ಯೆರೆಮಿಯ 22 : 1 (ERVKN)
ದುಷ್ಟರಾಜರ ವಿರುದ್ಧ ನ್ಯಾಯನಿರ್ಣಯ ಯೆಹೋವನು ಹೇಳಿದನು: “ಯೆರೆಮೀಯನೇ, ರಾಜನ ಅರಮನೆಗೆ ಹೋಗು. ಯೆಹೂದದ ರಾಜನ ಬಳಿಗೆ ಹೋಗಿ ಅಲ್ಲಿ ಈ ಸಂದೇಶವನ್ನು ಸಾರು.
ಯೆರೆಮಿಯ 22 : 2 (ERVKN)
‘ಯೆಹೂದದ ರಾಜನೇ, ಯೆಹೋವನಿಂದ ಬಂದ ಸಂದೇಶವನ್ನು ಕೇಳು. ನೀನು ದಾವೀದನ ಸಿಂಹಾಸನಾರೂಢನಾಗಿ ರಾಜ್ಯಭಾರ ಮಾಡುವೆ, ಅದಕ್ಕಾಗಿ ಕೇಳು. ರಾಜನೇ, ನೀನು ಮತ್ತು ನಿನ್ನ ಅಧಿಕಾರಿಗಳು ಚೆನ್ನಾಗಿ ಕೇಳಬೇಕು. ಜೆರುಸಲೇಮಿನ ದ್ವಾರಗಳ ಮೂಲಕ ಬರುವ ನಿನ್ನ ಜನರೆಲ್ಲರೂ ಯೆಹೋವನ ಸಂದೇಶವನ್ನು ಕೇಳಬೇಕು.
ಯೆರೆಮಿಯ 22 : 3 (ERVKN)
ಯೆಹೋವನು ಅನ್ನುತ್ತಾನೆ, ನಿಮ್ಮ ಆಚರಣೆ ನೀತಿಬದ್ಧವಾಗಿಯೂ ನ್ಯಾಯಬದ್ಧವಾಗಿಯೂ ಇರಲಿ. ಸುಲಿಗೆಗೀಡಾದವರನ್ನು ದೋಚಿಕೊಂಡವನಿಂದ ರಕ್ಷಿಸಿರಿ. ಅನಾಥರನ್ನು ಮತ್ತು ವಿಧವೆಯರನ್ನು ಹಿಂಸಿಸಬೇಡಿ; ನಿರಪರಾಧಿಗಳನ್ನು ಕೊಲ್ಲಬೇಡಿ.
ಯೆರೆಮಿಯ 22 : 4 (ERVKN)
ನೀವು ಈ ಆಜ್ಞೆಗಳನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಈ ದ್ವಾರಗಳಿಂದ ಜೆರುಸಲೇಮ್ ನಗರವನ್ನು ಪ್ರವೇಶಿಸುವುದು ಮುಂದುವರೆಯುತ್ತದೆ. ಆ ರಾಜರು ತಮ್ಮ ಅಧಿಕಾರಿಗಳೊಂದಿಗೆ ಈ ದ್ವಾರಗಳಿಂದ ಬರುತ್ತಾರೆ. ಆ ಅರಸರು, ಅವರ ಅಧಿಕಾರಿಗಳು, ಅವರ ಜನರು, ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಕುಳಿತುಕೊಂಡು ಬರುವರು.
ಯೆರೆಮಿಯ 22 : 5 (ERVKN)
ನೀವು ಈ ಆಜ್ಞೆಗಳನ್ನು ಪಾಲಿಸದಿದ್ದರೆ ರಾಜನ ಅರಮನೆಯನ್ನು ನಾಶಮಾಡಲಾಗುವುದು. ಅದು ಕಲ್ಲುಬಂಡೆಗಳ ರಾಶಿಯಾಗುವದೆಂದು ಯೆಹೋವನಾದ ನಾನು ಆಣೆಯಿಟ್ಟುಕೊಂಡು ಹೇಳುತ್ತೇನೆ’ ” ಎಂದು ಯೆಹೋವನು ನುಡಿದನು.
ಯೆರೆಮಿಯ 22 : 6 (ERVKN)
ಯೆಹೂದದ ರಾಜನು ವಾಸಮಾಡುವ ಅರಮನೆಯ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ: “ಈ ಅರಮನೆಯು ಗಿಲ್ಯಾದಿನ ಅರಣ್ಯದಂತೆ, ಲೆಬನೋನಿನ ಪರ್ವತದಂತೆ ಎತ್ತರವಾಗಿದೆ.
ಆದರೆ ನಾನು ಅದನ್ನು ನಿಜವಾಗಿ ಮರುಭೂಮಿಯಂತೆ ಮಾಡುತ್ತೇನೆ. ಈ ಅರಮನೆಯು ಹಾಳುಬಿದ್ದ ನಗರದಂತಾಗುವುದು.
ಯೆರೆಮಿಯ 22 : 7 (ERVKN)
ಅರಮನೆಯನ್ನು ಹಾಳುಮಾಡಲು ನಾನು ಜನರನ್ನು ಕಳುಹಿಸುತ್ತೇನೆ. ಪ್ರತಿಯೊಬ್ಬನ ಹತ್ತಿರ ಆ ಮನೆಯನ್ನು ಹಾಳುಮಾಡಲು ಬೇಕಾಗುವ ಸಾಧನಗಳಿರುವವು.
ಆ ಜನರು ನಿನ್ನ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನ್ನು ಕಡಿದುಹಾಕುತ್ತಾರೆ. ಅವರು ಆ ತೊಲೆಗಳನ್ನು ಬೆಂಕಿಯಲ್ಲಿ ಎಸೆಯುತ್ತಾರೆ.
ಯೆರೆಮಿಯ 22 : 8 (ERVKN)
“ಅನೇಕ ಜನಾಂಗಗಳ ಜನರು ಈ ನಗರದಿಂದ ಹಾದುಹೋಗುವರು. ಅವರು, ‘ಜೆರುಸಲೇಮ್ ಒಂದು ಮಹಾನಗರವಾಗಿತ್ತು. ಯೆಹೋವನು ಜೆರುಸಲೇಮಿಗೆ ಇಂಥ ಭಯಂಕರ ಸ್ಥಿತಿಯನ್ನು ಏಕೆ ತಂದನು? ಎಂದು ಒಬ್ಬರನ್ನೊಬ್ಬರು ಕೇಳುವರು.’
ಯೆರೆಮಿಯ 22 : 9 (ERVKN)
ಆ ಪ್ರಶ್ನೆಗೆ ಈ ಉತ್ತರ: ‘ಯೆಹೂದದ ಜನರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಅನುಸರಣೆಯನ್ನು ಬಿಟ್ಟುಬಿಟ್ಟರು. ಅವರು ಬೇರೆ ದೇವರುಗಳ ಸೇವೆಯನ್ನು ಮಾಡಿ ಪೂಜಿಸಿದರು.’ ”
ಯೆರೆಮಿಯ 22 : 10 (ERVKN)
ರಾಜನಾದ ಯೋಹಾಜನ ಬಗ್ಗೆ ನ್ಯಾಯನಿರ್ಣಯ ಸತ್ತ ರಾಜನ ಬಗ್ಗೆ ಅಳಬೇಡಿ. ಅವನಿಗೋಸ್ಕರ ಅಳಬೇಡಿ.
ಆದರೆ ಇಲ್ಲಿಂದ ಹೋಗುತ್ತಿರುವ ರಾಜನ ಬಗ್ಗೆ ಗಟ್ಟಿಯಾಗಿ ರೋಧಿಸಿರಿ.
ಅವನು ಮತ್ತೆ ಇಲ್ಲಿಗೆ ಬರುವದಿಲ್ಲ. ಆದ್ದರಿಂದ ಅವನಿಗೋಸ್ಕರ ರೋಧಿಸಿರಿ. ಯೋಹಾಜನು ತನ್ನ ಜನ್ಮಭೂಮಿಯನ್ನು ಮತ್ತೆಂದಿಗೂ ನೋಡುವುದಿಲ್ಲ.
ಯೆರೆಮಿಯ 22 : 11 (ERVKN)
ಯೋಷೀಯನ ಮಗನಾದ ಯೋಹಾಜನ (ಶಲ್ಲೂಮನ) ಬಗ್ಗೆ ಯೆಹೋವನು ಹೀಗೆಂದನು: (ಶಲ್ಲೂಮನು ತನ್ನ ತಂದೆಯಾದ ಯೋಷೀಯನ ಮರಣಾನಂತರ ರಾಜನಾದನು.) “ಯೋಹಾಜನು ಜೆರುಸಲೇಮಿನಿಂದ ಹೊರಟುಹೋದನು. ಅವನು ಮತ್ತೆಂದಿಗೂ ಜೆರುಸಲೇಮಿಗೆ ಹಿಂದಿರುಗುವುದಿಲ್ಲ.
ಯೆರೆಮಿಯ 22 : 12 (ERVKN)
ಈಜಿಪ್ಟಿನವರು ಅವನನ್ನು ತೆಗೆದುಕೊಂಡು ಹೋದ ಸ್ಥಳದಲ್ಲಿಯೇ ಸತ್ತುಹೋಗುವನು. ಅವನು ಮತ್ತೊಮ್ಮೆ ಈ ಪ್ರದೇಶವನ್ನು ನೋಡಲಾರನು.”
ಯೆರೆಮಿಯ 22 : 13 (ERVKN)
ರಾಜನಾದ ಯೆಹೋಯಾಕೀಮನ ಬಗ್ಗೆ ನ್ಯಾಯನಿರ್ಣಯ “ರಾಜನಾದ ಯೆಹೋಯಾಕೀಮನಿಗೆ ದುರ್ಗತಿ ಉಂಟಾಗುವುದು. ಅವನು ತನ್ನ ಅರಮನೆಯನ್ನು ಕಟ್ಟಿಸುವದಕ್ಕೋಸ್ಕರ ದುರ್ನೀತಿಯನ್ನು ಅವಲಂಭಿಸಿದ್ದಾನೆ. ಮಹಡಿಯ ಮೇಲೆ ಕೋಣೆಗಳನ್ನು ಕಟ್ಟಿಸುವದಕ್ಕಾಗಿ ಅವನು ತನ್ನ ಜನರನ್ನು ವಂಚಿಸುತ್ತಿದ್ದಾನೆ. ಅವನು ತನ್ನ ಜನರಿಂದ ಬಿಟ್ಟಿಕೆಲಸವನ್ನು ಮಾಡಿಸುತ್ತಿದ್ದಾನೆ. ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ಕೂಲಿಯನ್ನೇ ಕೊಡುವದಿಲ್ಲ.
ಯೆರೆಮಿಯ 22 : 14 (ERVKN)
“ಯೆಹೋಯಾಕೀಮನು, ‘ನಾನೇ ಒಂದು ದೊಡ್ಡ ಅರಮನೆಯನ್ನು ಕಟ್ಟಿಸುತ್ತೇನೆ. ನಾನು ಮಹಡಿಯ ಮೇಲೆ ದೊಡ್ಡದೊಡ್ಡ ಕೋಣೆಗಳನ್ನು ಕಟ್ಟಿಸುತ್ತೇನೆ’ ಎಂದು ಹೇಳುತ್ತಾನೆ.
ಅವನು ದೊಡ್ಡದೊಡ್ಡ ಕಿಟಕಿಗಳುಳ್ಳ ಮನೆಯನ್ನು ಕಟ್ಟಿಸುತ್ತಾನೆ. ದೇವದಾರಿನ ಹಲಗೆಗಳನ್ನು ಹೊದಿಸುತ್ತಾನೆ. ಅದಕ್ಕೆ ಕೆಂಪು ಬಣ್ಣವನ್ನು ಬಳಿಯುತ್ತಾನೆ.
ಯೆರೆಮಿಯ 22 : 15 (ERVKN)
“ಯೆಹೋಯಾಕೀಮನೇ, ನಿನ್ನ ಮನೆಯಲ್ಲಿ ದೇವದಾರಿನ ಮರವನ್ನು ಬಹಳವಾಗಿ ಇಟ್ಟುಕೊಳ್ಳುವದರಿಂದ ನೀನು ದೊಡ್ಡ ರಾಜನಾಗುವದಿಲ್ಲ.
ನಿನ್ನ ತಂದೆಯಾದ ಯೋಷೀಯನು ಅನ್ನಪಾನೀಯಗಳಿಂದ ತೃಪ್ತಿಪಟ್ಟುಕೊಳ್ಳುತ್ತಿದ್ದನು. ಅವನು ನೀತಿ ಮತ್ತು ನ್ಯಾಯ ಸಮ್ಮತವಾದದ್ದನ್ನು ಮಾಡುತ್ತಿದ್ದನು. ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
ಯೆರೆಮಿಯ 22 : 16 (ERVKN)
ಯೋಷೀಯನು ದೀನದರಿದ್ರರಿಗೆ ಸಹಾಯ ಮಾಡುತ್ತಿದ್ದನು. ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
ಯೆಹೋಯಾಕೀಮನೇ, “ದೇವರನ್ನು ಅರಿತುಕೊಳ್ಳುವುದು ಎಂದರೇನು?”
ನ್ಯಾಯ ಮತ್ತು ನೀತಿಯಿಂದ ನಡೆದುಕೊಳ್ಳುವುದು, ನನ್ನನ್ನು ಅರಿತುಕೊಳ್ಳಲು ಬೇಕಾದದ್ದು ಅದೇ.
ಇದು ಯೆಹೋವನಿಂದ ಬಂದ ಸಂದೇಶ:
ಯೆರೆಮಿಯ 22 : 17 (ERVKN)
“ಯೆಹೋಯಾಕೀಮನೇ, ನಿನಗೆ ಲಾಭದಾಯಕವಾದದ್ದು ಮಾತ್ರ ನಿನ್ನ ಕಣ್ಣಿಗೆ ಕಾಣುತ್ತದೆ. ನೀನು ಯಾವಾಗಲೂ ನಿನಗೆ ಹೆಚ್ಚು ಲಾಭ ಬರುವದನ್ನು ನೋಡುವೆ.
ನೀನು ನಿರಪರಾಧಿಗಳನ್ನು ಕೊಲ್ಲಲು ಸಿದ್ಧನಾಗಿರುವೆ. ನೀನು ಬೇರೆಯವರ ವಸ್ತುಗಳನ್ನು ಅಪಹರಿಸಲು ಸಿದ್ಧನಾಗಿರುವೆ.”
ಯೆರೆಮಿಯ 22 : 18 (ERVKN)
ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು, “ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ.
ಅವರು ಒಬ್ಬರಿಗೊಬ್ಬರು, ‘ನನ್ನ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ, ನನ್ನ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ.
ಅವರು ಅವನ ಬಗ್ಗೆ ‘ಒಡೆಯನೇ, ನನ್ನ ರಾಜನೇ, ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಯೆರೆಮಿಯ 22 : 19 (ERVKN)
ಜೆರುಸಲೇಮಿನ ಜನರು ಯೆಹೋಯಾಕೀಮನನ್ನು ಒಂದು ಕತ್ತೆಯನ್ನು ಹೂಳಿದಂತೆ ಹೂಳಿಬಿಡುತ್ತಾರೆ. ಅವರು ಅವನ ಶವವನ್ನು ದೂರ ಎಳೆದುಕೊಂಡು ಹೋಗುತ್ತಾರೆ. ಅವನ ಶವವನ್ನು ಜೆರುಸಲೇಮಿನ ದ್ವಾರಗಳ ಹೊರಗೆ ಎಸೆದುಬಿಡುತ್ತಾರೆ.
ಯೆರೆಮಿಯ 22 : 20 (ERVKN)
“ಯೆಹೂದವೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೊ, ನಿನ್ನ ಧ್ವನಿಯು ಬಾಷಾನ್ ಪರ್ವತಗಳಲ್ಲಿ ಕೇಳಿಸಲಿ.
ಅಬಾರೀಮಿನಲ್ಲಿ ಅರಚಿಕೊ; ಏಕೆಂದರೆ ನಿನ್ನ ‘ಪ್ರಿಯತಮರೆಲ್ಲರನ್ನೂ’ ನಾಶಮಾಡಲಾಗುವುದು.
ಯೆರೆಮಿಯ 22 : 21 (ERVKN)
“ಯೆಹೂದವೇ, ನೀನು ಸುರಕ್ಷಿತಳಾಗಿರುವೆ ಎಂದು ನೀನು ಭಾವಿಸಿಕೊಂಡಿರುವೆ. ಆದರೆ ನಾನು ನಿನಗೆ ಎಚ್ಚರಿಕೆಯನ್ನು ಕೊಟ್ಟೆ.
ಹೌದು, ನಾನೇ ಎಚ್ಚರಿಕೆಯನ್ನು ಕೊಟ್ಟೆ, ಆದರೆ ನೀನು ಅದನ್ನು ಕಿವಿಗೆ ಹಾಕಿಕೊಳ್ಳಲು ಒಪ್ಪಲಿಲ್ಲ.
ನಿನ್ನ ಬಾಲ್ಯದಿಂದಲೂ ನೀನು ಹೀಗೆಯೇ ಮಾಡಿದೆ.
ಯೆಹೂದವೇ, ನಿನ್ನ ಬಾಲ್ಯದಿಂದಲೂ ನೀನು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.
ಯೆರೆಮಿಯ 22 : 22 (ERVKN)
ಯೆಹೂದವೇ, ನನ್ನ ದಂಡನೆಯು ಒಂದು ಬಿರುಗಾಳಿಯಂತೆ ಬರುವುದು. ಅದು ನಿನ್ನ ಎಲ್ಲಾ ಕುರುಬರನ್ನು (ನಾಯಕರನ್ನು) ಹಾರಿಸಿಕೊಂಡು ಹೋಗುವುದು.
ಯಾವುದಾದರೂ ಬೇರೆ ಜನಾಂಗ ನಿನಗೆ ಸಹಾಯಮಾಡಬಹುದೆಂದು ನೀನು ಭಾವಿಸಿಕೊಂಡಿರುವೆ.
ಆದರೆ ಆ ಜನಾಂಗಗಳನ್ನೂ ಸೋಲಿಸಲಾಗುವುದು. ಆಗ ನಿನಗೆ ನಿಜವಾಗಿಯೂ ಆಶಾಭಂಗವಾಗುವುದು. ನೀನು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವೆ.
ಯೆರೆಮಿಯ 22 : 23 (ERVKN)
“ರಾಜನೇ, ಬೆಟ್ಟದ ಮೇಲೆ ದೇವದಾರು ಮರದಿಂದ ಮಾಡಿದ ನಿನ್ನ ಮನೆಯಲ್ಲಿ ನೀನು ವಾಸಿಸುವೆ. ಆ ಮನೆಯು ಲೆಬನೋನಿನ ಮರದ ತೋಪಿನಂತಿದೆ.
ನೀನು ಎತ್ತರವಾದ ಪರ್ವತ ಪ್ರದೇಶದಲ್ಲಿದ್ದ ನಿನ್ನ ವಿಶಾಲವಾದ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದುಕೊಂಡಿರುವೆ.
ಆದರೆ ನಿನಗೆ ದಂಡನೆಯಾದಾಗ ನೀನು ನರಳುವೆ. ಪ್ರಸವವೇದನೆಯಂಥ ನೋವನ್ನು ನೀನು ಅನುಭವಿಸುವೆ.”
ಯೆರೆಮಿಯ 22 : 24 (ERVKN)
ರಾಜನಾದ ಯೆಹೋಯಾಚೀನನ ಬಗ್ಗೆ ನ್ಯಾಯನಿರ್ಣಯ ಯೆಹೋವನು ಹೀಗೆನ್ನುತ್ತಾನೆ: “ಯೆಹೋಯಾಕೀಮನ ಮಗನೂ ಯೆಹೂದದ ರಾಜನೂ ಆಗಿರುವ ಯೆಹೋಯಾಚೀನನೇ, ನನ್ನ ಜೀವದಾಣೆಯಾಗಿಯೂ ನಿನಗೆ ಹೀಗೆ ಮಾಡುವೆನು. ನೀನು ನನ್ನ ಬಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುವೆನು.
ಯೆರೆಮಿಯ 22 : 25 (ERVKN)
ಯೆಹೋಯಾಚೀನನೇ, ನಾನು ನಿನಗೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು. ನೀನು ಹೆದರಿಕೊಂಡಿರುವುದು ಆ ಜನರಿಗೇ. ಆ ಜನರು ನಿನ್ನನ್ನು ಕೊಲ್ಲಬಯಸುತ್ತಾರೆ.
ಯೆರೆಮಿಯ 22 : 26 (ERVKN)
ನಾನು ನಿನ್ನನ್ನೂ ನಿನ್ನ ತಾಯಿಯನ್ನೂ ನಿಮ್ಮಿಬ್ಬರ ಜನ್ಮಸ್ಥಳವಲ್ಲದ ಬೇರೆ ದೇಶದಲ್ಲಿ ಎಸೆದುಬಿಡುತ್ತೇನೆ. ನೀನು ಮತ್ತು ನಿನ್ನ ತಾಯಿ ಆ ದೇಶದಲ್ಲಿ ಸತ್ತುಹೋಗುವಿರಿ.
ಯೆರೆಮಿಯ 22 : 27 (ERVKN)
ಯೆಹೋಯಾಚೀನನೇ, ನೀನು ನಿನ್ನ ದೇಶಕ್ಕೆ ಹಿಂದಿರುಗಬೇಕೆಂದು ಅಪೇಕ್ಷಿಸಿದರೂ ನಿನಗೆ ಬರಲು ಸಾಧ್ಯವಾಗದು.”
ಯೆರೆಮಿಯ 22 : 28 (ERVKN)
ಯೆಹೋಯಾಚೀನನು ಎಸೆಯಲ್ಪಟ್ಟ ಒಡೆದ ಮಡಕೆಯಂತಿದ್ದಾನೆ. ಅವನು ಯಾರಿಗೂ ಬೇಡವಾಗದ ಮಡಕೆಯಂತಿದ್ದಾನೆ.
ಯೆಹೋಯಾಚೀನನು ಮತ್ತು ಅವನ ಮಕ್ಕಳು ಏಕೆ ಹೊರಗೆ ಎಸೆಯಲ್ಪಡುವರು? ಅವರು ಪರದೇಶಕ್ಕೆ ಏಕೆ ಒಯ್ಯಲ್ಪಡುವರು?
ಯೆರೆಮಿಯ 22 : 29 (ERVKN)
ದೇಶವೇ, ದೇಶವೇ, ಯೆಹೂದದ ದೇಶವೇ, ಯೆಹೋವನ ಸಂದೇಶವನ್ನು ಕೇಳು.
ಯೆರೆಮಿಯ 22 : 30 (ERVKN)
ಯೆಹೋವನು ಹೇಳುವುದೇನೆಂದರೆ: “ಯೆಹೋಯಾಚೀನನು ಮಕ್ಕಳಿಲ್ಲದವನೆಂದು ನೊಂದಾಯಿಸಿರಿ. ಯೆಹೋಯಾಚೀನನು ತನ್ನ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ. ಅವನ ಮಕ್ಕಳಲ್ಲಿ ಯಾರೂ ದಾವೀದನ ಸಿಂಹಾಸನವನ್ನೇರುವದಿಲ್ಲ.
ಅವನ ಮಕ್ಕಳಲ್ಲಿ ಯಾರೂ ಯೆಹೂದದಲ್ಲಿ ರಾಜ್ಯಭಾರ ಮಾಡುವುದಿಲ್ಲ.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30