ಯೋಹಾನನು 18 : 1 (ERVKN)
ಯೇಸುವಿನ ಬಂಧನ (ಮತ್ತಾಯ 26:47-56; ಮಾರ್ಕ 14:43-50; ಲೂಕ 22:47-53) ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.
ಯೋಹಾನನು 18 : 2 (ERVKN)
ಯೇಸುವಿಗೆ ದ್ರೋಹ ಬಗೆದ ಯೂದನಿಗೂ ಈ ಸ್ಥಳವು ತಿಳಿದಿತ್ತು. ಏಕೆಂದರೆ ಯೇಸು ತನ್ನ ಶಿಷ್ಯರೊಂದಿಗೆ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದನು.
ಯೋಹಾನನು 18 : 3 (ERVKN)
ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು.
ಯೋಹಾನನು 18 : 4 (ERVKN)
ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.
ಯೋಹಾನನು 18 : 5 (ERVKN)
ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು. ಆತನು, “ನಾನೇ ಯೇಸು” ಎಂದನು. (ಯೇಸುವಿಗೆ ದ್ರೋಹ ಬಗೆದ ಯೂದನು ಅವರೊಂದಿಗೆ ಅಲ್ಲೇ ನಿಂತಿದ್ದನು.)
ಯೋಹಾನನು 18 : 6 (ERVKN)
ಆತನು, “ನಾನೇ ಯೇಸು” ಎಂದಾಗ ಅವರು ಹಿಂದೆ ಸರಿದು ನೆಲದ ಮೇಲೆ ಬಿದ್ದರು.
ಯೋಹಾನನು 18 : 7 (ERVKN)
ಯೇಸು ಅವರಿಗೆ ಮತ್ತೆ “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು. ಅವರು, “ನಜರೇತಿನ ಯೇಸುವನ್ನು” ಎಂದು ಹೇಳಿದರು.
ಯೋಹಾನನು 18 : 8 (ERVKN)
ಆತನು, “ನಾನೇ ಯೇಸು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನು ಹುಡುಕುತ್ತಿದ್ದರೆ, ಉಳಿದ ಇವರನ್ನು ಹೋಗಬಿಡಿರಿ” ಎಂದು ಹೇಳಿದನು.
ಯೋಹಾನನು 18 : 9 (ERVKN)
“ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.
ಯೋಹಾನನು 18 : 10 (ERVKN)
ಸೀಮೋನ್ ಪೇತ್ರನ ಬಳಿ ಒಂದು ಖಡ್ಗವಿತ್ತು. ಅವನು ಆ ಖಡ್ಗವನ್ನು ಹೊರತೆಗೆದು ಪ್ರಧಾನ ಯಾಜಕನ ಸೇವಕನೊಬ್ಬನಿಗೆ ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. (ಆ ಸೇವಕನ ಹೆಸರು ಮಾಲ್ಕ.)
ಯೋಹಾನನು 18 : 11 (ERVKN)
ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು! ತಂದೆಯು ನನಗೆ ಕೊಟ್ಟಿರುವ ಸಂಕಟದ ಪಾತ್ರೆಯನ್ನು ನಾನು ಸ್ವೀಕರಿಸಿಕೊಳ್ಳಬೇಕು” ಎಂದು ಹೇಳಿದನು.
ಯೋಹಾನನು 18 : 12 (ERVKN)
ಅನ್ನನ ಮುಂದೆ ಯೇಸು (ಮತ್ತಾಯ 26:57-58; ಮಾರ್ಕ 14:53-54; ಲೂಕ 22:54) ಬಳಿಕ ಆ ಸೈನಿಕರು, ಅವರ ಸೇನಾಧಿಪತಿ ಹಾಗೂ ಯೆಹೂದ್ಯ ಕಾವಲುಗಾರರು ಯೇಸುವನ್ನು ಹಿಡಿದು ಕಟ್ಟಿ, ಅನ್ನನ ಬಳಿಗೆ ತಂದರು.
ಯೋಹಾನನು 18 : 13 (ERVKN)
ಅನ್ನನು ಕಾಯಫನ ಮಾವ. ಆ ವರ್ಷ ಕಾಯಫನು ಪ್ರಧಾನಯಾಜಕನಾಗಿದ್ದನು.
ಯೋಹಾನನು 18 : 14 (ERVKN)
ಎಲ್ಲಾ ಜನರಿಗಾಗಿ ಒಬ್ಬನು ಸಾಯುವುದೇ ಮೇಲು ಎಂಬ ಸಲಹೆಯನ್ನು ಕೊಟ್ಟಿದ್ದವನು ಇವನೇ.
ಯೋಹಾನನು 18 : 15 (ERVKN)
ಪೇತ್ರನ ವಿಶ್ವಾಸದ್ರೋಹ (ಮತ್ತಾಯ 26:69-70; ಮಾರ್ಕ 14:66-68; ಲೂಕ 22:55-57) ಸೀಮೋನ್ ಪೇತ್ರ ಮತ್ತು ಯೇಸುವಿನ ಶಿಷ್ಯರಲ್ಲಿ ಮತ್ತೊಬ್ಬನು ಯೇಸುವಿನೊಂದಿಗೆ ಹೋದರು. ಆ ಮತ್ತೊಬ್ಬ ಶಿಷ್ಯನಿಗೆ ಪ್ರಧಾನಯಾಜಕನ ಪರಿಚಯವಿತ್ತು. ಆದ್ದರಿಂದ ಅವನು ಪ್ರಧಾನ ಯಾಜಕನ ಮನೆಯ ಅಂಗಳದೊಳಗೆ ಹೋದನು.
ಯೋಹಾನನು 18 : 16 (ERVKN)
ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು.
ಯೋಹಾನನು 18 : 17 (ERVKN)
ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು. ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.
ಯೋಹಾನನು 18 : 18 (ERVKN)
ಆಗ ಚಳಿಯಿದ್ದುದರಿಂದ ಕಾವಲುಗಾರರು ಬೆಂಕಿ ಹಾಕಿ ಅದರ ಸುತ್ತಲೂ ನಿಂತುಕೊಂಡು ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಪೇತ್ರನು ಅವರೊಂದಿಗೆ ನಿಂತುಕೊಂಡಿದ್ದನು.
ಯೋಹಾನನು 18 : 19 (ERVKN)
ಪ್ರಧಾನಯಾಜಕನು ಮಾಡಿದ ವಿಚಾರಣೆ (ಮತ್ತಾಯ 26:59-66; ಮಾರ್ಕ 14:55-64; ಲೂಕ 22:66-71) ಪ್ರಧಾನಯಾಜಕನು ಯೇಸುವಿಗೆ ಆತನ ಶಿಷ್ಯರ ಬಗ್ಗೆಯೂ ಆತನು ಉಪದೇಶಿಸಿದ ಸಂಗತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದನು.
ಯೋಹಾನನು 18 : 20 (ERVKN)
ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಜನರೊಂದಿಗೆ ಮಾತಾಡಿದ್ದೇನೆ; ಯಾವಾಗಲೂ ಸಭಾಮಂದಿರಗಳಲ್ಲಿ ಮತ್ತು ದೇವಾಲಯದಲ್ಲಿ ಬೋಧಿಸಿದ್ದೇನೆ. ಯೆಹೂದ್ಯರೆಲ್ಲರೂ ಅಲ್ಲಿಗೆ ಒಟ್ಟಾಗಿ ಸೇರಿಬರುತ್ತಿದ್ದರು. ನಾನು ಯಾವುದನ್ನೂ ರಹಸ್ಯವಾಗಿ ಎಂದೂ ಹೇಳಿಲ್ಲ.
ಯೋಹಾನನು 18 : 21 (ERVKN)
ಹೀಗಿರಲು, ನೀನು ನನ್ನನ್ನು ಪ್ರಶ್ನಿಸುವುದೇಕೆ? ನನ್ನ ಉಪದೇಶವನ್ನು ಕೇಳಿದ ಜನರನ್ನು ಕೇಳು. ನಾನು ಹೇಳಿದ್ದನ್ನು ಅವರು ಬಲ್ಲರು” ಎಂದು ಉತ್ತರಕೊಟ್ಟನು.
ಯೋಹಾನನು 18 : 22 (ERVKN)
ಯೇಸು ಹೀಗೆ ಹೇಳಿದ ಕೂಡಲೇ, ಅಲ್ಲಿ ನಿಂತಿದ್ದ ಕಾವಲುಗಾರರಲ್ಲಿ ಒಬ್ಬನು ಯೇಸುವಿಗೆ ಹೊಡೆದು, “ನೀನು ಪ್ರಧಾನಯಾಜಕನೊಂದಿಗೆ ಆ ರೀತಿ ಮಾತಾಡಕೂಡದು” ಎಂದನು.
ಯೋಹಾನನು 18 : 23 (ERVKN)
ಯೇಸು, “ನಾನು ತಪ್ಪಾಗಿ ಮಾತಾಡಿದ್ದರೆ, ನಾನು ಹೇಳಿದ್ದು ತಪ್ಪೆಂದು ಎಲ್ಲರಿಗೂ ತೋರಿಸಿಕೊಡು. ಆದರೆ ನಾನು ಹೇಳಿದ್ದು ಸರಿಯಾಗಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದು ಉತ್ತರಕೊಟ್ಟನು.
ಯೋಹಾನನು 18 : 24 (ERVKN)
ಆಗ ಅನ್ನನು ಯೇಸುವನ್ನು ಮತ್ತೆ ಕಟ್ಟಿಸಿ, ಪ್ರಧಾನಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
ಯೋಹಾನನು 18 : 25 (ERVKN)
ಮತ್ತೊಮ್ಮೆ ಪೇತ್ರನ ವಿಶ್ವಾಸದ್ರೋಹ (ಮತ್ತಾಯ 26:71-75; ಮಾರ್ಕ 14:69-72; ಲೂಕ 22:58-62) ಸೀಮೋನ್ ಪೇತ್ರನು ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾ ಬೆಂಕಿಯ ಸಮೀಪದಲ್ಲಿ ನಿಂತುಕೊಂಡಿದ್ದನು. ಅಲ್ಲಿದ್ದವರು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದರು. ಆದರೆ ಪೇತ್ರನು, “ಇಲ್ಲ, ನಾನಲ್ಲ!” ಎಂದು ಹೇಳಿದನು.
ಯೋಹಾನನು 18 : 26 (ERVKN)
ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು ಪೇತ್ರನಿಂದ ಕಿವಿ ಕತ್ತರಿಸಿಹಾಕಲ್ಪಟ್ಟ ಸೇವಕನ ಸಂಬಂಧಿಕನಾಗಿದ್ದನು. ಆ ಸೇವಕನು, “ನೀನು ತೋಟದಲ್ಲಿ ಅವನೊಂದಿಗೆ (ಯೇಸುವಿನೊಂದಿಗೆ) ಇದ್ದುದನ್ನು ನಾನು ನೋಡಿದಂತಿದೆ!” ಎಂದು ಹೇಳಿದನು.
ಯೋಹಾನನು 18 : 27 (ERVKN)
ಆದರೆ ಪೇತ್ರನು ಮತ್ತೆ, “ಇಲ್ಲ, ನಾನು ಆತನೊಂದಿಗೆ ಇರಲಿಲ್ಲ!” ಎಂದನು. ಆ ಕೂಡಲೇ ಕೋಳಿ ಕೂಗಿತು. (ಮತ್ತಾಯ 27:1-2, 11-31; ಮಾರ್ಕ 15:1-20; ಲೂಕ 23:1-25)
ಯೋಹಾನನು 18 : 28 (ERVKN)
ಪಿಲಾತನ ಮುಂದೆ ಯೇಸು ಬಳಿಕ ಯೆಹೂದ್ಯರು ಯೇಸುವನ್ನು ಕಾಯಫನ ಮನೆಯಿಂದ ರೋಮ್ ರಾಜ್ಯಪಾಲನ ಭವನಕ್ಕೆ ಕರೆದುಕೊಂಡು ಬಂದರು. ಆಗ ಮುಂಜಾನೆಯಾಗಿತ್ತು. ಯೆಹೂದ್ಯರು ಭವನದೊಳಗೆ ಹೋಗಲಿಲ್ಲ. ಅವರು ಪಸ್ಕಹಬ್ಬದ ಊಟಮಾಡ ಬೇಕೆಂದಿದ್ದ ಕಾರಣ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ.
ಯೋಹಾನನು 18 : 29 (ERVKN)
ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.
ಯೋಹಾನನು 18 : 30 (ERVKN)
ಯೆಹೂದ್ಯರು, “ಇವನು ಒಬ್ಬ ಕೆಟ್ಟ ಮನುಷ್ಯ. ಆದಕಾರಣ, ನಾವು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆವು” ಎಂದು ಉತ್ತರಕೊಟ್ಟರು.
ಯೋಹಾನನು 18 : 31 (ERVKN)
ಪಿಲಾತನು ಯೆಹೂದ್ಯರಿಗೆ, “ಯೆಹೂದ್ಯರಾದ ನೀವೇ ಇವನನ್ನು ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ತೀರ್ಪುಮಾಡಿ” ಎಂದು ಹೇಳಿದನು. ಯೆಹೂದ್ಯರು, “ಆದರೆ ಒಬ್ಬನಿಗೆ ಮರಣದಂಡನೆ ವಿಧಿಸಲು ನಿನ್ನ ಕಾನೂನು ನಮಗೆ ಅವಕಾಶ ಕೊಡುವುದಿಲ್ಲ” ಎಂದು ಉತ್ತರಕೊಟ್ಟರು.
ಯೋಹಾನನು 18 : 32 (ERVKN)
(ತಾನು ಸಾಯುವ ರೀತಿಯ ಬಗ್ಗೆ ಯೇಸು ಹೇಳಿದ್ದ ಮಾತು ಹೀಗೆ ನಿಜವಾಯಿತು.)
ಯೋಹಾನನು 18 : 33 (ERVKN)
ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.
ಯೋಹಾನನು 18 : 34 (ERVKN)
ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.
ಯೋಹಾನನು 18 : 35 (ERVKN)
ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.
ಯೋಹಾನನು 18 : 36 (ERVKN)
ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.
ಯೋಹಾನನು 18 : 37 (ERVKN)
ಪಿಲಾತನು, “ಹಾಗಾದರೆ ನೀನು ರಾಜ!” ಎಂದನು. ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.
ಯೋಹಾನನು 18 : 38 (ERVKN)
ಪಿಲಾತನು, “ಸತ್ಯವೆಂದರೇನು?” ಎಂದು ಕೇಳಿ, ಮತ್ತೆ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದನು. ಅವನು ಯೆಹೂದ್ಯರಿಗೆ, “ಈ ಮನುಷ್ಯನ ಮೇಲೆ ಅಪವಾದ ಹೊರಿಸಲು ನನಗೆ ಏನೂ ಕಾಣುತ್ತಿಲ್ಲ.
ಯೋಹಾನನು 18 : 39 (ERVKN)
ಆದರೆ ಪಸ್ಕಹಬ್ಬದ ಕಾಲದಲ್ಲಿ ನಾನು ನಿಮಗೋಸ್ಕರ ಕೈದಿಗಳಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು ನಿಮ್ಮ ಪದ್ಧತಿಯಾಗಿದೆ. ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ?” ಎಂದು ಕೇಳಿದನು.
ಯೋಹಾನನು 18 : 40 (ERVKN)
ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40