ಇಬ್ರಿಯರಿಗೆ 7 : 1 (ERVKN)
ಯಾಜಕ ಮೆಲ್ಕಿಜೆದೇಕ ಮೆಲ್ಕಿಜೆದೇಕನು ಸಾಲೇಮಿನ ರಾಜನಾಗಿದ್ದನು ಮತ್ತು ಪರಾತ್ಪರನಾದ ದೇವರ ಯಾಜಕನಾಗಿದ್ದನು. ಅಬ್ರಹಾಮನು ರಾಜರುಗಳನ್ನು ಸೋಲಿಸಿ ಹಿಂದಿರುಗಿ ಬರುತ್ತಿರುವಾಗ ಅವನು ಅಬ್ರಹಾಮನನ್ನು ಸಂಧಿಸಿ ಆಶೀರ್ವದಿಸಿದನು.
ಇಬ್ರಿಯರಿಗೆ 7 : 2 (ERVKN)
ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ.
ಇಬ್ರಿಯರಿಗೆ 7 : 3 (ERVKN)
ಮೆಲ್ಕಿಜೆದೇಕನ ತಂದೆತಾಯಿಗಳು ಯಾರೆಂಬುದಾಗಲಿ ಅವನು ಎಲ್ಲಿಂದ ಬಂದನೆಂಬುದಾಗಲಿ ಅವನು ಯಾವಾಗ ಹುಟ್ಟಿದನೆಂಬುದಾಗಲಿ ಅವನು ಯಾವಾಗ ಸತ್ತನೆಂಬುದಾಗಲಿ ಯಾರಿಗೂ ತಿಳಿದಿಲ್ಲ. ಅವನು ದೇವರ ಮಗನಂತೆ ಸದಾಕಾಲವೂ ಯಾಜಕನಾಗಿದ್ದಾನೆ.
ಇಬ್ರಿಯರಿಗೆ 7 : 4 (ERVKN)
ಮೆಲ್ಕಿಜೆದೇಕನು ಎಷ್ಟು ದೊಡ್ಡವನೆಂಬುದನ್ನು ಸ್ವಲ್ಪ ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು, ಯುದ್ಧದಲ್ಲಿ ತಾನು ಜಯಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು.
ಇಬ್ರಿಯರಿಗೆ 7 : 5 (ERVKN)
ಲೇವಿಯಕುಲದ ಜನರಲ್ಲಿ ಯಾಜಕರಾಗುವವರು ಯೆಹೂದ್ಯರಿಂದ ಹತ್ತನೆಯ ಒಂದು ಭಾಗವನ್ನು ಪಡೆಯಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಯಾಜಕರು ತಮ್ಮ ಸ್ವಂತ ಜನರಿಂದಲೇ (ಯೆಹೂದ್ಯರು) ಅದನ್ನು ಸಂಗ್ರಹಿಸುತ್ತಾರೆ ಮತ್ತು ಅವರ ಜನರು ಅಬ್ರಹಾಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಇಬ್ರಿಯರಿಗೆ 7 : 6 (ERVKN)
ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು.
ಇಬ್ರಿಯರಿಗೆ 7 : 7 (ERVKN)
ಮುಖ್ಯನಾದ ವ್ಯಕ್ತಿಯು ಅಲ್ಪನಾದವನಿಗೆ ಆಶೀರ್ವಾದ ಮಾಡುತ್ತಾನೆಂಬುದು ಜನರೆಲ್ಲರಿಗೂ ತಿಳಿದಿರುವ ವಿಷಯ.
ಇಬ್ರಿಯರಿಗೆ 7 : 8 (ERVKN)
ಯಾಜಕರು ಹತ್ತನೆಯ ಒಂದು ಭಾಗವನ್ನು ಪಡೆಯುತ್ತಾರೆ. ಆದರೆ ಅವರು ಸ್ವಲ್ಪಕಾಲ ಜೀವಿಸಿದ್ದು ನಂತರ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ಹತ್ತನೆಯ ಒಂದು ಭಾಗವನ್ನು ಪಡೆದ ಮೆಲ್ಕಿಜೆದೇಕನು ಜೀವಂತನಾಗಿಯೇ ಇರುತ್ತಾನೆಂದು ಪವಿತ್ರ ಗ್ರಂಥವು ಹೇಳುತ್ತದೆ.
ಇಬ್ರಿಯರಿಗೆ 7 : 9 (ERVKN)
ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು.
ಇಬ್ರಿಯರಿಗೆ 7 : 10 (ERVKN)
ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.
ಇಬ್ರಿಯರಿಗೆ 7 : 11 (ERVKN)
ಲೇವಿಕುಲದ ಯಾಜಕತ್ವದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ಜನರಿಗೆ ಕೊಡಲಾಯಿತು. ಆದರೆ ಆ ಯಾಜಕತ್ವದಿಂದ ಜನರನ್ನು ಆತ್ಮಿಕತೆಯಲ್ಲಿ ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೊಂದು ರೀತಿಯ ಯಾಜಕನು ಬರುವುದು ಅತ್ಯವಶ್ಯಕವಾಗಿತ್ತು. ಅಂದರೆ ಮೆಲ್ಕಿಜೆದೇಕನಂತಹ ಯಾಜಕನೇ ಹೊರತು ಆರೋನನಂತವನಲ್ಲ ಎಂಬುದು ಅದರ ಅರ್ಥ.
ಇಬ್ರಿಯರಿಗೆ 7 : 12 (ERVKN)
ಬೇರೊಬ್ಬ ಯಾಜಕನು ಬಂದರೆ, ಆಗ ಧರ್ಮಶಾಸ್ತ್ರವು ಬದಲಾಗಲೇಬೇಕು.
ಇಬ್ರಿಯರಿಗೆ 7 : 13 (ERVKN)
ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದವರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ.
ಇಬ್ರಿಯರಿಗೆ 7 : 14 (ERVKN)
ನಮ್ಮ ಪ್ರಭು (ಕ್ರಿಸ್ತನು) ಯೆಹೂದಕುಲದಿಂದ ಬಂದವನೆಂಬುದು ಸ್ಪಷ್ಟವಾಗಿದೆ. ಆ ಕುಲಕ್ಕೆ ಸೇರಿದ ಯಾಜಕರನ್ನು ಕುರಿತು ಮೋಶೆಯು ಏನನ್ನೂ ಹೇಳಲಿಲ್ಲ.
ಇಬ್ರಿಯರಿಗೆ 7 : 15 (ERVKN)
ಯೇಸು ಮೆಲ್ಕಿಜೆದೇಕನಂತಹ ಯಾಜಕನು ಮೆಲ್ಕಿಜೆದೇಕನಂತಹ ಮತ್ತೊಬ್ಬ ಯಾಜಕನು (ಯೇಸು) ಬಂದಿರುವುದರಿಂದ ಇವು ಮತ್ತಷ್ಟು ಸ್ಪಷ್ಟವಾಗಿವೆ.
ಇಬ್ರಿಯರಿಗೆ 7 : 16 (ERVKN)
ಆತನು ಯಾಜಕನಾದದ್ದು ವಂಶಾನುಗತವಾಗಿ ಬಂದ ನಿಯಮಗಳ ಮತ್ತು ಶಾಸ್ತ್ರಗಳ ಪ್ರಕಾರವಲ್ಲ. ಆತನು ನಾಶವಾಗದ ತನ್ನ ಜೀವಶಕ್ತಿಯಿಂದ ಯಾಜಕನಾದನು.
ಇಬ್ರಿಯರಿಗೆ 7 : 17 (ERVKN)
ಪವಿತ್ರ ಗ್ರಂಥದಲ್ಲಿ ಆತನನ್ನು ಕುರಿತು ಹೀಗೆ ಹೇಳಿದೆ: “ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ ಯಾಜಕನಾಗಿರುವೆ.” ಉಲ್ಲೇಖನ: ಕೀರ್ತನೆ. 110:4.
ಇಬ್ರಿಯರಿಗೆ 7 : 18 (ERVKN)
ಹಳೆಯ ನಿಯಮವು ದುರ್ಬಲವೂ ನಿಷ್ಪ್ರಯೋಜಕವೂ ಆಗಿದ್ದರಿಂದ ರದ್ದಾಯಿತು.
ಇಬ್ರಿಯರಿಗೆ 7 : 19 (ERVKN)
ಮೋಶೆಯ ಧರ್ಮಶಾಸ್ತ್ರವು ಯಾವುದನ್ನೂ ಸಿದ್ಧಿಗೆ ತರಲಿಲ್ಲ. ಈಗ ನಮಗೆ ಉತ್ತಮವಾದ ಒಂದು ನಿರೀಕ್ಷೆಯನ್ನು ಕೊಡಲಾಗಿದೆ. ಈ ನಿರೀಕ್ಷೆಯು ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಬಲ್ಲದು.
ಇಬ್ರಿಯರಿಗೆ 7 : 20 (ERVKN)
ದೇವರು ಯೇಸುವನ್ನು ಪ್ರಧಾನಯಾಜಕನನ್ನಾಗಿ ಮಾಡಿದಾಗ, ಒಂದು ವಾಗ್ದಾನವನ್ನೂ ಮಾಡಿದನು. ಆದರೆ ಬೇರೆಯವರು ಯಾಜಕರಾದಾಗ ಆತನು ವಾಗ್ದಾನ ಮಾಡಲಿಲ್ಲ.
ಇಬ್ರಿಯರಿಗೆ 7 : 21 (ERVKN)
ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ: “ ‘ನೀನು ಸದಾಕಾಲವೂ ಯಾಜಕನಾಗಿರುವೆ’ ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು.
ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.” ಕೀರ್ತನೆ 110:4]
ಇಬ್ರಿಯರಿಗೆ 7 : 22 (ERVKN)
ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಶ್ರೇಷ್ಠವಾದ ಒಡಂಬಡಿಕೆಗೆ ಯೇಸುವೇ ಆಧಾರ ಎಂಬುದೇ ಇದರರ್ಥ.
ಇಬ್ರಿಯರಿಗೆ 7 : 23 (ERVKN)
ಇದಲ್ಲದೆ ಇತರ ಯಾಜಕರಲ್ಲಿ ಮರಣದ ಕಾರಣದಿಂದ ಒಬ್ಬನೇ ಶಾಶ್ವತವಾಗಿ ಯಾಜಕನಾಗಿ ಮುಂದುವರೆಯಲಾಗಲಿಲ್ಲ. ಆದ್ದರಿಂದ ಅಲ್ಲಿ ಅನೇಕ ಮಂದಿ ಯಾಜಕರಿದ್ದರು.
ಇಬ್ರಿಯರಿಗೆ 7 : 24 (ERVKN)
ಆದರೆ ಯೇಸು ಸದಾಕಾಲವೂ ಜೀವಿಸುವವನಾಗಿದ್ದಾನೆ. ಆತನು ತನ್ನ ಯಾಜಕ ಸೇವೆಯನ್ನು ಎಂದೆಂದಿಗೂ ನಿಲ್ಲಿಸುವುದಿಲ್ಲ.
ಇಬ್ರಿಯರಿಗೆ 7 : 25 (ERVKN)
ಆದ್ದರಿಂದಲೇ ತನ್ನ ಮೂಲಕ ದೇವರ ಬಳಿಗೆ ಬರುವ ಜನರನ್ನು ಯೇಸು ಯಾವಾಗಲೂ ರಕ್ಷಿಸಬಲ್ಲನು. ಏಕೆಂದರೆ ಆತನು ಸದಾಕಾಲ ಜೀವಿಸುವವನಾಗಿದ್ದಾನೆ ಮತ್ತು ಜನರು ದೇವರ ಸನ್ನಿಧಿಗೆ ಬಂದಾಗ ಜನರಿಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ.
ಇಬ್ರಿಯರಿಗೆ 7 : 26 (ERVKN)
ಯೇಸುವೇ ನಮಗೆ ಬೇಕಾಗಿದ್ದ ಪ್ರಧಾನ ಯಾಜಕನು. ಆತನು ಪಾಪರಹಿತನೂ ಪರಿಶುದ್ಧನೂ ನಿಷ್ಕಳಂಕನೂ ಪಾಪಿಗಳ ಪ್ರಭಾವಕ್ಕೆ ಒಳಗಾಗದವನೂ ಆಕಾಶಮಂಡಲಕ್ಕಿಂತ ಉನ್ನತನೂ ಆಗಿದ್ದಾನೆ.
ಇಬ್ರಿಯರಿಗೆ 7 : 27 (ERVKN)
ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
ಇಬ್ರಿಯರಿಗೆ 7 : 28 (ERVKN)
ಧರ್ಮಶಾಸ್ತ್ರವು ಮನುಷ್ಯರೊಳಗಿಂದ ಪ್ರಧಾನ ಯಾಜಕರನ್ನು ಆರಿಸುತ್ತದೆ. ಆರಿಸಲ್ಪಟ್ಟ ಈ ಜನರು ಮಾನವ ದೌರ್ಬಲ್ಯಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇವರು ಧರ್ಮಶಾಸ್ತ್ರದ ನಂತರ ಮಾಡಿದ ವಾಗ್ದಾನ ದೇವರ ಮಗನನ್ನು ಪ್ರಧಾನ ಯಾಜಕನನ್ನಾಗಿ ಮಾಡಿತು. ಆ ಮಗನು ಎಂದೆಂದಿಗೂ ಸರ್ವಸಂಪೂರ್ಣನಾಗಿ ಮಾಡಲ್ಪಟ್ಟಿದ್ದಾನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28