ಯೋಹಾನನು 9 : 1 (ERVKN)
ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು.
ಯೋಹಾನನು 9 : 2 (ERVKN)
ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.
ಯೋಹಾನನು 9 : 3 (ERVKN)
ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ.
ಯೋಹಾನನು 9 : 4 (ERVKN)
ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು.
ಯೋಹಾನನು 9 : 5 (ERVKN)
ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.
ಯೋಹಾನನು 9 : 6 (ERVKN)
ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು.
ಯೋಹಾನನು 9 : 7 (ERVKN)
ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.
ಯೋಹಾನನು 9 : 8 (ERVKN)
ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.
ಯೋಹಾನನು 9 : 9 (ERVKN)
ಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು. ಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು.
ಯೋಹಾನನು 9 : 10 (ERVKN)
ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
ಯೋಹಾನನು 9 : 11 (ERVKN)
ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
ಯೋಹಾನನು 9 : 12 (ERVKN)
ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು. ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
ಯೋಹಾನನು 9 : 13 (ERVKN)
ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ.
ಯೋಹಾನನು 9 : 14 (ERVKN)
ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್‌ದಿನದಲ್ಲಿ.
ಯೋಹಾನನು 9 : 15 (ERVKN)
ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು. ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
ಯೋಹಾನನು 9 : 16 (ERVKN)
ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್‌ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು. ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.
ಯೋಹಾನನು 9 : 17 (ERVKN)
ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು. ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
ಯೋಹಾನನು 9 : 18 (ERVKN)
ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು.
ಯೋಹಾನನು 9 : 19 (ERVKN)
ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.
ಯೋಹಾನನು 9 : 20 (ERVKN)
ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು.
ಯೋಹಾನನು 9 : 21 (ERVKN)
ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು.
ಯೋಹಾನನು 9 : 22 (ERVKN)
ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು.
ಯೋಹಾನನು 9 : 23 (ERVKN)
ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.
ಯೋಹಾನನು 9 : 24 (ERVKN)
ಯೆಹೂದ್ಯನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು.
ಯೋಹಾನನು 9 : 25 (ERVKN)
ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
ಯೋಹಾನನು 9 : 26 (ERVKN)
ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.
ಯೋಹಾನನು 9 : 27 (ERVKN)
ಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು.
ಯೋಹಾನನು 9 : 28 (ERVKN)
ಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ.
ಯೋಹಾನನು 9 : 29 (ERVKN)
ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು.
ಯೋಹಾನನು 9 : 30 (ERVKN)
ಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು.
ಯೋಹಾನನು 9 : 31 (ERVKN)
ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ.
ಯೋಹಾನನು 9 : 32 (ERVKN)
ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ.
ಯೋಹಾನನು 9 : 33 (ERVKN)
ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು.
ಯೋಹಾನನು 9 : 34 (ERVKN)
ಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು.
ಯೋಹಾನನು 9 : 35 (ERVKN)
ಆತ್ಮಿಕ ಅಂಧತೆ ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು.
ಯೋಹಾನನು 9 : 36 (ERVKN)
ಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು.
ಯೋಹಾನನು 9 : 37 (ERVKN)
ಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು.
ಯೋಹಾನನು 9 : 38 (ERVKN)
ಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು.
ಯೋಹಾನನು 9 : 39 (ERVKN)
ಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣುವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು.
ಯೋಹಾನನು 9 : 40 (ERVKN)
ಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು.
ಯೋಹಾನನು 9 : 41 (ERVKN)
ಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ‘ನಮಗೆ ಕಣ್ಣು ಕಾಣುತ್ತದೆ’ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41