ಯೆರೆಮಿಯ 21 : 1 (ERVKN)
ದೇವರು ರಾಜನಾದ ಚಿದ್ಕೀಯನ ಪ್ರಾರ್ಥನೆಯನ್ನು ತಿರಸ್ಕರಿಸಿದನು ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನಾದ ಯಾಜಕ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿದಾಗ ಈ ಸಂದೇಶ ಬಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನ್ನು ತಂದಿದ್ದರು.
ಯೆರೆಮಿಯ 21 : 2 (ERVKN)
ಪಷ್ಹೂರ ಮತ್ತು ಚೆಫನ್ಯರು ಹೀಗೆಂದರು: “ನಮಗೋಸ್ಕರ ಯೆಹೋವನನ್ನು ಪ್ರಾರ್ಥಿಸಿ ಮುಂದೆ ಸಂಭವಿಸುವುದನ್ನು ವಿಚಾರಿಸು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿರುವನು; ಆದ್ದರಿಂದ ಮುಂದೆ ಸಂಭವಿಸುವುದನ್ನು ನಾವು ತಿಳಿಯ ಬಯಸುತ್ತೇವೆ. ಮೊದಲಿನಂತೆ ಯೆಹೋವನು ನಮಗೋಸ್ಕರ ಅದ್ಭುತಗಳನ್ನೂ ಮಾಡಬಹುದು. ನೆಬೂಕದ್ನೆಚ್ಚರನು ನಮ್ಮ ಮೇಲೆ ಧಾಳಿ ಮಾಡುವುದನ್ನು ನಿಲ್ಲಿಸಿ ಹೊರಟುಹೋಗುವಂತೆ ಆತನು ಮಾಡಬಹುದು.”
ಯೆರೆಮಿಯ 21 : 3 (ERVKN)
ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ.
ಯೆರೆಮಿಯ 21 : 4 (ERVKN)
ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ನಿಮ್ಮ ಕೈಯಲ್ಲಿ ಯುದ್ಧದ ಆಯುಧಗಳಿವೆ. ಆ ಆಯುಧಗಳನ್ನು ನೀವು ನಿಮ್ಮ ರಕ್ಷಣೆಗಾಗಿಯೂ ಬಾಬಿಲೋನಿನ ರಾಜನ ವಿರುದ್ಧವಾಗಿಯೂ ಮತ್ತು ಬಾಬಿಲೋನಿನ ಜನರ ವಿರುದ್ಧವಾಗಿಯೂ ಬಳಸುತ್ತಿದ್ದೀರಿ. ಆದರೆ ನಾನು ಆ ಆಯುಧಗಳನ್ನು ವಿಫಲಗೊಳಿಸುತ್ತೇನೆ. “ ‘ಬಾಬಿಲೋನಿನ ಸೈನ್ಯವು ನಗರದ ಸುತ್ತಲಿನ ಪೌಳಿಗೋಡೆಯ ಬಳಿಯಿದೆ. ತಕ್ಷಣವೇ ನಾನು ಆ ಸೈನ್ಯವನ್ನು ಜೆರುಸಲೇಮಿನ ಒಳಗಡೆ ತರುತ್ತೇನೆ.
ಯೆರೆಮಿಯ 21 : 5 (ERVKN)
ಯೆಹೂದಿಗಳಾದ ನಿಮ್ಮ ವಿರುದ್ಧ ನಾನೇ ಕಾದಾಡುತ್ತೇನೆ. ನಾನು ನನ್ನ ಬಲಿಷ್ಠವಾದ ಕೈಗಳಿಂದ ನಿಮ್ಮ ವಿರುದ್ಧ ಹೋರಾಡುತ್ತೇನೆ. ನಿಮ್ಮ ಮೇಲೆ ನನಗೆ ಬಹಳ ಕೋಪ ಬಂದಿದೆ; ಅದಕ್ಕಾಗಿ ನನ್ನ ಬಲಿಷ್ಠವಾದ ತೋಳಿನಿಂದ ನಾನು ನಿಮ್ಮ ಸಂಗಡ ಯುದ್ಧ ಮಾಡುತ್ತೇನೆ. ನಾನು ನಿಮ್ಮ ವಿರುದ್ಧ ಬಹಳ ರಭಸದಿಂದ ಯುದ್ಧಮಾಡಿ ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ತೋರಿಸುತ್ತೇನೆ.
ಯೆರೆಮಿಯ 21 : 6 (ERVKN)
ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾನು ಕೊಂದುಬಿಡುತ್ತೇನೆ. ನಾನು ಜನರನ್ನು ಮತ್ತು ಪ್ರಾಣಿಗಳನ್ನು ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.’ ” ಇದು ಯೆಹೋವನ ನುಡಿ.
ಯೆರೆಮಿಯ 21 : 7 (ERVKN)
“ ‘ಇದಾದ ಮೇಲೆ ನಾನು ಯೆಹೂದದ ರಾಜನಾದ ಚಿದ್ಕೀಯನನ್ನು ಮತ್ತು ಅಧಿಪತಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುತ್ತೇನೆ. ಜೆರುಸಲೇಮಿನ ಕೆಲವು ಜನರು ಭಯಂಕರವಾದ ರೋಗದಿಂದ ಸಾಯುವುದಿಲ್ಲ; ಕೆಲವು ಜನರು ಖಡ್ಗಗಳಿಗೆ ಆಹುತಿಯಾಗುವದಿಲ್ಲ; ಕೆಲವರು ಹಸಿವಿನಿಂದ ಸಾಯುವುದಿಲ್ಲ. ಅಂಥವರನ್ನು ನಾನು ನೆಬೂಕದ್ನೆಚ್ಚರನಿಗೆ ಕೊಡುತ್ತೇನೆ. ಯೆಹೂದದ ವೈರಿಯು ಗೆಲ್ಲುವಂತೆ ನಾನು ಮಾಡುತ್ತೇನೆ. ನೆಬೂಕದ್ನೆಚ್ಚರನ ಸೈನಿಕರು ಯೆಹೂದ್ಯರನ್ನು ಕೊಲ್ಲಬಯಸುತ್ತಾರೆ. ಆದ್ದರಿಂದ ಯೆಹೂದ ಮತ್ತು ಜೆರುಸಲೇಮಿನ ಜನರು ಖಡ್ಗಗಳಿಗೆ ಬಲಿಯಾಗುವರು. ನೆಬೂಕದ್ನೆಚ್ಚರನು ಸ್ವಲ್ಪವೂ ದಯೆ ತೋರುವದಿಲ್ಲ. ಆ ಜನರ ಸಲುವಾಗಿ ಅವನು ಮರುಗುವದಿಲ್ಲ.’
ಯೆರೆಮಿಯ 21 : 8 (ERVKN)
“ಜೆರುಸಲೇಮಿನ ಜನರಿಗೆ ಇದನ್ನು ಸಹ ಹೇಳಿರಿ. ಯೆಹೋವನು ಹೀಗೆನ್ನುತ್ತಾನೆ, ‘ನಾನು ನಿಮಗೆ ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ ಎಂಬುದನ್ನು ತಿಳಿದುಕೊಳ್ಳಿರಿ.
ಯೆರೆಮಿಯ 21 : 9 (ERVKN)
ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಬಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಬಂದುಕುವನು. ಆ ಸೈನಿಕರು ನಗರವನ್ನು ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನ್ನು ತರುವಂತಿಲ್ಲ. ಆದರೆ ನಗರವನ್ನು ಬಿಟ್ಟು ಹೊರಗೆ ಹೋದವರು ಬಂದುಕುವರು.
ಯೆರೆಮಿಯ 21 : 10 (ERVKN)
ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’ ” ಇದು ಯೆಹೋವನಿಂದ ಬಂದ ಸಂದೇಶ. “ ‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’ ”
ಯೆರೆಮಿಯ 21 : 11 (ERVKN)
“ಯೆಹೂದದ ರಾಜಮನೆತನದವರಿಗೆ ಈ ವಿಷಯಗಳನ್ನು ತಿಳಿಸಿರಿ: ‘ಯೆಹೋವನ ಸಂದೇಶವನ್ನು ಕೇಳಿರಿ.
ಯೆರೆಮಿಯ 21 : 12 (ERVKN)
ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ:
ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕು. ಅಪರಾಧಿಗಳಿಂದ ಕಷ್ಟಕ್ಕೊಳಗಾದವರನ್ನು ರಕ್ಷಿಸಬೇಕು.
ನೀವು ಹಾಗೆ ಮಾಡದಿದ್ದರೆ ನನಗೆ ಬಹಳ ಕೋಪ ಬರುತ್ತದೆ.
ನನ್ನ ಕೋಪವು ಯಾರಿಂದಲೂ ನಂದಿಸಲಾಗದ ಬೆಂಕಿಯಂತಿದೆ. ನೀವು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಹೀಗಾಗುತ್ತದೆ.’
ಯೆರೆಮಿಯ 21 : 13 (ERVKN)
“ಜೆರುಸಲೇಮ್ ನಗರವೇ, ನಾನು ನಿನ್ನ ವಿರುದ್ಧವಾಗಿದ್ದೇನೆ. ನೀನು ಬೆಟ್ಟದ ಮೇಲೆ ಕುಳಿತಿರುವೆ, ನೀನು ರಾಣಿಯಂತೆ ಈ ಕಣಿವೆಯ ಮೇಲೆ ಕುಳಿತಿರುವೆ.
‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು, ನಮ್ಮ ಭದ್ರವಾದ ನಗರವನ್ನು ಯಾರೂ ಪ್ರವೇಶ ಮಾಡಲಾರರು’ ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ.”
ಆದರೆ ಯೆಹೋವನ ಸಂದೇಶವನ್ನು ಕೇಳಿರಿ.
ಯೆರೆಮಿಯ 21 : 14 (ERVKN)
“ನೀವು ತಕ್ಕ ಶಿಕ್ಷೆಯನ್ನು ಅನುಭವಿಸುವಿರಿ.
ನಾನು ನಿಮ್ಮ ಅರಣ್ಯಗಳಲ್ಲಿ ಬೆಂಕಿಯನ್ನು ಹೊತ್ತಿಸುತ್ತೇನೆ. ಆ ಬೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಸುಟ್ಟುಹಾಕುತ್ತದೆ.”
❮
❯
1
2
3
4
5
6
7
8
9
10
11
12
13
14