ಯೆಶಾಯ 40 : 1 (ERVKN)
ಇಸ್ರೇಲಿನ ಶಿಕ್ಷೆಯು ಅಂತ್ಯವಾಗುವದು ನಿನ್ನ ದೇವರು ಹೇಳುವುದೇನೆಂದರೆ:
“ನನ್ನ ಜನರನ್ನು ಸಂತೈಸು, ಸಂತೈಸು.
ಯೆಶಾಯ 40 : 2 (ERVKN)
ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು. ಜೆರುಸಲೇಮಿಗೆ ಹೀಗೆ ಹೇಳು, ‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು. ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’
ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”
ಯೆಶಾಯ 40 : 3 (ERVKN)
ಒಬ್ಬ ಮನುಷ್ಯನು ಕೂಗಿಹೇಳುವುದನ್ನು ಕೇಳಿರಿ:
“ಯೆಹೋವನಿಗೆ ಅಡವಿಯಲ್ಲಿ ದಾರಿಯನ್ನು ಸಿದ್ಧಮಾಡಿರಿ! ನಮ್ಮ ದೇವರಿಗೆ ಅಲ್ಲಿ ಮಾರ್ಗವನ್ನು ನೆಟ್ಟಗೆಮಾಡಿರಿ!
ಯೆಶಾಯ 40 : 4 (ERVKN)
ತಗ್ಗುಗಳನ್ನು ಸಮತಟ್ಟು ಮಾಡಿರಿ. ಎಲ್ಲಾ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿರಿ.
ಕೊರಕಲು ರಸ್ತೆಗಳನ್ನು ನೆಟ್ಟಗೆ ಮಾಡಿರಿ. ಏರುತಗ್ಗು ನೆಲವನ್ನು ಸಮಗೊಳಿಸಿರಿ.
ಯೆಶಾಯ 40 : 5 (ERVKN)
ಆಗ ಯೆಹೋವನ ಮಹಿಮೆಯು ಪ್ರದರ್ಶಿಸಲ್ಪಡುವದು. ಆಗ ಎಲ್ಲರೂ ಯೆಹೋವನ ಮಹಿಮೆಯನ್ನು ನೋಡುವರು.
ಯೆಹೋವನೇ ಇವುಗಳನ್ನು ಸ್ವತಃ ನುಡಿದಿದ್ದಾನೆ.”
ಯೆಶಾಯ 40 : 6 (ERVKN)
ಒಂದು ಸ್ವರವು “ಮಾತನಾಡು” ಎಂದಿತು. ಅದಕ್ಕೆ ಮನುಷ್ಯನು, “ಏನು ಮಾತಾಡಲಿ” ಅಂದನು.
ಆಗ ಸ್ವರವು, “ಜನರು ಶಾಶ್ವತವಾಗಿ ಜೀವಿಸುವದಿಲ್ಲ, ಅವರೆಲ್ಲರೂ ಹುಲ್ಲಿನಂತಿದ್ದಾರೆ. ಅವರ ಒಳ್ಳೆಯತನವು ಕಾಡುಹೂವಿನಂತಿದೆ.
ಯೆಶಾಯ 40 : 7 (ERVKN)
ಯೆಹೋವನ ಕಡೆಯಿಂದ ಒಂದು ಬಲವಾದ ಗಾಳಿಯು ಹುಲ್ಲಿನ ಮೇಲೆ ಬೀಸಿತು. ಆ ಹುಲ್ಲು ಒಣಗಿಹೋಯಿತು. ಕಾಡಿನ ಪುಷ್ಪವು ಬಾಡಿಹೋಯಿತು.
ಯೆಶಾಯ 40 : 8 (ERVKN)
ಜನರೆಲ್ಲರೂ ಹುಲ್ಲಿನಂತಿದ್ದಾರೆ. ಹುಲ್ಲು ಸಾಯುತ್ತದೆ. ಪುಷ್ಪಗಳು ಉದುರುತ್ತವೆ. ಆದರೆ ನಮ್ಮ ದೇವರ ಮಾತುಗಳು ಶಾಶ್ವತವಾಗಿವೆ” ಎಂದು ಹೇಳಿತು.
ಯೆಶಾಯ 40 : 9 (ERVKN)
ದೇವರ ಸುವಾರ್ತೆ ಚೀಯೋನೇ, ಸಾರಿ ತಿಳಿಸಲು ನಿನಗೆ ಒಂದು ಶುಭವಾರ್ತೆಯಿದೆ. ಉನ್ನತ ಪರ್ವತಕ್ಕೆ ಏರಿಹೋಗಿ ಶುಭವಾರ್ತೆಯನ್ನು ಗಟ್ಟಿಯಾಗಿ ಸಾರು!
ಜೆರುಸಲೇಮೇ, ನಿನಗೆ ತಿಳಿಸಲು ಒಳ್ಳೆಯ ವಾರ್ತೆ ಇದೆ. ಹೆದರಬೇಡ, ಅದನ್ನು ಗಟ್ಟಿಯಾಗಿ ಸಾರು.
ಯೆಹೂದದ ಎಲ್ಲಾ ನಗರಗಳಲ್ಲಿ ತಿಳಿಸು: “ಇಗೋ! ನಿನ್ನ ದೇವರು ಇಲ್ಲಿದ್ದಾನೆ.”
ಯೆಶಾಯ 40 : 10 (ERVKN)
ಇಗೋ, ನನ್ನ ಒಡೆಯನಾದ ಯೆಹೋವನು ಬಲಸಾಮರ್ಥ್ಯಗಳೊಡನೆ ಬರುತ್ತಿದ್ದಾನೆ. ಆತನು ತನ್ನ ಪರಾಕ್ರಮದಿಂದ ಎಲ್ಲಾ ಜನರನ್ನು ಆಳುವನು.
ಆತನು ತನ್ನ ಜನರಿಗೆ ಪ್ರತಿಫಲಗಳನ್ನು ತರುವನು. ಅವರ ಸಂಬಳವು ಆತನ ಕೈಯಲ್ಲಿದೆ.
ಯೆಶಾಯ 40 : 11 (ERVKN)
ಯೆಹೋವನು ತನ್ನ ಜನರನ್ನು ನಡಿಸುತ್ತಾನೆ. ಕುರಿಗಳನ್ನು ನಡಿಸುವ ಕುರುಬನಂತೆ ಯೆಹೋವನು ತನ್ನ ಭುಜಬಲದಿಂದ ತನ್ನ ಕುರಿಗಳನ್ನು ಒಟ್ಟುಗೂಡಿಸುವನು. ಯೆಹೋವನು ಕುರಿಮರಿಗಳನ್ನು ಎತ್ತಿಕೊಂಡು ಅಪ್ಪಿಕೊಳ್ಳುವನು. ಅದರ ತಾಯಿ ಆತನ ಪಕ್ಕದಲ್ಲೇ ನಡೆಯುವವು.
ಯೆಶಾಯ 40 : 12 (ERVKN)
ಪ್ರಪಂಚವನ್ನು ಸೃಷ್ಟಿಸಿದವನು ದೇವರೇ ತನ್ನ ಅಂಗೈಯಿಂದ ಸಾಗರಗಳನ್ನು ಅಳತೆ ಮಾಡಿದವರ್ಯಾರು? ತನ್ನ ಹಸ್ತದಿಂದ ಆಕಾಶವನ್ನು ಅಳತೆ ಮಾಡಿದವರ್ಯಾರು?
ಭೂಮಿಯ ಧೂಳನ್ನೆಲ್ಲಾ ಒಂದು ಬೋಗುಣಿಯಲ್ಲಿ ಅಳೆದವರ್ಯಾರು? ಪರ್ವತಗಳನ್ನು ಮತ್ತು ಬೆಟ್ಟಗಳನ್ನು ಅಳೆಯಲು ಅಳತೆಕೋಲನ್ನು ಯಾರು ಉಪಯೋಗಿಸಿದರು?
ಯೆಶಾಯ 40 : 13 (ERVKN)
ಯೆಹೋವನ ಆತ್ಮಕ್ಕೆ ಆತನು ಮಾಡಬೇಕಾದದ್ದನ್ನು ತಿಳಿಸಿದವರು ಯಾರೂ ಇಲ್ಲ. ಆತನು ಮಾಡಿದ ಕಾರ್ಯಗಳನ್ನು ಹೀಗೆ ಮಾಡಬೇಕೆಂದು ಹೇಳಿದವರಿಲ್ಲ.
ಯೆಶಾಯ 40 : 14 (ERVKN)
ಯೆಹೋವನು ಯಾರಿಂದಾದರೂ ಸಹಾಯ ಕೇಳಿದನೋ? ಯಾರಾದರೂ ಆತನಿಗೆ ನ್ಯಾಯನೀತಿಯನ್ನು ಕಲಿಸಿದರೋ? ಯಾರಾದರೂ ಆತನಿಗೆ ಜ್ಞಾನವನ್ನು ತಿಳಿಸಿಕೊಟ್ಟರೋ? ಯಾವನಾದರೂ ಯೆಹೋವನಿಗೆ ತಿಳುವಳಿಕೆಯನ್ನು ಹೇಳಿಕೊಟ್ಟನೋ?
ಯೆಶಾಯ 40 : 15 (ERVKN)
ಇಗೋ, ಈ ಪ್ರಪಂಚದ ಜನಾಂಗಗಳು ಕೊಡದಲ್ಲಿರುವ ಒಂದು ಹನಿ ನೀರಿನಂತಿವೆ.
ದೂರದಲ್ಲಿರುವ ಎಲ್ಲಾ ಜನಾಂಗಗಳನ್ನು ಯೆಹೋವನು ಒಟ್ಟುಗೂಡಿಸಿ ತಕ್ಕಡಿಯಲ್ಲಿ ತೂಗಿದರೆ ಅವು ಧೂಳಿನ ಕಣದಂತಿವೆ.
ಯೆಶಾಯ 40 : 16 (ERVKN)
ಯೆಹೋವನಿಗೆ ಲೆಬನೋನಿನಲ್ಲಿರುವ ಮರಗಳನ್ನೆಲ್ಲಾ ಸುಟ್ಟರೂ ಸಾಲದು, ಲೆಬನೋನಿನಲ್ಲಿರುವ ಪ್ರಾಣಿಗಳು ಆತನ ಯಜ್ಞಕ್ಕೆ ಸಾಲವು.
ಯೆಶಾಯ 40 : 17 (ERVKN)
ಲೋಕದ ಜನಾಂಗದವರೆಲ್ಲರೂ ಯೆಹೋವನೆದುರು ಏನೂ ಅಲ್ಲ. ಆತನೆದುರು ಎಲ್ಲಾ ಜನಾಂಗದವರು ಏನೂ ಅಲ್ಲ.
ಯೆಶಾಯ 40 : 18 (ERVKN)
ದೇವರ ರೂಪವು ಜನರಿಗೆ ತಿಳಿಯದು ದೇವರನ್ನು ಬೇರೆ ಯಾವುದಕ್ಕಾದರೂ ಹೋಲಿಸಬಹುದೇ? ದೇವರ ಚಿತ್ತವನ್ನು ಬರೆಯಬಹುದೇ?
ಯೆಶಾಯ 40 : 19 (ERVKN)
ಇಲ್ಲ, ಆದರೆ ಕೆಲವರು ವಿಗ್ರಹಗಳನ್ನು ಕಲ್ಲಿನಿಂದ ಅಥವಾ ಮರದಿಂದ ತಯಾರಿಸುತ್ತಾರೆ. ಅವುಗಳನ್ನು ಅವರು ದೇವರು ಎಂದು ಕರೆಯುತ್ತಾರೆ.
ಒಬ್ಬನು ಒಂದು ವಿಗ್ರಹವನ್ನು ಮಾಡುತ್ತಾನೆ. ಇನ್ನೊಬ್ಬನು ಅದಕ್ಕೆ ಬಂಗಾರದ ತಗಡನ್ನು ಹೊದಿಸುತ್ತಾನೆ ಮತ್ತು ಬೆಳ್ಳಿಹಾರವನ್ನು ಮಾಡಿಹಾಕುತ್ತಾನೆ.
ಯೆಶಾಯ 40 : 20 (ERVKN)
ಅದರ ಪೀಠಕ್ಕಾಗಿ ವಿಶೇಷ ಜಾತಿಯ ಮರವನ್ನು ಆರಿಸುವನು. ಈ ಬಗೆಯ ಮರವು ಕೊಳೆತುಹೋಗುವದಿಲ್ಲ.
ಆ ಬಳಿಕ ಅವನು ಒಳ್ಳೆಯ ಬಡಗಿಯನ್ನು ನೇಮಿಸುವನು. ಆ ಬಡಗಿಯು ವಿಗ್ರಹ ನಿಲ್ಲಿಸಿದಾಗ ಅದು ಪಕ್ಕಕ್ಕೆ ವಾಲಿ ಬೀಳದಂತೆ ಮಾಡುವನು.
ಯೆಶಾಯ 40 : 21 (ERVKN)
ಈ ವಿಷಯಗಳನ್ನೆಲ್ಲಾ ನೀವು ಸರಿಯಾಗಿ ತಿಳಿದಿದ್ದೀರಲ್ಲವೆ? ಇದರ ವಿಚಾರವಾಗಿ ನೀವು ಕೇಳಿರುವಿರಿ. ಎಷ್ಟೋ ವರ್ಷಗಳ ಹಿಂದೆ ಯಾರೋ ನಿಮಗೆ ಹೇಳಿದ್ದಿರಬಹುದು. ಖಂಡಿತವಾಗಿಯೂ ಭೂಮಿಯನ್ನು ಯಾರು ನಿರ್ಮಿಸಿದ್ದಾರೆಂದು ನೀವು ತಿಳಿದಿರುವಿರಿ.
ಯೆಶಾಯ 40 : 22 (ERVKN)
ಯೆಹೋವನು ಸತ್ಯವಾದ ದೇವರು. ಆತನು ಉನ್ನತವಾದ ಆಕಾಶದಲ್ಲಿ ಕುಳಿತುಕೊಳ್ಳುವನು. ಆತನಿಗೆ ಹೋಲಿಸಿದರೆ ಜನರು ಮಿಡತೆಗಳಂತಿರುವರು.
ಆತನು ಬಟ್ಟೆಯಂತೆ ಆಕಾಶಮಂಡಲವನ್ನು ಸುರುಳಿಯಾಗಿ ಸುತ್ತುವನು. ಆಕಾಶಮಂಡಲವನ್ನು ಆತನು ಎಳೆದು ಗುಡಾರದಂತೆ ಅಗಲಮಾಡಿ ಅದರಡಿಯಲ್ಲಿ ಕುಳಿತುಕೊಳ್ಳುವನು.
ಯೆಶಾಯ 40 : 23 (ERVKN)
ಆತನು ಅಧಿಪತಿಗಳನ್ನು ಅಯೋಗ್ಯರನ್ನಾಗಿ ಮಾಡುವನು. ಆತನು ಲೋಕದ ನ್ಯಾಯಾಧೀಶರನ್ನು ನಿಷ್ಪ್ರಯೋಜಕರನ್ನಾಗಿ ಮಾಡುವನು.
ಯೆಶಾಯ 40 : 24 (ERVKN)
ಇವರು ನೆಲದಲ್ಲಿ ನೆಟ್ಟಿರುವ ಸಸಿಗಳಂತಿರುವರು. ಅವುಗಳ ಬೇರುಗಳು ನೆಲದೊಳಗೆ ಆಳವಾಗಿ ಹೋಗುವ ಮೊದಲೇ
ದೇವರ ಉಸಿರಿಗೆ ಅವು ಬಾಡಿ ಸಾಯುವವು; ಗಾಳಿಯು ಒಣಹುಲ್ಲಿನಂತೆ ಅವುಗಳನ್ನು ಬಡಿದುಕೊಂಡು ಹೋಗುವದು.
ಯೆಶಾಯ 40 : 25 (ERVKN)
ಪರಿಶುದ್ಧನಾದ ದೇವರು ಹೇಳುವುದೇನೆಂದರೆ: “ನನ್ನನ್ನು ಯಾರಿಗಾದರೂ ಹೋಲಿಸಲು ಸಾಧ್ಯವೇ? ನನಗೆ ಸಮಾನರು ಯಾರೂ ಇಲ್ಲ.”
ಯೆಶಾಯ 40 : 26 (ERVKN)
ಆಕಾಶಮಂಡಲದ ಕಡೆಗೆ ನೋಡಿರಿ! ಆ ನಕ್ಷತ್ರಗಳನ್ನೆಲ್ಲಾ ಮಾಡಿದವರು ಯಾರು? ಆಕಾಶದಲ್ಲಿರುವ ಆ “ಸೈನ್ಯಗಳನ್ನು” ಸಿದ್ಧ ಮಾಡಿದವರು ಯಾರು? ಪ್ರತಿಯೊಂದು ನಕ್ಷತ್ರವನ್ನು ಹೆಸರೆತ್ತಿ ಕರೆಯುವವರು ಯಾರು?
ಆತನು ಬಲಿಷ್ಠನೂ ಪರಾಕ್ರಮಶಾಲಿಯೂ ಆಗಿದ್ದಾನೆ. ಆದ್ದರಿಂದ ಆ ನಕ್ಷತ್ರಗಳಲ್ಲಿ ಒಂದೂ ನಾಶವಾಗಲಿಲ್ಲ.
ಯೆಶಾಯ 40 : 27 (ERVKN)
ಯಾಕೋಬೇ, ಇದು ಸತ್ಯ! ಇಸ್ರೇಲೇ, ನೀನದನ್ನು ನಂಬಬೇಕು.
ಹೀಗಿರಲು ನೀನು, “ಯೆಹೋವನು ನನ್ನ ನಡತೆಯನ್ನು ಗಮನಿಸುವದಿಲ್ಲ. ನನ್ನನ್ನು ಕಂಡುಹಿಡಿದು ಶಿಕ್ಷಿಸುವದಿಲ್ಲ” ಎಂದು ಹೇಳುವೆ.
ಯೆಶಾಯ 40 : 28 (ERVKN)
ದೇವರಾದ ಯೆಹೋವನು ಜ್ಞಾನಿಯೆಂಬುದನ್ನು ನೀನು ಖಂಡಿತವಾಗಿಯೂ ಕೇಳಿರುವೆ.
ಆತನು ತಿಳಿದಿರುವ ಪ್ರತಿಯೊಂದನ್ನೂ ಕಲಿತುಕೊಳ್ಳಲು ಜನರಿಗೆ ಸಾಧ್ಯವಿಲ್ಲ. ಆತನು ಆಯಾಸಗೊಳ್ಳುವದಿಲ್ಲ; ಆತನಿಗೆ ವಿಶ್ರಾಂತಿಯ ಅವಶ್ಯವಿಲ್ಲ.
ಭೂಮಿಯಲ್ಲಿರುವ ದೂರ ಸ್ಥಳಗಳನ್ನೆಲ್ಲಾ ಮಾಡಿದವನು ಆತನೇ. ಆತನು ನಿರಂತರಕ್ಕೂ ಜೀವಿಸುವಾತನಾಗಿದ್ದಾನೆ.
ಯೆಶಾಯ 40 : 29 (ERVKN)
ಬಳಲಿಹೋದವರನ್ನು ಆತನು ಬಲಶಾಲಿಗಳನ್ನಾಗಿ ಮಾಡುತ್ತಾನೆ. ಬಲಹೀನರನ್ನು ಶಕ್ತಿವಂತರನ್ನಾಗಿ ಮಾಡುತ್ತಾನೆ.
ಯೆಶಾಯ 40 : 30 (ERVKN)
ಯೌವನಸ್ಥರು ಆಯಾಸಗೊಳ್ಳುವರು. ಅವರಿಗೆ ವಿಶ್ರಾಂತಿ ಬೇಕು; ಹುಡುಗರೂ ಮುಗ್ಗರಿಸಿಬೀಳುವರು.
ಯೆಶಾಯ 40 : 31 (ERVKN)
ಆದರೆ ಯೆಹೋವನಲ್ಲಿ ಭರವಸೆಯಿಟ್ಟವರು ಮತ್ತೆ ಬಲಹೊಂದುವರು. ಹದ್ದು ಹೊಸಗರಿಗಳನ್ನು ಹೊಂದುವಂತೆ ಅವರು ಹೊಸ ಬಲವನ್ನು ಹೊಂದುವರು. ಅವರು ಓಡಾಡಿದರೂ ಆಯಾಸಗೊಳ್ಳುವದಿಲ್ಲ. ನಡೆದಾಡಿದರೂ ಬಳಲಿಹೋಗುವುದಿಲ್ಲ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31