ನ್ಯಾಯಸ್ಥಾಪಕರು 13 : 1 (ERVKN)
ಸಂಸೋನನ ಜನನ ಇಸ್ರೇಲರು ಮತ್ತೆ ಯೆಹೋವನಿಗೆ ವಿರೋಧವಾಗಿ ದುಷ್ಕೃತ್ಯಗಳನ್ನು ಮಾಡಿದರು. ಆದ್ದರಿಂದ ಫಿಲಿಷ್ಟಿಯರು ನಲವತ್ತು ವರ್ಷ ಅವರನ್ನು ಆಳುವಂತೆ ಯೆಹೋವನು ಮಾಡಿದನು.
ನ್ಯಾಯಸ್ಥಾಪಕರು 13 : 2 (ERVKN)
ಚೊರ್ಗಾ ನಗರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಮಾನೋಹ, ಅವನು ದಾನ್ ಕುಲದವನಾಗಿದ್ದನು. ಮಾನೋಹನಿಗೆ ಒಬ್ಬ ಹೆಂಡತಿಯಿದ್ದಳು. ಆದರೆ ಅವಳು ಬಂಜೆಯಾಗಿದ್ದಳು.
ನ್ಯಾಯಸ್ಥಾಪಕರು 13 : 3 (ERVKN)
ಒಮ್ಮೆ ಯೆಹೋವನ ದೂತನು ಮಾನೋಹನ ಹೆಂಡತಿಗೆ ಪ್ರತ್ಯಕ್ಷನಾಗಿ, “ನೀನು ಮಕ್ಕಳನ್ನು ಪಡೆಯಲು ಸಾಧ್ಯವಾಗಿಲ್ಲ; ಆದರೆ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ.
ನ್ಯಾಯಸ್ಥಾಪಕರು 13 : 4 (ERVKN)
ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡಬೇಡ.
ನ್ಯಾಯಸ್ಥಾಪಕರು 13 : 5 (ERVKN)
ಏಕೆಂದರೆ ನೀನು ಗರ್ಭವತಿಯಾಗಿರುವೆ ಮತ್ತು ನಿನಗೊಬ್ಬ ಮಗನು ಹುಟ್ಟಲಿದ್ದಾನೆ. ಅವನು ಹುಟ್ಟಿದಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾಗಿದ್ದಾನೆ. ಆದ್ದರಿಂದ ಅವನ ಕೂದಲನ್ನು ಕತ್ತರಿಸಕೂಡದು. ಅವನು ಇಸ್ರೇಲರನ್ನು ಫಿಲಿಷ್ಟಿಯರ ಹಿಡಿತದಿಂದ ಬಿಡಿಸುವನು” ಎಂದು ಹೇಳಿದನು.
ನ್ಯಾಯಸ್ಥಾಪಕರು 13 : 6 (ERVKN)
ಆಗ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷನು ನನ್ನಲ್ಲಿಗೆ ಬಂದನು. ಅವನು ದೇವರಿಂದ ಬಂದ ದೇವದೂತನಂತೆ ಕಂಡನು. ನನಗೆ ಭಯವಾಯಿತು. ನಾನು ಅವನಿಗೆ, ‘ನೀನು ಎಲ್ಲಿಂದ ಬಂದೆ?’ ಎಂದು ಕೇಳಲಿಲ್ಲ; ಅವನೂ ನನಗೆ ತನ್ನ ಹೆಸರನ್ನು ಹೇಳಲಿಲ್ಲ.
ನ್ಯಾಯಸ್ಥಾಪಕರು 13 : 7 (ERVKN)
ಆದರೆ ಅವನು ನನಗೆ, ‘ನೀನು ಗರ್ಭವತಿಯಾಗಿರುವೆ; ನಿನಗೊಬ್ಬ ಮಗನು ಹುಟ್ಟುತ್ತಾನೆ. ನೀನು ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ. ಯಾವ ನಿಷಿದ್ಧ ಆಹಾರವನ್ನೂ ತಿನ್ನಬೇಡ. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಸಾಯುವವರೆಗೂ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು’ ” ಅಂದಳು.
ನ್ಯಾಯಸ್ಥಾಪಕರು 13 : 8 (ERVKN)
ಆಗ ಮಾನೋಹನು ಯೆಹೋವನಿಗೆ, “ಸ್ವಾಮೀ, ಆ ದೇವಪುರುಷನನ್ನು ನಮ್ಮಲ್ಲಿಗೆ ಇನ್ನೊಮ್ಮೆ ದಯವಿಟ್ಟು ಕಳುಹಿಸೆಂದು ಬೇಡಿಕೊಳ್ಳುತ್ತೇವೆ. ಹುಟ್ಟಿಲಿರುವ ಮಗನಿಗಾಗಿ ನಾವು ಮಾಡಬೇಕಾದದ್ದನ್ನು ಅವನು ನಮಗೆ ತಿಳಿಸಲಿ” ಎಂದು ಬೇಡಿಕೊಂಡನು.
ನ್ಯಾಯಸ್ಥಾಪಕರು 13 : 9 (ERVKN)
ದೇವರು ಮಾನೋಹನ ಪ್ರಾರ್ಥನೆಯನ್ನು ಕೇಳಿದನು. ದೇವದೂತನು ಮತ್ತೊಮ್ಮೆ ಆ ಸ್ತ್ರೀಯ ಬಳಿಗೆ ಬಂದನು. ಆಗ ಅವಳು ಹೊಲದಲ್ಲಿ ಕುಳಿತಿದ್ದಳು; ಅವಳ ಗಂಡ ಅಲ್ಲಿರಲಿಲ್ಲ.
ನ್ಯಾಯಸ್ಥಾಪಕರು 13 : 10 (ERVKN)
ಆ ಸ್ತ್ರೀಯು ಓಡಿಹೋಗಿ ತನ್ನ ಗಂಡನಿಗೆ, “ಆ ಮನುಷ್ಯನು ತಿರುಗಿ ಬಂದಿದ್ದಾನೆ, ಆ ದಿನ ನನ್ನಲ್ಲಿಗೆ ಬಂದ ಮನುಷ್ಯನು ಈಗ ಇಲ್ಲಿದ್ದಾನೆ” ಅಂದಳು.
ನ್ಯಾಯಸ್ಥಾಪಕರು 13 : 11 (ERVKN)
ಮಾನೋಹನು ಎದ್ದು ತನ್ನ ಹೆಂಡತಿಯನ್ನು ಹಿಂಬಾಲಿಸಿದನು. ಅವನು ಆ ಮನುಷ್ಯನ ಹತ್ತಿರ ಬಂದಾಗ, “ನನ್ನ ಹೆಂಡತಿಯ ಜೊತೆಗೆ ಹಿಂದೆ ಮಾತನಾಡಿದ ಮನುಷ್ಯನು ನೀನೋ?” ಎಂದು ಕೇಳಿದನು. ಆ ದೇವದೂತನು, “ಹೌದು, ನಾನೇ” ಅಂದನು.
ನ್ಯಾಯಸ್ಥಾಪಕರು 13 : 12 (ERVKN)
ಮಾನೋಹನು, “ನೀನು ಹೇಳಿದ್ದು ನೆರವೇರುವುದೆಂದು ನಾನು ನಂಬುತ್ತೇನೆ. ಆ ಮಗುವಿಗೋಸ್ಕರ ನಾವು ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು” ಎಂದು ಕೇಳಿದನು.
ನ್ಯಾಯಸ್ಥಾಪಕರು 13 : 13 (ERVKN)
ಯೆಹೋವನ ದೂತನು ಮಾನೋಹನಿಗೆ, “ನಿನ್ನ ಹೆಂಡತಿಯು ನಾನು ಹೇಳಿದ್ದೆಲ್ಲವನ್ನು ಮಾಡಬೇಕು. ಅವಳು ದ್ರಾಕ್ಷಾಫಲಗಳನ್ನು ತಿನ್ನಬಾರದು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬಾರದು.
ನ್ಯಾಯಸ್ಥಾಪಕರು 13 : 14 (ERVKN)
ಅವಳು ನಿಷಿದ್ಧವಾದ ಯಾವ ಆಹಾರವನ್ನೂ ತಿನ್ನಬಾರದು. ಹೀಗೆ ನಾನು ಅವಳಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಬೇಕು” ಎಂದು ಹೇಳಿದನು.
ನ್ಯಾಯಸ್ಥಾಪಕರು 13 : 15 (ERVKN)
ಆಗ ಮಾನೋಹನು ಯೆಹೋವನ ದೂತನಿಗೆ, “ನೀನು ಸ್ವಲ್ಪಹೊತ್ತು ಇಲ್ಲಿಯೇ ಇರಬೇಕೆಂಬುದು ನಮ್ಮ ಇಚ್ಛೆ. ನಾವು ನಿನ್ನ ಊಟಕ್ಕಾಗಿ ಒಂದು ಮರಿಹೋತವನ್ನು ಬೇಯಿಸಿ ಬಡಿಸುತ್ತೇವೆ” ಎಂದನು.
ನ್ಯಾಯಸ್ಥಾಪಕರು 13 : 16 (ERVKN)
ಆಗ ಯೆಹೋವನ ದೂತನು ಮಾನೋಹನಿಗೆ, “ನೀನು ನನ್ನನ್ನು ಹೋಗದಂತೆ ನಿಲ್ಲಿಸಿಕೊಂಡರೂ ಸಹ ನಾನು ನಿಮ್ಮ ಆಹಾರವನ್ನು ಊಟ ಮಾಡುವುದಿಲ್ಲ. ಏನಾದರೂ ಕೊಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸು” ಅಂದನು. (ಅವನು ಯೆಹೋವನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.)
ನ್ಯಾಯಸ್ಥಾಪಕರು 13 : 17 (ERVKN)
ಆದ್ದರಿಂದ ಮಾನೋಹನು ಯೆಹೋವನ ದೂತನಿಗೆ, “ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ. ನಿನ್ನ ಹೆಸರೇನು?” ಎಂದು ಕೇಳಿದನು.
ನ್ಯಾಯಸ್ಥಾಪಕರು 13 : 18 (ERVKN)
ಯೆಹೋವನ ದೂತನು, “ನೀನು ನನ್ನ ಹೆಸರನ್ನು ಏಕೆ ಕೇಳುವೆ? ಅದು ನೀನು ನಂಬಲಾರದಷ್ಟು ಆಶ್ಚರ್ಯಕರವಾದದ್ದು” ಅಂದನು.
ನ್ಯಾಯಸ್ಥಾಪಕರು 13 : 19 (ERVKN)
ಮಾನೋಹನು ಒಂದು ಮರಿಹೋತವನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು.
ನ್ಯಾಯಸ್ಥಾಪಕರು 13 : 20 (ERVKN)
ಮಾನೋಹ ಮತ್ತು ಅವನ ಹೆಂಡತಿಯ ಕಣ್ಣೆದುರಿನಲ್ಲಿಯೇ ಯಜ್ಞವೇದಿಕೆಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿಜ್ವಾಲೆಯಲ್ಲಿ ಆ ಯೆಹೋವನ ದೂತನು ಆಕಾಶಕ್ಕೆ ಏರಿ ಹೋದನು. ಮಾನೋಹ ಮತ್ತು ಅವನ ಹೆಂಡತಿ ಅದನ್ನು ಕಂಡು ನೆಲದ ಮೇಲೆ ಅಡ್ಡಬಿದ್ದರು.
ನ್ಯಾಯಸ್ಥಾಪಕರು 13 : 21 (ERVKN)
ಆ ಮನುಷ್ಯನು ನಿಜವಾಗಿಯೂ ಯೆಹೋವನ ದೂತನೆಂದು ಕೊನೆಗೆ ಮಾನೋಹನು ಅರಿತುಕೊಂಡನು. ಯೆಹೋವನ ದೂತನು ಅವರಿಗೆ ಪುನಃ ಕಾಣಿಸಲಿಲ್ಲ.
ನ್ಯಾಯಸ್ಥಾಪಕರು 13 : 22 (ERVKN)
ನಂತರ ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಣ್ಣಾರೆ ಕಂಡೆವು, ಆದ್ದರಿಂದ ಖಂಡಿತವಾಗಿ ನಾವು ಸತ್ತುಹೋಗುತ್ತೇವೆ” ಅಂದನು.
ನ್ಯಾಯಸ್ಥಾಪಕರು 13 : 23 (ERVKN)
ಆದರೆ ಅವನ ಹೆಂಡತಿಯು ಅವನಿಗೆ, “ಯೆಹೋವನು ನಮ್ಮನ್ನು ಕೊಲ್ಲಬಯಸುವುದಿಲ್ಲ. ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಆತನು ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ; ಇದನ್ನೆಲ್ಲ ನಮಗೆ ಹೇಳುತ್ತಿರಲಿಲ್ಲ” ಅಂದಳು.
ನ್ಯಾಯಸ್ಥಾಪಕರು 13 : 24 (ERVKN)
ಆ ಸ್ತ್ರೀಗೆ ಒಂದು ಗಂಡುಮಗು ಜನಿಸಿತು. ಅವಳು ಅದಕ್ಕೆ ಸಂಸೋನ ಎಂದು ಹೆಸರಿಟ್ಟಳು. ಸಂಸೋನನು ಬೆಳೆದು ದೊಡ್ಡವನಾದನು. ಯೆಹೋವನು ಅವನನ್ನು ಆಶೀರ್ವದಿಸಿದನು.
ನ್ಯಾಯಸ್ಥಾಪಕರು 13 : 25 (ERVKN)
ಅವನು ಮಾಹಾನೆಹದಾನ ನಗರದಲ್ಲಿದ್ದಾಗ ಯೆಹೋವನ ಆತ್ಮವು ಸಂಸೋನನನ್ನು ಪ್ರೇರೇಪಿಸತೊಡಗಿತು. ಈ ನಗರವು ಚೊರ್ಗ ಮತ್ತು ಎಷ್ಟಾವೋಲ್ ನಗರಗಳ ಮಧ್ಯದಲ್ಲಿದೆ.
❮
❯