ಯೆರೆಮಿಯ 10 : 1 (ERVKN)
ಯೆಹೋವನು ಮತ್ತು ವಿಗ್ರಹಗಳು ಇಸ್ರೇಲ್ ವಂಶದವರೇ, ಯೆಹೋವನ ಮಾತುಗಳನ್ನು ಕೇಳಿರಿ.
ಯೆರೆಮಿಯ 10 : 2 (ERVKN)
ಯೆಹೋವನು ಹೀಗೆ ಹೇಳುತ್ತಾನೆ: “ಬೇರೆ ಜನಾಂಗಗಳಂತೆ ಜೀವಿಸಬೇಡಿ. ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಬೇಡಿರಿ.
ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಬೇರೆ ಜನಾಂಗಗಳು ಹೆದರುತ್ತವೆ. ಆದರೆ ನೀವು ಅವುಗಳಿಗೆ ಹೆದರಬಾರದು.
ಯೆರೆಮಿಯ 10 : 3 (ERVKN)
ಬೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ.
ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ.
ಅವರ ವಿಗ್ರಹಗಳು ಬಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು.
ಯೆರೆಮಿಯ 10 : 4 (ERVKN)
ಅವರು ತಮ್ಮ ವಿಗ್ರಹಗಳನ್ನು ಬೆಳ್ಳಿಬಂಗಾರಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ.
ಸುತ್ತಿಗೆಯಿಂದ ಮೊಳೆ ಬಡಿದು ಅವುಗಳು ಬೀಳದಂತೆ ನಿಲ್ಲಿಸುತ್ತಾರೆ.
ಯೆರೆಮಿಯ 10 : 5 (ERVKN)
ಬೇರೆ ಜನಾಂಗದವರ ವಿಗ್ರಹಗಳು ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಬೆದರುಕಂಬಗಳಂತಿವೆ.
ಅವರ ವಿಗ್ರಹಗಳು ಮಾತಾಡಲಾರವು; ಅವು ನಡೆಯಲಾರವು. ಜನರು ಆ ವಿಗ್ರಹಗಳನ್ನು ಹೊತ್ತುಕೊಂಡು ಹೋಗಬೇಕು.
ಆದ್ದರಿಂದ ಆ ವಿಗ್ರಹಗಳಿಗೆ ಹೆದರಬೇಡಿರಿ. ಅವು ನಿಮಗೆ ಕೇಡನ್ನೂ ಮಾಡಲಾರವು;
ಸಹಾಯವನ್ನೂ ಮಾಡಲಾರವು.”
ಯೆರೆಮಿಯ 10 : 6 (ERVKN)
ಯೆಹೋವನೇ, ನಿನ್ನತೆ ಯಾರೂ ಇಲ್ಲ. ನೀನೇ ಮಹೋನ್ನತನು.
ನಿನ್ನ ಹೆಸರು ಮಹೋನ್ನತವಾದದ್ದು; ಸಾಮರ್ಥ್ಯಪೂರ್ಣವಾದದ್ದು.
ಯೆರೆಮಿಯ 10 : 7 (ERVKN)
ದೇವರೇ, ಪ್ರತಿಯೊಬ್ಬರೂ ನಿನ್ನನ್ನು ಗೌರವಿಸಬೇಕು. ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ. ಅವರೆಲ್ಲರೂ ನಿನಗೆ ಗೌರವ ತೋರಿಸಬೇಕು.
ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ ಆದರೆ ಅವರಲ್ಲಿ ಒಬ್ಬರೂ ನಿನ್ನಷ್ಟು ಜ್ಞಾನಿಗಳಲ್ಲ.
ಯೆರೆಮಿಯ 10 : 8 (ERVKN)
ಬೇರೆ ಜನಾಂಗಗಳ ಎಲ್ಲಾ ಜನರು ಮಂದಬುದ್ಧಿಯವರಾಗಿದ್ದಾರೆ ಮತ್ತು ಮೂರ್ಖರಾಗಿದ್ದಾರೆ;
ಅವರ ಉಪದೇಶಗಳು ನಿಷ್ಪ್ರಯೋಜಕವಾದ ಮರದ ಬೊಂಬೆಗಳಿಂದ ಬಂದವುಗಳಾಗಿವೆ.
ಯೆರೆಮಿಯ 10 : 9 (ERVKN)
ಅವರು ತಾರ್ಷೀಷ್ ನಗರದ ಬೆಳ್ಳಿಯಿಂದಲೂ ಧಿಫಜ್ ನಗರದ ಬಂಗಾರದಿಂದಲೂ ತಮ್ಮ ವಿಗ್ರಹಗಳನ್ನು ಮಾಡುತ್ತಾರೆ.
ಆ ವಿಗ್ರಹಗಳನ್ನು ಬಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ;
ಅವರು ನೀಲಿ ಮತ್ತು ಕಂದು ಬಣ್ಣದ ಬಟ್ಟೆಗಳನ್ನು ಆ ವಿಗ್ರಹಗಳಿಗೆ ತೊಡಿಸುತ್ತಾರೆ. ಅವು ಕುಶಲರ ಕೌಶಲ್ಯವಾಗಿವೆ.
ಯೆರೆಮಿಯ 10 : 10 (ERVKN)
ಯೆಹೋವನೊಬ್ಬನೇ ನಿಜವಾದ ದೇವರು. ಆತನು ನಿಜವಾಗಿಯೂ ಜೀವಸ್ವರೂಪನಾಗಿದ್ದಾನೆ. ಆತನು ಶಾಶ್ವತವಾಗಿ ಆಳುವ ರಾಜನಾಗಿದ್ದಾನೆ.
ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ. ಜನಾಂಗಗಳು ಆತನ ಕೋಪವನ್ನು ತಡೆಯಲಾರವು.
ಯೆರೆಮಿಯ 10 : 11 (ERVKN)
ಯೆಹೋವನು ಹೇಳುತ್ತಾನೆ, “ಈ ಸಂದೇಶವನ್ನು ಆ ಜನರಿಗೆ ಹೇಳು:
‘ಆ ಸುಳ್ಳುದೇವರುಗಳು ಭೂಲೋಕವನ್ನೂ ಪರಲೋಕವನ್ನೂ ಸೃಷ್ಟಿ ಮಾಡಿಲ್ಲ. ಆ ಸುಳ್ಳುದೇವರುಗಳನ್ನು ನಾಶಮಾಡಲಾಗುವುದು; ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.’ ”
ಯೆರೆಮಿಯ 10 : 12 (ERVKN)
ದೇವರು ತನ್ನ ಶಕ್ತಿಯಿಂದ ಭೂಲೋಕವನ್ನು ಸೃಷ್ಟಿಸಿದನು. ದೇವರು ತನ್ನ ಜ್ಞಾನದಿಂದ ಈ ಜಗತ್ತನ್ನು ನಿರ್ಮಿಸಿದನು.
ತನ್ನ ವಿವೇಕದಿಂದ ದೇವರು ಈ ಭೂಮಂಡಲದ ಮೇಲೆ ಆಕಾಶವನ್ನು ಹೊದಿಸಿದ್ದಾನೆ.
ಯೆರೆಮಿಯ 10 : 13 (ERVKN)
ಯೆಹೋವನು ಗರ್ಜಿಸುವ ಗುಡುಗನ್ನು ಬರಮಾಡುತ್ತಾನೆ. ಆತನು ಆಕಾಶದಿಂದ ನೀರನ್ನು ಮಹಾಪ್ರವಾಹದಂತೆ ಸುರಿಸುತ್ತಾನೆ.
ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ. ಆತನು ಮಳೆಯೊಂದಿಗೆ ಸಿಡಿಲನ್ನು ಬೀಳಿಸುತ್ತಾನೆ. ತನ್ನ ಭಂಡಾರದಿಂದ ಹೊರಗೆ ಗಾಳಿ ಬೀಸುವಂತೆ ಮಾಡುತ್ತಾನೆ.
ಯೆರೆಮಿಯ 10 : 14 (ERVKN)
ಜನರು ಬುದ್ಧಿಗೇಡಿಗಳಾಗಿದ್ದಾರೆ. ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸಹೋಗುತ್ತಾರೆ.
ಆ ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು. ಅವುಗಳಲ್ಲಿ ಜೀವವಿಲ್ಲ. *ಅವುಗಳಲ್ಲಿ ಜೀವವಿಲ್ಲ ಅಕ್ಷರಶಃ ಅವುಗಳಲ್ಲಿ ಆತ್ಮವಿಲ್ಲ. ಅವುಗಳು ಜೀವಂತವಾಗಿಲ್ಲ ಎಂದಾಗಲಿ ದೇವರಾತ್ಮವು ಅವುಗಳಲ್ಲಿಲ್ಲ ಎಂದಾಗಲಿ ಇದು ಅರ್ಥಕೊಡಬಲ್ಲದು.
ಯೆರೆಮಿಯ 10 : 15 (ERVKN)
ಆ ವಿಗ್ರಹಗಳು ನಿಷ್ಪ್ರಯೋಜಕ ವಸ್ತುಗಳಾಗಿವೆ. ಅವು ಅಪಹಾಸ್ಯಕ್ಕೆ ಯೋಗ್ಯವಾದವುಗಳಾಗಿವೆ.
ನ್ಯಾಯನಿರ್ಣಯದ ಸಮಯದಲ್ಲಿ ಆ ವಿಗ್ರಹಗಳನ್ನು ನಾಶಪಡಿಸಲಾಗುವುದು.
ಯೆರೆಮಿಯ 10 : 16 (ERVKN)
ಆದರೆ ಯಾಕೋಬ್ಯರ ದೇವರು ಆ ವಿಗ್ರಹಗಳಂತಲ್ಲ.
ಆತನು ಸಮಸ್ತವನ್ನೂ ನಿರ್ಮಿಸಿದಾತನಾಗಿದ್ದಾನೆ. ಇಸ್ರೇಲು ಆತನ ಸಾಬಸ್ತ್ಯವಾದ ಜನಾಂಗ.
“ಸರ್ವಶಕ್ತನಾದ ಯೆಹೋವ” ಎಂಬುದು ಆತನ ನಾಮಧೇಯ.
ಯೆರೆಮಿಯ 10 : 17 (ERVKN)
ವಿನಾಶವು ಬರುತ್ತಿದೆ ನಿಮ್ಮದಾದ ಎಲ್ಲವನ್ನು ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ.
ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ. ವೈರಿಯು ನಗರವನ್ನು ಮುತ್ತಿದ್ದಾನೆ.
ಯೆರೆಮಿಯ 10 : 18 (ERVKN)
ಯೆಹೋವನು ಹೇಳುತ್ತಾನೆ:
“ಈ ಸಾರಿ ಯೆಹೂದದ ಜನರನ್ನು ನಾನು ದೇಶದಿಂದ ಹೊರಗೆ ತಳ್ಳುತ್ತೇನೆ. ಅವರಿಗೆ ನಾನು ನೋವು ಮತ್ತು ಕಷ್ಟಗಳನ್ನು ತರುತ್ತೇನೆ. ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
ಯೆರೆಮಿಯ 10 : 19 (ERVKN)
ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಬಾ ಪೆಟ್ಟಾಗಿದೆ. ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ.
ಆದರೂ “ಇದು ನನ್ನ ವ್ಯಾಧಿ, ಇದನ್ನು ನಾನು ಅನುಭವಿಸಬೇಕು” ಎಂದು ಸಮಾಧಾನ ತಂದುಕೊಂಡೆ.
ಯೆರೆಮಿಯ 10 : 20 (ERVKN)
ನನ್ನ ಗುಡಾರವು ಹಾಳಾಗಿದೆ. ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ.
ನನ್ನ ಮಕ್ಕಳು ನನ್ನನ್ನು ಬಿಟ್ಟು ಹೊರಟುಹೋಗಿದ್ದಾರೆ.
ನನ್ನ ಗುಡಾರವನ್ನು ಹಾಕುವದಕ್ಕೆ ಯಾರೂ ಉಳಿದಿಲ್ಲ. ನನಗಾಗಿ ಒಂದು ಆಸರೆಯನ್ನು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
ಯೆರೆಮಿಯ 10 : 21 (ERVKN)
ಕುರುಬರು ಬುದ್ಧಿಗೇಡಿಗಳಾಗಿದ್ದಾರೆ. ಅವರು ಯೆಹೋವನನ್ನು ಹುಡುಕುವ ಪ್ರಯತ್ನ ಮಾಡುವುದಿಲ್ಲ.
ಅವರು ಜ್ಞಾನಿಗಳಲ್ಲ, ಅವರ ಹಿಂಡುಗಳು ಚದರಿಹೋಗುವವು; ಕಳೆದುಹೋಗುವವು.
ಯೆರೆಮಿಯ 10 : 22 (ERVKN)
ಕೇಳಿರಿ, ಉತ್ತರ ದಿಕ್ಕಿನಿಂದ ಬರುತ್ತಿರುವ ಮಹಾಧ್ವನಿಯನ್ನು!
ಇದು ಯೆಹೂದದ ನಗರಗಳನ್ನು ನಾಶಮಾಡುತ್ತದೆ. ಯೆಹೂದವು ಒಂದು ಬರಿದಾದ ಮರಳುಗಾಡಾಗುವದು, ನರಿಗಳ ನಿವಾಸವಾಗುವುದು.
ಯೆರೆಮಿಯ 10 : 23 (ERVKN)
ಯೆಹೋವನೇ, ಮಾನವನ ಜೀವ ಅವನ ಸ್ವಾಧೀನದಲ್ಲಿಲ್ಲವೆಂಬುದು ನನಗೆ ಗೊತ್ತು. ಜನರಿಗೆ ಸರಿಯಾದ ಜೀವನ ಕ್ರಮಗೊತ್ತಿಲ್ಲ.
ಯೆರೆಮಿಯ 10 : 24 (ERVKN)
ಯೆಹೋವನೇ, ನಮ್ಮನ್ನು ತಿದ್ದು, ಆದರೆ ಕಠೋರನಾಗಬೇಡ, ಕೋಪದಲ್ಲಿ ನಮ್ಮನ್ನು ದಂಡಿಸಬೇಡ.
ಯೆರೆಮಿಯ 10 : 25 (ERVKN)
ನಿನಗೆ ಕೋಪ ಬಂದಿದ್ದರೆ ಬೇರೆ ಜನಾಂಗಗಳನ್ನು ಶಿಕ್ಷಿಸು.
ಅವರು ನಿನ್ನನ್ನು ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ. ಅವರು ನಿನ್ನನ್ನು ಆರಾಧಿಸುವುದಿಲ್ಲ.
ಆ ಜನಾಂಗಗಳು ಯಾಕೋಬ್ಯರ ವಂಶವನ್ನು ನಾಶಮಾಡಿದರು. ಅವರು ಇಸ್ರೇಲನ್ನು ಸಂಪೂರ್ಣವಾಗಿ ನಾಶಮಾಡಿದರು. ಅವರು ಇಸ್ರೇಲರ ವಾಸಸ್ಥಳವನ್ನು ನಾಶಮಾಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25