ಯೆಶಾಯ 28 : 1 (ERVKN)
ಉತ್ತರ ಇಸ್ರೇಲಿಗೆ ಎಚ್ಚರಿಕೆ ಸಮಾರ್ಯದ ಕಡೆಗೆ ನೋಡು!
ಎಫ್ರಾಯೀಮಿನ ಮತ್ತರಾದ ಜನರು ಆ ಪಟ್ಟಣದ ಬಗ್ಗೆ ಬಹಳ ಅಭಿಮಾನಪಡುತ್ತಿದ್ದಾರೆ. ಆ ನಗರವು ಪರ್ವತದ ಮೇಲಿರುವುದು; ಅದರ ಸುತ್ತಲೂ ಫಲವತ್ತಾದ ಕಣಿವೆ ಇರುವುದು.
ಸಮಾರ್ಯದ ಜನರು ತಮ್ಮ ನಗರವು ಸುಂದರವಾದ ಕಿರೀಟವೆಂದು ನೆನಸುತ್ತಾರೆ.
ಆದರೆ ಅವರು ಕುಡಿದು ಮತ್ತರಾಗಿದ್ದಾರೆ. ಅವರ “ಸುಂದರ ಕಿರೀಟವು” ಒಣಗಿದ ತರಗೆಲೆಯಾಗಿದೆ.
ಯೆಶಾಯ 28 : 2 (ERVKN)
ಇಗೋ, ನನ್ನ ಒಡೆಯನಿಗೆ ಬಲಿಷ್ಠನೂ ಧೈರ್ಯವಂತನೂ ಆಗಿರುವ ಒಬ್ಬನಿದ್ದಾನೆ. ಅವನು ದೇಶದೊಳಗೆ ಆಲಿಕಲ್ಲಿನ ಮಳೆಯಿಂದ ಕೂಡಿದ ಬಿರುಗಾಳಿಯಂತೆಯೂ
ನದಿಯ ಬಲವಾದ ಪ್ರವಾಹವು ದೇಶದೊಳಗೆ ನುಗ್ಗಿಬರುವಂತೆಯೂ ಅವನು ಬರುವನು. ಆ ಕಿರೀಟವನ್ನು (ಸಮಾರ್ಯ) ನೆಲದ ಮೇಲೆ ಬಿಸಾಡುವನು.
ಯೆಶಾಯ 28 : 3 (ERVKN)
ಕುಡಿದು ಮತ್ತರಾದ ಎಫ್ರಾಯೀಮ್ಯರಿಗೆ ಸುಂದರವಾದ ಕಿರೀಟದ ಮೇಲೆ ಹೆಚ್ಚಳ. ಆದರೆ ಆ ನಗರವು ತುಳಿಯಲ್ಪಡುವದು.
ಯೆಶಾಯ 28 : 4 (ERVKN)
ಆ ನಗರವು ಬೆಟ್ಟದ ಮೇಲೆ ಕುಳಿತಿದೆ; ಸುತ್ತಲೂ ಫಲವತ್ತಾದ ಕಣಿವೆ ಇದೆ. ಆ ಸುಂದರವಾದ ಪುಷ್ಪ ಕಿರೀಟವು ಕೇವಲ ಒಣಗಿದ ತರಗೆಲೆ.
ಆ ನಗರವು ಬೇಸಿಗೆಯ ಮೊದಲಿನ (ಅಂಜೂರದ) ಹಣ್ಣುಗಳಂತೆ ಇದೆ. ಅದನ್ನು ನೋಡಿದವರು ಕೂಡಲೇ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವರು.
ಯೆಶಾಯ 28 : 5 (ERVKN)
ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನು “ಮಹಿಮಾಪೂರ್ಣವಾದ ಕಿರೀಟ”ವಾಗುವನು. ಉಳಿದಿರುವ ಆತನ ಜನರಿಗೆ ಆತನು “ಅಂದವಾದ ಪುಷ್ಪಕಿರೀಟ”ವಾಗಿರುವನು.
ಯೆಶಾಯ 28 : 6 (ERVKN)
ಆತನ ಜನರನ್ನು ಆಳುವ ನ್ಯಾಯಾಧಿಪತಿಗಳಿಗೆ ಯೆಹೋವನು ಜ್ಞಾನವನ್ನು ಕೊಡುವನು. ಪುರದ್ವಾರದಲ್ಲಿ ಯುದ್ಧಮಾಡುವ ಆತನ ಜನರಿಗೆ ಯೆಹೋವನು ಬಲವನ್ನು ಕೊಡುವನು.
ಯೆಶಾಯ 28 : 7 (ERVKN)
ಆದರೆ ಈಗ ಆ ನಾಯಕರುಗಳು ಮತ್ತರಾಗಿದ್ದಾರೆ. ಯಾಜಕರೂ ಪ್ರವಾದಿಗಳೂ ಮದ್ಯಸೇವನೆಯಿಂದ ಮತ್ತರಾಗಿದ್ದಾರೆ. ಅವರು ಎಡವಿಬೀಳುತ್ತಾರೆ. ಪ್ರವಾದಿಗಳು ದರ್ಶನಗಳನ್ನು ಕಾಣುವಾಗ ಅಮಲೇರಿದವರಾಗಿರುತ್ತಾರೆ; ನ್ಯಾಯಾಧೀಶರು ತೀರ್ಪುಕೊಡುವಾಗ ಅಮಲೇರಿದವರಾಗಿರುತ್ತಾರೆ.
ಯೆಶಾಯ 28 : 8 (ERVKN)
ಅವರ ಮುಂದಿರುವ ಮೇಜುಗಳ ಮೇಲೆ ವಾಂತಿಯು ತುಂಬಿರುತ್ತದೆ; ಶುದ್ಧವಾದ ಸ್ಥಳವೇ ಇರುವದಿಲ್ಲ.
ಯೆಶಾಯ 28 : 9 (ERVKN)
ದೇವರು ತನ್ನ ಜನರಿಗೆ ಸಹಾಯ ಮಾಡುವನು ಯೆಹೋವನು ಜನರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬೋಧನೆಯನ್ನು ತನ್ನ ಜನರು ಅರಿತುಕೊಳ್ಳಲೆಂದು ಯೆಹೋವನು ಪ್ರಯತ್ನಿಸುತ್ತಿದ್ದಾನೆ. ಆದರೆ ಜನರು ಇನ್ನೂ ತಾಯಿ ಹಾಲು ಕುಡಿಯುವ ಚಿಕ್ಕ ಕೂಸುಗಳಿಂತಿದ್ದಾರೆ.
ಯೆಶಾಯ 28 : 10 (ERVKN)
ಆದ್ದರಿಂದ ಚಿಕ್ಕಕೂಸುಗಳೊಂದಿಗೆ ಮಾತಾಡುವಂತೆ ಯೆಹೋವನು ಅವರ ಸಂಗಡ ಮಾತಾಡುತ್ತಾನೆ: “ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.” *ಸಾ … ಶಾಮ್ ಬಹುಶಃ, ಚಿಕ್ಕಮಕ್ಕಳಿಗೆ ಬರೆಯುವದನ್ನು ಕಲಿಸುವಾಗ ಬಳಸುವ ಹೀಬ್ರೂ ಹಾಡು. ಇದರರ್ಥ, “ಇಲ್ಲಿಯೊಂದು ಆಜ್ಞೆ, ಅಲ್ಲಿಯೊಂದು ಆಜ್ಞೆ. ಇಲ್ಲಿಯೊಂದು ನಿಯಮ, ಅಲ್ಲಿಯೊಂದು ನಿಯಮ. ಇಲ್ಲಿಯೊಂದು ಪಾಠ ಅಲ್ಲಿಯೊಂದು ಪಾಠ.”
ಯೆಶಾಯ 28 : 11 (ERVKN)
ಯೆಹೋವನು ಅವರ ಸಂಗಡ ವಿಚಿತ್ರವಾಗಿಯೂ ಅನ್ಯಭಾಷೆಗಳಲ್ಲಿಯೂ ಮಾತನಾಡುತ್ತಾನೆ.
ಯೆಶಾಯ 28 : 12 (ERVKN)
ಹಿಂದಿನ ಕಾಲದಲ್ಲಿ ದೇವರು ಅವರ ಸಂಗಡ ಮಾತನಾಡಿ, “ಇಲ್ಲಿ ವಿಶ್ರಾಂತಿಯ ಸ್ಥಳವಿದೆ, ಇದು ವಿಶ್ರಮಿಸುವ ಸ್ಥಳ. ಆಯಾಸಗೊಂಡವರೇ, ಬಂದು ವಿಶ್ರಮಿಸಿರಿ. ಇದು ಸಮಾಧಾನಕರವಾದ ಸ್ಥಳ” ಎಂದು ಹೇಳುತ್ತಿದ್ದನು. ಆದರೆ ಜನರಿಗೆ ಆತನ ಮಾತುಗಳನ್ನು ಕೇಳಲು ಇಷ್ಟವಾಗಲಿಲ್ಲ.
ಯೆಶಾಯ 28 : 13 (ERVKN)
ಆದ್ದರಿಂದ ಆತನ ಮಾತು ಅವರಿಗೆ ಪರಭಾಷೆಯಂತೆ ಕೇಳಿಸುವುದು. “ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.” ಜನರು ತಮ್ಮ ಇಷ್ಟಪ್ರಕಾರ ನಡೆದರು. ಆದ್ದರಿಂದ ಅವರು ಸೋಲಿಸಲ್ಪಟ್ಟರು. ಅವರು ಉರುಲಿಗೆ ಸಿಕ್ಕಿ ಹಾಕಿಕೊಂಡು ಹಿಡಿಯಲ್ಪಟ್ಟರು.
ಯೆಶಾಯ 28 : 14 (ERVKN)
ದೇವರ ನ್ಯಾಯತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳುವದಿಲ್ಲ ಆದಕಾರಣ ಜೆರುಸಲೇಮಿನಲ್ಲಿರುವ ಅಧಿಪತಿಗಳೇ, ಯೆಹೋವನ ಸಂದೇಶವನ್ನು ನೀವು ಕೇಳಬೇಕು. ಆದರೆ ನೀವು ಅದನ್ನು ಕೇಳಲು ನಿರಾಕರಿಸುತ್ತಿದ್ದೀರಿ.
ಯೆಶಾಯ 28 : 15 (ERVKN)
ನೀವು, “ನಾವು ಮರಣದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಪಾತಾಳದೊಂದಿಗೆ ಒಪ್ಪಂದ ಮಾಡಿದ್ದೇವೆ. ಆದ್ದರಿಂದ ನಾವು ಶಿಕ್ಷಿಸಲ್ಪಡುವದಿಲ್ಲ. ಶಿಕ್ಷೆಯು ಹಾದುಹೋಗುವಾಗ ಅದು ನಮಗೇನೂ ಹಾನಿ ಮಾಡುವದಿಲ್ಲ. ನಾವು ನಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತೇವೆ” ಎಂದು ಹೇಳುತ್ತೀರಿ.
ಯೆಶಾಯ 28 : 16 (ERVKN)
ಇದಕ್ಕೋಸ್ಕರವಾಗಿಯೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುವನು: “ಚೀಯೋನಿನಲ್ಲಿ ನಾನು ಒಂದು ಮೂಲೆಗಲ್ಲು ಇಡುವೆನು, ಇದು ಬಹು ಅಮೂಲ್ಯವಾದ ಕಲ್ಲು. ಈ ವಿಶೇಷವಾದ ಕಲ್ಲಿನ ಮೇಲೆ ಎಲ್ಲವೂ ಕಟ್ಟಲ್ಪಡುವದು. ಆ ಕಲ್ಲಿನ ಮೇಲೆ ಭರವಸವಿಡುವ ಯಾವನು ಆಶಾಭಂಗಪಡುವುದಿಲ್ಲ.
ಯೆಶಾಯ 28 : 17 (ERVKN)
“ಗೋಡೆಯು ನೆಟ್ಟಗಿದೆಯೆಂದು ನೋಡಲು ಜನರು ಗುಂಡನ್ನೂ ನೂಲನ್ನೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ನಾನು ನ್ಯಾಯವನ್ನು ನೂಲನ್ನಾಗಿಯೂ ಕರುಣೆಯನ್ನು ಗುಂಡನ್ನಾಗಿಯೂ ಉಪಯೋಗಿಸುವೆನು. ನೀವು ದುಷ್ಟಜನರು. ನೀವು ನಿಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತಿದ್ದೀರಿ. ಆದರೆ ನೀವು ಶಿಕ್ಷಿಸಲ್ಪಡುವಿರಿ. ನೀವು ಅಡಗಿಕೊಂಡಿರುವ ಸ್ಥಳವನ್ನು ನಾಶಮಾಡುವ ಬಿರುಗಾಳಿಯಂತೆಯೂ ಪ್ರವಾಹದಂತೆಯೂ ಅದಿರುವುದು.
ಯೆಶಾಯ 28 : 18 (ERVKN)
ಮರಣದೊಂದಿಗೆ ನೀವು ಮಾಡಿದ ಒಪ್ಪಂದವು ಮುರಿಯಲ್ಪಡುವದು. ಪಾತಾಳದೊಂದಿಗೆ ನೀವು ಮಾಡಿದ ಒಪ್ಪಂದವು ನಿಮ್ಮ ಸಹಾಯಕ್ಕೆ ಬಾರದು. “ನಿಮ್ಮನ್ನು ಶಿಕ್ಷಿಸಲು ಒಬ್ಬನು ಬರುವನು. ಆತನು ನೀವು ಧೂಳೋ ಎಂಬಂತೆ ನಿಮ್ಮ ಮೇಲೆ ತುಳಿದಾಡುವನು.
ಯೆಶಾಯ 28 : 19 (ERVKN)
ಆತನು ಬಂದು ನಿಮ್ಮನ್ನು ತೆಗೆದುಕೊಂಡು ಹೋಗುವನು. ನಿಮಗೆ ದೊರಕುವ ಶಿಕ್ಷೆ ಬಹು ಭಯಂಕರವಾದದ್ದು. ಅದರ ಬಗ್ಗೆ ನೀವು ಕೇಳಿದ ಕೂಡಲೇ ಚಿಂತಿಸಲಾರಂಭಿಸುವಿರಿ. ಅದು ಮುಂಜಾನೆ ಬಂದು ರಾತ್ರಿ ಬಹು ಹೊತ್ತಿನ ತನಕ ಇರುವದು. “ಆಗ ನೀವು ಈ ಕಥೆಯನ್ನು ಅರ್ಥಮಾಡಿಕೊಳ್ಳುವಿರಿ:
ಯೆಶಾಯ 28 : 20 (ERVKN)
ಒಬ್ಬ ಮನುಷ್ಯನು ತನಗೆ ಚಿಕ್ಕದಾಗಿರುವ ಹಾಸಿಗೆಯ ಮೇಲೆ ಮಲಗಲು ಪ್ರಯತ್ನಿಸುವನು. ಅವನಲ್ಲಿರುವ ಕಂಬಳಿಯು ಅವನನ್ನು ಪೂರ್ಣವಾಗಿ ಮುಚ್ಚುತ್ತಿರಲಿಲ್ಲ. ಆ ಹಾಸಿಗೆಯೂ, ಆ ಕಂಬಳಿಯೂ ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ನಿಮ್ಮ ಒಪ್ಪಂದವೂ ನಿಷ್ಪ್ರಯೋಜಕವಾಗಿದೆ.”
ಯೆಶಾಯ 28 : 21 (ERVKN)
ಪೆರಾಚೀಮ್ ಬೆಟ್ಟದ ಮೇಲೆ ಯೆಹೋವನು ಯುದ್ಧ ಮಾಡಿದಂತೆಯೇ ಆತನು ಯುದ್ಧಮಾಡುವನು. ಗಿಬ್ಯೋನ್ ಕಣಿವೆಯಲ್ಲಿ ಯೆಹೋವನು ಕೋಪಗೊಂಡಿದ್ದಂತೆಯೇ ಕೋಪಗೊಳ್ಳುವನು. ಆಗ ಆತನು ಮಾಡಬೇಕಾದ ಕಾರ್ಯಗಳನ್ನು ಮಾಡುವನು. ಯೆಹೋವನು ಕೆಲವು ಅಪರಿಚಿತವಾದ ಸಂಗತಿಗಳನ್ನು ಮಾಡುವನು. ಆದರೆ ಆತನು ತನ್ನ ಕಾರ್ಯವನ್ನು ಮಾಡಿಮುಗಿಸುವನು. ಆ ಕೆಲಸವು ಒಬ್ಬ ಪರಿಚಯವಿಲ್ಲದವನ ಕೆಲಸವಾಗಿದೆ.
ಯೆಶಾಯ 28 : 22 (ERVKN)
ಈಗ ನೀವು ಆ ವಿಷಯಗಳೊಂದಿಗೆ ಯುದ್ಧ ಮಾಡಬಾರದು. ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಸುತ್ತಲಿರುವ ಹಗ್ಗವು ಇನ್ನೂ ಬಿಗಿಯಾಗುವದು. ನಾನು ಕೇಳಿರುವ ಮಾತುಗಳು ಬದಲಾಗವು. ಯಾಕೆಂದರೆ ಅವು ಸರ್ವಶಕ್ತನಾದ ಯೆಹೋವನ ಮಾತುಗಳು. ಆತನು ಪ್ರಪಂಚವನ್ನು ಆಳುವಾತನು. ಆ ಸಂಗತಿಗಳೆಲ್ಲವೂ ಸಂಭವಿಸುವವು.
ಯೆಶಾಯ 28 : 23 (ERVKN)
ಯೆಹೋವನ ಶಿಕ್ಷೆಯು ನ್ಯಾಯಸಮ್ಮತವಾದದ್ದು ನಾನು ಹೇಳುವ ಸಂದೇಶಕ್ಕೆ ಜಾಗ್ರತೆಯಿಂದ ಕಿವಿಗೊಡಿರಿ.
ಯೆಶಾಯ 28 : 24 (ERVKN)
ಒಬ್ಬ ವ್ಯವಸಾಯಗಾರನು ಯಾವಾಗಲೂ ಉಳುತ್ತಲೇ ಇರುವನೋ? ಇಲ್ಲ. ಅವನು ಮಣ್ಣಿನಲ್ಲಿ ಯಾವಾಗಲೂ ಕೆಲಸ ಮಾಡುತ್ತಿರುವನೋ? ಇಲ್ಲ.
ಯೆಶಾಯ 28 : 25 (ERVKN)
ವ್ಯವಸಾಯಗಾರನು ಮಣ್ಣನ್ನು ಹಸನುಮಾಡಿ ನಂತರ ಬೀಜ ಬಿತ್ತುವನು. ಬೇರೆಬೇರೆ ತರದ ಬೀಜಗಳನ್ನು ಬೇರೆಬೇರೆ ರೀತಿಯಲ್ಲಿ ಬಿತ್ತುವನು. ಅವನು ಗೋಧಿಯನ್ನಾಗಲಿ ಬಾರ್ಲಿಯನ್ನಾಗಲಿ ನೆಲದ ಮೇಲೆ ಬಿಸಾಡುವನು. ಗೋಧಿಯನ್ನು ಸಾಲಾಗಿ ಬಿತ್ತುವನು. ಬೇರೆಬೇರೆ ಗಿಡಗಳ ಬೀಜವನ್ನು ಬೇರೆಬೇರೆ ಸ್ಥಳಗಳಲ್ಲಿಯೂ ಬೇರೆಬೇರೆ ವಿಧಾನದಲ್ಲಿಯೂ ಬಿತ್ತುವನು.
ಯೆಶಾಯ 28 : 26 (ERVKN)
ನಮ್ಮ ದೇವರು ಈ ಉದಾಹರಣೆಯ ಮೂಲಕ ಒಂದು ಪಾಠವನ್ನು ಕಲಿಸುತ್ತಾನೆ. ಏನೆಂದರೆ ಆತನು ಜನರನ್ನು ಶಿಕ್ಷಿಸುವಾಗ ನ್ಯಾಯವಾಗಿ ಶಿಕ್ಷಿಸುತ್ತಾನೆ.
ಯೆಶಾಯ 28 : 27 (ERVKN)
ವ್ಯವಸಾಯಗಾರನು ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ. ಜೀರಿಗೆಯನ್ನು ಕುದುರೆಯಿಂದ ಗುಂಡನ್ನು ಉರುಳಿಸಿ ನುಚ್ಚುನೂರು ಮಾಡುವನೋ? ಇಲ್ಲ! ಅವನೊಂದು ಸಣ್ಣ ಕೋಲನ್ನು ಉಪಯೋಗಿಸುವನು.
ಯೆಶಾಯ 28 : 28 (ERVKN)
ಸ್ತ್ರೀಯು ರೊಟ್ಟಿಯನ್ನು ತಯಾರಿಸುವಾಗ ಹಿಟ್ಟನ್ನು ಕೈಯಲ್ಲಿ ನಾದಿ ಅದನ್ನು ಚೆನ್ನಾಗಿ ಹದಗೊಳಿಸುವಳು. ಆದರೆ ಆಕೆ ಹಾಗೆಯೇ ಮಾಡುತ್ತಾ ಇರುವದಿಲ್ಲ. ಅದೇ ರೀತಿಯಲ್ಲಿ ಯೆಹೋವನು ಜನರನ್ನು ಶಿಕ್ಷಿಸುವನು. ಆತನು ಬಂಡಿಯ ಚಕ್ರದಿಂದ ಬೆದರಿಸುವನು. ಆದರೆ ಅವರನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡುವದಿಲ್ಲ. ಅವರನ್ನು ತುಳಿದುಬಿಡಲು ಅನೇಕ ಕುದುರೆಗಳನ್ನು ಉಪಯೋಗಿಸುವದಿಲ್ಲ.
ಯೆಶಾಯ 28 : 29 (ERVKN)
ಈ ಪಾಠವು ಸರ್ವಶಕ್ತನಾದ ಯೆಹೋವನಿಂದ ಬರುತ್ತದೆ. ಆತನು ಆಶ್ಚರ್ಯಕರವಾದ ಸಲಹೆಯನ್ನು ಕೊಡುತ್ತಾನೆ. ಆತನು ನಿಜವಾಗಿಯೂ ಜ್ಞಾನಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29