ಯೆಹೋಶುವ 1 : 1 (ERVKN)
ದೇವರು ಯೆಹೋಶುವನನ್ನು ಇಸ್ರೇಲರ ನಾಯಕನನ್ನಾಗಿ ಆರಿಸಿದನು ಮೋಶೆಯು ಯೆಹೋವನ ಸೇವಕನಾಗಿದ್ದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯ ಮರಣಾನಂತರ ಯೆಹೋವನು ಯೆಹೋಶುವನೊಡನೆ ಮಾತನಾಡಿ,
ಯೆಹೋಶುವ 1 : 2 (ERVKN)
“ನನ್ನ ಸೇವಕನಾದ ಮೋಶೆಯು ಸತ್ತನು. ಈಗ ನೀನು ಮತ್ತು ಈ ಜನರು ಜೋರ್ಡನ್ ನದಿಯನ್ನು ದಾಟಿಹೋಗಬೇಕು. ಇಸ್ರೇಲಿನ ಜನರಾದ ನಿಮಗೆ ನಾನು ಕೊಡಲಿರುವ ದೇಶಕ್ಕೆ ನೀವು ಹೋಗಬೇಕು.
ಯೆಹೋಶುವ 1 : 3 (ERVKN)
ನಾನು ಆ ದೇಶವನ್ನು ನಿಮಗೆ ಕೊಡುವುದಾಗಿ ಮೋಶೆಗೆ ವಾಗ್ದಾನ ಮಾಡಿದ್ದೇನೆ. ಆದ್ದರಿಂದ ನೀವು ಕಾಲಿಡುವ ಪ್ರದೇಶವನ್ನೆಲ್ಲಾ ನಿಮಗೆ ಕೊಡುತ್ತೇನೆ.
ಯೆಹೋಶುವ 1 : 4 (ERVKN)
ಅರಣ್ಯ ಮತ್ತು ಲೆಬನೋನ್ ಪರ್ವತ ಇವುಗಳನ್ನು ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯವರೆಗಿರುವ ಹಿತ್ತಿಯರ ಪ್ರದೇಶವೆಲ್ಲಾ ನಿಮ್ಮದಾಗುವುದು. ನಿಮ್ಮ ಪ್ರದೇಶವು ಪಶ್ಚಿಮದಲ್ಲಿನ ಮೆಡಿಟರೇನಿಯನ್ ಸಮುದ್ರದವರೆಗೆ ವಿಸ್ತರಿಸಿಕೊಳ್ಳುವುದು.
ಯೆಹೋಶುವ 1 : 5 (ERVKN)
ನಾನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರುತ್ತೇನೆ. ನಿನ್ನ ಜೀವಮಾನದಲ್ಲೆಲ್ಲಾ ಯಾವನೂ ನಿನ್ನನ್ನು ತಡೆಯಲಾರನು. ನಾನು ನಿನ್ನನ್ನು ಕೈಬಿಡುವುದಿಲ್ಲ; ತೊರೆದುಬಿಡುವುದಿಲ್ಲ” ಎಂದು ಹೇಳಿದನು.
ಯೆಹೋಶುವ 1 : 6 (ERVKN)
“ಯೆಹೋಶುವನೇ, ನೀನು ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು; ಈ ಜನರು ತಮ್ಮ ದೇಶವನ್ನು ಪಡೆಯುವುದಕ್ಕೆ ನೀನು ಇವರ ಮುಂದಾಳಾಗಿ ನಡೆಸಬೇಕು. ನಾನು ಇವರಿಗೆ ಈ ಪ್ರದೇಶವನ್ನು ಕೊಡುವುದಾಗಿ ಇವರ ಪೂರ್ವಿಕರಿಗೆ ಪ್ರಮಾಣ ಮಾಡಿದ್ದೇನೆ.
ಯೆಹೋಶುವ 1 : 7 (ERVKN)
ಆದರೆ ನೀನು ಇನ್ನೊಂದು ವಿಷಯದಲ್ಲಿಯೂ ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು. ನನ್ನ ಸೇವಕನಾಗಿದ್ದ ಮೋಶೆಯು ನಿನಗೆ ಕೊಟ್ಟ ಆಜ್ಞೆಗಳನ್ನು ನೀನು ನಿಶ್ಚಿತವಾಗಿ ಪಾಲಿಸಬೇಕು. ಅವನ ಧರ್ಮೋಪದೇಶವನ್ನೆಲ್ಲಾ ಚಾಚೂತಪ್ಪದೆ ಅನುಸರಿಸಿದ್ದೇ ಆದರೆ ನೀನು ಮಾಡುವ ಎಲ್ಲ ಕಾರ್ಯಗಳಲ್ಲಿ ನಿನಗೆ ಜಯಸಿಗುವುದು ಖಂಡಿತ.
ಯೆಹೋಶುವ 1 : 8 (ERVKN)
ಆ ಧರ್ಮಶಾಸ್ತ್ರದಲ್ಲಿ ಬರೆದ ವಿಷಯಗಳನ್ನು ಸದಾ ನೆನಪಿಡು. ಹಗಲೂ ರಾತ್ರಿ ಆ ಧರ್ಮಶಾಸ್ತ್ರವನ್ನು ಧ್ಯಾನಿಸು. ಆಗ ಅದರಲ್ಲಿ ಬರೆದ ವಿಷಯಗಳಿಗೆ ನೀನು ನಿಶ್ಚಿತವಾಗಿ ವಿಧೇಯನಾಗಿರುವೆ. ನೀನು ಹೀಗೆ ಮಾಡಿದರೆ ನೀನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನೀನು ವಿವೇಕಶಾಲಿಯಾಗುವೆ ಮತ್ತು ಜಯಶಾಲಿಯಾಗುವೆ.
ಯೆಹೋಶುವ 1 : 9 (ERVKN)
ನೆನಪಿಡು, ನೀನು ಸ್ಥಿರಚಿತ್ತನಾಗಿರಬೇಕೆಂತಲೂ ಧೈರ್ಯಶಾಲಿಯಾಗಿರಬೇಕೆಂತಲೂ ನಾನು ನಿನಗೆ ಆಜ್ಞಾಪಿಸುತ್ತೇನೆ. ಆದ್ದರಿಂದ ಹೆದರಬೇಡ, ಯಾಕೆಂದರೆ ನೀನು ಹೋದಲ್ಲೆಲ್ಲಾ ನಿನ್ನ ದೇವರಾದ ಯೆಹೋವನೇ ನಿನ್ನ ಸಂಗಡ ಇರುವನು” ಎಂದು ಹೇಳಿದನು.
ಯೆಹೋಶುವ 1 : 10 (ERVKN)
ಯೆಹೋಶುವನು ಅಧಿಪತ್ಯವನ್ನು ವಹಿಸಿಕೊಂಡನು ಆಗ ಯೆಹೋಶುವನು ಜನಾಧಿಪತಿಗಳಿಗೆ,
ಯೆಹೋಶುವ 1 : 11 (ERVKN)
“ನೀವು ಪಾಳೆಯದ ಎಲ್ಲಾ ಕಡೆಗೆ ಹೋಗಿ ಜನರಿಗೆ ಸಿದ್ಧವಾಗಿರಲು ತಿಳಿಸಿರಿ; ಸ್ವಲ್ಪ ಆಹಾರವನ್ನು ಸಿದ್ಧಪಡಿಸಿಕೊಳ್ಳಲು ಹೇಳಿರಿ. ಇನ್ನು ಮೂರು ದಿವಸಗಳಲ್ಲಿ ನಾವು ಈ ಜೋರ್ಡನ್ ನದಿಯನ್ನು ದಾಟಿ ಹೋಗುವೆವು. ನಾನು ಹೋಗಿ ಯೆಹೋವನಾದ ನಮ್ಮ ದೇವರು ನಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳುವೆವು ಎಂದು ಹೇಳಿರಿ” ಎಂದು ಆಜ್ಞಾಪಿಸಿದನು.
ಯೆಹೋಶುವ 1 : 12 (ERVKN)
ಅನಂತರ ಯೆಹೋಶುವನು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಜೊತೆಗೆ ಮಾತನಾಡಿ ಅವರಿಗೆ,
ಯೆಹೋಶುವ 1 : 13 (ERVKN)
“ಯೆಹೋವನ ಸೇವಕನಾದ ಮೋಶೆಯು ನಿಮಗೆ ಹೇಳಿದ್ದನ್ನು ನೆನಪುಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ವಿಶ್ರಾಂತಿಗಾಗಿ ಒಂದು ದೇಶವನ್ನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ್ದನು.
ಯೆಹೋಶುವ 1 : 14 (ERVKN)
ಯೆಹೋವನು ಈಗಾಗಲೇ ಜೋರ್ಡನ್ ನದಿಯ ಪೂರ್ವದ ಪ್ರದೇಶವನ್ನು ನಿಮಗೆ ಕೊಟ್ಟಿದ್ದಾನೆ. ನಿಮ್ಮ ಹೆಂಡಂದಿರು, ಮಕ್ಕಳು ಮತ್ತು ನಿಮ್ಮ ದನಕುರಿಗಳು ಈ ಪ್ರದೇಶದಲ್ಲಿಯೇ ಇರಬಹುದು. ಆದರೆ ನಿಮ್ಮ ಯೋಧರು ನಿಮ್ಮ ಸಹೋದರರ ಸಂಗಡ ಜೋರ್ಡನ್ ನದಿಯನ್ನು ದಾಟಬೇಕು. ನೀವು ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಿಗೆ ಅವರ ದೇಶವನ್ನು ಪಡೆಯುವುದರಲ್ಲಿ ಸಹಾಯ ಮಾಡಬೇಕು.
ಯೆಹೋಶುವ 1 : 15 (ERVKN)
ಯೆಹೋವನು ನಿಮ್ಮ ವಿಶ್ರಾಂತಿಗಾಗಿ ಒಂದು ಸ್ಥಳವನ್ನು ಕೊಟ್ಟಿದ್ದಾನೆ. ಯೆಹೋವನು ನಿಮ್ಮ ಸಹೋದರರಿಗಾಗಿಯೂ ಒಂದು ಸ್ಥಳವನ್ನು ಕೊಡುತ್ತಾನೆ. ಆದರೆ ನಿಮ್ಮ ದೇವರಾದ ಯೆಹೋವನು ಅವರಿಗೆ ಕೊಡುವ ದೇಶವನ್ನು ಅವರು ಪಡೆದುಕೊಳ್ಳುವವರೆಗೆ ನೀವು ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕು. ಆಮೇಲೆ ನೀವು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ನಿಮ್ಮ ದೇಶಕ್ಕೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ದೇಶವು ಅದೇ ಆಗಿದೆ” ಎಂದನು.
ಯೆಹೋಶುವ 1 : 16 (ERVKN)
ಆಗ ಅವರು ಯೆಹೋಶುವನಿಗೆ, “ನೀನು ಆಜ್ಞಾಪಿಸಿದ್ದನ್ನೆಲ್ಲಾ ನಾವು ಮಾಡುತ್ತೇವೆ; ನೀನು ನಮ್ಮನ್ನು ಕಳಿಸಿದ್ದಲ್ಲಿಗೆಲ್ಲ ಹೋಗುತ್ತೇವೆ.
ಯೆಹೋಶುವ 1 : 17 (ERVKN)
ನಾವು ಮೋಶೆಯ ಆಜ್ಞೆಗಳನ್ನೆಲ್ಲಾ ಪಾಲಿಸಿದೆವು. ಅದೇ ರೀತಿ ನಿನ್ನ ಆಜ್ಞೆಗಳನ್ನೆಲ್ಲಾ ಪಾಲಿಸುತ್ತೇವೆ. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.
ಯೆಹೋಶುವ 1 : 18 (ERVKN)
ಯಾರಾದರೂ ನಿನ್ನ ಆಜ್ಞೆಗಳನ್ನು ಉಲ್ಲಂಘಿಸಿದರೆ ಅಥವಾ ಯಾರಾದರೂ ನಿನ್ನನ್ನು ವಿರೋಧಿಸಿದರೆ ಅವನನ್ನು ಕೊಲ್ಲಲಾಗುವುದು. ನೀನು ಮಾತ್ರ ಸ್ಥಿರಚಿತ್ತನಾಗಿರು; ಧೈರ್ಯಶಾಲಿಯಾಗಿರು” ಎಂದು ಹೇಳಿದರು.
❮
❯
1
2
3
4
5
6
7
8
9
10
11
12
13
14
15
16
17
18