ಯೋಹಾನನು 20 : 1 (ERVKN)
ಬರಿದಾದ ಸಮಾಧಿ (ಮತ್ತಾಯ 28:1-10; ಮಾರ್ಕ 16:1-8; ಲೂಕ 24:1-12) ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು
ಯೋಹಾನನು 20 : 2 (ERVKN)
ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.
ಯೋಹಾನನು 20 : 3 (ERVKN)
ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು.
ಯೋಹಾನನು 20 : 4 (ERVKN)
ಅವರಿಬ್ಬರೂ ಓಡುತ್ತಾ ಹೋದರು. ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು.
ಯೋಹಾನನು 20 : 5 (ERVKN)
ಆ ಶಿಷ್ಯನು ಬಗ್ಗಿ ಒಳಗೆ ನೋಡಿದನು.
ಯೋಹಾನನು 20 : 6 (ERVKN)
ನಾರುಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು.
ಯೋಹಾನನು 20 : 7 (ERVKN)
ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಆ ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು.
ಯೋಹಾನನು 20 : 8 (ERVKN)
ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು.
ಯೋಹಾನನು 20 : 9 (ERVKN)
(ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಈ ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)
ಯೋಹಾನನು 20 : 10 (ERVKN)
ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ (ಮಾರ್ಕ 16:9-11) ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು.
ಯೋಹಾನನು 20 : 11 (ERVKN)
ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ,
ಯೋಹಾನನು 20 : 12 (ERVKN)
ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತುಕೊಂಡಿದ್ದನು.
ಯೋಹಾನನು 20 : 13 (ERVKN)
ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು. ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು.
ಯೋಹಾನನು 20 : 14 (ERVKN)
ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.
ಯೋಹಾನನು 20 : 15 (ERVKN)
ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು. ಇವನು ತೋಟವನ್ನು ನೋಡಿಕೊಳ್ಳುವವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.
ಯೋಹಾನನು 20 : 16 (ERVKN)
ಯೇಸು ಆಕೆಗೆ, “ಮರಿಯಳೇ” ಎಂದನು. ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”)
ಯೋಹಾನನು 20 : 17 (ERVKN)
ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂಬುದಾಗಿ ಹೇಳು” ಎಂದನು.
ಯೋಹಾನನು 20 : 18 (ERVKN)
ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.
ಯೋಹಾನನು 20 : 19 (ERVKN)
ಶಿಷ್ಯರಿಗೆ ಯೇಸುವಿನ ದರ್ಶನ (ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49) ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು.
ಯೋಹಾನನು 20 : 20 (ERVKN)
ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.
ಯೋಹಾನನು 20 : 21 (ERVKN)
ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು.
ಯೋಹಾನನು 20 : 22 (ERVKN)
ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ.
ಯೋಹಾನನು 20 : 23 (ERVKN)
ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.
ಯೋಹಾನನು 20 : 24 (ERVKN)
ತೋಮನಿಗೆ ಯೇಸುವಿನ ದರ್ಶನ ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು.
ಯೋಹಾನನು 20 : 25 (ERVKN)
ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.
ಯೋಹಾನನು 20 : 26 (ERVKN)
ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು.
ಯೋಹಾನನು 20 : 27 (ERVKN)
ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.
ಯೋಹಾನನು 20 : 28 (ERVKN)
ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.
ಯೋಹಾನನು 20 : 29 (ERVKN)
ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.
ಯೋಹಾನನು 20 : 30 (ERVKN)
ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ.
ಯೋಹಾನನು 20 : 31 (ERVKN)
ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31