಿಂದಕ್ಕೆ ಪಡೆಯಲು ಬಯಸಿದರೆ, ಆಗ ಅವನು ಅದರ ಬೆಲೆಯೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಅದು ಅವನದಾಗುವುದು.
ಯಾಜಕಕಾಂಡ 27 : 16 (ERVKN)
ಆಸ್ತಿಯ ಬೆಲೆ “ಒಬ್ಬನು ತನ್ನ ಹೊಲಗಳಲ್ಲಿ ಒಂದು ಭಾಗವನ್ನು ಯೆಹೋವನಿಗಾಗಿ ಪ್ರತಿಷ್ಠಿಸಿದರೆ, ಅದರಲ್ಲಿ ಬಿತ್ತುವುದಕ್ಕೆ ಬೇಕಾಗಿರುವ ಬೀಜಗಳನ್ನು ಆಧಾರ ಮಾಡಿಕೊಂಡು ಬೆಲೆಯನ್ನು ನಿಗದಿ ಮಾಡಬೇಕು. ಪ್ರತಿಯೊಂದು ಹೋಮೆರ್ (ಎರಡು ಖಂಡುಗ) ಜವೆಗೋಧಿಯನ್ನು ಉತ್ಪಾದಿಸುವ ಹೊಲವು ಐವತ್ತು ಶೆಕೆಲ್ ಬೆಲೆಬಾಳುವುದು.
ಯಾಜಕಕಾಂಡ 27 : 17 (ERVKN)
ಒಬ್ಬನು ಜ್ಯೂಬಿಲಿ ಸಂವತ್ಸರದಲ್ಲಿ ತನ್ನ ಹೊಲವನ್ನು ಕೊಟ್ಟರೆ, ಆಗ ಅದರ ಬೆಲೆಯು ಯಾಜಕನು ತೀರ್ಮಾನಿಸಿದಷ್ಟು ಇರುವುದು.
ಯಾಜಕಕಾಂಡ 27 : 18 (ERVKN)
ಆದರೆ ಒಬ್ಬನು ಜ್ಯೂಬಿಲಿಯ ನಂತರ ತನ್ನ ಹೊಲವನ್ನು ಕೊಟ್ಟರೆ, ಯಾಜಕನು ಅದರ ಸರಿಯಾದ ಬೆಲೆಯನ್ನು ಲೆಕ್ಕಹಾಕಬೇಕು. ಅವನು ಮುಂದಿನ ಜ್ಯೂಬಿಲಿ ಸಂವತ್ಸರಕ್ಕೆ ಇರುವ ವರ್ಷಗಳನ್ನು ಲೆಕ್ಕಹಾಕಿ ಅದರಿಂದ ಬೆಲೆಯನ್ನು ನಿರ್ಣಯಿಸಬೇಕು.
ಯಾಜಕಕಾಂಡ 27 : 19 (ERVKN)
ಹೊಲವನ್ನು ಕೊಟ್ಟವನು ಅದನ್ನು ಮರಳಿ ಕೊಂಡುಕೊಳ್ಳಬೇಕೆಂದು ಬಯಸುವುದಾದರೆ, ಅವನು ಅದರ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಿ ಕೊಡಬೇಕು. ಆಗ ಹೊಲವು ತಿರುಗಿ ಅವನದಾಗುವುದು.
ಯಾಜಕಕಾಂಡ 27 : 20 (ERVKN)
ಅವನು ಹೊಲವನ್ನು ಮರಳಿ ಕೊಂಡುಕೊಳ್ಳದಿದ್ದರೆ ಅದು ಯಾವಾಗಲೂ ಯಾಜಕರುಗಳಿಗೆ ಸೇರಿದ್ದಾಗಿರುತ್ತದೆ. ಭೂಮಿಯು ಮತ್ತೊಬ್ಬನಿಗೆ ಮಾರಲ್ಪಟ್ಟಿದ್ದರೆ, ಮೊದಲನೆಯ ವ್ಯಕ್ತಿಯು ಅದನ್ನು ಮತ್ತೆ ಕೊಂಡುಕೊಳ್ಳಲು ಸಾಧ್ಯವಿಲ್ಲ.
ಯಾಜಕಕಾಂಡ 27 : 21 (ERVKN)
ಅವನು ಭೂಮಿಯನ್ನು ಹಿಂದಕ್ಕೆ ಕೊಂಡುಕೊಳ್ಳದಿದ್ದರೆ, ಅದು ಜ್ಯೂಬಿಲಿ ಸಂವತ್ಸರದಲ್ಲಿ ಯೆಹೋವನಿಗೆ ಮೀಸಲಾದದ್ದಾಗಿರುವುದು. ಅದು ಎಂದೆಂದಿಗೂ ಯಾಜಕನದ್ದಾಗಿರುವುದು. ಅದು ಪೂರ್ಣವಾಗಿ ಯೆಹೋವನಿಗೆ ಪ್ರತಿಷ್ಠಿಸಿದ ಭೂಮಿಯಂತೆ ಇರುವುದು.
ಯಾಜಕಕಾಂಡ 27 : 22 (ERVKN)
“ಒಬ್ಬನು ತಾನು ಕೊಂಡುಕೊಂಡ ಹೊಲವನ್ನು ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಯೆಹೋವನಿಗೆ ಪ್ರತಿಷ್ಠಿಸಿದರೆ,
ಯಾಜಕಕಾಂಡ 27 : 23 (ERVKN)
ಯಾಜಕನು ಮುಂದಿನ ಜ್ಯೂಬಿಲಿ ಸಂವತ್ಸರದವರೆಗೆ ಇರುವ ವರ್ಷಗಳನ್ನು ಲೆಕ್ಕ ಹಾಕಿ ಅದರ ಬೆಲೆಯನ್ನು ನಿಗದಿ ಮಾಡಬೇಕು. ಆಗ ಭೂಮಿಯು ಯೆಹೋವನದಾಗಿರುವುದು.
ಯಾಜಕಕಾಂಡ 27 : 24 (ERVKN)
ಜ್ಯೂಬಿಲಿ ಸಂವತ್ಸರದಲ್ಲಿ, ಆ ಭೂಮಿಯು ಅದರ ಮೊದಲ ಯಜಮಾನನಿಗೆ ಅಂದರೆ ಯಾವ ಕುಟುಂಬವು ಆ ಭೂಮಿಯನ್ನು ಮೊದಲು ಹೊಂದಿತ್ತೋ ಆ ಕುಟುಂಬಕ್ಕೆ ಸೇರುವುದು.
ಯಾಜಕಕಾಂಡ 27 : 25 (ERVKN)
“ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಆ ಬೆಲೆಗಳನ್ನು ಕೊಡಬೇಕು. ಒಂದು ಶೆಕೆಲ್‌ನ ಬೆಲೆಯನ್ನು ಇಪ್ಪತ್ತು ಗೇರಾ ತೂಕದ ಪ್ರಕಾರ ನೀವು ಯಾವಾಗಲೂ ನಿರ್ಣಯಿಸಬೇಕು.
ಯಾಜಕಕಾಂಡ 27 : 26 (ERVKN)
ಪಶುಗಳ ಬೆಲೆ “ಜನರು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ದನಗಳನ್ನು ಮತ್ತು ಕುರಿಗಳನ್ನು ಕೊಡಬಹುದು. ಆದರೆ ಪಶುವು ಚೊಚ್ಚಲಾದದ್ದಾಗಿದ್ದರೆ, ಅದು ಈಗಾಗಲೇ ಯೆಹೋವನದ್ದಾಗಿರುತ್ತದೆ. ಆದ್ದರಿಂದ ಜನರು ಅಂಥ ಪಶುಗಳನ್ನು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ಕೊಡಲಾಗುವುದಿಲ್ಲ.
ಯಾಜಕಕಾಂಡ 27 : 27 (ERVKN)
ಜನರು ಚೊಚ್ಚಲಾದ ಪಶುಗಳನ್ನು ಯೆಹೋವನಿಗೆ ಕೊಡಬೇಕು. ಆದರೆ ಚೊಚ್ಚಲಾದ ಪಶುವು ಅಶುದ್ಧವಾದ ಪಶುವಾಗಿದ್ದರೆ, ಆಗ ಹರಕೆ ಮಾಡಿದವನು ಅದನ್ನು ಮರಳಿ ಕೊಂಡುಕೊಳ್ಳಬೇಕು. ಯಾಜಕನು ಅದರ ಬೆಲೆಯನ್ನು ನಿರ್ಣಯಿಸುವನು ಮತ್ತು ಹರಕೆ ಮಾಡಿದವನು ಆ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಬೇಕು. ಅವನು ಅದನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಯಾಜಕನು ತಾನು ನಿರ್ಣಯಿಸಿದ ಬೆಲೆಗೆ ಆ ಪಶುವನ್ನು ಮಾರಬೇಕು.
ಯಾಜಕಕಾಂಡ 27 : 28 (ERVKN)
“ಜನರು ಯೆಹೋವನಿಗೆ ಸಲ್ಲಿಸುವ ವಿಶೇಷ ಬಗೆಯ ಕಾಣಿಕೆಯು ಯೆಹೋವನಿಗೆ ಮಾತ್ರ ಸೇರಿದ್ದಾಗಿರುತ್ತದೆ. ಅದನ್ನು ಬಿಡಿಸಿಕೊಳ್ಳುವುದಕ್ಕಾಗಲಿ ಮಾರುವುದಕ್ಕಾಗಲಿ ಆಗುವುದಿಲ್ಲ. ಅದು ಯೆಹೋವನದ್ದಾಗಿರುತ್ತದೆ. ಈ ಕಾಣಿಕೆಗಳು ಜನರನ್ನು, ಪಶುಗಳನ್ನು ಮತ್ತು ಪಿತ್ರಾರ್ಜಿತ ಸ್ವತ್ತುಗಳನ್ನು ಒಳಗೊಂಡಿವೆ.
ಯಾಜಕಕಾಂಡ 27 : 29 (ERVKN)
ಆ ವಿಶೇಷ ಬಗೆಯ ಕಾಣಿಕೆಯು ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು ಮತ್ತೆ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆ ವ್ಯಕ್ತಿಯು ಕೊಲ್ಲಲ್ಪಡಬೇಕು.
ಯಾಜಕಕಾಂಡ 27 : 30 (ERVKN)
“ಎಲ್ಲಾ ಬೆಳೆಗಳಲ್ಲಿ ಹತ್ತರಲ್ಲಿ ಒಂದಂಶವು ಯೆಹೋವನದ್ದಾಗಿರುತ್ತದೆ. ಹೊಲಗಳ ಬೆಳೆಗಳಾಗಲಿ ಮರಗಳ ಫಲಗಳಾಗಲಿ ಅದರಲ್ಲಿ ಹತ್ತರಲ್ಲಿ ಒಂದಂಶ ಯೆಹೋವನದ್ದಾಗಿರುತ್ತದೆ.
ಯಾಜಕಕಾಂಡ 27 : 31 (ERVKN)
ಆದ್ದರಿಂದ ಒಬ್ಬನು ತಾನು ಕೊಡಬೇಕಾದ ಹತ್ತನೆಯ ಪಾಲಿನಲ್ಲಿ ಏನಾದರೂ ಮರಳಿ ಪಡೆದುಕೊಳ್ಳಬೇಕೆಂದಿದ್ದರೆ, ಅವನು ಅದರ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಿಕೊಟ್ಟು ಮರಳಿ ಕೊಂಡುಕೊಳ್ಳಬೇಕು.
ಯಾಜಕಕಾಂಡ 27 : 32 (ERVKN)
“ದನಗಳಲ್ಲಾಗಲಿ ಕುರಿಗಳಲ್ಲಾಗಲಿ ಪ್ರತಿ ಹತ್ತನೆಯ ಪಾಲನ್ನು ಯಾಜಕರು ತೆಗೆದುಕೊಳ್ಳುವರು. ಪ್ರತಿ ಹತ್ತನೆ ಪಶು ಯೆಹೋವನದಾಗಿರುವುದು.
ಯಾಜಕಕಾಂಡ 27 : 33 (ERVKN)
ಆರಿಸಲ್ಪಟ್ಟ ಪಶುವು ಒಳ್ಳೆಯದೋ ಕೆಟ್ಟದ್ದೋ ಎಂದು ಅದರ ಮಾಲಿಕನು ಚಿಂತೆ ಮಾಡಬಾರದು. ಅವನು ಅದನ್ನು ಬದಲಾಯಿಸಬಾರದು. ಅವನು ಅದನ್ನು ಬದಲಾಯಿಸಲು ತೀರ್ಮಾನಿಸಿದರೆ, ಆಗ ಎರಡೂ ಪಶುಗಳು ಯೆಹೋವನದಾಗುತ್ತವೆ. ಆ ಪಶುವನ್ನು ಮರಳಿ ಕೊಂಡುಕೊಳ್ಳಲಾಗದು.”
ಯಾಜಕಕಾಂಡ 27 : 34 (ERVKN)
ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ಇಸ್ರೇಲರಿಗೆ ಕೊಟ್ಟ ಆಜ್ಞೆಗಳು ಇವೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34