ಯೆಶಾಯ 58 : 1 (ERVKN)
ದೇವರನ್ನು ಅನುಸರಿಸಲು ಜನರಿಗೆ ಉಪದೇಶ ಎಷ್ಟು ಗಟ್ಟಿಯಾಗಿ ಆರ್ಭಟಿಸಬಹುದೋ ಅಷ್ಟು ಆರ್ಭಟಿಸಿರಿ. ನಿಲ್ಲಿಸಬೇಡಿರಿ, ತುತ್ತೂರಿಯಂತೆ ಗಟ್ಟಿಯಾಗಿ ಕಿರುಚಿರಿ.
ಜನರು ಮಾಡಿದ ಪಾಪಗಳನ್ನು ಅವರಿಗೆ ತಿಳಿಸಿರಿ. ಯಾಕೋಬನ ವಂಶದವರಿಗೆ ಅವರ ಪಾಪಗಳನ್ನು ತಿಳಿಸಿರಿ.
ಯೆಶಾಯ 58 : 2 (ERVKN)
ಆಗ ಅವರು ದಿನನಿತ್ಯ ನನ್ನನ್ನು ಆರಾಧಿಸಲು ಬರುವರು. ಜನರು ನನ್ನ ವಿಧಿಗಳನ್ನು ಕಲಿತುಕೊಳ್ಳಲು ಇಷ್ಟಪಡುವರು.
ಆಗ ಅವರು ಸರಿಯಾಗಿ ಜೀವಿಸುವ ಜನಾಂಗವಾಗುವರು. ಅವರು ದೇವರ ಒಳ್ಳೆಯ ಆಜ್ಞೆಗಳನ್ನು ಬಿಡದೆ ಅನುಸರಿಸುವರು.
ಅವರು ಪಕ್ಷಪಾತವಿಲ್ಲದೆ ನ್ಯಾಯತೀರಿಸಲು ನನ್ನನ್ನು ಕೇಳುವರು. ದೇವರ ನಿರ್ಧಾರವನ್ನು ಕೇಳಲು ಆತನ ಬಳಿಗೆ ಹೋಗಲು ಇಚ್ಛಿಸುವರು.
ಯೆಶಾಯ 58 : 3 (ERVKN)
ಈಗ ಆ ಜನರು ಹೀಗೆ ಹೇಳುತ್ತಾರೆ, “ನಾವು ನಿನ್ನನ್ನು ಗೌರವಿಸಲು ಉಪವಾಸಮಾಡಿದೆವು. ನೀನು ನಮ್ಮನ್ನೇಕೆ ಗಮನಿಸುವದಿಲ್ಲ? ನಿನ್ನನ್ನು ಗೌರವಿಸುವದಕ್ಕಾಗಿ ನಾವು ನಮ್ಮ ದೇಹಗಳನ್ನು ದಂಡಿಸಿದೆವು. ನೀನೇಕೆ ನಮ್ಮನ್ನು ಗಮನಿಸುವದಿಲ್ಲ?” ಆದರೆ ಯೆಹೋವನು ಹೇಳುವುದೇನೆಂದರೆ: “ವಿಶೇಷ ದಿವಸಗಳಲ್ಲಿ ನಿಮ್ಮ ಇಷ್ಟಾನುಸಾರ *ಇಷ್ಟಾನುಸಾರ ಬಹುಶಃ, “ಜನರು ಉಪವಾಸ ಆಚರಣೆ ಮಾಡುವುದರ ಬದಲು ವ್ಯಾಪಾರವನ್ನು ಮಾಡುತ್ತಿದ್ದಿರಬೇಕು.” ಉಪವಾಸ ಮಾಡುವಿರಿ. ನೀವು ನಿಮ್ಮ ಸ್ವಂತ ದೇಹಗಳನ್ನು ದಂಡಿಸದೆ ನಿಮ್ಮ ಸೇವಕರನ್ನು ದಂಡಿಸುತ್ತಿದ್ದೀರಿ.
ಯೆಶಾಯ 58 : 4 (ERVKN)
ನೀವು ಆಹಾರಕ್ಕಾಗಿ ಹಸಿವೆಯಿಂದಿಲ್ಲ. ನೀವು ಜಗಳ, ವಾಗ್ವಾದಕ್ಕಾಗಿ ಹಸಿದಿದ್ದೀರಿ. ನಿಮ್ಮ ಕ್ರೂರ ಕೈಗಳಿಂದ ಜನರನ್ನು ಹೊಡೆಯಲು ಹಸಿವೆಯಿಂದಿದ್ದೀರಿ. ನೀವು ಉಪವಾಸ ಮಾಡುವಾಗ ನನಗಾಗಿ ಮಾಡುವದಿಲ್ಲ. ನನ್ನನ್ನು ಸ್ತುತಿಸಲು ನೀವು ನಿಮ್ಮ ಸ್ವರವನ್ನು ಉಪಯೋಗಿಸುವದಿಲ್ಲ.
ಯೆಶಾಯ 58 : 5 (ERVKN)
ಉಪವಾಸದ ದಿವಸಗಳಲ್ಲಿ ಜನರು ತಮ್ಮ ದೇಹದಂಡನೆ ಮಾಡುವದನ್ನು ನೋಡಲು ಆಶಿಸುತ್ತೇನೆ ಎಂದು ನೆನಸಿರುವಿರಾ? ಜನರು ತಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಕೆಂದು ನಾನು ಆಶಿಸುವುದಾಗಿ ನೀವು ತಿಳಿದುಕೊಂಡಿದ್ದೀರಾ? ಜನರು ಸತ್ತ ಸಸಿಗಳಂತೆ ನನಗೆ ಅಡ್ಡಬೀಳಬೇಕೆಂದೂ ಶೋಕವಸ್ತ್ರಗಳನ್ನು ಧರಿಸಬೇಕೆಂದೂ ನಾನು ಆಶಿಸುವುದಾಗಿ ತಿಳಿದುಕೊಂಡಿದ್ದೀರಾ? ಅವರು ಬೂದಿಯ ಮೇಲೆ ಕುಳಿತುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಬೇಕೆಂದು ನಾನು ಆಶಿಸುತ್ತೇನೋ? ನೀವು ಉಪವಾಸದ ದಿವಸಗಳಲ್ಲಿ ಅದನ್ನೇ ಮಾಡುವವರಾಗಿರುತ್ತೀರಿ. ಯೆಹೋವನು ಅದನ್ನೇ ಆಶಿಸುವನೆಂದು ನಂಬುತ್ತೀರೋ?
ಯೆಶಾಯ 58 : 6 (ERVKN)
“ನನಗೆ ಬೇಕಾಗಿರುವ ವಿಶೇಷ ದಿವಸ ಯಾವುದೆಂದು ನಾನು ಹೇಳುತ್ತೇನೆ. ಅದು ಜನರನ್ನು ಸ್ವತಂತ್ರರನ್ನಾಗಿ ಮಾಡುವ ದಿವಸ, ಜನರಿಂದ ಅವರ ಭಾರವನ್ನು ತೆಗೆದುಹಾಕುವ ದಿವಸ; ತೊಂದರೆಗೀಡಾಗಿರುವ ಜನರನ್ನು ವಿಮುಕ್ತರನ್ನಾಗಿ ಮಾಡುವ ದಿವಸ; ಅವರ ಹೆಗಲಿನಿಂದ ಭಾರದ ಹೊರೆಯನ್ನು ಇಳಿಸುವ ದಿವಸ.
ಯೆಶಾಯ 58 : 7 (ERVKN)
ನೀವು ನಿಮ್ಮ ಊಟವನ್ನು ಹಸಿದವರೊಂದಿಗೆ ಹಂಚಿಕೊಳ್ಳುವದನ್ನು ನಾನು ನೋಡಲು ಆಶಿಸುತ್ತೇನೆ. ಮನೆಗಳಿಲ್ಲದ ಬಡ ಜನರನ್ನು ಕಂಡುಹಿಡಿದು ಅವರನ್ನು ನಿಮ್ಮ ಮನೆಗಳಿಗೆ ಕರೆದುಕೊಂಡು ಬರುವದನ್ನು ನೋಡಲು ಆಶಿಸುತ್ತೇನೆ. ಬಟ್ಟೆ ಇಲ್ಲದ ಒಬ್ಬ ಮನುಷ್ಯನನ್ನು ನೋಡಿದರೆ ನೀವು ನಿಮ್ಮ ಬಟ್ಟೆಯನ್ನು ಅವನಿಗೆ ಕೊಡಿರಿ. ಅವರಿಗೆ ಸಹಾಯ ಮಾಡಲು ಹಿಂಜರಿಯಬೇಡಿರಿ. ಅವರು ನಿಮ್ಮಂತೆ ಮನುಷ್ಯರಲ್ಲವೋ?”
ಯೆಶಾಯ 58 : 8 (ERVKN)
ನೀವು ಹೀಗೆ ಮಾಡಿದ್ದಲ್ಲಿ ನೀವು ಬೆಳಕಿನಂತೆ ಪ್ರಕಾಶಿಸುವಿರಿ. ಆಗ ನಿಮ್ಮ ಗಾಯಗಳು ಗುಣವಾಗುವವು. ನಿಮ್ಮ ಒಳ್ಳೆಯತನವು ನಿಮ್ಮ ಮುಂದೆ ನಡೆಯುವುದು. ಯೆಹೋವನ ಮಹಿಮೆಯು ನಿಮ್ಮ ಹಿಂದಿನಿಂದ ನಿಮ್ಮನ್ನು ಹಿಂಬಾಲಿಸುವದು.
ಯೆಶಾಯ 58 : 9 (ERVKN)
ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು. ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು.
ಯೆಶಾಯ 58 : 10 (ERVKN)
ಹಸಿದ ಜನರಿಗಾಗಿ ವ್ಯಸನಪಟ್ಟು ಅವರಿಗೆ ಆಹಾರವನ್ನು ಕೊಡಬೇಕು. ಸಂಕಷ್ಟ ಅನುಭವಿಸುವ ಜನರಿಗೆ ಸಹಾಯಮಾಡಿ ಅವರ ಕೊರತೆಗಳನ್ನು ನೀಗಿಸಬೇಕು. ಆಗ ನಿಮ್ಮ ಬೆಳಕು ಕತ್ತಲಲ್ಲಿ ಪ್ರಕಾಶಿಸುವದು. ನಿಮಗೆ ಆಗ ದುಃಖವಿರದು. ಮಧಾಹ್ನದ ಸೂರ್ಯನಂತೆ ನೀವು ಹೊಳೆಯುವಿರಿ.
ಯೆಶಾಯ 58 : 11 (ERVKN)
ಯೆಹೋವನು ಯಾವಾಗಲೂ ನಿಮ್ಮನ್ನು ನಡೆಸುವನು. ಒಣನೆಲದಲ್ಲಿ ನಿಮ್ಮ ಆತ್ಮಗಳನ್ನು ತೃಪ್ತಿಪಡಿಸುವನು. ನಿಮ್ಮ ಎಲುಬುಗಳಿಗೆ ಬಲವನ್ನು ಕೊಡುವನು. ನೀರಿನಿಂದ ತೇವವಾಗಿರುವ ತೋಟದಂತೆ ನೀವು ಇರುವಿರಿ. ನಿತ್ಯವೂ ನೀರಿರುವ ಬುಗ್ಗೆಯಂತೆ ನೀವಿರುವಿರಿ.
ಯೆಶಾಯ 58 : 12 (ERVKN)
ಬಹಳ ವರ್ಷಗಳಿಂದ ನಿಮ್ಮ ಪಟ್ಟಣಗಳು ಹಾಳಾಗಿ ಬಿದ್ದಿವೆ. ಆದರೆ ಹೊಸ ಪಟ್ಟಣಗಳು ಏಳುವವು. ಅವುಗಳ ಅಸ್ತಿವಾರಗಳು ಬಹಳ ವರ್ಷ ಬಾಳುವವು. ನೀವು “ಬೇಲಿ ಸರಿಮಾಡುವವರು” ಎಂದು ಕರೆಯಲ್ಪಡುವಿರಿ; “ಮನೆಗಳನ್ನು, ರಸ್ತೆಗಳನ್ನು ನಿರ್ಮಿಸುವವರು” ಎಂದು ನೀವು ಕರೆಯಲ್ಪಡುವಿರಿ.
ಯೆಶಾಯ 58 : 13 (ERVKN)
ಸಬ್ಬತ್ತಿನ ವಿಷಯವಾಗಿ ಯೆಹೋವನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ನೀವು ಅನುಸರಿಸಿದರೆ ಮತ್ತು ಆ ವಿಶೇಷ ದಿನದಲ್ಲಿ ಸ್ವೇಚ್ಛೆಯಾಗಿ ನಡೆಯದಿದ್ದರೆ ಇದೆಲ್ಲಾ ನಿಮಗೆ ದೊರೆಯುವುದು. ಸಬ್ಬತ್‌ದಿವಸವನ್ನು ನೀವು ಸಂತಸದ ದಿವಸವೆಂದು ಕರೆಯಬೇಕು. ದೇವರ ಆ ವಿಶೇಷ ದಿವಸವನ್ನು ನೀವು ಸನ್ಮಾನಿಸಿ ಆ ದಿವಸದಲ್ಲಿ ನಿಮ್ಮ ಸ್ವಕಾರ್ಯಗಳನ್ನು ಮಾಡಕೂಡದು; ಹರಟೆ ಹೊಡೆಯಕೂಡದು.
ಯೆಶಾಯ 58 : 14 (ERVKN)
ಆಗ ನೀವು ಯೆಹೋವನಲ್ಲಿ ಉಲ್ಲಾಸಿಸುವಿರಿ. ಆತನು ನಿಮ್ಮನ್ನು ಭೂಮಿಯಿಂದ ಮೇಲಕ್ಕಿರುವ ಉನ್ನತಸ್ಥಾನಕ್ಕೆ ಕೊಂಡೊಯ್ಯುವನು; ನಿಮ್ಮ ಪೂರ್ವಿಕನಾದ ಯಾಕೋಬನ ಸ್ವಾಸ್ತ್ಯವನ್ನು ನೀವು ಅನುಭವಿಸುವಂತೆ ಆತನು ನಿಮಗೆ ಅದನ್ನು ಕೊಡುವನು. ಇದು ಯೆಹೋವನ ನುಡಿ.
❮
❯
1
2
3
4
5
6
7
8
9
10
11
12
13
14