ಯೋವೇಲ 1 : 1 (ERVKN)
ಮಿಡತೆಗಳು ಬೆಳೆಯನ್ನು ನಾಶಮಾಡುವವು ಪೆತೂವೇಲನ ಮಗನಾದ ಯೋವೇಲನು ಯೆಹೋವನಿಂದ ಈ ಸಂದೇಶವನ್ನು ಪಡೆದನು.
ಯೋವೇಲ 1 : 2 (ERVKN)
ನಾಯಕರೇ, ಈ ಸಂದೇಶಕ್ಕೆ ಕಿವಿಗೊಡಿರಿ. ದೇಶದಲ್ಲಿ ವಾಸಿಸುವ ಎಲ್ಲಾ ಜನರೇ, ನನ್ನ ಮಾತುಗಳನ್ನು ಆಲೈಸಿರಿ.
ನಿಮ್ಮ ಜೀವಮಾನಕಾಲದಲ್ಲಿ ಇಂಥಾ ಸಂಗತಿ ಎಂದಾದರೂ ಸಂಭವಿಸಿದೆಯೋ? ಇಲ್ಲ! ನಿಮ್ಮ ತಂದೆಗಳ ಕಾಲದಲ್ಲಿಯಾದರೂ ಇಂಥಾ ಸಂಗತಿಗಳು ಸಂಭವಿಸಿದೆಯೋ? ಇಲ್ಲ!
ಯೋವೇಲ 1 : 3 (ERVKN)
ಇವುಗಳನ್ನು ನೀವು ನಿಮ್ಮ ಮಕ್ಕಳಿಗೆ ತಿಳಿಸುವಿರಿ. ಮತ್ತು ನಿಮ್ಮ ಮಕ್ಕಳು ಅವರ ಮಕ್ಕಳಿಗೆ ತಿಳಿಸುವರು. ಮತ್ತು ನಿಮ್ಮ ಮೊಮ್ಮಕ್ಕಳು ಅವರ ನಂತರದ ಪೀಳಿಗೆಗೆ ತಿಳಿಸುವರು.
ಯೋವೇಲ 1 : 4 (ERVKN)
ಚೂರಿ ಮಿಡತೆ ತಿಂದುಬಿಟ್ಟಿದ್ದನ್ನು ಗುಂಪು ಮಿಡತೆ ತಿಂದಿತು.
ಗುಂಪು ಮಿಡತೆ ತಿಂದುಬಿಟ್ಟದ್ದನ್ನು ಹಾರುವ ಮಿಡತೆ ತಿಂದಿತು.
ಹಾರುವ ಮಿಡತೆ ತಿಂದು ಉಳಿದದ್ದನ್ನು ನಾಶಮಾಡುವ ಮಿಡತೆ ತಿಂದುಬಿಟ್ಟಿತು.
ಯೋವೇಲ 1 : 5 (ERVKN)
ಮಿಡತೆಗಳು ಆಗಮಿಸಿದವು ಅಮಲೇರಿದವರೇ, ಎಚ್ಚರಗೊಂಡು ಅಳಿರಿ. ದ್ರಾಕ್ಷಾರಸವನ್ನು ಕುಡಿಯುವವರೇ, ಅಳಿರಿ.
ಯಾಕೆಂದರೆ ನಿಮ್ಮ ಸಿಹಿಯಾದ ದ್ರಾಕ್ಷಾರಸವು ಮುಗಿದುಹೋಯಿತು. ಆ ದ್ರಾಕ್ಷಾರಸದ ಸವಿಯು ನಿಮಗೆ ಇನ್ನು ಸಿಗದು.
ಯೋವೇಲ 1 : 6 (ERVKN)
ನನ್ನ ಜನಾಂಗಕ್ಕೆ ವಿರುದ್ಧವಾಗಿ ಬಲಶಾಲಿಯಾದ ದೊಡ್ಡ ರಾಜ್ಯವು ಯುದ್ಧಕ್ಕೆ ಬರುವದು. ಅವರು ಸೈನಿಕರನ್ನು ಲೆಕ್ಕಿಸಲು ಸಾಧ್ಯವಿಲ್ಲ.
ಆ ಮಿಡತೆಗಳಂತಿರುವ ಸೈನಿಕರು ನಿಮ್ಮನ್ನು ಸೀಳಿಬಿಡುವರು. ಅವರ ಹಲ್ಲುಗಳು ಸಿಂಹದ ಹಲ್ಲಿನಂತಿವೆ.
ಯೋವೇಲ 1 : 7 (ERVKN)
ಆ ಮಿಡತೆಗಳು ನನ್ನ ದ್ರಾಕ್ಷಿತೋಟದ ಹಣ್ಣುಗಳನ್ನೆಲ್ಲಾ ತಿಂದುಬಿಡುವವು.
ನನ್ನ ಅಂಜೂರದ ಮರಗಳನ್ನು ನಾಶಮಾಡುವವು. ನನ್ನ ಮರಗಳ ತೊಗಟೆಗಳನ್ನು ಮಿಡತೆಗಳು ತಿಂದುಬಿಡುವವು.
ಅದರ ಕೊಂಬೆಗಳು ಬಿಳುಪಾಗುವವು. ಮರಗಳು ನಾಶವಾಗುವವು.
ಯೋವೇಲ 1 : 8 (ERVKN)
ಜನರು ಬೊಬ್ಬಿಡುತ್ತಾರೆ ಮದುಮಗನು ಸತ್ತುಹೋದಾಗ ಮದುಮಗಳು ಗೋಳಾಡುವಂತೆ ನೀವು ಗೋಳಾಡಿರಿ.
ಯೋವೇಲ 1 : 9 (ERVKN)
ಯಾಜಕರೇ, ಯೆಹೋವನ ಸೇವಕರೇ, ಗೋಳಾಡಿರಿ. ಯಾಕೆಂದರೆ ಇನ್ನು ಮುಂದೆ ಯೆಹೋವನ ಆಲಯದಲ್ಲಿ ಪಾನ ಮತ್ತು ಧಾನ್ಯಾರ್ಪಣೆ ಇರದು.
ಯೋವೇಲ 1 : 10 (ERVKN)
ಹೊಲಗದ್ದೆಗಳೆಲ್ಲಾ ನಾಶವಾದವು. ಭೂಮಿಯೂ ಗೋಳಾಡುತ್ತಿರುವುದು. ಯಾಕೆಂದರೆ ಧಾನ್ಯವು ನಾಶವಾದವು.
ಹೊಸ ದ್ರಾಕ್ಷಾರಸವು ಬತ್ತಿಹೋಯಿತು. ಎಣ್ಣೆಯು ಇಲ್ಲದೆಹೋಯಿತು.
ಯೋವೇಲ 1 : 11 (ERVKN)
ರೈತರೇ, ದುಃಖಿಸಿರಿ, ದ್ರಾಕ್ಷಿತೋಟ ಮಾಡಿದವರೇ, ಗಟ್ಟಿಯಾಗಿ ಬೊಬ್ಬಿಡಿರಿ.
ಗೋದಿಗಾಗಿಯೂ, ಜವೆಗೋದಿಗಾಗಿಯೂ ಅಳಿರಿ. ಯಾಕೆಂದರೆ ಬೆಳೆಯು ನಾಶವಾಯಿತು.
ಯೋವೇಲ 1 : 12 (ERVKN)
ದ್ರಾಕ್ಷಿಬಳ್ಳಿಗಳು ಒಣಗಿಹೋಗಿವೆ ಮತ್ತು ಅಂಜೂರದ ಮರವು ಸಾಯುತ್ತಲಿದೆ. ದಾಳಿಂಬದ ಮರ, ಖರ್ಜೂರದ ಮರ, ಸೇಬಿನ ಮರ,
ತೋಟದಲ್ಲಿರುವ ಎಲ್ಲಾ ಮರಗಳು ಒಣಗಿಹೋಗಿವೆ. ಜನರಲ್ಲಿರುವ ಸಂತೋಷವೂ ಬತ್ತಿಹೋಗಿದೆ.
ಯೋವೇಲ 1 : 13 (ERVKN)
ಯಾಜಕರೇ, ನೀವು ನಿಮ್ಮ ಶೋಕವಸ್ತ್ರವನ್ನು ಧರಿಸಿ ಗಟ್ಟಿಯಾಗಿ ರೋಧಿಸಿರಿ. ವೇದಿಕೆಯಲ್ಲಿ ಸೇವೆಮಾಡುವವರೇ, ಗಟ್ಟಿಯಾಗಿ ರೋಧಿಸಿರಿ.
ನನ್ನ ದೇವರ ಸೇವಕರೇ, ನೀವು ನಿಮ್ಮ ಶೋಕವಸ್ತ್ರಗಳಲ್ಲಿಯೇ ನಿದ್ರೆಮಾಡಿರಿ. ಯಾಕೆಂದರೆ ಇನ್ನು ದೇವಾಲಯದಲ್ಲಿ ಧಾನ್ಯ ಮತ್ತು ಪಾನಸಮರ್ಪಣೆ ಇಲ್ಲ.
ಯೋವೇಲ 1 : 14 (ERVKN)
ಮಿಡತೆಗಳ ಭಯಂಕರ ನಾಶನ ಉಪವಾಸ ದಿನವನ್ನು ಗೊತ್ತುಪಡಿಸಿರಿ. ಆ ದಿನಕ್ಕಾಗಿ ಜನರನ್ನು ಒಟ್ಟುಗೂಡಿಸಿರಿ. ದೇಶದಲ್ಲಿ ವಾಸವಾಗಿರುವ ನಾಯಕರುಗಳೆಲ್ಲರನ್ನೂ ಜನರನ್ನೂ ಒಟ್ಟುಗೂಡಿಸಿರಿ; ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಅವರನ್ನೆಲ್ಲ ಪ್ರಾರ್ಥನೆಗಾಗಿ ಕರೆದುಕೊಂಡು ಬನ್ನಿರಿ.
ಯೋವೇಲ 1 : 15 (ERVKN)
ಶೋಕಿಸಿರಿ. ಯಾಕೆಂದರೆ ಯೆಹೋವನ ಮಹಾದಿನವು ಹತ್ತಿರ ಬಂತು. ಆ ಸಮಯದಲ್ಲಿ ಸರ್ವಶಕ್ತನಾದ ದೇವರ ಸನ್ನಿಧಾನದಿಂದ ದಂಡನೆಯು ಬರುವುದು.
ಯೋವೇಲ 1 : 16 (ERVKN)
ನಮಗೆ ಆಹಾರವು ಇಲ್ಲದೆ ಹೋಯಿತು. ಆನಂದವೂ ಸಂತೋಷವೂ ನಮ್ಮ ದೇವಾಲಯದಿಂದ ಹೊರಟುಹೋದವು.
ಯೋವೇಲ 1 : 17 (ERVKN)
ನಾವು ಬೀಜ ಬಿತ್ತಿದೆವು. ಆದರೆ ಅವು ಒಣಗಿ, ಸತ್ತು ಈಗ ನೆಲದ ಮೇಲೆ ಬಿದ್ದಿವೆ. ನಮ್ಮ ಗಿಡಗಳೆಲ್ಲಾ ಒಣಗಿ ಸತ್ತಿವೆ. ನಮ್ಮ ಉಗ್ರಾಣವು ಬರಿದಾಗಿದ್ದು ಬೀಳುತ್ತಲಿದೆ.
ಯೋವೇಲ 1 : 18 (ERVKN)
ಪ್ರಾಣಿಗಳು ಹಸಿವಿನಿಂದ ನರಳಾಡುತ್ತಿವೆ. ಪ್ರಾಣಿಗಳ ಹಿಂಡು ಗಲಿಬಿಲಿಗೊಂಡು ಅಡ್ಡಾಡುತ್ತವೆ. ಅವುಗಳಿಗೆ ತಿನ್ನಲು ಹುಲ್ಲು ಇಲ್ಲ. ಕುರಿಗಳು ಸಾಯುತ್ತಿವೆ.
ಯೋವೇಲ 1 : 19 (ERVKN)
ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ. ನಮ್ಮ ಹಸಿರು ಹೊಲಗದ್ದೆಗಳು ಬೆಂಕಿಯಿಂದ ಮರುಭೂಮಿಯಾದವು. ಹೊಲದಲ್ಲಿದ್ದ ಮರಗಳನ್ನೆಲ್ಲಾ ಬೆಂಕಿಯು ದಹಿಸಿತು.
ಯೋವೇಲ 1 : 20 (ERVKN)
ಕಾಡುಪ್ರಾಣಿಗಳೂ ಬಾಯಾರಿ ನಿನ್ನ ಕಡೆಗೆ ನೋಡುತ್ತಿವೆ. ನೀರಿನ ತೊರೆಗಳು ಬತ್ತಿಹೋಗಿವೆ. ನೀರೇ ಇಲ್ಲ. ನಮ್ಮ ಹಸಿರು ಹುಲ್ಲುಗಾವಲು ಬೆಂಕಿಯ ದೆಸೆಯಿಂದ ಮರುಭೂಮಿಯಾಗಿರುತ್ತದೆ.

1 2 3 4 5 6 7 8 9 10 11 12 13 14 15 16 17 18 19 20