ಆದಿಕಾಂಡ 48 : 1 (ERVKN)
ಮನಸ್ಸೆ ಮತ್ತು ಎಫ್ರಾಯೀಮರಿಗೆ ಆಶೀರ್ವಾದಗಳು ಸ್ವಲ್ಪ ಕಾಲದ ನಂತರ, ತಂದೆಯು ಬಹಳ ಅನಾರೋಗ್ಯದಿಂದಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆಯನ್ನು ಮತ್ತು ಎಫ್ರಾಯೀಮನನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.
ಆದಿಕಾಂಡ 48 : 2 (ERVKN)
ಯೋಸೇಫನು ಬಂದಾಗ ಯಾರೋ ಒಬ್ಬನು ಇಸ್ರೇಲನಿಗೆ, “ನಿನ್ನ ಮಗನಾದ ಯೋಸೇಫನು ನಿನ್ನನ್ನು ನೋಡಲು ಬಂದಿದ್ದಾನೆ” ಎಂದು ಹೇಳಿದನು. ಆಗ ಅವನು ಬಹಳ ಬಲಹೀನನಾಗಿದ್ದರೂ ಕಷ್ಟಪಟ್ಟು ಹಾಸಿಗೆಯ ಮೇಲೆ ಕುಳಿತುಕೊಂಡನು.
ಆದಿಕಾಂಡ 48 : 3 (ERVKN)
ಬಳಿಕ ಇಸ್ರೇಲನು ಯೋಸೇಫನಿಗೆ, “ಸರ್ವಶಕ್ತನಾದ ದೇವರು ನನಗೆ ಕಾನಾನ್ ದೇಶದ ಲೂಜ್ ಎಂಬ ಸ್ಥಳದಲ್ಲಿ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು.
ಆದಿಕಾಂಡ 48 : 4 (ERVKN)
ದೇವರು ನನಗೆ, ‘ನಾನು ನಿನಗೆ ಅನೇಕ ಮಕ್ಕಳನ್ನು ಕೊಡುತ್ತೇನೆ; ನಿನ್ನ ಸಂತತಿಯವರು ಅನೇಕ ಜನಾಂಗಗಳಾಗುವರು; ನಿನ್ನ ಸಂತತಿಯವರಿಗೆ ನಾನು ಈ ದೇಶವನ್ನು ಶಾಶ್ವತವಾಗಿ ಕೊಡುವೆನು’ ಎಂದು ಹೇಳಿದನು.
ಆದಿಕಾಂಡ 48 : 5 (ERVKN)
ಈಗ ನಿನಗೆ ಇಬ್ಬರು ಗಂಡುಮಕ್ಕಳಿದ್ದಾರೆ. ನಾನು ಈಜಿಪ್ಟಿಗೆ ಬರುವುದಕ್ಕಿಂತ ಮೊದಲೇ ಅವರು ಇಲ್ಲಿ ಹುಟ್ಟಿದರು. ನಿನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆ ಮತ್ತು ಎಫ್ರಾಯೀಮ್ ನನ್ನ ಮಕ್ಕಳಂತೆಯೇ ಇದ್ದಾರೆ. ಅವರು ನನಗೆ ರೂಬೇನ್ ಮತ್ತು ಸಿಮೆಯೋನರಂತೆಯೇ ಇದ್ದಾರೆ.
ಆದಿಕಾಂಡ 48 : 6 (ERVKN)
ಆದ್ದರಿಂದ ಈ ಇಬ್ಬರು ಗಂಡುಮಕ್ಕಳು ನನಗೆ ಮಕ್ಕಳಂತೆಯೇ ಇರುತ್ತಾರೆ. ನಾನು ಹೊಂದಿರುವ ಪ್ರತಿಯೊಂದರಲ್ಲಿಯೂ ಅವರು ಪಾಲನ್ನು ಹೊಂದುವರು. ಆದರೆ ನಿನಗೆ ಬೇರೆ ಗಂಡುಮಕ್ಕಳಿದ್ದರೆ ಅವರು ಎಫ್ರಾಯೀಮ್ ಮತ್ತು ಮನಸ್ಸೆಯವರಿಗೆ ಮಕ್ಕಳಾಗಿರುತ್ತಾರೆ. ಅಂದರೆ ಎಫ್ರಾಯೀಮ್ ಮತ್ತು ಮನಸ್ಸೆ ಹೊಂದಿರುವ ಪ್ರತಿಯೊಂದರಲ್ಲಿ ಅವರು ಪಾಲನ್ನು ಹೊಂದುವರು.
ಆದಿಕಾಂಡ 48 : 7 (ERVKN)
ಪದ್ದನ್‌ಅರಾಮಿನಿಂದ ಹಿಂತಿರುಗಿ ಬರುತ್ತಿರುವಾಗ ರಾಹೇಲಳು ಸತ್ತಳು. ಇದು ನನಗೆ ತುಂಬ ದುಃಖವನ್ನು ಉಂಟುಮಾಡಿತು. ನಾವು ಕಾನಾನ್ ದೇಶದಲ್ಲಿ ಎಫ್ರಾತ್ ನಗರದ ಕಡೆಗೆ ಪ್ರಯಾಣ ಮಾಡುತ್ತಿದ್ದೆವು. ಆದ್ದರಿಂದ ನಾನು ಅವಳನ್ನು ಬೆತ್ಲೆಹೇಮೆಂಬ ಎಫ್ರಾತ್ ನಗರದ ರಸ್ತೆಯಲ್ಲಿ ಸಮಾಧಿ ಮಾಡಿದೆನು” ಎಂದು ಹೇಳಿದನು.
ಆದಿಕಾಂಡ 48 : 8 (ERVKN)
ಆಮೇಲೆ ಇಸ್ರೇಲನು ಯೋಸೇಫನ ಗಂಡುಮಕ್ಕಳನ್ನು ನೋಡಿ, “ಈ ಹುಡುಗರು ಯಾರು?” ಎಂದು ಕೇಳಿದನು.
ಆದಿಕಾಂಡ 48 : 9 (ERVKN)
ಯೋಸೇಫನು ತನ್ನ ತಂದೆಗೆ, “ಇವರು ನನ್ನ ಮಕ್ಕಳು. ದೇವರು ನನಗೆ ಕೊಟ್ಟಿರುವ ಗಂಡುಮಕ್ಕಳೇ ಇವರು” ಎಂದು ಹೇಳಿದನು. ಇಸ್ರೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ನಾನು ಅವರನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.
ಆದಿಕಾಂಡ 48 : 10 (ERVKN)
ಇಸ್ರೇಲನಿಗೆ ತುಂಬ ವಯಸ್ಸಾಗಿತ್ತು. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದ್ದರಿಂದ ಯೋಸೇಫನು ಅವರನ್ನು ತಂದೆಯ ಬಳಿಗೆ ಕರೆದುಕೊಂಡು ಬಂದನು. ಇಸ್ರೇಲನು ಆ ಹುಡುಗರನ್ನು ಅಪ್ಪಿಕೊಂಡು ಮುದ್ದಿಟ್ಟನು.
ಆದಿಕಾಂಡ 48 : 11 (ERVKN)
ಬಳಿಕ ಇಸ್ರೇಲನು ಯೋಸೇಫನಿಗೆ, “ನಾನು ಮತ್ತೆ ನಿನ್ನ ಮುಖವನ್ನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ನಾನು ನಿನ್ನನ್ನೂ ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.
ಆದಿಕಾಂಡ 48 : 12 (ERVKN)
ಆಗ ಯೋಸೇಫನು ಇಸ್ರೇಲನ ತೊಡೆಯ ಮೇಲೆ ಕುಳಿತಿದ್ದ ತನ್ನ ಗಂಡುಮಕ್ಕಳನ್ನು ಎತ್ತಿಕೊಂಡನು. ಬಳಿಕ ಅವರು ಇಸ್ರೇಲನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು.
ಆದಿಕಾಂಡ 48 : 13 (ERVKN)
ಯೋಸೇಫನು ಎಫ್ರಾಯೀಮನನ್ನು ತನ್ನ ಬಲಭಾಗದಲ್ಲಿಯೂ ಮನಸ್ಸೆಯನ್ನು ತನ್ನ ಎಡಭಾಗದಲ್ಲಿಯೂ ಕುಳ್ಳಿರಿಸಿದನು. (ಆದ್ದರಿಂದ ಎಫ್ರಾಯೀಮನು ಇಸ್ರೇಲನ ಎಡಭಾಗದಲ್ಲಿಯೂ ಮನಸ್ಸೆಯು ಬಲಭಾಗದಲ್ಲಿಯೂ ಇದ್ದರು.)
ಆದಿಕಾಂಡ 48 : 14 (ERVKN)
ಆದರೆ ಇಸ್ರೇಲನು ತನ್ನ ಕೈಗಳನ್ನು ವಾರೆ ಮಾಡಿ ತನ್ನ ಬಲಗೈಯನ್ನು ಚಿಕ್ಕ ಮಗನಾದ ಎಫ್ರಾಯೀಮನ ತಲೆಯ ಮೇಲಿಟ್ಟು ಎಡಗೈಯನ್ನು ದೊಡ್ಡ ಮಗನಾದ ಮನಸ್ಸೆಯ ತಲೆಯ ಮೇಲಿಟ್ಟನು. ಮನಸ್ಸೆಯು ಹಿರಿಯ ಮಗನಾಗಿದ್ದರೂ ಇಸ್ರೇಲನು ಮನಸ್ಸೆಯ ತಲೆಯ ಮೇಲೆ ಎಡಗೈಯನ್ನಿಟ್ಟನು.
ಆದಿಕಾಂಡ 48 : 15 (ERVKN)
ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು: “ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು. ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
ಆದಿಕಾಂಡ 48 : 16 (ERVKN)
ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು. ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು. ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”
ಆದಿಕಾಂಡ 48 : 17 (ERVKN)
ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು.
ಆದಿಕಾಂಡ 48 : 18 (ERVKN)
ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.
ಆದಿಕಾಂಡ 48 : 19 (ERVKN)
ಅದಕ್ಕೆ ಅವನ ತಂದೆಯು “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.
ಆದಿಕಾಂಡ 48 : 20 (ERVKN)
ಅಂದು ಇಸ್ರೇಲನು ಅವರನ್ನು ಆಶೀರ್ವದಿಸಿ, “ಇಸ್ರೇಲರು ನಿಮ್ಮ ಹೆಸರುಗಳ ಮೂಲಕ ಬೇರೆಯವರನ್ನು ಆಶೀರ್ವದಿಸುವರು.
‘ದೇವರು ನಿನ್ನನ್ನು ಎಫ್ರಾಯೀಮನಂತೆಯೂ ಮನಸ್ಸೆಯಂತೆಯೂ ಮಾಡಲಿ’ ಎಂದು ಹೇಳುವರು” ಎಂದನು. ಹೀಗೆ, ಇಸ್ರೇಲನು ಎಫ್ರಾಯೀಮನನ್ನು ಮನಸ್ಸೆಗಿಂತ ದೊಡ್ಡವನನ್ನಾಗಿ ಮಾಡಿದನು.
ಆದಿಕಾಂಡ 48 : 21 (ERVKN)
ಬಳಿಕ ಇಸ್ರೇಲನು ಯೋಸೇಫನಿಗೆ, “ನೋಡು, ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ದೇವರು ಇನ್ನೂ ನಿನ್ನ ಸಂಗಡವಿರುವನು. ಅವನು ನಿನ್ನನ್ನು ನಿನ್ನ ಪೂರ್ವಿಕರ ದೇಶಕ್ಕೆ ಹಿಂತಿರುಗಿಸುವನು.
ಆದಿಕಾಂಡ 48 : 22 (ERVKN)
ನಾನು ನಿನ್ನ ಸಹೋದರರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ಬೇರೊಂದನ್ನು ನಿನಗೆ ಕೊಟ್ಟಿದ್ದೇನೆ. ನಾನು ಅಮೋರಿಯರಿಂದ ಗೆದ್ದುಕೊಂಡಿರುವ ಬೆಟ್ಟವನ್ನು ನಿನಗೆ ಕೊಡುವೆನು. ನಾನು ಅವರೊಂದಿಗೆ ಖಡ್ಗಗಳಿಂದಲೂ ಬಿಲ್ಲುಗಳಿಂದಲೂ ಹೋರಾಡಿ ಆ ಬೆಟ್ಟವನ್ನು ವಶಪಡಿಸಿಕೊಂಡಿದ್ದೇನೆ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22