ಯಾಜಕಕಾಂಡ 19 : 1 (ERVKN)
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ಯಾಜಕಕಾಂಡ 19 : 2 (ERVKN)
“ಇಸ್ರೇಲರಿಗೆ ಹೀಗೆ ಹೇಳು: ನಾನೇ ನಿಮ್ಮ ದೇವರಾದ ಯೆಹೋವನು ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು!
ಯಾಜಕಕಾಂಡ 19 : 3 (ERVKN)
“ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ನನ್ನ ವಿಶ್ರಾಂತಿಯ ವಿಶೇಷ ದಿನಗಳನ್ನು ಆಚರಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 4 (ERVKN)
“ವಿಗ್ರಹಾರಾಧನೆ ಮಾಡಬೇಡಿರಿ! ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 5 (ERVKN)
“ನೀವು ಸಮಾಧಾನ ಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ, ನೀವು ಅಂಗೀಕೃತರಾಗುವಂತೆ ಅವುಗಳನ್ನು ಅರ್ಪಿಸಬೇಕು.
ಯಾಜಕಕಾಂಡ 19 : 6 (ERVKN)
ನೀವು ಅರ್ಪಿಸಿದ ದಿನದಲ್ಲಿ ಅಥವಾ ಮರುದಿನದಲ್ಲಿ ಅದನ್ನು ತಿನ್ನಬಹುದು. ಆದರೆ ಆ ಯಜ್ಞದಲ್ಲಿ ಏನಾದರೂ ಮೂರನೆಯ ದಿನದವರೆಗೆ ಉಳಿದರೆ, ನೀವು ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
ಯಾಜಕಕಾಂಡ 19 : 7 (ERVKN)
ಅದರಲ್ಲಿ ಯಾವುದನ್ನಾದರೂ ಮೂರನೆಯ ದಿನದಲ್ಲಿ ತಿಂದರೆ, ಅದು ಅಪವಿತ್ರವಾಗುವುದು. ಅದು ಅಂಗೀಕೃತವಾಗುವುದಿಲ್ಲ.
ಯಾಜಕಕಾಂಡ 19 : 8 (ERVKN)
ಒಬ್ಬನು ಅದನ್ನು ಮೂರನೆಯ ದಿನದಲ್ಲಿ ತಿಂದರೆ ಅವನು ಪಾಪಮಾಡಿದ ದೋಷಿಯಾಗಿರುವನು. ಯಾಕೆಂದರೆ ಯೆಹೋವನಿಗೆ ಮೀಸಲಾದ ಪವಿತ್ರ ವಸ್ತುಗಳ ವಿಷಯದಲ್ಲಿ ಅವನಿಗೆ ಗೌರವವಿಲ್ಲ; ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು.
ಯಾಜಕಕಾಂಡ 19 : 9 (ERVKN)
“ಸುಗ್ಗಿಕಾಲದಲ್ಲಿ ನಿಮ್ಮ ಬೆಳೆಯನ್ನು ಕೊಯ್ಯುವಾಗ, ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬೇಡಿರಿ; ಧಾನ್ಯವೇನಾದರೂ ನೆಲದ ಮೇಲೆ ಬಿದ್ದರೆ ಅದನ್ನು ಕೂಡಿಸಿಕೊಳ್ಳಬಾರದು.
ಯಾಜಕಕಾಂಡ 19 : 10 (ERVKN)
ನಿಮ್ಮ ದ್ರಾಕ್ಷಿತೋಟಗಳಲ್ಲಿರುವ ದ್ರಾಕ್ಷಿಗಳನ್ನೆಲ್ಲಾ ತೆಗೆದುಕೊಳ್ಳಬೇಡಿರಿ: ನೆಲದ ಮೇಲೆ ಬೀಳುವ ದ್ರಾಕ್ಷಿಹಣ್ಣುಗಳನ್ನು ಹೆಕ್ಕಿಕೊಳ್ಳಬಾರದು. ಯಾಕೆಂದರೆ ನೀವು ಅವುಗಳನ್ನು ಬಡವರಿಗಾಗಿಯೂ ನಿಮ್ಮ ದೇಶದಲ್ಲಿ ವಾಸಿಸಲು ಬಂದ ಪರದೇಶಸ್ಥರಿಗಾಗಿಯೂ ಬಿಡಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 11 (ERVKN)
“ನೀವು ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು.
ಯಾಜಕಕಾಂಡ 19 : 12 (ERVKN)
ನೀವು ನನ್ನ ಹೆಸರನ್ನು ಉಪಯೋಗಿಸಿ ಸುಳ್ಳಾಣೆ ಇಟ್ಟುಕೊಳ್ಳಬಾರದು; ಇಲ್ಲವಾದರೆ ನೀವು ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುವಿರಿ; ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 13 (ERVKN)
“ನಿಮ್ಮ ನೆರೆಯವನಿಗೆ ಕೆಡುಕುಗಳನ್ನು ಮಾಡಬಾರದು. ನೀವು ಅವನನ್ನು ಸುಲಿಗೆ ಮಾಡಬಾರದು. ನಿಮ್ಮ ಕೂಲಿಯವರ ಕೂಲಿಯನ್ನು ಮರುದಿನದ ಮುಂಜಾನೆಯವರೆಗೆ ಹಿಡಿದಿಟ್ಟುಕೊಳ್ಳಬಾರದು.
ಯಾಜಕಕಾಂಡ 19 : 14 (ERVKN)
“ನೀವು ಕಿವುಡನನ್ನು ಶಪಿಸಬಾರದು. ಕುರುಡನು ಬೀಳುವಂತೆ ನೀವು ಅವನ ಮುಂದೆ ಅಡ್ಡವಾಗಿ ಏನನ್ನೂ ಇಡಬಾರದು. ಆದರೆ ನೀವು ನಿಮ್ಮ ದೇವರನ್ನು ಸನ್ಮಾನಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು.
ಯಾಜಕಕಾಂಡ 19 : 15 (ERVKN)
“ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ.
ಯಾಜಕಕಾಂಡ 19 : 16 (ERVKN)
“ಬೇರೆ ಜನರ ವಿರುದ್ಧ ಚಾಡಿ ಹೇಳಬಾರದು. ನಿಮ್ಮ ನೆರೆಯವನ ಪ್ರಾಣವನ್ನು ಅಪಾಯಕ್ಕೆ ಈಡುಮಾಡುವ ಯಾವ ಕಾರ್ಯವನ್ನೂ ನೀವು ಮಾಡಬಾರದು. ನಾನೇ ಯೆಹೋವನು!
ಯಾಜಕಕಾಂಡ 19 : 17 (ERVKN)
“ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು.
ಯಾಜಕಕಾಂಡ 19 : 18 (ERVKN)
“ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!
ಯಾಜಕಕಾಂಡ 19 : 19 (ERVKN)
“ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಬೇಕು. ಎರಡು ಬೇರೆ ಜಾತಿಯ ಪಶುಗಳನ್ನು ಒಟ್ಟಿಗೆ ಸೇರಿಸಿ ಈಯಿಸಬಾರದು. ನಿಮ್ಮ ಹೊಲಗಳಲ್ಲಿ ಎರಡು ವಿಧದ ಬೀಜಗಳನ್ನು ಬಿತ್ತಬಾರದು. ಎರಡು ವಿಧದ ದಾರಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳಬಾರದು.
ಯಾಜಕಕಾಂಡ 19 : 20 (ERVKN)
“ಇನ್ನೊಬ್ಬನ ದಾಸಿಯಾಗಿರುವ ಸ್ತ್ರೀಯೊಡನೆ ಒಬ್ಬನು ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ, ಈ ದಾಸಿಯು ಹಣದಿಂದಾಗಲಿ ಉಚಿತವಾಗಿಯಾಗಲಿ ಬಿಡುಗಡೆಯಾಗಲು ಸಾಧ್ಯವಿಲ್ಲದಿದ್ದರೆ ಅವರಿಬ್ಬರಿಗೆ ಶಿಕ್ಷೆ ವಿಧಿಸಬೇಕು. ಆದರೆ ಅವರಿಗೆ ಮರಣ ಶಿಕ್ಷೆಯಾಗಬಾರದು. ಯಾಕೆಂದರೆ ಸ್ತ್ರೀಯು ಸ್ವತಂತ್ರಳಾಗಿಲ್ಲ.
ಯಾಜಕಕಾಂಡ 19 : 21 (ERVKN)
ಪುರುಷನು ತನ್ನ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಟಗರನ್ನು ಯೆಹೋವನ ಬಳಿಗೆ ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಟಗರನ್ನು ತರಬೇಕು.
ಯಾಜಕಕಾಂಡ 19 : 22 (ERVKN)
ಯಾಜಕನು ಅವನನ್ನು ಶುದ್ಧಿಮಾಡುವ ಕಾರ್ಯಗಳನ್ನು ಮಾಡುವನು. ಯಾಜಕನು ಯೆಹೋವನ ಸನ್ನಿಧಿಯಲ್ಲಿ ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅದು ಆ ಪುರುಷನು ಮಾಡಿದ ಪಾಪಗಳ ಪರಿಹಾರಕ್ಕಾಗಿರುವುದು. ಆಗ ಅವನಿಗೆ ಕ್ಷಮಾಪಣೆಯಾಗುವುದು.
ಯಾಜಕಕಾಂಡ 19 : 23 (ERVKN)
“ಮುಂದೆ ನೀವು ನಿಮ್ಮ ದೇಶವನ್ನು ಪ್ರವೇಶಿಸುವಿರಿ. ಆ ಸಮಯದ ಆಹಾರಕ್ಕಾಗಿ ಅನೇಕ ವಿಧಗಳ ಮರಗಳನ್ನು ನೆಡುವಿರಿ. ಸಸಿಯನ್ನು ನೆಟ್ಟನಂತರ, ನೀವು ಆ ಮರದಿಂದ ಹಣ್ಣನ್ನು ಉಪಯೋಗಿಸುವುದಕ್ಕೆ ಮೂರು ವರ್ಷಗಳು ಕಾಯಬೇಕು. ನೀವು ಆ ಹಣ್ಣನ್ನು ಉಪಯೋಗಿಸಬಾರದು.
ಯಾಜಕಕಾಂಡ 19 : 24 (ERVKN)
ನಾಲ್ಕನೆಯ ವರ್ಷದಲ್ಲಿ ಆ ಮರದ ಹಣ್ಣು ಯೆಹೋವನದಾಗುವುದು. ಅದು ಯೆಹೋವನ ಸ್ತುತಿಗೆ ಅರ್ಪಿತವಾಗುವ ಪವಿತ್ರ ಕಾಣಿಕೆಯಾಗಿರುವುದು.
ಯಾಜಕಕಾಂಡ 19 : 25 (ERVKN)
ಬಳಿಕ ಐದನೆಯ ವರ್ಷದಲ್ಲಿ, ನೀವು ಆ ಮರದ ಹಣ್ಣನ್ನು ತಿನ್ನಬಹುದು ಮತ್ತು ಮರವು ನಿಮಗೆ ಹೆಚ್ಚೆಚ್ಚಾಗಿ ಹಣ್ಣನ್ನು ನೀಡುವುದು. ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 26 (ERVKN)
“ರಕ್ತಸಹಿತವಾದ ಮಾಂಸವನ್ನು ನೀವು ತಿನ್ನಬಾರದು. “ನೀವು ಕಣಿ ಹೇಳಬಾರದು; ಮಂತ್ರತಂತ್ರಗಳನ್ನು ಮಾಡಬಾರದು.
ಯಾಜಕಕಾಂಡ 19 : 27 (ERVKN)
“ನಿಮ್ಮ ಮುಖದ ಪಾರ್ಶ್ವದಲ್ಲಿ ಬೆಳೆಯುವ ಕೂದಲನ್ನು ನೀವು ಕತ್ತರಿಸಬಾರದು. ನಿಮ್ಮ ಮುಖದ ಪಾರ್ಶ್ವದಲ್ಲಿರುವ ಗಡ್ಡವನ್ನು ಕತ್ತರಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ಗಡ್ಡವನ್ನು ವಿಕಾರ ಮಾಡಿಕೊಳ್ಳಬಾರದು.
ಯಾಜಕಕಾಂಡ 19 : 28 (ERVKN)
ಸತ್ತವರನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಿಮ್ಮ ದೇಹವನ್ನು ಗಾಯ ಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನೇ ಯೆಹೋವನು!
ಯಾಜಕಕಾಂಡ 19 : 29 (ERVKN)
“ಮಗಳನ್ನು ಸೂಳೆಯನ್ನಾಗಿ ಮಾಡಬಾರದು. ಇದರಿಂದ ಸೂಳೆಗಾರಿಕೆ ಹೆಚ್ಚಾಗುತ್ತದೆ. ನಿಮ್ಮ ದೇಶದಲ್ಲಿ ಸೂಳೆಗಾರಿಕೆ ಇರದಂತೆ ನೋಡಿಕೊಳ್ಳಿರಿ. ಇಂಥ ಪಾಪದಿಂದ ನಿಮ್ಮ ದೇಶವು ತುಂಬಿಹೋಗಲು ಬಿಡಬೇಡಿರಿ.
ಯಾಜಕಕಾಂಡ 19 : 30 (ERVKN)
“ನೀವು ನನ್ನ ಸಬ್ಬತ್ ದಿನಗಳನ್ನು ಅನುಸರಿಸಬೇಕು. ನನ್ನ ವಿಶ್ರಾಂತಿಯ ವಿಶೇಷ ದಿನಗಳಲ್ಲಿ ನೀವು ಕೆಲಸ ಮಾಡಬಾರದು. ನೀವು ನನ್ನ ಪವಿತ್ರಸ್ಥಳವನ್ನು ಗೌರವಿಸಬೇಕು. ನಾನೇ ಯೆಹೋವನು!
ಯಾಜಕಕಾಂಡ 19 : 31 (ERVKN)
ಸಲಹೆಗಾಗಿ, ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗಬೇಡಿರಿ. ಅವರು ನಿಮ್ಮನ್ನು ಕೇವಲ ಅಶುದ್ಧರನ್ನಾಗಿ ಮಾಡುವರು. ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 32 (ERVKN)
“ವೃದ್ಧರ ಮುಂದೆ ಎದ್ದು ನಿಂತುಕೊಳ್ಳಿರಿ. ಹಿರಿಯರಿಗೆ ಗೌರವಕೊಡಿರಿ. ನಿಮ್ಮ ದೇವರನ್ನು ಸನ್ಮಾನಿಸಿರಿ. ನಾನೇ ಯೆಹೋವನು!
ಯಾಜಕಕಾಂಡ 19 : 33 (ERVKN)
ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಗೆ ಕೆಟ್ಟದ್ದನ್ನು ಮಾಡಬೇಡಿರಿ.
ಯಾಜಕಕಾಂಡ 19 : 34 (ERVKN)
ನಿಮ್ಮ ಸ್ವಂತ ದೇಶದವರೊಡನೆ ವರ್ತಿಸುವ ಪ್ರಕಾರ ಪರದೇಶಸ್ಥರೊಡನೆ ವರ್ತಿಸಿರಿ. ನಿಮ್ಮನ್ನು ಪ್ರೀತಿಸುವಂತೆ ಪರದೇಶಸ್ಥರನ್ನು ಪ್ರೀತಿಸಿರಿ. ಯಾಕೆಂದರೆ ನೀವು ಸಹ ಒಂದು ಕಾಲದಲ್ಲಿ ಈಜಿಪ್ಟಿನಲ್ಲಿದ್ದಾಗ ಪರದೇಶಸ್ಥರಾಗಿದ್ದಿರಿ. ನಾನೇ ನಿಮ್ಮ ದೇವರಾದ ಯೆಹೋವನು!
ಯಾಜಕಕಾಂಡ 19 : 35 (ERVKN)
“ನೀವು ಜನರಿಗೆ ತೀರ್ಪುಮಾಡುವಾಗ ನ್ಯಾಯವಾಗಿ ತೀರ್ಪುಮಾಡಬೇಕು. ನೀವು ಅಳೆಯುವಾಗ ಮತ್ತು ತೂಕಮಾಡುವಾಗ ನ್ಯಾಯವಾಗಿ ನಡೆದುಕೊಳ್ಳಬೇಕು.
ಯಾಜಕಕಾಂಡ 19 : 36 (ERVKN)
ನಿಮ್ಮ ಪುಟ್ಟಿಗಳು ಸರಿಯಾದ ಪ್ರಮಾಣದ್ದಾಗಿರಬೇಕು. ನಿಮ್ಮ ಕೊಳಗಗಳು ದ್ರವಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಹಿಡಿಸಿಕೊಳ್ಳುವಂತವುಗಳಾಗಿರಬೇಕು. ನಿಮ್ಮ ತೂಕದ ಕಲ್ಲುಗಳು ಮತ್ತು ತಕ್ಕಡಿಗಳು ವಸ್ತುಗಳನ್ನು ಸರಿಯಾಗಿ ತೂಕ ಮಾಡುವಂಥವುಗಳಾಗಿರಬೇಕು. ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರತಂದೆನು.
ಯಾಜಕಕಾಂಡ 19 : 37 (ERVKN)
“ನೀವು ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಬೇಕು; ಅವುಗಳಿಗೆ ವಿಧೇಯರಾಗಬೇಕು. ನಾನೇ ಯೆಹೋವನು.” ವಿಗ್ರಹಾರಾಧನೆಯ ಕುರಿತು ಎಚ್ಚರಿಕೆ

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37

BG:

Opacity:

Color:


Size:


Font: