ನ್ಯಾಯಸ್ಥಾಪಕರು 2 : 1 (ERVKN)
{ಬೋಕೀಮಿನಲ್ಲಿ ಯೆಹೋವನ ದೂತನು} [PS] ಯೆಹೋವನ ದೂತನು ಗಿಲ್ಗಾಲ್ ನಗರದಿಂದ ಬೋಕೀಮ್ ನಗರದವರೆಗೆ ಹೋದನು. ಆ ದೂತನು ಇಸ್ರೇಲರಿಗೆ ಯೆಹೋವನ ಒಂದು ಸಂದೇಶವನ್ನು ತಿಳಿಸಿದನು. ಆ ಸಂದೇಶವು ಹೀಗೆದೆ: “ನಾನು ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ಹೊರಗೆತಂದೆ. ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರದೇಶಕ್ಕೆ ನಿಮ್ಮನ್ನು ಕರೆದುಕೊಂಡು ಬಂದೆನು. ‘ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದಿಗೂ ಮುರಿಯುವುದಿಲ್ಲ.
ನ್ಯಾಯಸ್ಥಾಪಕರು 2 : 2 (ERVKN)
ಆದರೆ ಅದಕ್ಕೆ ಪ್ರತಿಯಾಗಿ ನೀವು ಈ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನಗಳೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬಾರದು. ಅವರ ಯಜ್ಞವೇದಿಕೆಗಳನ್ನು ನಾಶಮಾಡಬೇಕು’ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನೀವು ನನಗೆ ವಿಧೇಯರಾಗಲಿಲ್ಲ. [PE][PS]
ನ್ಯಾಯಸ್ಥಾಪಕರು 2 : 3 (ERVKN)
“ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ‘ಈ ಪ್ರದೇಶವನ್ನು ಬಿಟ್ಟುಹೋಗುವಂತೆ ನಾನು ಈ ಜನರನ್ನು ಬಲವಂತ ಮಾಡುವುದಿಲ್ಲ. ಈ ಜನರು ನಿಮಗೊಂದು ಸಮಸ್ಯೆಯಾಗುತ್ತಾರೆ. ಅವರು ನಿಮಗೊಂದು ಉರುಲಾಗುತ್ತಾರೆ. ಅವರ ಸುಳ್ಳುದೇವರುಗಳು ನಿಮಗೆ ಬಲೆಯಂತೆ ಉರುಲಾಗುತ್ತವೆ.’ ” [PE][PS]
ನ್ಯಾಯಸ್ಥಾಪಕರು 2 : 4 (ERVKN)
ದೂತನು ಜನರಿಗೆ ಯೆಹೋವನ ಈ ಸಂದೇಶವನ್ನು ಕೊಟ್ಟ ಮೇಲೆ ಜನರು ಗಟ್ಟಿಯಾಗಿ ಅತ್ತರು.
ನ್ಯಾಯಸ್ಥಾಪಕರು 2 : 5 (ERVKN)
ಆದ್ದರಿಂದ ಇಸ್ರೇಲರು ತಾವು ಗೋಳಾಡಿದ ಸ್ಥಳಕ್ಕೆ ಬೋಕೀಮ್ ಎಂದು ಕರೆದರು. ಬೋಕೀಮಿನಲ್ಲಿ ಇಸ್ರೇಲರು ಯೆಹೋವನಿಗೋಸ್ಕರ ಯಜ್ಞ ಮಾಡಿದರು. [PS]
ನ್ಯಾಯಸ್ಥಾಪಕರು 2 : 6 (ERVKN)
{ಅವಿಧೇಯತೆ ಮತ್ತು ಸೋಲು} [PS] ಯೆಹೋಶುವನು ಜನರನ್ನು ತಮ್ಮ ಮನೆಗಳಿಗೆ ಹೋಗಲು ಹೇಳಿದನು. ಪ್ರತಿಯೊಂದು ಕುಲದವರು ವಾಸಮಾಡಲು ತಮ್ಮತಮ್ಮ ಪ್ರದೇಶಕ್ಕೆ ಹೋದರು.
ನ್ಯಾಯಸ್ಥಾಪಕರು 2 : 7 (ERVKN)
ಯೆಹೋಶುವನು ಜೀವಂತವಿರುವವರೆಗೆ ಇಸ್ರೇಲರು ಯೆಹೋವನನ್ನು ಸೇವಿಸಿದರು. ಯೆಹೋಶುವನ ಮರಣಾನಂತರ ಬದುಕಿದ್ದ ಹಿರಿಯರ ಜೀವಮಾನದಲ್ಲಿಯೂ ಇಸ್ರೇಲರು ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ಈ ಹಿರಿಯರು ಇಸ್ರೇಲರಿಗಾಗಿ ಯೆಹೋವನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನೋಡಿದ್ದರು.
ನ್ಯಾಯಸ್ಥಾಪಕರು 2 : 8 (ERVKN)
ನೂನನ ಮಗನಾದ ಮತ್ತು ಯೆಹೋವನ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಬದುಕಿ ಮರಣ ಹೊಂದಿದನು.
ನ್ಯಾಯಸ್ಥಾಪಕರು 2 : 9 (ERVKN)
ಇಸ್ರೇಲರು ಯೆಹೋಶುವನನ್ನು ಅವನ ಸ್ವಾಸ್ತ್ಯ ಭೂಮಿಯಲ್ಲಿ ಸಮಾಧಿ ಮಾಡಿದರು. ಅದು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿ ತಿಮ್ನತ್ ಹೆರೆಸಿನಲ್ಲಿತ್ತು. [PE][PS]
ನ್ಯಾಯಸ್ಥಾಪಕರು 2 : 10 (ERVKN)
ಈ ಪೀಳಿಗೆಯವರೆಲ್ಲರು ಸತ್ತುಹೋದ ಮೇಲೆ ಮುಂದಿನ ಪೀಳಿಗೆಯು ಬೆಳೆಯಿತು. ಈ ಹೊಸ ಪೀಳಿಗೆಗೆ ಯೆಹೋವನ ಬಗ್ಗೆ ಮತ್ತು ಯೆಹೋವನು ಇಸ್ರೇಲಿನ ಜನರಿಗಾಗಿ ಮಾಡಿದ ಮಹತ್ಕಾರ್ಯಗಳ ಬಗ್ಗೆ ಏನೂ ಗೊತ್ತಿರಲಿಲ್ಲ.
ನ್ಯಾಯಸ್ಥಾಪಕರು 2 : 11 (ERVKN)
ಇಸ್ರೇಲಿನ ಜನರು ದುಷ್ಕೃತ್ಯಗಳನ್ನು ಮಾಡಿದರು ಮತ್ತು ಸುಳ್ಳುದೇವರಾದ ಬಾಳನ ಸೇವೆ ಮಾಡಿದರು. ಯೆಹೋವನು ಇಸ್ರೇಲರ ಈ ದುಷ್ಕೃತ್ಯಗಳನ್ನು ನೋಡಿದನು.
ನ್ಯಾಯಸ್ಥಾಪಕರು 2 : 12 (ERVKN)
ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಿದ್ದನು. ಅವರ ಪೂರ್ವಿಕರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಇಸ್ರೇಲರು ಯೆಹೋವನನ್ನು ಅನುಸರಿಸದೆ ತಮ್ಮ ಸುತ್ತಮುತ್ತಲಿನ ಜನರ ಸುಳ್ಳುದೇವರುಗಳನ್ನು ಪೂಜಿಸಲು ಆರಂಭಿಸಿದರು. ಆದ್ದರಿಂದ ಯೆಹೋವನಿಗೆ ಕೋಪ ಬಂತು.
ನ್ಯಾಯಸ್ಥಾಪಕರು 2 : 13 (ERVKN)
ಇಸ್ರೇಲರು ಯೆಹೋವನನ್ನು ಅನುಸರಿಸದೆ ಬಾಳ್ ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ಪೂಜಿಸತೊಡಗಿದರು. [PE][PS]
ನ್ಯಾಯಸ್ಥಾಪಕರು 2 : 14 (ERVKN)
ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಶತ್ರುಗಳು ಇಸ್ರೇಲರ ಮೇಲೆ ಧಾಳಿಮಾಡಿ ಅವರ ಸ್ವತ್ತನ್ನು ತೆಗೆದುಕೊಳ್ಳುವಂತೆ ಯೆಹೋವನು ಮಾಡಿದನು. ಸುತ್ತಮುತ್ತಲಿದ್ದ ಅವರ ಶತ್ರುಗಳು ಅವರನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರು ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗಲಿಲ್ಲ.
ನ್ಯಾಯಸ್ಥಾಪಕರು 2 : 15 (ERVKN)
ಇಸ್ರೇಲರು ಯುದ್ಧಕ್ಕೆ ಹೋದಾಗಲೆಲ್ಲಾ ಸೋಲನ್ನನುಭವಿಸಿದರು; ಏಕೆಂದರೆ ಯೆಹೋವನು ಅವರ ಸಂಗಡವಿರಲಿಲ್ಲ. ಸುತ್ತಮುತ್ತಲಿನ ಜನರ ದೇವತೆಗಳನ್ನು ಪೂಜಿಸಿದರೆ ಸೋಲಾಗುವುದೆಂದು ಈಗಾಗಲೇ ಯೆಹೋವನು ಇಸ್ರೇಲರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದನು. ಇಸ್ರೇಲರು ಹೆಚ್ಚಿನ ಕಷ್ಟನಷ್ಟಗಳನ್ನು ಅನುಭವಿಸಿದರು. [PE][PS]
ನ್ಯಾಯಸ್ಥಾಪಕರು 2 : 16 (ERVKN)
ಆಗ ಯೆಹೋವನು ನ್ಯಾಯಾಧೀಶರೆಂಬ ಕೆಲವು ನಾಯಕರನ್ನು ಆರಿಸಿದನು. ಈ ನಾಯಕರು ಇಸ್ರೇಲರನ್ನು ಅವರ ವೈರಿಗಳಿಂದ ಕಾಪಾಡಿದರು.
ನ್ಯಾಯಸ್ಥಾಪಕರು 2 : 17 (ERVKN)
ಆದರೆ ಇಸ್ರೇಲರು ನ್ಯಾಯಾಧೀಶರ ಮಾತನ್ನು ಕೇಳಲಿಲ್ಲ. ಅವರು ಯೆಹೋವನಿಗೆ ನಂಬಿಗಸ್ತರಾಗಿರದೆ ಬೇರೆಬೇರೆ ದೇವರುಗಳನ್ನು ಅನುಸರಿಸಿದರು. ಹಿಂದೆ ಇಸ್ರೇಲರ ಪೂರ್ವಿಕರು ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಆದರೆ ಈಗ ಇಸ್ರೇಲರು ಬದಲಾಗಿ ಯೆಹೋವನ ಆಜ್ಞಾಪಾಲನೆಯನ್ನು ನಿಲ್ಲಿಸಿಬಿಟ್ಟರು. [PE][PS]
ನ್ಯಾಯಸ್ಥಾಪಕರು 2 : 18 (ERVKN)
ಅನೇಕ ಸಲ ಶತ್ರುಗಳು ಇಸ್ರೇಲರಿಗೆ ತುಂಬ ಕಷ್ಟಗಳನ್ನು ಉಂಟು ಮಾಡುತ್ತಿದ್ದರು. ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಿದ್ದರು; ಪ್ರತಿಸಲವೂ ಯೆಹೋವನು ಅವರ ಗೋಳಾಟವನ್ನು ಕೇಳಿ ಮರುಕಪಡುತ್ತಿದ್ದನು. ಪ್ರತಿಸಲವೂ ಅವರನ್ನು ಶತ್ರುಗಳಿಂದ ರಕ್ಷಿಸಲು ಒಬ್ಬ ನ್ಯಾಯಾಧೀಶನನ್ನು ಕಳುಹಿಸಿ ಕೊಡುತ್ತಿದ್ದನು. ಯೆಹೋವನು ಆ ನ್ಯಾಯಾಧೀಶರ ಜೊತೆಯಲ್ಲಿಯೇ ಇರುತ್ತಿದ್ದನು. ಹೀಗಾಗಿ ಪ್ರತಿಸಲವೂ ಇಸ್ರೇಲರನ್ನು ಅವರ ಶತ್ರುಗಳಿಂದ ರಕ್ಷಿಸಲಾಯಿತು.
ನ್ಯಾಯಸ್ಥಾಪಕರು 2 : 19 (ERVKN)
ಆದರೆ ಪ್ರತಿಯೊಬ್ಬ ನ್ಯಾಯಾಧೀಶನು ಮರಣಹೊಂದಿದಾಗ ಇಸ್ರೇಲರು ಪುನಃ ಪಾಪ ಮಾಡುತ್ತಿದ್ದರು ಮತ್ತು ತಮ್ಮ ಪೂರ್ವಿಕರಿಗಿಂತಲೂ ಭ್ರಷ್ಠರಾಗಿ ಸುಳ್ಳುದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬೀಳಲಾರಂಭಿಸುತ್ತಿದ್ದರು. ಇಸ್ರೇಲರು ತುಂಬ ಮೊಂಡರಾಗಿದ್ದು ತಮ್ಮ ದುರ್ನಡತೆಗಳನ್ನು ಬಿಡಲು ಸಿದ್ಧರಾಗಿರಲಿಲ್ಲ. [PE][PS]
ನ್ಯಾಯಸ್ಥಾಪಕರು 2 : 20 (ERVKN)
ಹೀಗಾಗಿ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, “ಈ ಜನಾಂಗದವರು ಅವರ ಪೂರ್ವಿಕರ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದಿದ್ದಾರೆ. ಇವರು ನನ್ನ ಮಾತನ್ನು ಕೇಳಲಿಲ್ಲ.
ನ್ಯಾಯಸ್ಥಾಪಕರು 2 : 21 (ERVKN)
ಆದ್ದರಿಂದ ಇನ್ನುಮುಂದೆ ನಾನು ಬೇರೆ ಜನಾಂಗಗಳನ್ನು ಸೋಲಿಸಿ ಇಸ್ರೇಲರ ಮಾರ್ಗವನ್ನು ಸರಾಗಮಾಡುವುದಿಲ್ಲ. ಯೆಹೋಶುವನು ಮರಣ ಹೊಂದಿದಾಗ ಆ ಜನಾಂಗದವರು ಇನ್ನೂ ಈ ಪ್ರದೇಶದಲ್ಲಿದ್ದರು. ಈ ಪ್ರದೇಶದಲ್ಲಿ ವಾಸಿಸಲು ಆ ಜನಾಂಗಗಳಿಗೆ ಇನ್ನು ಮೇಲೆಯೂ ಆಸ್ಪದಕೊಡುತ್ತೇನೆ.
ನ್ಯಾಯಸ್ಥಾಪಕರು 2 : 22 (ERVKN)
ಇಸ್ರೇಲರು ತಮ್ಮ ಪೂರ್ವಿಕರಂತೆ ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಾರೆಯೇ ಎಂಬುದನ್ನು ನಾನು ಆ ಜನಾಂಗಗಳ ಮೂಲಕ ಪರೀಕ್ಷಿಸಿ ನೋಡುತ್ತೇನೆ” ಎಂದನು.
ನ್ಯಾಯಸ್ಥಾಪಕರು 2 : 23 (ERVKN)
ಯೆಹೋವನು ಆ ಜನಾಂಗಗಳನ್ನು ಆ ಪ್ರದೇಶದಲ್ಲಿ ಇರುವುದಕ್ಕೆ ಬಿಟ್ಟನು. ಆ ಜನಾಂಗಗಳು ಈ ದೇಶವನ್ನು ಬಿಟ್ಟು ಹೋಗುವಂತೆ ಯೆಹೋವನು ಒತ್ತಾಯ ಪಡಿಸಲಿಲ್ಲ. ಅವರನ್ನು ಸೋಲಿಸಲು ಯೆಹೋಶುವನ ಸೈನ್ಯಕ್ಕೆ ಸಹಾಯ ಮಾಡಲಿಲ್ಲ. [PE]
❮
❯