ಯೆಹೋಶುವ 3 : 1 (ERVKN)
ಮರುದಿನ, ಬೆಳಗಿನ ಜಾವದಲ್ಲಿ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಎದ್ದು ಆಕಾಶಿಯದಿಂದ ಹೊರಟು ಜೋರ್ಡನ್ ನದಿಯವರೆಗೆ ಬಂದರು. ಅವರು ಜೋರ್ಡನ್ ನದಿಯನ್ನು ದಾಟುವ ಮೊದಲು ಅಲ್ಲಿ ಪಾಳೆಯ ಮಾಡಿಕೊಂಡರು.
ಯೆಹೋಶುವ 3 : 2 (ERVKN)
ಮೂರು ದಿನಗಳ ತರುವಾಯ ಜನನಾಯಕರು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ,
ಯೆಹೋಶುವ 3 : 3 (ERVKN)
“ಯಾಜಕರು ಮತ್ತು ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವುದನ್ನು ನೀವು ಕಾಣುವಾಗ ಅವರನ್ನು ಹಿಂಬಾಲಿಸಿರಿ.
ಯೆಹೋಶುವ 3 : 4 (ERVKN)
ನಿಮಗೂ ಒಡಂಬಡಿಕೆಯ ಪೆಟ್ಟಿಗೆಗೂ ಮೂರು ಸಾವಿರ ಅಡಿ ಅಂತರವಿರಲಿ. ಅದರ ಸಮೀಪ ನೀವು ಹೋಗಕೂಡದು. ಈ ದಾರಿಯಲ್ಲಿ ನೀವು ಹಿಂದೆಂದೂ ಪ್ರಯಾಣ ಮಾಡಿಲ್ಲ. ಆದರೆ ನೀವು ಅವರನ್ನು ಹಿಂಬಾಲಿಸಿದರೆ ಎಲ್ಲಿಗೆ ಹೋಗಬೇಕೆಂದು ನಿಮಗೆ ತಿಳಿಯುತ್ತದೆ” ಎಂದು ಸಾರಿದರು.
ಯೆಹೋಶುವ 3 : 5 (ERVKN)
“ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳಿರಿ. ನಾಳೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುತ್ತಾನೆ” ಎಂದು ಯೆಹೋಶುವನು ಜನರಿಗೆ ತಿಳಿಸಿದನು.
ಯೆಹೋಶುವ 3 : 6 (ERVKN)
ಬಳಿಕ ಯೆಹೋಶುವನು ಯಾಜಕರಿಗೆ, “ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜನಗಳ ಮುಂದೆ ನದಿಯ ಕಡೆಗೆ ನಡೆಯಿರಿ” ಎಂದನು. ಯಾಜಕರು ಪೆಟ್ಟಿಗೆಯನ್ನು ಹೊತ್ತುಕೊಂಡು ಜನರ ಮುಂದೆ ನಡೆದರು.
ಯೆಹೋಶುವ 3 : 7 (ERVKN)
ಆಗ ಯೆಹೋವನು ಯೆಹೋಶುವನಿಗೆ, “ನಾನು ನಿನ್ನನ್ನು ಇಂದಿನಿಂದ ಎಲ್ಲಾ ಇಸ್ರೇಲರ ಮುಂದೆ ಘನವಂತನನ್ನಾಗಿ ಮಾಡುವೆನು. ನಾನು ಮುಂಚೆ ಮೋಶೆಯ ಸಂಗಡ ಇದ್ದಂತೆಯೇ ನಿನ್ನ ಸಂಗಡವೂ ಇದ್ದೇನೆಂಬುದು ಆಗ ಜನರಿಗೆ ತಿಳಿಯುತ್ತದೆ.
ಯೆಹೋಶುವ 3 : 8 (ERVKN)
ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಯಾಜಕರಿಗೆ, ‘ನೀವು ಜೋರ್ಡನ್ ನದಿಯ ತೀರಕ್ಕೆ ಹೋಗಿ, ನೀರಿನೊಳಗೆ ಕಾಲಿಡದೆ ಅದರ ಅಂಚಿನಲ್ಲೇ ನಿಂತುಕೊಳ್ಳಿರಿ’ ಎಂದು ಹೇಳು” ಅಂದನು.
ಯೆಹೋಶುವ 3 : 9 (ERVKN)
ಆಗ ಯೆಹೋಶುವನು ಇಸ್ರೇಲರಿಗೆ, “ಇಲ್ಲಿ ಬನ್ನಿರಿ; ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ.
ಯೆಹೋಶುವ 3 : 10 (ERVKN)
ಚೈತನ್ಯಸ್ವರೂಪನಾದ ದೇವರು ನಿಜವಾಗಿಯೂ ನಿಮ್ಮ ಸಂಗಡ ಇದ್ದಾನೆ ಎಂಬುದಕ್ಕೆ ಇಲ್ಲಿ ಒಂದು ಸಾಕ್ಷಿ ಇದೆ. ಆತನು ನಿಜವಾಗಿಯೂ ನಿಮ್ಮ ವೈರಿಗಳನ್ನು ಸೋಲಿಸುತ್ತಾನೆ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ. ಕಾನಾನ್ಯರು, ಹಿತ್ತಿಯರು, ಹಿವ್ವಿಯರು, ಪೆರಿಜೀಯರು, ಗಿರ್ಗಾಷಿಯರು, ಅಮೋರಿಯರು, ಯೆಬೂಸಿಯರು, ಇವರನ್ನೆಲ್ಲಾ ಆತನು ಸೋಲಿಸುತ್ತಾನೆ. ಆ ದೇಶದಿಂದ ಅವರನ್ನು ಬಲವಂತವಾಗಿ ಹೊರಗಟ್ಟುತ್ತಾನೆ.
ಯೆಹೋಶುವ 3 : 11 (ERVKN)
ಇದೋ ಇಲ್ಲಿದೆ ಸಾಕ್ಷಿ. ನೀವು ಜೋರ್ಡನ್ ನದಿಯನ್ನು ದಾಟುವಾಗ ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ನಿಮ್ಮ ಮುಂದೆ ಹೋಗುವುದು.
ಯೆಹೋಶುವ 3 : 12 (ERVKN)
ಈಗ ಇಸ್ರೇಲರ ಕುಲಗಳಿಂದ ಪ್ರತಿಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಿರಿ.
ಯೆಹೋಶುವ 3 : 13 (ERVKN)
ಯಾಜಕರು ಯೆಹೋವನ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವರು. ಯೆಹೋವನು ಸರ್ವಲೋಕದ ಒಡೆಯನಾಗಿದ್ದಾನೆ. ಅವರು ಆ ಪೆಟ್ಟಿಗೆಯನ್ನು ನಿಮ್ಮ ಮುಂದೆ ಜೋರ್ಡನ್ ನದಿಯಲ್ಲಿ ತೆಗೆದುಕೊಂಡು ಹೋಗುವರು. ಅವರು ನೀರಿನಲ್ಲಿ ಪ್ರವೇಶ ಮಾಡಿದಾಗ ಜೋರ್ಡನ್ ನದಿಯ ನೀರು ಹರಿಯದೆ ನಿಂತುಬಿಡುವುದು. ನೀರು ಮುಂದಕ್ಕೆ ಹರಿಯದೆ ಹರಡಿಕೊಂಡು ಸರೋವರದಂತೆ ತೋರುವುದು” ಎಂದು ತಿಳಿಸಿದನು.
ಯೆಹೋಶುವ 3 : 14 (ERVKN)
ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ನಡೆದರು. ಜನರು ತಾವು ಪಾಳೆಯ ಮಾಡಿಕೊಂಡಿದ್ದ ಸ್ಥಳದಿಂದ ಹೊರಟು ಜೋರ್ಡನ್ ನದಿಯ ಕಡೆಗೆ ಹೋದರು.
ಯೆಹೋಶುವ 3 : 15 (ERVKN)
(ಆಗ ಸುಗ್ಗಿಕಾಲವಾದ್ದರಿಂದ ಜೋರ್ಡನ್ ನದಿಯು ದಡಮೀರಿ ಹರಿಯುತ್ತಿತ್ತು.) ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ತೀರಕ್ಕೆ ಬಂದರು. ಅವರು ನೀರಿನಲ್ಲಿ ಹೆಜ್ಜೆ ಇಟ್ಟರು.
ಯೆಹೋಶುವ 3 : 16 (ERVKN)
ಆಗ ನೀರು ಹರಿಯದೆ ನಿಂತುಬಿಟ್ಟಿತು. ಆ ಸ್ಥಳದ ಹಿಂಭಾಗದಲ್ಲಿ ಒಂದು ಸರೋವರದಂತೆ ನೀರು ತುಂಬಿಕೊಂಡಿತು. ನೀರು ಬಹುದೂರದಲ್ಲಿರುವ ಆದಾಮ್ ಊರು ಅಂದರೆ ಜಾರೆತಾನಿನ ಹತ್ತಿರ ಇರುವ ಒಂದು ಊರಿನವರೆಗೂ ರಾಶಿರಾಶಿಯಾಗಿ ನಿಂತುಕೊಂಡಿತು. ಜನರು ಜೆರಿಕೊವಿನ ಹತ್ತಿರ ನದಿಯನ್ನು ದಾಟಿದರು.
ಯೆಹೋಶುವ 3 : 17 (ERVKN)
ಆ ಸ್ಥಳದಲ್ಲಿ ನೆಲವು ಒಣಗಿತ್ತು; ಯಾಜಕರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನದಿಯ ಮಧ್ಯದವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ನಿಂತುಕೊಂಡರು. ಯಾಜಕರು ಅಲ್ಲಿಯೇ ನಿಂತುಕೊಂಡಿರಲಾಗಿ ಎಲ್ಲಾ ಇಸ್ರೇಲರು ಒಣನೆಲದ ಮೇಲೆ ನಡೆದುಕೊಂಡು ಹೋಗಿ ಜೋರ್ಡನ್ ನದಿಯನ್ನು ದಾಟಿದರು.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: