ಯೆಶಾಯ 64 : 1 (ERVKN)
ನೀನು ಆಕಾಶವನ್ನು ಹರಿದು ಕೆಳಗೆ ಭೂಮಿಗಿಳಿದು ಬರುವದಾದರೆ ಎಲ್ಲವೂ ಬದಲಾಗುವದು. ಪರ್ವತಗಳು ನಿನ್ನ ಎದುರು ಕರಗಿಹೋಗುವವು.
ಯೆಶಾಯ 64 : 2 (ERVKN)
ಒಣಎಲೆಯು ಸುಟ್ಟುಹೋಗುವಂತೆ ಪರ್ವತಗಳು ಸುಟ್ಟು ಭಸ್ಮವಾಗುವವು. ಬೆಂಕಿಯಲ್ಲಿ ನೀರು ಕುದಿಯುವಂತೆ ಪರ್ವತಗಳು ಕುದಿಯುವವು.
ಆಗ ನಿನ್ನ ಶತ್ರುಗಳು ನಿನ್ನ ವಿಷಯವಾಗಿ ತಿಳಿಯುವರು. ಆಗ ಜನಾಂಗದವರೆಲ್ಲಾ ನಿನ್ನನ್ನು ನೋಡಿ ಭಯದಿಂದ ನಡುಗುವರು.
ಯೆಶಾಯ 64 : 3 (ERVKN)
ಆದರೆ ನೀನು ಹೀಗೆ ಮಾಡುವುದು ನಿಜವಾಗಿಯೂ ನಮಗಿಷ್ಟವಿಲ್ಲ. ಪರ್ವತಗಳು ನಿನ್ನೆದುರು ಕರಗಿಹೋದರೂ
ಯೆಶಾಯ 64 : 4 (ERVKN)
ನಿನ್ನ ಜನರು ನಿನಗೆ ಕಿವಿಗೊಡಲಿಲ್ಲ. ನೀನು ಹೇಳಿದ್ದನ್ನು ನಿನ್ನ ಜನರು ನಿಜವಾಗಿಯೂ ಕೇಳಲಿಲ್ಲ.
ನಿನ್ನಂಥ ದೇವರನ್ನು ಯಾರೂ ನೋಡಿಲ್ಲ. ನಿನ್ನ ಹೊರತು ಬೇರೆ ಯಾರೂ ದೇವರಿಲ್ಲ. ಜನರು ತಾಳ್ಮೆಯಿಂದಿದ್ದು ನಿನ್ನ ಸಹಾಯಕ್ಕಾಗಿ ಕಾದಿದ್ದರೆ ನೀನು ಅವರಿಗಾಗಿ ಮಹಾಕಾರ್ಯಗಳನ್ನು ಮಾಡುವೆ.
ಯೆಶಾಯ 64 : 5 (ERVKN)
ಒಳ್ಳೆಯದನ್ನು ಮಾಡುವದರಲ್ಲಿ ಸಂತೋಷಪಡುವವರೊಂದಿಗೆ ನೀನಿರುವೆ. ಅವರು ನಿನ್ನ ಮಾರ್ಗಗಳನ್ನು ನೆನಪಿನಲ್ಲಿಡುತ್ತಾರೆ.
ಇಗೋ, ಗತಿಸಿದ ದಿವಸಗಳಲ್ಲಿ ನಾವು ನಿನಗೆ ವಿರುದ್ಧವಾಗಿ ಪಾಪಮಾಡಿದೆವು. ಆದ್ದರಿಂದ ನೀನು ನಮ್ಮ ಮೇಲೆ ಕೋಪಗೊಂಡೆ. ಈಗ ನಾವು ಹೇಗೆ ರಕ್ಷಿಸಲ್ಪಡುವೆವು?
ಯೆಶಾಯ 64 : 6 (ERVKN)
ನಾವೆಲ್ಲರೂ ಪಾಪದಿಂದ ಮಲಿನರಾಗಿದ್ದೇವೆ. ನಮ್ಮ ಸುಕಾರ್ಯಗಳೆಲ್ಲಾ ಹಳೇ ಕೊಳಕು ಬಟ್ಟೆಯಂತಿವೆ.
ನಾವೆಲ್ಲಾ ಒಣಗಿಹೋದ ಎಲೆಗಳಂತಿದ್ದೇವೆ. ನಮ್ಮ ಪಾಪಗಳು ಬಿರುಗಾಳಿಯಂತೆ ನಮ್ಮನ್ನು ಬಡಿದುಕೊಂಡುಹೋಗಿವೆ.
ಯೆಶಾಯ 64 : 7 (ERVKN)
ನಿನ್ನ ಹೆಸರನ್ನು ಯಾರೂ ಕರೆಯುವದಿಲ್ಲ. ನಿನ್ನನ್ನು ಹಿಂಬಾಲಿಸಲು ಯಾರಿಗೂ ಇಷ್ಟವಿಲ್ಲ;
ಯಾಕೆಂದರೆ ನೀನು ನಮಗೆ ವಿಮುಖನಾಗಿರುವೆ ಮತ್ತು ನಮ್ಮನ್ನು ನಮ್ಮ ಪಾಪಗಳ ದೋಷಕ್ಕೆ ಒಪ್ಪಿಸಿಕೊಟ್ಟಿರುವಿ.
ಯೆಶಾಯ 64 : 8 (ERVKN)
ಯೆಹೋವನೇ, ನೀನು ನಮ್ಮ ತಂದೆಯಾಗಿರುವೆ. ನಾವು ಜೇಡಿಮಣ್ಣಿನಂತಿದ್ದೇವೆ.
ನೀನಾದರೋ ಕುಂಬಾರನಾಗಿರುವೆ. ನಿನ್ನ ಕೈಗಳು ನಮ್ಮನ್ನು ನಿರ್ಮಿಸಿದವು.
ಯೆಶಾಯ 64 : 9 (ERVKN)
ಯೆಹೋವನೇ, ನಮ್ಮ ಮೇಲೆ ಸಿಟ್ಟಿನಿಂದಲೇ ಇರಬೇಡ. ನಮ್ಮ ಪಾಪಗಳನ್ನು ನಿನ್ನ ನೆನಪಿನಲ್ಲಿಟ್ಟುಕೊಂಡೇ ಇರಬೇಡ.
ದಯಮಾಡಿ ನಮ್ಮ ಕಡೆಗೆ ನೋಡು. ನಾವು ನಿನ್ನ ಜನರೇ.
ಯೆಶಾಯ 64 : 10 (ERVKN)
ನಿನ್ನ ಪವಿತ್ರ ಪಟ್ಟಣಗಳು ಜನಶೂನ್ಯವಾಗಿವೆ. ಆ ಪಟ್ಟಣಗಳು ಈಗ ಮರುಭೂಮಿಯಂತಿವೆ. ಚೀಯೋನು ಈಗ ಮರುಭೂಮಿಯಾಗಿದೆ. ಜೆರುಸಲೇಮ್ ನಿರ್ಜನವಾಗಿದೆ.
ಯೆಶಾಯ 64 : 11 (ERVKN)
ನಮ್ಮ ಪವಿತ್ರ ಆಲಯವು ಬೆಂಕಿಯಿಂದ ಸುಡಲ್ಪಟ್ಟಿದೆ. ಆ ದೇವಾಲಯವು ನಮಗೆ ಅತ್ಯಂತ ಅಮೂಲ್ಯವಾದದ್ದಾಗಿದೆ.
ನಮ್ಮ ಪೂರ್ವಿಕರು ನಿನ್ನನ್ನು ಅಲ್ಲಿ ಆರಾಧಿಸಿದರು. ನಾವು ಹೊಂದಿದಂಥ ಎಲ್ಲಾ ಒಳ್ಳೆಯವುಗಳು ಈಗ ನಾಶವಾದವು.
ಯೆಶಾಯ 64 : 12 (ERVKN)
ನಮ್ಮ ಮೇಲೆ ನಿನ್ನ ಪ್ರೀತಿಯನ್ನು ತೋರಿಸಲು ಇವುಗಳು ಯಾವಾಗಲೂ ನಿನಗೆ ಅಡ್ಡಿಮಾಡುತ್ತವೋ? ನಮ್ಮೊಂದಿಗೆ ಮಾತನಾಡದೆ ಇನ್ನೂ ಇರುವಿಯೋ? ನಮ್ಮನ್ನು ಸದಾಕಾಲ ನೀನು ಶಿಕ್ಷಿಸುವಿಯೋ?

1 2 3 4 5 6 7 8 9 10 11 12