ಆದಿಕಾಂಡ 34 : 1 (ERVKN)
ದೀನಳ ಮಾನಭಂಗ ದೀನಳು ಲೇಯಾ ಮತ್ತು ಯಾಕೋಬನ ಮಗಳು. ದೀನಳು ಒಂದು ದಿನ ಆ ದೇಶದ ಸ್ತ್ರೀಯರನ್ನು ನೋಡಲು ಹೊರಗೆ ಹೋದಳು.
ಆದಿಕಾಂಡ 34 : 2 (ERVKN)
ಆ ದೇಶದ ರಾಜನಾಗಿದ್ದ ಹಮೋರನ ಮಗನಾದ ಶೆಕೆಮನು ದೀನಳನ್ನು ಕಂಡು ಅವಳನ್ನು ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು.
ಆದಿಕಾಂಡ 34 : 3 (ERVKN)
ಶೆಕೆಮನಿಗೆ ದೀನಳ ಮೇಲೆ ಪ್ರೀತಿಯುಂಟಾಗಿ ಆಕೆಯನ್ನು ಮದುವೆ ಮಾಡಿಕೊಳ್ಳಲು ಇಷ್ಟಪಟ್ಟನು. ಅವನು ತನ್ನನ್ನು ಮದುವೆಯಾಗಬೇಕೆಂದು ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು.
ಆದಿಕಾಂಡ 34 : 4 (ERVKN)
ಶೆಕೆಮನು ತನ್ನ ತಂದೆಗೆ, “ದಯವಿಟ್ಟು ಈ ಹುಡುಗಿಯನ್ನು ನನಗೆ ಮದುವೆಮಾಡಿಸು” ಎಂದು ಕೇಳಿಕೊಂಡನು.
ಆದಿಕಾಂಡ 34 : 5 (ERVKN)
ಯಾಕೋಬನು ತನ್ನ ಮಗಳಿಗೆ ಶೆಕೆಮನಿಂದ ಮಾನಭಂಗವಾದ ಸುದ್ದಿಯನ್ನು ಕೇಳಿದನು. ಆದರೆ ಅವನ ಗಂಡುಮಕ್ಕಳೆಲ್ಲ ಕುರಿಗಳೊಂದಿಗೆ ಹೊಲದಲ್ಲಿದ್ದುದರಿಂದ ಅವರು ಮನೆಗೆ ಬರುವತನಕ ಏನೂ ಮಾಡಲಿಲ್ಲ.
ಆದಿಕಾಂಡ 34 : 6 (ERVKN)
ಆ ಸಮಯದಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನೊಂದಿಗೆ ಮಾತಾಡಲು ಬಂದನು.
ಆದಿಕಾಂಡ 34 : 7 (ERVKN)
ಹೊಲದಲ್ಲಿದ್ದ ಯಾಕೋಬನ ಗಂಡುಮಕ್ಕಳು ನಡೆದ ಸಂಗತಿಯನ್ನು ಕೇಳಿ ತುಂಬ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಮಾನಭಂಗ ಮಾಡಿ ಇಸ್ರೇಲರಿಗೆ ಅವಮಾನ ಮಾಡಿದ್ದರಿಂದ ಅವರು ಆವೇಶಗೊಂಡರು. ಶೆಕೆಮನು ತುಂಬ ಕೆಟ್ಟದ್ದನ್ನು ಮಾಡಿದ್ದರಿಂದ ಅಣ್ಣಂದಿರು ಹೊಲದಿಂದ ಹಿಂತಿರುಗಿದರು.
ಆದಿಕಾಂಡ 34 : 8 (ERVKN)
ಆದರೆ ಹಮೋರನು ದೀನಳ ಅಣ್ಣಂದಿರೊಡನೆ ಮಾತಾಡಿದನು. ಅವನು ಅವರಿಗೆ, “ನನ್ನ ಮಗನಾದ ಶೆಕೆಮನು ದೀನಳನ್ನು ತುಂಬ ಇಷ್ಟಪಡುತ್ತಾನೆ. ಅವನು ಆಕೆಯನ್ನು ಮದುವೆ ಮಾಡಿಕೊಳ್ಳಲು ದಯವಿಟ್ಟು ಅವಕಾಶಕೊಡಿ.
ಆದಿಕಾಂಡ 34 : 9 (ERVKN)
ಈ ಮದುವೆಯು ನಮಗಾಗಿರುವ ಒಂದು ವಿಶೇಷ ಒಪ್ಪಂದವನ್ನು ತೋರಿಸುತ್ತದೆ. ಅದೇನೆಂದರೆ, ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು.
ಆದಿಕಾಂಡ 34 : 10 (ERVKN)
ನೀವು ನಮ್ಮೊಂದಿಗೆ ಒಂದೇ ದೇಶದಲ್ಲಿ ವಾಸವಾಗಿರಬಹುದು. ನಿಮಗೆ ಇಲ್ಲಿ ಜಮೀನು ಮಾಡಿಕೊಳ್ಳಲು ಮತ್ತು ವ್ಯಾಪಾರ ಮಾಡಲು ಸ್ವತಂತ್ರವಿದೆ” ಎಂದು ಹೇಳಿದನು.
ಆದಿಕಾಂಡ 34 : 11 (ERVKN)
ಶೆಕೆಮನು ಸಹ ಯಾಕೋಬನೊಡನೆ ಮತ್ತು ದೀನಳ ಅಣ್ಣಂದಿರೊಡನೆ ಮಾತಾಡಿದನು. ಶೆಕೆಮನು ಅವರಿಗೆ, “ದಯವಿಟ್ಟು ನನ್ನನ್ನು ಸ್ವೀಕಾರಮಾಡಿ ನೀವು ಏನೇ ಹೇಳಿದರೂ ನಾನು ಮಾಡುತ್ತೇನೆ.
ಆದಿಕಾಂಡ 34 : 12 (ERVKN)
ನಾನು ದೀನಳನ್ನು ಮದುವೆಯಾಗಲು ನೀವು ನನಗೆ ಅವಕಾಶಕೊಟ್ಟರೆ ಸಾಕು. ನಾನು ನಿಮಗೆ ಯಾವ ಉಡುಗೊರೆಯನ್ನು ಬೇಕಾದರೂ ಕೊಡುವೆನು. ನೀವು ಏನು ಕೇಳಿದರೂ ಕೊಡುವೆನು. ಆದರೆ ನನಗೆ ದೀನಳನ್ನು ಮದುವೆ ಮಾಡಿಸಿಕೊಡಿ” ಎಂದು ಕೇಳಿಕೊಂಡನು.
ಆದಿಕಾಂಡ 34 : 13 (ERVKN)
ಯಾಕೋಬನ ಗಂಡುಮಕ್ಕಳು ಶೆಕೆಮನಿಗೂ ಅವನ ತಂದೆಗೂ ಸುಳ್ಳು ಹೇಳಲು ನಿರ್ಧರಿಸಿದರು. ತಮ್ಮ ತಂಗಿಯಾದ ದೀನಳಿಗೆ ಶೆಕೆಮನು ಅಂಥ ಕೆಟ್ಟಕಾರ್ಯವನ್ನು ಮಾಡಿದ್ದರಿಂದ ಅವರು ಇನ್ನೂ ಆವೇಶದಿಂದ ಇದ್ದರು.
ಆದಿಕಾಂಡ 34 : 14 (ERVKN)
ಆದ್ದರಿಂದ ಆಕೆಯ ಅಣ್ಣಂದಿರು ಅವನಿಗೆ, “ನೀನು ನಮ್ಮ ತಂಗಿಯನ್ನು ಮದುವೆಯಾಗಲು ನಾವು ಅವಕಾಶ ಕೊಡುವಂತಿಲ್ಲ; ಯಾಕೆಂದರೆ ನಿನಗಿನ್ನೂ ಸುನ್ನತಿಯಾಗಿಲ್ಲ. ನಮ್ಮ ತಂಗಿಯು ನಿನ್ನನ್ನು ಮದುವೆಯಾಗುವುದು ತಪ್ಪಾಗುತ್ತದೆ.
ಆದಿಕಾಂಡ 34 : 15 (ERVKN)
ಆದರೆ ನೀನು ಮತ್ತು ನಿಮ್ಮ ಪಟ್ಟಣದಲ್ಲಿರುವ ಪ್ರತಿಯೊಬ್ಬ ಗಂಡಸು ನಮ್ಮಂತೆ ಸುನ್ನತಿ ಮಾಡಿಸಿಕೊಂಡರೆ ನೀನು ಆಕೆಯನ್ನು ಮದುವೆಯಾಗಬಹುದು.
ಆದಿಕಾಂಡ 34 : 16 (ERVKN)
ಆಮೇಲೆ ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು. ಆಗ ನಾವು ಒಂದೇ ಜನಾಂಗವಾಗುವೆವು.
ಆದಿಕಾಂಡ 34 : 17 (ERVKN)
ಆದರೆ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಾವು ದೀನಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದರು.
ಆದಿಕಾಂಡ 34 : 18 (ERVKN)
ಅವರು ಹೇಳಿದ್ದು ಹಮೋರನಿಗೂ ಶೆಕೆಮನಿಗೂ ಒಳ್ಳೆಯದೆಂದು ತೋಚಿತು.
ಆದಿಕಾಂಡ 34 : 19 (ERVKN)
ದೀನಳ ಅಣ್ಣಂದಿರು ಹೇಳಿದ್ದನ್ನು ಮಾಡಲು ಶೆಕೆಮನು ಸಂತೋಷದಿಂದ ಒಪ್ಪಿಕೊಂಡನು. ಶೆಕೆಮನಿಗೆ ಅವರ ಕುಟುಂಬದಲ್ಲಿ ತುಂಬ ಗೌರವವಿತ್ತು.
ಆದಿಕಾಂಡ 34 : 20 (ERVKN)
ಹಮೋರನು ಮತ್ತು ಶೆಕೆಮನು ತಮ್ಮ ನಗರದ ಸಭಾಸ್ಥಳಕ್ಕೆ ಹೋದರು. ಅವರು ಪಟ್ಟಣದ ಗಂಡಸರೊಂದಿಗೆ ಮಾತಾಡಿ,
ಆದಿಕಾಂಡ 34 : 21 (ERVKN)
“ಈ ಇಸ್ರೇಲರಿಗೆ ನಮ್ಮ ಸ್ನೇಹಿತರಾಗಿರಲು ಇಷ್ಟ; ಇವರು ನಮ್ಮ ದೇಶದಲ್ಲಿ ವಾಸವಾಗಿದ್ದುಕೊಂಡು ನಮ್ಮೊಂದಿಗೆ ಸಮಾಧಾನದಿಂದಿರುವುದು ನಮಗೂ ಇಷ್ಟ; ನಮ್ಮೆಲ್ಲರಿಗೂ ಬೇಕಾಗುವಷ್ಟು ಭೂಮಿ ನಮ್ಮಲ್ಲಿದೆ. ನಾವು ಅವರ ಸ್ತ್ರೀಯರನ್ನು ಮದುವೆಯಾಗವುದಕ್ಕೂ ನಮ್ಮ ಸ್ತ್ರೀಯರನ್ನು ಅವರಿಗೆ ಮದುವೆ ಮಾಡಿಕೊಡುವುದಕ್ಕೂ ಸಂತೋಷಪಡುತ್ತೇವೆ.
ಆದಿಕಾಂಡ 34 : 22 (ERVKN)
ಆದರೆ ನಾವು ಮಾಡಬೇಕಾದ ಒಂದೇ ಒಂದು ಕಾರ್ಯವೇನೆಂದರೆ, ಇಸ್ರೇಲರಂತೆ ನಮ್ಮ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಳ್ಳಬೇಕು.
ಆದಿಕಾಂಡ 34 : 23 (ERVKN)
ನಾವು ಹೀಗೆ ಮಾಡಿದರೆ, ಅವರ ಎಲ್ಲಾ ದನಕುರಿಗಳಿಂದಲೂ ಪಶುಗಳಿಂದಲೂ ಐಶ್ವರ್ಯವಂತರಾಗುತ್ತೇವೆ. ನಾವು ಈ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡರೆ ಅವರು ನಮ್ಮೊಂದಿಗೆ ಇಲ್ಲಿ ವಾಸಿಸುವರು” ಎಂದು ಹೇಳಿದರು.
ಆದಿಕಾಂಡ 34 : 24 (ERVKN)
ಸಭಾಸ್ಥಳದಲ್ಲಿದ್ದ ಗಂಡಸರೆಲ್ಲರೂ ಹಮೋರ ಮತ್ತು ಶೆಕೆಮರ ಮಾತಿಗೆ ಒಪ್ಪಿಕೊಂಡರು. ಬಳಿಕ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
ಆದಿಕಾಂಡ 34 : 25 (ERVKN)
ಮೂರು ದಿನಗದರೂ ಸುನ್ನತಿ ಮಾಡಿಸಿಕೊಂಡಿದ್ದ ಗಂಡಸರು ಇನ್ನೂ ಗಾಯದ ನೋವಿನಲ್ಲಿದ್ದರು. ಈ ಸಮಯದಲ್ಲಿ ಗಂಡಸರು ಬಲಹೀನರಾಗಿರುತ್ತಾರೆ ಎಂಬುದು ಯಾಕೋಬನ ಇಬ್ಬರು ಗಂಡುಮಕ್ಕಳಾದ ಸಿಮೆಯೋನ್ ಮತ್ತು ಲೇವಿಗೆ ತಿಳಿದಿತ್ತು. ಆದ್ದರಿಂದ ಅವರು ಪಟ್ಟಣಕ್ಕೆ ಹೋಗಿ ಅಲ್ಲಿದ್ದ ಎಲ್ಲಾ ಗಂಡಸರನ್ನು ಕೊಂದುಹಾಕಿದರು.
ಆದಿಕಾಂಡ 34 : 26 (ERVKN)
ದೀನಳ ಅಣ್ಣಂದಿರಾದ ಸಿಮೆಯೋನನು ಮತ್ತು ಲೇವಿಯು ಹಮೋರನನ್ನೂ ಅವನ ಮಗನಾದ ಶೆಕೆಮನನ್ನೂ ಕೊಂದುಹಾಕಿ ದೀನಳನ್ನು ಶೆಕಮನ ಮನೆಯಿಂದ ಕರೆದುಕೊಂಡು ಬಂದರು.
ಆದಿಕಾಂಡ 34 : 27 (ERVKN)
ಯಾಕೋಬನ ಗಂಡುಮಕ್ಕಳು ಪಟ್ಟಣದೊಳಗೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನು ತೆಗೆದುಕೊಂಡರು. ತಮ್ಮ ತಂಗಿಗೆ ಶೆಕೆಮನು ಮಾಡಿದ ಮಾನಭಂಗದಿಂದ ಅವರು ಇನ್ನೂ ಕೋಪದಲ್ಲಿದ್ದರು.
ಆದಿಕಾಂಡ 34 : 28 (ERVKN)
ಹೀಗೆ ದೀನಳ ಅಣ್ಣಂದಿರು ಅವರ ದನಕುರಿಗಳನ್ನೂ ಕತ್ತೆಗಳನ್ನೂ ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡರು.
ಆದಿಕಾಂಡ 34 : 29 (ERVKN)
ಅವರ ಹೆಂಡತಿಯರನ್ನೂ ಮಕ್ಕಳನ್ನೂ ಸೆರೆಹಿಡಿದು ಮನೆಯಲ್ಲಿದ್ದದ್ದನ್ನೆಲ್ಲಾ ದೋಚಿಕೊಂಡರು.
ಆದಿಕಾಂಡ 34 : 30 (ERVKN)
ಆದರೆ ಯಾಕೋಬನು ಸಿಮೆಯೋನನಿಗೆ ಮತ್ತು ಲೇವಿಗೆ, “ನೀವು ನನ್ನನ್ನು ಅಪಾಯಕ್ಕೆ ಗುರಿಮಾಡಿದಿರಿ. ಈ ದೇಶದಲ್ಲಿರುವ ಎಲ್ಲಾ ಕಾನಾನ್ಯರು ಮತ್ತು ಪೆರಿಜೀಯರು ನನ್ನನ್ನು ದ್ವೇಷಿಸಿ ನನಗೆ ವಿರೋಧವಾಗುವರು. ನನಗಿರುವ ಜನರು ಕೆಲವರೇ. ಈ ದೇಶದಲ್ಲಿರುವ ಜನರು ಒಟ್ಟಾಗಿ ಸೇರಿಕೊಂಡು ನನಗೆ ವಿರೋಧವಾಗಿ ಹೋರಾಡಿದರೆ ನಾನೂ ನನ್ನ ಜನರೆಲ್ಲರೂ ನಾಶವಾಗುವೆವು” ಎಂದು ಹೇಳಿದನು.
ಆದಿಕಾಂಡ 34 : 31 (ERVKN)
ಆದರೆ ದೀನಳ ಅಣ್ಣಂದಿರು, “ನಮ್ಮ ತಂಗಿಯನ್ನು ಆ ಜನರು ಸೂಳೆಯಂತೆ ಉಪಯೋಗಿಸಿಕೊಳ್ಳಲು ನಾವು ಬಿಡಬೇಕೇ? ಇಲ್ಲ, ನಮ್ಮ ತಂಗಿಗೆ ಆ ಜನರು ಮಾಡಿದ್ದು ತಪ್ಪು” ಎಂದು ಹೇಳಿದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31