ಯೆಶಾಯ 59 : 1 (ERVKN)
ಇಗೋ, ನಿಮ್ಮನ್ನು ರಕ್ಷಿಸಲು ಯೆಹೋವನು ಶಕ್ತನಾಗಿದ್ದಾನೆ. ನೀವು ಸಹಾಯಕ್ಕಾಗಿ ಪ್ರಾರ್ಥಿಸುವಾಗ ಆತನು ನಿಮ್ಮನ್ನು ಆಲೈಸುವನು.
ಯೆಶಾಯ 59 : 2 (ERVKN)
ಆದರೆ ನಿಮ್ಮ ಪಾಪಗಳೇ ನಿಮ್ಮನ್ನು ದೇವರಿಂದ ದೂರ ಮಾಡಿರುತ್ತವೆ. ಯೆಹೋವನು ತನ್ನ ಮುಖವನ್ನು ಮರೆ ಮಾಡಿಕೊಳ್ಳುವಂತೆ ನೀವು ಪಾಪಗಳನ್ನು ಮಾಡಿದ್ದರಿಂದ, ಆತನು ನಿಮಗೆ ಕಿವಿಗೊಡುವುದಿಲ್ಲ.
ಯೆಶಾಯ 59 : 3 (ERVKN)
ನಿಮ್ಮ ಕೈಗಳು ಮಲಿನವಾಗಿವೆ; ಅವು ರಕ್ತಮಯವಾಗಿವೆ. ನಿಮ್ಮ ಬೆರಳುಗಳು ಅಪರಾಧಗಳಿಂದ ಅಶುದ್ಧವಾಗಿವೆ. ನಿಮ್ಮ ಬಾಯಿಗಳಿಂದ ನೀವು ಸುಳ್ಳಾಡುತ್ತೀರಿ. ನಿಮ್ಮ ನಾಲಿಗೆಯು ಕೆಟ್ಟ ಮಾತುಗಳನ್ನಾಡುತ್ತದೆ.
ಯೆಶಾಯ 59 : 4 (ERVKN)
ನೆರೆಯವನ ಬಗ್ಗೆ ಯಾರೂ ಸತ್ಯವನ್ನಾಡುವದಿಲ್ಲ. ಜನರು ನ್ಯಾಯಾಲಯಗಳಲ್ಲಿ ಪರಸ್ಪರ ವ್ಯಾಜ್ಯ ಮಾಡುವರು. ತಾವು ಗೆಲ್ಲಬೇಕೆಂಬ ಉದ್ದೇಶದಿಂದ ಸುಳ್ಳುಸಾಕ್ಷಿಯ ಮೇಲೆ ಅವಲಂಬಿಸುವರು. ಅವರು ಒಬ್ಬರ ಮೇಲೊಬ್ಬರು ಸುಳ್ಳು ಹೇಳುತ್ತಾರೆ; ಅವರು ಕೇಡಿನಿಂದ ತುಂಬಿದವರಾಗಿದ್ದು ಕೇಡನ್ನೇ ಹೆರುತ್ತಾರೆ.
ಯೆಶಾಯ 59 : 5 (ERVKN)
ವಿಷದ ಹಾವಿನ ಮೊಟ್ಟೆಯಿಂದ ವಿಷದ ಹಾವಿನ ಮರಿಗಳು ಹೊರಬರುವಂತೆ ಅವರ ದುಷ್ಟತನವು ಹೊರಬರುವದು. ಆ ಮೊಟ್ಟೆಯನ್ನು ನೀವು ತಿಂದರೆ ಸಾಯುವಿರಿ. ಆ ಮೊಟ್ಟೆಯನ್ನು ಒಡೆದರೆ ವಿಷದ ಹಾವು ಹೊರಬರುವದು. ಜನರು ಹೇಳುವ ಸುಳ್ಳು ಜೇಡರ ಬಲೆಯಂತಿರುವದು.
ಯೆಶಾಯ 59 : 6 (ERVKN)
ಜೇಡರ ಬಲೆಗಳ ನೂಲಿನಿಂದ ಬಟ್ಟೆ ನೇಯಲಾಗದು. ಆ ಬಲೆಯಿಂದ ನಿಮ್ಮ ಶರೀರವನ್ನು ಮುಚ್ಚಲಾಗುವದಿಲ್ಲ. ಕೆಲವರು ತಮ್ಮ ಕೈಗಳಿಂದ ಇತರರಿಗೆ ಕೇಡುಮಾಡುವರು.
ಯೆಶಾಯ 59 : 7 (ERVKN)
ಅವರು ತಮ್ಮ ಕಾಲುಗಳಿಂದ ಓಡುತ್ತಾ ದುಷ್ಟಕಾರ್ಯಗಳನ್ನು ಮಾಡುವರು; ನಿರಪರಾಧಿಗಳನ್ನು ಕೊಲ್ಲಲು ಆತುರಪಡುವರು. ಅವರ ಆಲೋಚನೆಯು ಕೆಟ್ಟದ್ದೇ. ದೊಂಬಿ, ಲೂಟಿಗಳೇ ಅವರ ಜೀವನಶೈಲಿಯಾಗಿವೆ.
ಯೆಶಾಯ 59 : 8 (ERVKN)
ಅವರಿಗೆ ಸಮಾಧಾನದ ದಾರಿಯೇ ತಿಳಿಯದು. ಅವರ ಜೀವಿತದಲ್ಲಿ ಒಳ್ಳೆಯತನವೆಂಬುದು ಇಲ್ಲ. ಅವರ ಮಾರ್ಗವು ಕಪಟತನದಿಂದ ತುಂಬಿದೆ. ಅವರಂತೆ ಜೀವಿಸುವವರಿಗೆ ಶಾಂತಿಯೇ ಇರದು.
ಯೆಶಾಯ 59 : 9 (ERVKN)
ಎಲ್ಲಾ ನ್ಯಾಯನೀತಿಗಳು ಇಲ್ಲವಾಗಿವೆ. ನಮ್ಮ ಬಳಿಯಲ್ಲಿ ಅಂಧಕಾರವು ಇರುವದರಿಂದ ನಾವು ಬೆಳಕಿಗಾಗಿ ಕಾಯಬೇಕಾಗಿದೆ. ಪ್ರಕಾಶಮಾನವಾದ ಬೆಳಕಿಗಾಗಿ ಆಶಿಸುತ್ತಿರುವಾಗ ನಮಗೆ ಸಿಕ್ಕಿದ್ದು ಕೇವಲ ಕತ್ತಲೆಯೇ.
ಯೆಶಾಯ 59 : 10 (ERVKN)
ನಾವು ಕಣ್ಣಿಲ್ಲದವರಂತಿದ್ದೇವೆ. ಕುರುಡರಂತೆ ಗೋಡೆಗೆ ತಾಕುತ್ತಿದ್ದೇವೆ. ರಾತ್ರಿಯಲ್ಲಿ ಎಡವಿಬೀಳುವಂತೆ ಬೀಳುತ್ತಿದ್ದೇವೆ. ಹಗಲಿನಲ್ಲಿಯೂ ನಮಗೆ ಕಾಣದು. ಮಧ್ಯಾಹ್ನದ ಸಮಯದಲ್ಲೂ ಸತ್ತವರಂತೆ ಬೀಳುತ್ತೇವೆ.
ಯೆಶಾಯ 59 : 11 (ERVKN)
ನಾವೆಲ್ಲಾ ಗುಣುಗುಟ್ಟುತ್ತೇವೆ. ನಾವು ಕರಡಿಗಳಂತೆ ಗುರುಗುಟ್ಟುತ್ತಿದ್ದೇವೆ, ಪಾರವಾಳಗಳಂತೆ ಮೂಲುಗುತ್ತಿದ್ದೇವೆ. ಜನರು ಧರ್ಮವನ್ನು ಅನುಸರಿಸುವ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ. ಆದರೆ ಧರ್ಮವೇ ಇಲ್ಲ. ನಾವು ರಕ್ಷಣೆಗಾಗಿ ಕಾಯುತ್ತಿದ್ದೇವೆ. ಆದರೆ ರಕ್ಷಣೆಯು ಬಹುದೂರವಿದೆ.
ಯೆಶಾಯ 59 : 12 (ERVKN)
ಯಾಕೆಂದರೆ ನಾವು ಲೆಕ್ಕವಿಲ್ಲದಷ್ಟು ದ್ರೋಹಗಳನ್ನು ದೇವರಿಗೆ ವಿರುದ್ಧವಾಗಿ ಮಾಡಿರುತ್ತೇವೆ. ನಾವು ಮಾಡಿದ್ದು ತಪ್ಪೆಂದು ನಮ್ಮ ಪಾಪಗಳೇ ತೋರಿಸುತ್ತವೆ. ಹೌದು, ನಾವು ಈ ಕಾರ್ಯಗಳನ್ನು ಮಾಡಿ ದೋಷಿಗಳಾಗಿದ್ದೇವೆ.
ಯೆಶಾಯ 59 : 13 (ERVKN)
ನಾವು ಪಾಪಮಾಡಿ ಯೆಹೋವನಿಂದ ದೂರ ಹೋಗಿದ್ದೇವೆ. ಆತನಿಂದ ದೂರವಾಗಿ ಆತನನ್ನು ತೊರೆದುಬಿಟ್ಟಿದ್ದೇವೆ. ನಾವು ದುಷ್ಟತನವನ್ನೂ ದೇವರಿಗೆ ವಿರುದ್ಧವಾದ ಕಾರ್ಯಗಳನ್ನೂ ಆಲೋಚಿಸಿದ್ದೇವೆ. ನಮ್ಮ ಹೃದಯಗಳಲ್ಲಿ ದುಷ್ಟ ಯೋಜನೆಗಳನ್ನು ಹಾಕಿರುತ್ತೇವೆ.
ಯೆಶಾಯ 59 : 14 (ERVKN)
ನ್ಯಾಯವು ನಮ್ಮಿಂದ ತೊಲಗಿಹೋಗಿದೆ. ಸತ್ಯವು ಬೀದಿ ಪಾಲಾಗಿದೆ. ನೀತಿಯು ಪಟ್ಟಣದೊಳಕ್ಕೆ ಪ್ರವೇಶಿಸಲಾರದು.
ಯೆಶಾಯ 59 : 15 (ERVKN)
ಸತ್ಯವು ಹೊರಟು ಹೋಯಿತು. ಒಳ್ಳೆಯದನ್ನು ಮಾಡುವವರು ಲೂಟಿಗೆ ಗುರಿಯಾಗಿದ್ದಾರೆ. ಒಳ್ಳೆಯವರು ಇಲ್ಲದೆ ಇರುವುದನ್ನು ಕಂಡು ಯೆಹೋವನು ಬೇಸರಗೊಂಡಿದ್ದಾನೆ.
ಯೆಶಾಯ 59 : 16 (ERVKN)
ಜನರಿಗೆ ಸಹಾಯ ಮಾಡುವವರು ಇಲ್ಲದೆ ಇರುವುದನ್ನು ಕಂಡು ಯೆಹೋವನು ಆಶ್ಚರ್ಯಚಕಿತನಾಗಿದ್ದಾನೆ. ಆದುದರಿಂದ ಯೆಹೋವನು ತನ್ನ ಸ್ವಂತ ಶಕ್ತಿಯನ್ನೂ ನೀತಿಯನ್ನೂ ಬಳಸಿ ಜನರನ್ನು ರಕ್ಷಿಸಿದನು.
ಯೆಶಾಯ 59 : 17 (ERVKN)
ಯೆಹೋವನು ಯುದ್ಧ ಸನ್ನದ್ಧನಾದನು. ಆತನು ಒಳ್ಳೆಯತನವೆಂಬ ಕವಚ, ರಕ್ಷಣೆಯೆಂಬ ಶಿರಸ್ತ್ರಾಣ, ಶಿಕ್ಷೆಯೆಂಬ ಬಟ್ಟೆ ಮತ್ತು ಗಾಢವಾದ ಪ್ರೇಮವೆಂಬ ಮೇಲ್ಹೊದಿಕೆಯನ್ನು ಧರಿಸಿದ್ದಾನೆ.
ಯೆಶಾಯ 59 : 18 (ERVKN)
ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ಅವರಿಗೆ ಸರಿಯಾದ ದಂಡನೆಯನ್ನು ಕೊಡುವನು; ಯೆಹೋವನು ತನ್ನ ಶತ್ರುಗಳ ಮೇಲೆ ಕೋಪಗೊಂಡಿರುವುದರಿಂದ ದೂರದೇಶಗಳಲ್ಲಿರುವ ಜನರನ್ನೆಲ್ಲಾ ಸರಿಯಾಗಿ ದಂಡಿಸುವನು.
ಯೆಶಾಯ 59 : 19 (ERVKN)
ಆಗ ಪಶ್ಚಿಮದಲ್ಲಿರುವ ಜನರು ಯೆಹೋವನ ನಾಮಕ್ಕೆ ಭಯಪಟ್ಟು ಗೌರವಿಸುವರು. ಪೂರ್ವದಲ್ಲಿದ್ದ ಜನರು ಆತನ ಮಹಿಮೆಯನ್ನು ಭಯಭಕ್ತಿಯಿಂದ ಕಾಣುವರು. ಬಿರುಗಾಳಿಯಿಂದ ರಭಸವಾಗಿ ಹರಿದುಬರುವ ಹೊಳೆಯಂತೆ ಯೆಹೋವನು ಬೇಗನೆ ಬರುವನು.
ಯೆಶಾಯ 59 : 20 (ERVKN)
ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು. ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು.
ಯೆಶಾಯ 59 : 21 (ERVKN)
ಯೆಹೋವನು ಹೇಳುವದೇನೆಂದರೆ: “ನಾನಂತೂ ಆ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುವೆನು. ನನ್ನ ವಾಗ್ದಾನದ ಮಾತುಗಳೂ ನಾನು ಇರಿಸಿದ ನನ್ನ ಆತ್ಮವೂ ನಿಮ್ಮಿಂದ ಎಂದಿಗೂ ತೊಲಗದು. ಅವು ನಿಮ್ಮ ಮೊಮ್ಮಕ್ಕಳ ತನಕವೂ ಇರುವವು. ಅವು ನಿನ್ನೊಂದಿಗೆ ಈಗಲೂ ಸದಾಕಾಲವೂ ಇರುವವು.”

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: