ಯೆಶಾಯ 16 : 1 (ERVKN)
ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು.
ಯೆಶಾಯ 16 : 2 (ERVKN)
ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು. ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು. ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು.
ಯೆಶಾಯ 16 : 3 (ERVKN)
ಅವರು, “ನಮಗೆ ಸಹಾಯ ಮಾಡಿರಿ! ನಾವು ಮಾಡಬೇಕಾದದ್ದನ್ನು ತಿಳಿಸಿರಿ!
ವೈರಿಗಳಿಂದ ನಮ್ಮನ್ನು ರಕ್ಷಿಸಿರಿ. ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ.
ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ. ನಮ್ಮನ್ನು ಅಡಗಿಸಿಡಿರಿ, ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ.
ಯೆಶಾಯ 16 : 4 (ERVKN)
ತಮ್ಮ ಮನೆಯನ್ನು ಬಿಟ್ಟುಹೋಗುವಂತೆ ಮೋವಾಬಿನ ಆ ಜನರನ್ನು ಬಲವಂತ ಮಾಡಲಾಯಿತು. ಆದ್ದರಿಂದ ಅವರು ನಿಮ್ಮ ದೇಶದಲ್ಲಿ ವಾಸಿಸಲಿ. ಶತ್ರುಗಳ ಕೈಗೆ ಸಿಗದಂತೆ ಅವರನ್ನು ಅಡಗಿಸಿಡಿರಿ” ಎಂದು ಹೇಳುವರು. ದರೋಡೆಯು ನಿಂತುಹೋಗುವದು. ಶತ್ರುಗಳು ಸೋಲಿಸಲ್ಪಡುವರು.
ಇತರರಿಗೆ ಕೇಡುಮಾಡುವವರು ದೇಶವನ್ನು ಬಿಟ್ಟುಹೋಗುವರು.
ಯೆಶಾಯ 16 : 5 (ERVKN)
ಆಗ ಹೊಸ ಅರಸನು ಬರುವನು. ಆತನು ನ್ಯಾಯವಾದವುಗಳನ್ನು ಮತ್ತು ಒಳ್ಳೆಯವುಗಳನ್ನು ಮಾಡುವನು. ಆತನು ದಾವೀದನ ವಂಶದವನಾಗಿದ್ದಾನೆ.
ಆತನು ಪ್ರಾಮಾಣಿಕನೂ ಪ್ರೀತಿದಯೆಗಳಿಂದ ತುಂಬಿದವನೂ ಆಗಿರುವನು. ಆತನ ನ್ಯಾಯತೀರ್ಪು ನ್ಯಾಯಕ್ಕನುಸಾರವಾಗಿರುವದು.
ಯೆಶಾಯ 16 : 6 (ERVKN)
ಮೋವಾಬಿನ ಜನರು ತುಂಬ ಹೆಚ್ಚಳಪಡುವವರೂ ಜಂಬದವರೂ ಎಂದು ನಾವು ಕೇಳಿದ್ದೇವೆ.
ಇವರು ಹಿಂಸಕರಾಗಿದ್ದಾರೆ; ಬಡಾಯಿ ಕೊಚ್ಚುವವರಾಗಿದ್ದಾರೆ, ಅವರ ಬಡಾಯಿ ಕೇವಲ ಮಾತುಗಳಷ್ಟೇ.
ಯೆಶಾಯ 16 : 7 (ERVKN)
ಆ ಜಂಬದ ಪರಿಣಾಮವಾಗಿ ಇಡೀ ಮೋವಾಬ್ ಪ್ರದೇಶ ಸಂಕಟಕ್ಕೊಳಗಾಗುವದು. ಮೋವಾಬಿನ ಜನರೆಲ್ಲಾ ಅಳುವರು.
ಜನರು ತಮಗೆ ಹಿಂದೆ ಇದ್ದದ್ದೆಲ್ಲಾ ಬೇಕು ಎನ್ನುತ್ತಾ ದುಃಖಿಸುವರು. ಕೀರ್ ಹರೆಷೆಥಿನಲ್ಲಿ ತಯಾರಿಸಿದ ಅಂಜೂರದ ತಿಂಡಿ ಪದಾರ್ಥಗಳು ತಮಗೆ ಬೇಕು ಅನ್ನುವರು.
ಯೆಶಾಯ 16 : 8 (ERVKN)
ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು. ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು.
ಯೆಶಾಯ 16 : 9 (ERVKN)
ದ್ರಾಕ್ಷಾಫಲವು ನಾಶವಾಗಿರುವದಕ್ಕಾಗಿ ನಾನು ಯೆಜ್ಜೇರ್ ಮತ್ತು ಸಿಬ್ಮದವರೊಂದಿಗೆ ಅಳುವೆನು.
ಸುಗ್ಗಿ ಇಲ್ಲದಿರುವದಕ್ಕಾಗಿ ನಾನು ಹೆಷ್ಬೋನ್ ಮತ್ತು ಎಲೆಯಾಲೆಯ ಜನರೊಂದಿಗೆ ಅಳುವೆನು.
ಬೇಸಿಗೆ ಕಾಲದ ಹಣ್ಣುಗಳಿರದು; ಹರ್ಷಧ್ವನಿಯೂ ಇರದು.
ಯೆಶಾಯ 16 : 10 (ERVKN)
ಕರ್ಮೆಲ್ ಬೆಟ್ಟದಲ್ಲಿ ಗಾಯನವಾಗಲಿ ಹರ್ಷಧ್ವನಿಯಾಗಲಿ ಇರದು. ಸುಗ್ಗಿಕಾಲದ ಎಲ್ಲಾ ಸಂತಸಗಳನ್ನು ನಾನು ನಿಲ್ಲಿಸುವೆನು.
ದ್ರಾಕ್ಷಿಯ ಹಣ್ಣುಗಳು ರಸ ತೆಗೆಯಲು ಪಕ್ವವಾಗಿವೆ. ಆದರೆ ಅವುಗಳೆಲ್ಲ ವ್ಯರ್ಥವಾಗುತ್ತವೆ.
ಯೆಶಾಯ 16 : 11 (ERVKN)
ನಾನು ಮೋವಾಬಿಗಾಗಿ ತುಂಬಾ ದುಃಖದಲ್ಲಿದ್ದೇನೆ. ನಾನು ಕೀರ್‌ಹೆರೆಸಿಗಾಗಿಯೂ ತುಂಬಾ ದುಃಖದಲ್ಲಿದ್ದೇನೆ. ಈ ನಗರಗಳಿಗಾಗಿ ನಾನು ಬಹಳವಾಗಿ ದುಃಖದಲ್ಲಿದ್ದೇನೆ.
ಯೆಶಾಯ 16 : 12 (ERVKN)
ಮೋವಾಬಿನ ಜನರು ತಮ್ಮ ಪೂಜಾಸ್ಥಳಗಳಿಗೆ ಹೋಗಿ ಆರಾಧನೆ ಮಾಡುವರು.
ಸಂಭವಿಸುವ ಸಂಗತಿಗಳನ್ನು ನೋಡಿದಾಗ ಪ್ರಾರ್ಥಿಸಲೂ ಅವರಲ್ಲಿ ಉತ್ಸಾಹವಿರುವುದಿಲ್ಲ.
ಯೆಶಾಯ 16 : 13 (ERVKN)
ಮೋವಾಬಿನ ವಿಷಯವಾಗಿ ಯೆಹೋವನು ಅನೇಕ ಸಾರಿ ಇವುಗಳನ್ನು ಮುಂತಿಳಿಸಿದ್ದಾನೆ.
ಯೆಶಾಯ 16 : 14 (ERVKN)
ಈಗ ಯೆಹೋವನು ಹೇಳುವುದೇನೆಂದರೆ: “ಇನ್ನು ಮೂರು ವರ್ಷದೊಳಗೆ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಎಲ್ಲಾ ಜನರು ಮತ್ತು ಅವರು ಹೆಮ್ಮೆಪಡುವ ವಸ್ತುಗಳು ಹೋಗಿಬಿಡುತ್ತವೆ. ಕೇವಲ ಸ್ವಲ್ಪ ಮಂದಿ ಮಾತ್ರ ಉಳಿಯುವರು. ದೇಶದಲ್ಲಿ ಹೆಚ್ಚುಮಂದಿ ಉಳಿಯರು.”
❮
❯
1
2
3
4
5
6
7
8
9
10
11
12
13
14