ಯೆಶಾಯ 6 : 1 (ERVKN)
ಪ್ರವಾದಿಯಾಗಲು ಯೆಶಾಯನಿಗೆ ದೇವರಿಂದ ಕರೆ ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ನಾನು ನನ್ನ ಒಡೆಯನನ್ನು ಕಂಡೆನು. ಆತನು ಅದ್ಭುತವೂ ಉನ್ನತವೂ ಆಗಿರುವ ಸಿಂಹಾಸನದ ಮೇಲೆ ಕುಳಿತಿದ್ದನು. ಆತನ ಉದ್ದವಾದ ನಿಲುವಂಗಿಯು ಆಲಯವನ್ನು ತುಂಬಿಕೊಂಡಿತ್ತು.
ಯೆಶಾಯ 6 : 2 (ERVKN)
ಆರು ರೆಕ್ಕೆಗಳುಳ್ಳ ಸೆರಾಫಿಯರು ಯೆಹೋವನ ಸುತ್ತ್ತಲೂ ನಿಂತಿದ್ದರು. ಆ ದೇವದೂತರು ಎರಡು ರೆಕ್ಕೆಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು; ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡಿದ್ದರು; ಉಳಿದ ಎರಡು ರೆಕ್ಕೆಗಳಿಂದ ಹಾರಾಡುತ್ತಿದ್ದರು.
ಯೆಶಾಯ 6 : 3 (ERVKN)
ಪ್ರತಿಯೊಬ್ಬ ದೂತನು ಇನ್ನೊಬ್ಬ ದೂತನನ್ನು ಕರೆದು, “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಸರ್ವಶಕ್ತನಾದ ಯೆಹೋವನು ಮಹಾ ಪರಿಶುದ್ಧನು. ಆತನ ಮಹಿಮೆಯು ಇಡೀ ಭೂಮಂಡಲವನ್ನು ಆವರಿಸಿಕೊಂಡಿದೆ” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳುತ್ತಿದ್ದರು.
ಯೆಶಾಯ 6 : 4 (ERVKN)
ಅವರ ಗಟ್ಟಿಯಾದ ಸ್ವರಕ್ಕೆ ಬಾಗಿಲಿನ ನಿಲುವುಗಳು ಅಲುಗಾಡುತ್ತಿದ್ದವು; ಆಲಯವು ಹೊಗೆಯಿಂದ ತುಂಬಿಹೋಯಿತು.
ಯೆಶಾಯ 6 : 5 (ERVKN)
ಆಗ ನಾನು ಬಹು ಭಯಗೊಂಡು, “ಅಯ್ಯೋ, ನಾನು ನಾಶವಾಗುತ್ತಿದ್ದೇನೆ. ನಾನು ದೇವರೊಂದಿಗೆ ಮಾತನಾಡುವಷ್ಟು ಯೋಗ್ಯನಲ್ಲ. ದೇವರೊಂದಿಗೆ ಮಾತಾಡಲು ಯೋಗ್ಯರಲ್ಲದ ಜನರೊಂದಿಗೆ ನಾನು ಜೀವಿಸುತ್ತಿದ್ದೇನೆ. ಆದರೂ ನಾನು ಸರ್ವಶಕ್ತನಾದ ಯೆಹೋವನನ್ನು, ರಾಜಾಧಿರಾಜನನ್ನು ನೋಡಿದೆನು” ಎಂದೆನು.
ಯೆಶಾಯ 6 : 6 (ERVKN)
ಯಜ್ಞವೇದಿಕೆಯ ಮೇಲೆ ಬೆಂಕಿ ಇತ್ತು. ಸೆರಾಫಿಯರಲ್ಲೊಬ್ಬನು ಇಕ್ಕುಳಿಯಲ್ಲಿ ಬೆಂಕಿಯೊಳಗಿಂದ ಉರಿಯುವ ಕೆಂಡವನ್ನು ತೆಗೆದು ನನ್ನ ಬಳಿಗೆ ಹಾರಿಬಂದನು.
ಯೆಶಾಯ 6 : 7 (ERVKN)
ಆ ಸೆರಾಫಿಯನು ಉರಿಯುವ ಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿದನು. ಆಗ ಆ ದೂತನು, “ಇಗೋ, ಈ ಉರಿಯುವ ಕೆಂಡವು ನಿನ್ನ ತುಟಿಗಳಿಗೆ ತಗಲಿದ್ದರಿಂದ ನೀನು ಮಾಡಿದ ಕೆಟ್ಟಕಾರ್ಯಗಳೆಲ್ಲಾ ನಿನ್ನಿಂದ ತೊಲಗಿ ಹೋದವು. ಈಗ ನಿನ್ನ ಪಾಪವು ಅಳಿಸಿಹಾಕಲ್ಪಟ್ಟಿದೆ” *ಅಳಿಸಿಹಾಕಲ್ಪಟ್ಟಿದೆ ಅಕ್ಷರಶಃ, “ಪ್ರಾಯಶ್ಚಿತ್ತ ಮಾಡಲಾಗಿದೆ.” ಎಂದು ಹೇಳಿದನು.
ಯೆಶಾಯ 6 : 8 (ERVKN)
ಆಗ ನಾನು ನನ್ನ ಒಡೆಯನಾದ ಯೆಹೋವನ ಸ್ವರವನ್ನು ಕೇಳಿದೆನು. ಆತನು, “ನಾನು ಯಾರನ್ನು ಕಳುಹಿಸಲಿ? ನಮಗೋಸ್ಕರ ಯಾರು ಹೋಗುವರು?” ಎಂದು ಕೇಳಿದನು. ಆಗ ನಾನು, “ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದೆನು.
ಯೆಶಾಯ 6 : 9 (ERVKN)
ಆಗ ಯೆಹೋವನು, “ನೀನು ಹೋಗಿ ಇದನ್ನು ಜನರಿಗೆ ಸಾರು: ‘ಸರಿಯಾಗಿ ಕೇಳಿಸಿಕೊಳ್ಳಿ, ಆದರೆ ಅರ್ಥಮಾಡಿಕೊಳ್ಳಬೇಡಿ. ಸೂಕ್ಷ್ಮವಾಗಿ ನೋಡಿ, ಆದರೆ ಕಲಿತುಕೊಳ್ಳಬೇಡಿ.’
ಯೆಶಾಯ 6 : 10 (ERVKN)
ಜನರಲ್ಲಿ ಗಲಿಬಿಲಿಯನ್ನು ಉಂಟುಮಾಡು. ಜನರು ತಾವು ನೋಡಿದ್ದನ್ನು, ಕೇಳಿದ್ದನ್ನು ಅರ್ಥಮಾಡಿಕೊಳ್ಳದ ಹಾಗೆ ಮಾಡು. ನೀನು ಹೀಗೆ ಮಾಡದಿದ್ದಲ್ಲಿ ಜನರು ತಾವು ಕೇಳಿದ್ದನ್ನು ಅರ್ಥಮಾಡಿಕೊಳ್ಳುವರು; ಜನರು ತಮ್ಮ ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳುವರು. ಅವರು ಹಾಗೆ ಮಾಡಿದ್ದಲ್ಲಿ, ಅವರು ನನ್ನ ಬಳಿಗೆ ಹಿಂದಿರುಗಿ ಬಂದು ಗುಣಹೊಂದುವರು” ಎಂದು ಹೇಳಿದನು.
ಯೆಶಾಯ 6 : 11 (ERVKN)
ಆಗ ನಾನು, “ಒಡೆಯನೇ, ಎಷ್ಟರ ತನಕ ನಾನು ಹೀಗೆ ಮಾಡಬೇಕು?” ಎಂದು ವಿಚಾರಿಸಿದೆನು. ಅದಕ್ಕೆ ಯೆಹೋವನು, “ನಗರಗಳು ನಾಶವಾಗುವ ತನಕ ಹೀಗೆಯೇ ಮಾಡು. ಮನೆಗಳಲ್ಲಿ ಜನರು ಇಲ್ಲದೆ ಹೋಗುವವರೆಗೆ ಹೀಗೆಯೇ ಮಾಡು. ಇಡೀ ದೇಶವು ಹಾಳಾಗಿ ಬೆಂಗಾಡಾಗುವ ತನಕ ಹೀಗೆಯೇ ಮಾಡುತ್ತಿರು” ಎಂದು ಹೇಳಿದನು.
ಯೆಶಾಯ 6 : 12 (ERVKN)
ಜನರು ಬಹುದೂರ ಹೋಗುವಂತೆ ಯೆಹೋವನು ಮಾಡುವನು. ದೇಶದೊಳಗೆ ನಿರ್ಜನವಾದ ಸ್ಥಳಗಳು ಬೇಕಾದಷ್ಟು ಇರುವವು.
ಯೆಶಾಯ 6 : 13 (ERVKN)
ಆದರೆ ದೇಶದಲ್ಲಿ ಹತ್ತನೆ ಒಂದು ಭಾಗದಷ್ಟು ಜನರು ಮಾತ್ರ ಉಳಿಯುವರು. ಇವರು ನಾಶವಾಗುವುದಿಲ್ಲ. ಯಾಕೆಂದರೆ ಇವರು ಯೆಹೋವನ ಬಳಿಗೆ ಹಿಂತಿರುಗಿ ಬಂದವರು. ಇವರು ಓಕ್ ಮರದಂತಿರುವರು. ಆ ಮರವು ಕಡಿಯಲ್ಪಟ್ಟರೂ ಅದರ ಬುಡವು ಹಾಗೆಯೇ ಉಳಿಯುವದು. ಈ ಕಾಂಡದ ಬುಡವು ಬಹು ವಿಶೇಷವಾದ ಬೀಜವಾಗಿರುವದು ಮತ್ತು ಅದು ಪುನಃ ಬೆಳೆಯುವುದು.
❮
❯
1
2
3
4
5
6
7
8
9
10
11
12
13