ಯೋಹಾನನು 6 : 1 (ERVKN)
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ (ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17) ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು.
ಯೋಹಾನನು 6 : 2 (ERVKN)
ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು.
ಯೋಹಾನನು 6 : 3 (ERVKN)
ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು.
ಯೋಹಾನನು 6 : 4 (ERVKN)
ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು.
ಯೋಹಾನನು 6 : 5 (ERVKN)
ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು.
ಯೋಹಾನನು 6 : 6 (ERVKN)
(ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.)
ಯೋಹಾನನು 6 : 7 (ERVKN)
ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ *ಇನ್ನೂರು ದಿನಾರಿ ನಾಣ್ಯ ಒಬ್ಬನಿಗೆ ದೊರೆಯುತ್ತಿದ್ದ ಒಂದು ವರ್ಷದ ಆದಾಯ. ಬೇಕು” ಎಂದು ಉತ್ತರಕೊಟ್ಟನು.
ಯೋಹಾನನು 6 : 8 (ERVKN)
ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ.
ಯೋಹಾನನು 6 : 9 (ERVKN)
ಅಂದ್ರೆಯನು, “ಇಲ್ಲಿರುವ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು.
ಯೋಹಾನನು 6 : 10 (ERVKN)
ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು.
ಯೋಹಾನನು 6 : 11 (ERVKN)
ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇ ರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
ಯೋಹಾನನು 6 : 12 (ERVKN)
ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು.
ಯೋಹಾನನು 6 : 13 (ERVKN)
ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು.
ಯೋಹಾನನು 6 : 14 (ERVKN)
ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು.
ಯೋಹಾನನು 6 : 15 (ERVKN)
ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು.
ಯೋಹಾನನು 6 : 16 (ERVKN)
ನೀರಿನ ಮೇಲೆ ಕಾಲ್ನಡಿಗೆ (ಮತ್ತಾಯ 14:22-27; ಮಾರ್ಕ 6:45-52) ಆ ಸಾಯಂಕಾಲ ಯೇಸುವಿನ ಶಿಷ್ಯರು ಸರೋವರಕ್ಕೆ (ಗಲಿಲಾಯ) ಹೋದರು.
ಯೋಹಾನನು 6 : 17 (ERVKN)
ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಆದ್ದರಿಂದ ಶಿಷ್ಯರು ದೋಣಿಯನ್ನು ಹತ್ತಿ ಸರೋವರದ ಆಚೆಯ ಕಡೆಯಿದ್ದ ಕಪೆರ್ನೌಮಿಗೆ ಹೊರಟರು.
ಯೋಹಾನನು 6 : 18 (ERVKN)
ಗಾಳಿಯು ಬಹು ರಭಸವಾಗಿ ಬೀಸುತ್ತಿತ್ತು. ಸರೋವರದ ಅಲೆಗಳು ದೊಡ್ಡದಾಗುತ್ತಿದ್ದವು.
ಯೋಹಾನನು 6 : 19 (ERVKN)
ಅವರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು.
ಯೋಹಾನನು 6 : 20 (ERVKN)
ಯೇಸು ಅವರಿಗೆ, “ಹೆದರಬೇಡಿರಿ, ನಾನೇ” ಎಂದು ಹೇಳಿದನು.
ಯೋಹಾನನು 6 : 21 (ERVKN)
ಆಗ ಅವರು ಯೇಸುವನ್ನು ದೋಣಿಯೊಳಗೆ ಬರಮಾಡಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲೇ, ಅವರು ಹೋಗಬೇಕೆಂದಿದ್ದ ಸ್ಥಳದ ದಡಕ್ಕೆ ದೋಣಿಯು ತಲುಪಿತು.
ಯೋಹಾನನು 6 : 22 (ERVKN)
ಯೇಸುವಿಗಾಗಿ ಹುಡುಕಾಟ ಮರುದಿನವಾಯಿತು. ಕೆಲವು ಜನರು ಸರೋವರದ ಮತ್ತೊಂದು ಕಡೆಯಲ್ಲಿ ಉಳಿದುಕೊಂಡಿದ್ದರು. ಯೇಸು ತನ್ನ ಶಿಷ್ಯರೊಂದಿಗೆ ದೋಣಿಯಲ್ಲಿ ಹೋಗಲಿಲ್ಲ ಎಂಬುದು ಈ ಜನರಿಗೆ ತಿಳಿದಿತ್ತು. ಯೇಸುವಿನ ಶಿಷ್ಯರು ಮಾತ್ರ ದೋಣಿಯಲ್ಲಿ ಹೋದರೆಂಬುದೂ ಮತ್ತು ಅದೊಂದು ದೋಣಿ ಮಾತ್ರ ಅಲ್ಲಿತ್ತೆಂಬುದೂ ಅವರಿಗೆ ಗೊತ್ತಿತ್ತು.
ಯೋಹಾನನು 6 : 23 (ERVKN)
ಆದರೆ ಅಷ್ಟರಲ್ಲಿಯೇ, ಕೆಲವು ದೋಣಿಗಳು ತಿಬೇರಿಯಾದಿಂದ ಬಂದವು. ಅವರು ಊಟ ಮಾಡಿದ ಸ್ಥಳಕ್ಕೆ ಸಮೀಪದ ದಡದಲ್ಲಿಯೇ ಆ ದೋಣಿಗಳು ನಿಂತುಕೊಂಡವು. ಪ್ರಭುವು ಸ್ತೋತ್ರ ಮಾಡಿದ ಮೇಲೆ ಅವರು ರೊಟ್ಟಿಯನ್ನು ಆ ಸ್ಥಳದಲ್ಲೇ ತಿಂದಿದ್ದರು.
ಯೋಹಾನನು 6 : 24 (ERVKN)
ಯೇಸು ಮತ್ತು ಆತನ ಶಿಷ್ಯರು ಅಲ್ಲಿಲ್ಲದಿರುವುದನ್ನು ಜನರು ಕಂಡು ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋದರು. ಅವರು ಯೇಸುವನ್ನು ಕಂಡುಕೊಳ್ಳಬೇಕೆಂದಿದ್ದರು.
ಯೋಹಾನನು 6 : 25 (ERVKN)
ಯೇಸುವೇ ಜೀವದ ರೊಟ್ಟಿ ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.
ಯೋಹಾನನು 6 : 26 (ERVKN)
ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ.
ಯೋಹಾನನು 6 : 27 (ERVKN)
ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.
ಯೋಹಾನನು 6 : 28 (ERVKN)
ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.
ಯೋಹಾನನು 6 : 29 (ERVKN)
ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.
ಯೋಹಾನನು 6 : 30 (ERVKN)
ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ?
ಯೋಹಾನನು 6 : 31 (ERVKN)
ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’ ✡ಉಲ್ಲೇಖನ: ಕೀರ್ತನೆ. 78:24. ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.
ಯೋಹಾನನು 6 : 32 (ERVKN)
ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು.
ಯೋಹಾನನು 6 : 33 (ERVKN)
ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.
ಯೋಹಾನನು 6 : 34 (ERVKN)
ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.
ಯೋಹಾನನು 6 : 35 (ERVKN)
ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.
ಯೋಹಾನನು 6 : 36 (ERVKN)
ನಾನು ನಿಮಗೆ ಮೊದಲೇ ಹೇಳಿದಂತೆ, ನೀವು ನನ್ನನ್ನು ನೋಡಿದ್ದರೂ ಇನ್ನೂ ನನ್ನನ್ನು ನಂಬುತ್ತಿಲ್ಲ.
ಯೋಹಾನನು 6 : 37 (ERVKN)
ತಂದೆಯು ನನ್ನ ಜನರನ್ನು ನನಗೆ ಕೊಡುತ್ತಾನೆ. ಆ ಜನರಲ್ಲಿ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. ನನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾನು ಖಂಡಿತವಾಗಿ ಸ್ವೀಕರಿಸಿಕೊಳ್ಳುವೆನು, ಅವರನ್ನು ಎಂದಿಗೂ ತಳ್ಳಿಬಿಡುವುದಿಲ್ಲ.
ಯೋಹಾನನು 6 : 38 (ERVKN)
ನಾನು ಪರಲೋಕದಿಂದ ಇಳಿದು ಬಂದದ್ದು ದೇವರ ಚಿತ್ತಕ್ಕನುಸಾರವಾಗಿ ಮಾಡುವುದಕ್ಕಾಗಿಯೇ ಹೊರತು ನನ್ನ ಚಿತ್ತಕ್ಕನುಸಾರವಾಗಿಯಲ್ಲ.
ಯೋಹಾನನು 6 : 39 (ERVKN)
ದೇವರು ನನಗೆ ಕೊಟ್ಟಿರುವ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಕೂಡದು. ಅಲ್ಲದೆ ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸಬೇಕು. ನನ್ನನ್ನು ಕಳುಹಿಸಿದಾತನು ಆ ಕಾರ್ಯವನ್ನೇ ನನ್ನಿಂದ ಅಪೇಕ್ಷಿಸುತ್ತಾನೆ.
ಯೋಹಾನನು 6 : 40 (ERVKN)
ಮಗನನ್ನು ನೋಡಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. ನನ್ನ ತಂದೆಯು ಬಯಸುವುದು ಇದನ್ನೇ” ಎಂದನು.
ಯೋಹಾನನು 6 : 41 (ERVKN)
ಯೆಹೂದ್ಯರು ಯೇಸುವಿನ ಬಗ್ಗೆ ಗುಣುಗುಟ್ಟಿದರು. “ಪರಲೋಕದಿಂದ ಇಳಿದುಬರುವ ರೊಟ್ಟಿಯೇ ನಾನು” ಎಂದು ಆತನು ಹೇಳಿದ್ದರಿಂದ ಅವರು ಆಕ್ಷೇಪಿಸಿದರು.
ಯೋಹಾನನು 6 : 42 (ERVKN)
ಯೆಹೂದ್ಯರು, “ಇವನು ಯೇಸು. ಇವನ ತಂದೆತಾಯಿಗಳನ್ನು ನಾವು ಬಲ್ಲೆವು. ಇವನು ಕೇವಲ ಯೋಸೇಫನ ಮಗನು. ‘ನಾನು ಪರಲೋಕದಿಂದ ಇಳಿದುಬಂದೆನು’ ಎಂದು ಇವನು ಹೇಳುವುದಕ್ಕೆ ಹೇಗೆ ಸಾಧ್ಯ?” ಎಂದರು.
ಯೋಹಾನನು 6 : 43 (ERVKN)
ಅದಕ್ಕೆ ಯೇಸು, “ನೀವು ಗುಣುಗುಟ್ಟುತ್ತಿರುವುದನ್ನು ನಿಲ್ಲಿಸಿರಿ.
ಯೋಹಾನನು 6 : 44 (ERVKN)
ತಂದೆಯೇ ನನ್ನನ್ನು ಕಳುಹಿಸಿದನು ಮತ್ತು ತಂದೆಯೇ ನನ್ನ ಬಳಿಗೆ ಜನರನ್ನು ಕರೆತರುವನು. ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸುವೆನು. ತಂದೆಯು ನನ್ನ ಬಳಿಗೆ ಕರೆದುಕೊಂಡು ಬರದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.
ಯೋಹಾನನು 6 : 45 (ERVKN)
‘ದೇವರು ಎಲ್ಲಾ ಜನರಿಗೆ ಉಪದೇಶಿಸುವನು’ ✡ಉಲ್ಲೇಖನ: ಯೆಶಾಯ 54:13. ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಜನರು ತಂದೆಗೆ ಕಿವಿಗೊಟ್ಟು ಆತನಿಂದ ಕಲಿತುಕೊಳ್ಳುವರು. ಆ ಜನರು ನನ್ನ ಬಳಿಗೆ ಬರುವರು.
ಯೋಹಾನನು 6 : 46 (ERVKN)
ತಂದೆಯಿಂದ ಬಂದಿರುವಾತನು ಮಾತ್ರ ತಂದೆಯನ್ನು ನೋಡಿದವನಾಗಿದ್ದಾನೆ. ಬೇರೆ ಯಾವ ವ್ಯಕ್ತಿಯೂ ತಂದೆಯನ್ನು ಎಂದೂ ನೋಡಿಲ್ಲ.
ಯೋಹಾನನು 6 : 47 (ERVKN)
“ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನನ್ನು ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆ.
ಯೋಹಾನನು 6 : 49 (ERVKN)
ನಿಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು ತಿಂದರು. ಆದರೆ ಎಲ್ಲಾ ಜನರಂತೆ ಅವರೂ ಸತ್ತುಹೋದರು.
ಯೋಹಾನನು 6 : 50 (ERVKN)
ಪರಲೋಕದಿಂದ ಇಳಿದುಬರುವ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಎಂದಿಗೂ ಸಾಯುವುದಿಲ್ಲ.
ಯೋಹಾನನು 6 : 51 (ERVKN)
ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು.
ಯೋಹಾನನು 6 : 52 (ERVKN)
ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ನಮಗೆ ತಿನ್ನಲು ಹೇಗೆ ಕೊಡಲಾದೀತು?” ಎಂದು ತಮ್ಮತಮ್ಮೊಳಗೆ ವಾಗ್ವಾದ ಮಾಡತೊಡಗಿದರು.
ಯೋಹಾನನು 6 : 53 (ERVKN)
ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಮನುಷ್ಯಕುಮಾರನ ದೇಹವನ್ನು ತಿನ್ನಲೇಬೇಕು. ಆತನ ರಕ್ತವನ್ನು ಕುಡಿಯಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮಲ್ಲಿ ನಿಜವಾದ ಜೀವ ಇರುವುದಿಲ್ಲ.
ಯೋಹಾನನು 6 : 54 (ERVKN)
ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು.
ಯೋಹಾನನು 6 : 55 (ERVKN)
ನನ್ನ ದೇಹವು ನಿಜವಾದ ಆಹಾರವಾಗಿದೆ. ನನ್ನ ರಕ್ತವು ನಿಜವಾದ ಪಾನೀಯವಾಗಿದೆ.
ಯೋಹಾನನು 6 : 56 (ERVKN)
ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ.
ಯೋಹಾನನು 6 : 57 (ERVKN)
“ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು.
ಯೋಹಾನನು 6 : 58 (ERVKN)
ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು.
ಯೋಹಾನನು 6 : 59 (ERVKN)
ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಿಸುತ್ತಿದ್ದಾಗ ಈ ಸಂಗತಿಗಳನ್ನೆಲ್ಲಾ ಹೇಳಿದನು.
ಯೋಹಾನನು 6 : 60 (ERVKN)
ನಿತ್ಯಜೀವದ ನುಡಿಗಳು ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು.
ಯೋಹಾನನು 6 : 61 (ERVKN)
ತನ್ನ ಶಿಷ್ಯರು ಆಕ್ಷೇಪಿಸುತ್ತಿರುವುದನ್ನು ತಿಳಿದಿದ್ದ ಯೇಸು, “ಈ ಉಪದೇಶದಿಂದ ನಿಮಗೆ ಬೇಸರವಾಯಿತೇ?
ಯೋಹಾನನು 6 : 62 (ERVKN)
ಹಾಗಾದರೆ ಮನುಷ್ಯಕುಮಾರನು ತಾನು ಬಿಟ್ಟುಬಂದ ಸ್ಥಳಕ್ಕೆ ಮರಳಿಹೋಗುವುದನ್ನು ನೀವು ನೋಡುವಾಗ ಬೇಸರಪಡುವಿರಾ?
ಯೋಹಾನನು 6 : 63 (ERVKN)
ಒಬ್ಬನಿಗೆ ಜೀವವನ್ನು ಕೊಡುವಂಥದ್ದು ದೈಹಿಕ ಸಂಗತಿಗಳಲ್ಲ. ಜೀವವನ್ನು ಕೊಡುವಂಥದ್ದು ದೇವರಾತ್ಮ. ನಾನು ನಿಮಗೆ ಹೇಳಿದ ಸಂಗತಿಗಳು ಆತ್ಮಿಕ ಸಂಗತಿಗಳಾಗಿವೆ. ಆದ್ದರಿಂದ ಈ ಸಂಗತಿಗಳೇ ಜೀವವನ್ನು ಕೊಡುತ್ತವೆ.
ಯೋಹಾನನು 6 : 64 (ERVKN)
ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ನಂಬಿಲ್ಲದವರು ಯಾರೆಂದೂ ತನಗೆ ದ್ರೋಹ ಮಾಡುವವನು ಯಾರೆಂದೂ ಯೇಸುವಿಗೆ ಮೊದಲಿಂದಲೂ ತಿಳಿದಿತ್ತು.)
ಯೋಹಾನನು 6 : 65 (ERVKN)
ಇದಲ್ಲದೆ ಯೇಸು, “ತಂದೆಯ ಅನುಮತಿ ಇಲ್ಲದೆ ಯಾವನೂ ನನ್ನ ಬಳಿಗೆ ಬರಲಾರನು ಎಂದು ನಾನು ನಿಮಗೆ ಹೇಳಿದ್ದಕ್ಕೆ ಅದೇ ಕಾರಣ” ಎಂದನು.
ಯೋಹಾನನು 6 : 66 (ERVKN)
ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತನ ಹಿಂಬಾಲಕರಲ್ಲಿ ಅನೇಕರು ಆತನನ್ನು ತೊರೆದುಬಿಟ್ಟರು. ಅವರು ಆತನನ್ನು ಹಿಂಬಾಲಿಸಲಿಲ್ಲ.
ಯೋಹಾನನು 6 : 67 (ERVKN)
ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ನನ್ನನ್ನು ಬಿಟ್ಟುಹೋಗಬೇಕೆಂದಿರುವಿರಾ?” ಎಂದು ಕೇಳಿದನು.
ಯೋಹಾನನು 6 : 68 (ERVKN)
ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನಾವೆಲ್ಲಿಗೆ ಹೋಗೋಣ? ನಿತ್ಯಜೀವವನ್ನು ಕೊಡುವ ಸಂಗತಿಗಳು ನಿನ್ನಲ್ಲಿವೆ.
ಯೋಹಾನನು 6 : 69 (ERVKN)
ನಾವು ನಿನ್ನಲ್ಲಿ ನಂಬಿಕೆ ಇಡುತ್ತೇವೆ. ನೀನು ದೇವರಿಂದ ಬಂದ ಪರಿಶುದ್ಧನೆಂದು ನಮಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
ಯೋಹಾನನು 6 : 70 (ERVKN)
ಬಳಿಕ ಯೇಸು, “ನಾನು ಆರಿಸಿಕೊಂಡ ಹನ್ನೆರಡು ಮಂದಿ ನೀವೇ. ಆದರೆ ನಿಮ್ಮಲ್ಲಿರುವ ಒಬ್ಬನು ಸೈತಾನನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟನು.
ಯೋಹಾನನು 6 : 71 (ERVKN)
ಯೇಸು ಸಿಮೋನನ ಮಗನಾದ ಇಸ್ಕರಿಯೋತ ಯೂದನ ಬಗ್ಗೆ ಮಾತಾಡುತ್ತಿದ್ದನು. ಯೂದನು ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದನು. ಆದರೆ ಮುಂದೆ ಯೇಸುವಿಗೆ ದ್ರೋಹ ಮಾಡಿದ ವ್ಯಕ್ತಿ ಇವನೇ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71