ಯೆರೆಮಿಯ 34 : 1 (ERVKN)
ಯೆಹೂದದ ರಾಜನಾದ ಚಿದ್ಕೀಯನಿಗೆ ಒಂದು ಎಚ್ಚರಿಕೆ ಯೆಹೋವನಿಂದ ಯೆರಮೀಯನಿಗೆ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಊರುಗಳ ವಿರುದ್ಧ ಯುದ್ಧ ಮಾಡುತ್ತಿದ್ದಾಗ ಈ ಸಂದೇಶ ಬಂದಿತು. ಆಗ ನೆಬೂಕದ್ನೆಚ್ಚರನ ಸಂಗಡ ಅವನ ಸಮಸ್ತ ಸೈನ್ಯವು ಮತ್ತು ಅವನ ಸಾಮ್ರಾಜ್ಯದಲ್ಲಿದ್ದ ಎಲ್ಲಾ ರಾಜ್ಯಗಳ ಮತ್ತು ಜನರ ಸೈನ್ಯವು ಇತ್ತು.
ಯೆರೆಮಿಯ 34 : 2 (ERVKN)
ಆ ಸಂದೇಶ ಹೀಗಿತ್ತು: “ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: ಯೆರೆಮೀಯನೇ, ಯೆಹೂದದ ರಾಜನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಈ ಸಂದೇಶವನ್ನು ತಿಳಿಸು. ‘ಚಿದ್ಕೀಯನೇ, ಯೆಹೋವನು ಹೀಗೆ ಹೇಳುತ್ತಾನೆ: ಅತಿ ಶೀಬ್ರದಲ್ಲಿ ನಾನು ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ; ಅವನು ಅದನ್ನು ಸುಟ್ಟುಬಿಡುತ್ತಾನೆ.
ಯೆರೆಮಿಯ 34 : 3 (ERVKN)
ಚಿದ್ಕೀಯನೇ, ನೀನು ಬಾಬಿಲೋನಿನ ರಾಜನಿಂದ ತಪ್ಪಿಸಿಕೊಳ್ಳಲಾರೆ. ನಿಶ್ಚಿತವಾಗಿ ನಿನ್ನನ್ನು ಹಿಡಿದು ಅವನಿಗೆ ಒಪ್ಪಿಸಲಾಗುವುದು. ಬಾಬಿಲೋನಿನ ರಾಜನನ್ನು ನೀನು ಪ್ರತ್ಯಕ್ಷವಾಗಿ ನೋಡುವೆ. ಅವನು ನಿನ್ನೊಂದಿಗೆ ಮುಖಾಮುಖಿಯಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಹೋಗುವೆ.
ಯೆರೆಮಿಯ 34 : 4 (ERVKN)
ಯೆಹೂದದ ರಾಜನಾದ ಚಿದ್ಕೀಯನೇ, ಯೆಹೋವನ ವಾಗ್ದಾನವನ್ನು ಕೇಳು. ಯೆಹೋವನು ನಿನ್ನ ಬಗ್ಗೆ ಹೀಗೆ ಹೇಳುತ್ತಾನೆ. ನಿನ್ನನ್ನು ಖಡ್ಗದಿಂದ ಕೊಲ್ಲಲಾಗುವುದಿಲ್ಲ.
ಯೆರೆಮಿಯ 34 : 5 (ERVKN)
ನೀನು ಸಮಾಧಾನದಿಂದ ಸಾಯುವೆ. ನೀನು ರಾಜನಾಗುವ ಮುನ್ನ ಆಳಿದ ನಿನ್ನ ಪೂರ್ವಿಕರಿಗೆ ಗೌರವ ತೋರುವದಕ್ಕಾಗಿ ಜನರು ಶವಸಂಸ್ಕಾರದ ಧೂಪವನ್ನು ಹಾಕಿದ್ದರು. ಹಾಗೆಯೇ ನಿನ್ನನ್ನು ಗೌರವಿಸಲು ಜನರು ಶವಸಂಸ್ಕಾರದ ಧೂಪವನ್ನು ಹಾಕುವರು. ಅವರು ನಿನಗೋಸ್ಕರ ಅಳುವರು. ಅವರು ದುಃಖದಿಂದ, “ಅಯ್ಯೋ, ಯೆಹೋವನೇ” ಎಂದು ಗೋಳಾಡುವರು. ಸಬತಃ ನಾನೇ ನಿನಗೆ ಈ ವಾಗ್ದಾನವನ್ನು ಮಾಡುತ್ತಿದ್ದೇನೆ.’ ” ಇದು ಯೆಹೋವನ ನುಡಿ.
ಯೆರೆಮಿಯ 34 : 6 (ERVKN)
ಆದ್ದರಿಂದ ಯೆರೆಮೀಯನು ಜೆರುಸಲೇಮಿನಲ್ಲಿದ್ದ ಚಿದ್ಕೀಯನಿಗೆ ಯೆಹೋವನ ಸಂದೇಶವನ್ನು ಕೊಟ್ಟನು.
ಯೆರೆಮಿಯ 34 : 7 (ERVKN)
ಆಗ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುತ್ತಿತ್ತು. ಬಾಬಿಲೋನಿನ ಸೈನ್ಯವು ತಾನು ಇನ್ನೂ ಸ್ವಾಧೀನಪಡಿಸಿಕೊಳ್ಳದ ಯೆಹೂದದ ನಗರಗಳ ವಿರುದ್ಧ ಕೂಡ ಹೋರಾಡುತ್ತಿತ್ತು. ಆ ಪಟ್ಟಣಗಳೆಂದರೆ ಲಾಕೀಷ್ ಮತ್ತು ಅಜೇಕ. ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ನಗರಗಳೆಂದರೆ ಇವೆರಡೇ.
ಯೆರೆಮಿಯ 34 : 8 (ERVKN)
ಜನರು ಒಡಂಬಡಿಕೆಯನ್ನು ಮುರಿದರು ರಾಜನಾದ ಚಿದ್ಕೀಯನು ಜೆರುಸಲೇಮಿನ ಎಲ್ಲಾ ಜನರೊಂದಿಗೆ ಇಬ್ರಿಯದ ಗುಲಾಮರೆಲ್ಲರನ್ನೂ ಬಿಡುಗಡೆ ಮಾಡುವದಾಗಿ ಮಾತುಕೊಟ್ಟಿದ್ದನು. ಚಿದ್ಕೀಯನು ಹೀಗೆ ಮಾತುಕೊಟ್ಟ ತರುವಾಯ ಯೆಹೋವನಿಂದ ಯೆರೆಮೀಯನಿಗೆ ಒಂದು ಸಂದೇಶ ಬಂದಿತು.
ಯೆರೆಮಿಯ 34 : 9 (ERVKN)
ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ದಾಸದಾಸಿಯರನ್ನು ಬಿಡುಗಡೆ ಮಾಡಬೇಕಾಗಿತ್ತು. ಯೆಹೂದದ ಕುಲದ ಯಾರನ್ನೂ ಗುಲಾಮರನ್ನಾಗಿ ಇಟ್ಟುಕೊಳ್ಳುವಂತಿರಲಿಲ್ಲ.
ಯೆರೆಮಿಯ 34 : 10 (ERVKN)
ಆದ್ದರಿಂದ ಯೆಹೂದದ ಸಮಸ್ತ ಮುಖಂಡರು ಮತ್ತು ಎಲ್ಲಾ ಜನರು ತಮ್ಮ ದಾಸದಾಸಿಯರನ್ನು ಬಿಡುಗಡೆ ಮಾಡುವುದಾಗಿಯೂ ಅವರಿಂದ ಮುಂದೆ ಕೆಲಸ ಮಾಡಿಸುವದಿಲ್ಲ ಎಂಬುದಾಗಿಯೂ ಒಪ್ಪಿಕೊಂಡರು. ಆದ್ದರಿಂದ ಎಲ್ಲಾ ಗುಲಾಮರನ್ನು ಬಿಡುಗಡೆ ಮಾಡಲಾಯಿತು.
ಯೆರೆಮಿಯ 34 : 11 (ERVKN)
ಬಳಿಕ ಗುಲಾಮರನ್ನು ಇಟ್ಟುಕೊಂಡಿದ್ದ ಜನರು ತಮ್ಮ ಮನಸ್ಸನ್ನು ಬದಲಾಯಿಸಿ ತಾವು ಬಿಡುಗಡೆ ಮಾಡಿದ ಜನರನ್ನು ಪುನಃ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.
ಯೆರೆಮಿಯ 34 : 12 (ERVKN)
ಆಗ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು:
ಯೆರೆಮಿಯ 34 : 13 (ERVKN)
ಯೆರೆಮೀಯನೇ, ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: “ನಾನು ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮ ಪೂರ್ವಿಕರನ್ನು ಅಲ್ಲಿಂದ ಹೊರತಂದೆನು. ನಾನು ಹಾಗೆ ಮಾಡಿದಾಗ ಅವರ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆ.
ಯೆರೆಮಿಯ 34 : 14 (ERVKN)
ನಾನು ನಿಮ್ಮ ಪೂರ್ವಿಕರಿಗೆ ‘ಪ್ರತಿ ಏಳು ವರ್ಷದ ಕೊನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಬೇಕು. ತನ್ನನ್ನು ನಿಮಗೆ ಮಾರಿಕೊಂಡ ಇಬ್ರಿಯ ಸಹೋದರ ನಿಮ್ಮಲ್ಲಿದ್ದರೆ ಅವನು ಆರು ವರ್ಷ ಸೇವೆಮಾಡಿದ ನಂತರ ಅವನನ್ನು ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ; ನನ್ನ ಕಡೆಗೆ ಗಮನ ಕೊಡಲಿಲ್ಲ.
ಯೆರೆಮಿಯ 34 : 15 (ERVKN)
ಸ್ವಲ್ಪಕಾಲದ ಹಿಂದೆ ನೀವು ನೀತಿಯುತವಾದದ್ದನ್ನು ಮಾಡಬೇಕೆಂದು ನಿಮ್ಮ ಮನಸ್ಸನ್ನು ಬದಲಾಯಿಸಿದಿರಿ. ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮಲ್ಲಿದ್ದ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಿದಿರಿ. ನೀವು ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಂದು ಒಡಂಬಡಿಕೆಯನ್ನು ಸಹ ಮಾಡಿಕೊಂಡಿರಿ.
ಯೆರೆಮಿಯ 34 : 16 (ERVKN)
ಆದರೆ ಈಗ ನೀವು ಮನಸ್ಸನ್ನು ಬದಲಾಯಿಸಿದ್ದೀರಿ. ನೀವು ನನ್ನ ಹೆಸರಿಗೆ ಗೌರವ ಕೊಡುವದಿಲ್ಲವೆಂಬುದನ್ನು ತೋರಿಸಿದ್ದೀರಿ. ನೀವು ಇದನ್ನು ಹೇಗೆ ಮಾಡಿದಿರಿ? ನಿಮ್ಮಲ್ಲಿ ಪ್ರತಿಯೊಬ್ಬರು ನೀವು ಬಿಡುಗಡೆ ಮಾಡಿದ ದಾಸದಾಸಿಯರನ್ನು ಹಿಂದಕ್ಕೆ ತೆಗೆದುಕೊಂಡಿರುವಿರಿ. ಅವರು ಪುನಃ ಗುಲಾಮರಾಗುವಂತೆ ಒತ್ತಾಯಿಸಿರುವಿರಿ.
ಯೆರೆಮಿಯ 34 : 17 (ERVKN)
“ಅದಕ್ಕಾಗಿ ಯೆಹೋವನು ಹೀಗೆನ್ನುತ್ತಾನೆ: ‘ನೀವು ನನ್ನ ಆಜ್ಞಾಪಾಲನೆಯನ್ನು ಮಾಡಿಲ್ಲ. ನೀವು ನಿಮ್ಮ ಸಹೋದರರಾದ ಇಬ್ರಿಯರಿಗೆ ಸಾಬತಂತ್ರ್ಯವನ್ನು ಕೊಟ್ಟಿಲ್ಲ. ನೀವು ಒಡಂಬಡಿಕೆಗನುಸಾರವಾಗಿ ನಡೆದುಕೊಂಡಿಲ್ಲ. ಅದಕ್ಕಾಗಿ ನಾನು “ಸಾಬತಂತ್ರ್ಯವನ್ನು ಕೊಡುತ್ತೇನೆ.” ಇದು ಯೆಹೋವನ ನುಡಿ. ಖಡ್ಗ, ಭಯಂಕರವಾದ ವ್ಯಾಧಿ ಮತ್ತು ಹಸಿವು ಇವುಗಳಿಗೆ ನಿಮ್ಮನ್ನು ಕೊಲ್ಲುವ “ಸಾಬತಂತ್ರ್ಯವನ್ನು” ನಾನು ಕೊಡುತ್ತೇನೆ. ಈ ವಿಷಯ ಕೇಳಿ ಭೂಲೋಕದ ಸಮಸ್ತ ರಾಜ್ಯಗಳು ಭಯಪಡುವಂತೆ ಮಾಡುತ್ತೇನೆ.
ಯೆರೆಮಿಯ 34 : 18 (ERVKN)
ನನ್ನ ಒಡಂಬಡಿಕೆಯನ್ನು ಮುರಿದ ಮತ್ತು ನನ್ನ ಸಮ್ಮುಖದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಜನರನ್ನು ನಾನು ತ್ಯಜಿಸುವೆನು. ಇವರು ನನ್ನ ಮುಂದೆ ಒಂದು ಕರುವನ್ನು ಎರಡು ತುಂಡುಗಳಾಗಿ ಕತ್ತರಿಸಿ ಇಟ್ಟು ಆ ಎರಡು ತುಂಡುಗಳ ಮಧ್ಯದಿಂದ ಹಾದುಹೋದರು.
ಯೆರೆಮಿಯ 34 : 19 (ERVKN)
ಯೆಹೂದದ ಮತ್ತು ಜೆರುಸಲೇಮಿನ ನಾಯಕರು, ಪ್ರಮುಖ ಅಧಿಕಾರಿಗಳು, ಯಾಜಕರು ಮತ್ತು ದೇಶದ ಸಕಲ ಜನರು ಇವರೆಲ್ಲ ನನ್ನ ಮುಂದೆ ಒಡಂಬಡಿಕೆಯನ್ನು ಮಾಡಿದಾಗ ಕರುವಿನ ಶರೀರದ ಎರಡು ತುಂಡುಗಳ ಮಧ್ಯದಿಂದ ಹಾದುಹೋದರು.
ಯೆರೆಮಿಯ 34 : 20 (ERVKN)
ಆದ್ದರಿಂದ ನಾನು ಆ ಜನರನ್ನು ಅವರ ವೈರಿಗಳಿಗೆ ಮತ್ತು ಅವರನ್ನು ಕೊಲ್ಲಲು ಇಚ್ಛಿಸುವ ಪ್ರತಿಯೊಬ್ಬರಿಗೆ ಕೊಡುತ್ತೇನೆ. ಆ ಜನರ ದೇಹಗಳು ಗಾಳಿಯಲ್ಲಿ ಹಾರಾಡುವ ಪಕ್ಷಿಗಳಿಗೂ ಭೂಮಿಯ ಮೇಲಿನ ಕಾಡುಪ್ರಾಣಿಗಳಿಗೂ ಆಹಾರವಾಗುವವು.
ಯೆರೆಮಿಯ 34 : 21 (ERVKN)
ಯೆಹೂದದ ರಾಜನಾದ ಚಿದ್ಕೀಯನನ್ನೂ ಅವನ ನಾಯಕರುಗಳನ್ನೂ ನಾನು ಅವರ ಶತ್ರುಗಳಿಗೂ ಅವರನ್ನು ಕೊಲ್ಲಬಯಸುವ ಜನರಿಗೂ ಕೊಡುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋಗಿದ್ದರೂ ನಾನು ಚಿದ್ಕೀಯ ಮತ್ತು ಅವನ ಜನರನ್ನು ಬಾಬಿಲೋನಿನ ಸೈನಿಕರ ಕೈಗೆ ಒಪ್ಪಿಸುತ್ತೇನೆ.
ಯೆರೆಮಿಯ 34 : 22 (ERVKN)
ಬಾಬಿಲೋನಿನ ಸೈನ್ಯವು ಜೆರುಸಲೇಮಿಗೆ ಬರಬೇಕೆಂದು ನಾನು ಆಜ್ಞಾಪಿಸುತ್ತೇನೆ.’ ಇದು ಯೆಹೋವನ ನುಡಿ. ‘ಆ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡುವುದು. ಅವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ಅದಕ್ಕೆ ಬೆಂಕಿಯಿಟ್ಟು ಸುಟ್ಟುಬಿಡುವರು. ನಾನು ಯೆಹೂದ ಪ್ರದೇಶದ ನಗರಗಳನ್ನು ನಾಶಮಾಡುವೆನು. ಆ ನಗರಗಳು ಬರಿದಾದ ಮರುಭೂಮಿಗಳಾಗುವವು. ಅಲ್ಲಿ ಯಾರೂ ವಾಸಮಾಡಲಾರರು.’ ”

1 2 3 4 5 6 7 8 9 10 11 12 13 14 15 16 17 18 19 20 21 22