ಆದಿಕಾಂಡ 19 : 1 (ERVKN)
ಲೋಟನ ಸಂದರ್ಶಕರು ಆ ಸಾಯಂಕಾಲ, ದೇವದೂತರಿಬ್ಬರು ಸೊದೋಮ್ ನಗರಕ್ಕೆ ಬಂದರು. ನಗರದ ಬಾಗಿಲುಗಳ ಬಳಿ ಕುಳಿತುಕೊಂಡಿದ್ದ ಲೋಟನು ದೇವದೂತರನ್ನು ಕಂಡು, ಅವರ ಬಳಿಗೆ ಹೋಗಿ ನಮಸ್ಕರಿಸಿದನು.
ಆದಿಕಾಂಡ 19 : 2 (ERVKN)
ಲೋಟನು ಅವರಿಗೆ, “ಸ್ವಾಮಿಗಳೇ, ದಯವಿಟ್ಟು ನನ್ನ ಮನೆಗೆ ಬನ್ನಿ. ನಾನು ನಿಮ್ಮನ್ನು ಉಪಚರಿಸುವೆನು. ನಿಮ್ಮ ಕೈಕಾಲುಗಳನ್ನು ತೊಳೆದುಕೊಂಡು ಈ ರಾತ್ರಿ ನಮ್ಮ ಮನೆಯಲ್ಲೇ ಇರಿ. ನಾಳೆ ಮುಂಜಾನೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು. ದೇವದೂತರು, “ಈ ಚೌಕದಲ್ಲಿ ನಾವು ಈ ರಾತ್ರಿ ಕಳೆಯುತ್ತೇವೆ” ಎಂದು ಉತ್ತರಿಸಿದರು.
ಆದಿಕಾಂಡ 19 : 3 (ERVKN)
ಆದರೆ ಲೋಟನು ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದರಿಂದ ಅವರು ಅವನ ಮನೆಗೆ ಹೋದರು. ಲೋಟನು ಅವರಿಗಾಗಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಅಡಿಗೆ ಮಾಡಿಸಿದನು. ದೇವದೂತರು ಅದನ್ನು ಊಟಮಾಡಿದರು.
ಆದಿಕಾಂಡ 19 : 4 (ERVKN)
ಆ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೊದೋಮಿನ ಗಂಡಸರೆಲ್ಲರೂ ಬಂದು ಲೋಟನ ಮನೆಯ ಸುತ್ತಲೂ ನಿಂತುಕೊಂಡು ಲೋಟನಿಗೆ,
ಆದಿಕಾಂಡ 19 : 5 (ERVKN)
“ನಿನ್ನ ಮನೆಗೆ ಬಂದ ಆ ಇಬ್ಬರು ಪುರುಷರು ಎಲ್ಲಿದ್ದಾರೆ? ಅವರನ್ನು ಹೊರಗೆ ಕಳುಹಿಸು. ನಾವು ಅವರನ್ನು ಸಂಭೋಗಿಸಬೇಕು” ಎಂದು ಕೂಗಿ ಹೇಳಿದರು.
ಆದಿಕಾಂಡ 19 : 6 (ERVKN)
ಲೋಟನು ಹೊರಗೆ ಬಂದು ಬಾಗಿಲಿಗೆ ಬೀಗ ಹಾಕಿ,
ಆದಿಕಾಂಡ 19 : 7 (ERVKN)
ಆ ಗಂಡಸರಿಗೆ, “ನನ್ನ ಸಹೋದರರೇ, ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ಕೆಟ್ಟಕಾರ್ಯವನ್ನು ಮಾಡಬೇಡಿ.
ಆದಿಕಾಂಡ 19 : 8 (ERVKN)
ನೋಡಿ! ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರು ಹಿಂದೆಂದೂ ಗಂಡಸರೊಡನೆ ಮಲಗಿದವರಲ್ಲ. ನೀವು ಅವರಿಗೆ ಏನುಬೇಕಾದರೂ ಮಾಡಿ, ಆದರೆ ದಯವಿಟ್ಟು ಈ ಪುರುಷರಿಗೆ ಏನನ್ನೂ ಮಾಡಬೇಡಿ. ಇವರು ನನ್ನ ಮನೆಗೆ ಬಂದಿದ್ದಾರೆ; ಇವರನ್ನು ಕಾಪಾಡುವುದು ನನ್ನ ಕರ್ತವ್ಯ” ಎಂದು ಹೇಳಿದನು.
ಆದಿಕಾಂಡ 19 : 9 (ERVKN)
ಮನೆಯ ಸುತ್ತಲೂ ನಿಂತುಕೊಂಡಿದ್ದ ಗಂಡಸರು ಅವನಿಗೆ, “ದಾರಿಬಿಡು” ಎಂದು ಕೂಗಿದರು. ಆಮೇಲೆ ಅವರು ತಮ್ಮೊಳಗೆ, “ಈ ಲೋಟನು ನಮ್ಮ ನಗರಕ್ಕೆ ಪ್ರವಾಸಿಗನಂತೆ ಬಂದು ಈಗ ನಮಗೇ ನ್ಯಾಯವನ್ನು ಹೇಳಿಕೊಡುತ್ತಿದ್ದಾನೆ” ಎಂದು ಮಾತಾಡಿಕೊಂಡರು. ಆಮೇಲೆ ಅವರು ಲೋಟನಿಗೆ, “ನಾವು ಆ ಪುರುಷರಿಗೆ ಮಾಡುವುದಕ್ಕಿಂತ ನಿನಗೇ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ” ಎಂದು ಕೂಗಿಹೇಳಿ ಲೋಟನ ಸಮೀಪಕ್ಕೆ ಬಂದು ಬಾಗಿಲನ್ನು ಮುರಿದುಹಾಕಲು ಸಿದ್ಧರಾದರು.
ಆದಿಕಾಂಡ 19 : 10 (ERVKN)
ಆದರೆ ಮನೆಯೊಳಗಿದ್ದ ಇಬ್ಬರು ಪುರುಷರು ಬಾಗಿಲನ್ನು ತೆರೆದು ಲೋಟನನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು.
ಆದಿಕಾಂಡ 19 : 11 (ERVKN)
ಆ ಇಬ್ಬರು ಪುರುಷರು ಮನೆಯ ಹೊರಗೆ ಇದ್ದ ಗಂಡಸರನ್ನೆಲ್ಲಾ ಕುರುಡರಾಗುವಂತೆ ಮಾಡಿದ್ದರಿಂದ ಅವರು ಬಾಗಿಲನ್ನು ಗುರುತಿಸಲಾರದೆ ಹೋದರು.
ಆದಿಕಾಂಡ 19 : 12 (ERVKN)
ಸೊದೋಮಿನಿಂದ ಪಲಾಯನ ಆ ಇಬ್ಬರು ಪುರುಷರು ಲೋಟನಿಗೆ, “ನಿನ್ನ ಕುಟುಂಬದ ಬೇರೆ ಯಾರಾದರೂ ಈ ನಗರದಲ್ಲಿ ಇದ್ದಾರೆಯೇ? ನಿನಗೆ ಅಳಿಯಂದಿರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇಲ್ಲಿ ವಾಸವಾಗಿದ್ದಾರೆಯೇ? ನಿನ್ನ ಕುಟುಂಬದ ಯಾರಾದರೂ ಈ ನಗರದಲ್ಲಿದ್ದರೆ ಈಗಲೇ ಇಲ್ಲಿಂದ ಹೊರಡುವಂತೆ ಅವರಿಗೆ ತಿಳಿಸು.
ಆದಿಕಾಂಡ 19 : 13 (ERVKN)
ನಾವು ಈ ನಗರವನ್ನು ನಾಶಮಾಡುತ್ತೇವೆ. ಈ ನಗರದ ದುಷ್ಟತನವನ್ನು ಯೆಹೋವನು ನೋಡಿದ್ದಾನೆ. ಆದ್ದರಿಂದ ಇದನ್ನು ನಾಶಮಾಡಲು ಆತನೇ ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.
ಆದಿಕಾಂಡ 19 : 14 (ERVKN)
ಆದ್ದರಿಂದ ಲೋಟನು ಹೊರಗೆ ಹೋಗಿ, ತನ್ನ ಹೆಣ್ಣುಮಕ್ಕಳೊಡನೆ ನಿಶ್ಚಿತಾರ್ಥವಾಗಿದ್ದ ಅಳಿಯಂದಿರೊಡನೆ ಮಾತಾಡಿ, “ಬೇಗನೆ ಈ ಪಟ್ಟಣವನ್ನು ಬಿಟ್ಟು ಹೊರಡಿರಿ; ಯೆಹೋವನು ಈ ಪಟ್ಟಣವನ್ನು ನಾಶಮಾಡುವನು” ಎಂದು ಹೇಳಿದನು. ಲೋಟನ ಈ ಮಾತು ಅವರಿಗೆ ತಮಾಷೆಯಂತೆ ಕಂಡಿತು.
ಆದಿಕಾಂಡ 19 : 15 (ERVKN)
ಸೂರ್ಯೋದಯಕ್ಕಿಂತ ಮೊದಲೇ ಹೊರಡುವಂತೆ ದೇವದೂತರು ಲೋಟನನ್ನು ಒತ್ತಾಯಿಸಿ, “ಈ ನಗರವನ್ನು ನಾಶಗೊಳಿಸಲಾಗುವುದು. ಆದ್ದರಿಂದ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಈ ಸ್ಥಳದಿಂದ ಓಡಿಹೋಗು, ಆಗ ನೀನು ಈ ನಗರದೊಡನೆ ನಾಶವಾಗುವುದಿಲ್ಲ” ಎಂದು ಹೇಳಿದರು.
ಆದಿಕಾಂಡ 19 : 16 (ERVKN)
ಆದರೆ ಲೋಟನು ಗಲಿಬಿಲಿಗೊಂಡು ತಡಮಾಡಲು ಆ ಇಬ್ಬರು ಪುರುಷರು ಲೋಟನನ್ನೂ ಅವನ ಹೆಂಡತಿಯನ್ನೂ ಅವನ ಇಬ್ಬರು ಹೆಣ್ಣುಮಕ್ಕಳನ್ನೂ ಕೈಹಿಡಿದುಕೊಂಡು ನಗರದ ಹೊರಕ್ಕೆ ಸುರಕ್ಷಿತವಾಗಿ ತಂದುಬಿಟ್ಟರು. ಹೀಗೆ ಯೆಹೋವನು ಲೋಟನಿಗೂ ಅವನ ಕುಟುಂಬದವರಿಗೂ ದಯೆತೋರಿದನು.
ಆದಿಕಾಂಡ 19 : 17 (ERVKN)
ಅವರು ನಗರದ ಹೊರಕ್ಕೆ ಬಂದ ಮೇಲೆ ಆ ಪುರುಷರಲ್ಲಿ ಒಬ್ಬನು, “ಈಗ ಓಡಿಹೋಗಿ ನಿಮ್ಮ ಪ್ರಾಣವನ್ನು ಕಾಪಾಡಿಕೊಳ್ಳಿ; ನಗರದ ಕಡೆಗೆ ತಿರುಗಿ ನೋಡಬೇಡಿ; ಕಣಿವೆಯ ಯಾವ ಸ್ಥಳದಲ್ಲೂ ನಿಂತುಕೊಳ್ಳಬೇಡಿ; ತಪ್ಪಿಸಿಕೊಂಡು ಬೆಟ್ಟಗಳಿಗೆ ಓಡಿಹೋಗಿರಿ; ಇಲ್ಲವಾದರೆ, ಈ ನಗರದೊಡನೆ ನೀವೂ ನಾಶವಾಗುವಿರಿ” ಎಂದು ಹೇಳಿದನು.
ಆದಿಕಾಂಡ 19 : 18 (ERVKN)
ಆದರೆ ಲೋಟನು ಆ ಪುರುಷರಿಗೆ, “ಸ್ವಾಮಿಗಳೇ, ದಯವಿಟ್ಟು ಬಹುದೂರದವರೆಗೆ ಓಡಿಹೋಗುವಂತೆ ನಮ್ಮನ್ನು ಒತ್ತಾಯಿಸಬೇಡಿ.
ಆದಿಕಾಂಡ 19 : 19 (ERVKN)
ನಿಮ್ಮ ಸೇವಕನಾದ ನನಗೆ ಮಹಾಕರುಣೆಯನ್ನು ತೋರಿ ನನ್ನನ್ನು ಕಾಪಾಡಿದ್ದೀರಿ. ಆದರೆ ನಾನು ಬೆಟ್ಟಗಳವರೆಗೂ ಓಡಿಹೋಗಲಾರೆ. ನಾನು ನಿಧಾನವಾಗಿ ಹೋಗುವುದಾದರೆ ಕೇಡು ಸಂಭವಿಸಿ ಕೊಲ್ಲಲ್ಪಡುವೆನು.
ಆದಿಕಾಂಡ 19 : 20 (ERVKN)
ಅಗೋ, ಅಲ್ಲಿ ಒಂದು ಚಿಕ್ಕ ಊರಿದೆ. ಆ ಊರಿಗೆ ಓಡಿಹೋಗಲು ನನಗೆ ಅಪ್ಪಣೆಕೊಡಿ. ನಾನು ಅಲ್ಲಿಗೆ ಓಡಿಹೋಗಿ ಸುರಕ್ಷಿತವಾಗಿರುವೆನು” ಎಂದು ಹೇಳಿದನು.
ಆದಿಕಾಂಡ 19 : 21 (ERVKN)
ಆ ಪುರುಷನು ಲೋಟನಿಗೆ, “ಆಗಲಿ, ನಿನಗೆ ಅಪ್ಪಣೆ ಕೊಟ್ಟಿದ್ದೇನೆ. ನಾನು ಆ ಊರನ್ನು ನಾಶಮಾಡುವುದಿಲ್ಲ.
ಆದಿಕಾಂಡ 19 : 22 (ERVKN)
ಆದರೆ ಅಲ್ಲಿಗೆ ಬೇಗನೆ ಓಡಿಹೋಗು, ನೀನು ಆ ಊರಿಗೆ ಸುರಕ್ಷಿತವಾಗಿ ಸೇರುವತನಕ ನಾನು ಸೊದೋಮನ್ನು ನಾಶಗೊಳಿಸಲಾಗುವುದಿಲ್ಲ” ಎಂದು ಹೇಳಿದನು. (ಆ ಊರಿಗೆ ಚೋಗರ್ ಎಂದು ಕರೆಯಲಾಯಿತು; ಯಾಕೆಂದರೆ ಅದು ಚಿಕ್ಕ ಊರು.)
ಆದಿಕಾಂಡ 19 : 23 (ERVKN)
ಸೊದೋಮ್ ಮತ್ತು ಗೊಮೋರ ಪಟ್ಟಣಗಳ ನಾಶನ ಸೂರ್ಯೋದಯವಾಗುವಷ್ಟರಲ್ಲಿ ಲೋಟನು ಚೋಗರಿಗೆ ಪ್ರವೇಶಿಸುತ್ತಿದ್ದನು.
ಆದಿಕಾಂಡ 19 : 24 (ERVKN)
ಆಗ ಯೆಹೋವನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಮೇಲೆ ಆಕಾಶದಿಂದ ಉರಿಯುವ ಗಂಧಕದ ಮಳೆಯನ್ನು ಸುರಿಸಿದನು.
ಆದಿಕಾಂಡ 19 : 25 (ERVKN)
ಹೀಗೆ ಯೆಹೋವನು ಆ ಎರಡು ನಗರಗಳನ್ನು ನಾಶಮಾಡಿದನು; ಇಡೀ ಕಣಿವೆಯನ್ನೂ ಅದರಲ್ಲಿ ಬೆಳೆಯುತ್ತಿದ್ದ ಸಸ್ಯಗಳನ್ನೂ ನಗರಗಳಲ್ಲಿದ್ದ ಎಲ್ಲಾ ಜನರನ್ನೂ ನಾಶಮಾಡಿದನು.
ಆದಿಕಾಂಡ 19 : 26 (ERVKN)
ಅವರು ಓಡಿಹೋಗುತ್ತಿರುವಾಗ ಲೋಟನ ಹೆಂಡತಿ ನಗರದ ಕಡೆಗೆ ಹಿಂತಿರುಗಿ ನೋಡಿದಳು. ಆ ಕೂಡಲೇ ಆಕೆಯು ಉಪ್ಪಿನ ಕಂಬವಾದಳು.
ಆದಿಕಾಂಡ 19 : 27 (ERVKN)
ಅಂದು ಮುಂಜಾನೆ ಅಬ್ರಹಾಮನು ಎದ್ದು ತಾನು ಯೆಹೋವನ ಮುಂದೆ ನಿಂತುಕೊಂಡಿದ್ದ ಸ್ಥಳಕ್ಕೆ ಹೋದನು.
ಆದಿಕಾಂಡ 19 : 28 (ERVKN)
ಅಬ್ರಹಾಮನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಕಡೆಗೂ ಕಣಿವೆ ಪ್ರದೇಶದ ಕಡೆಗೂ ನೋಡಿದಾಗ ಆ ಪ್ರದೇಶದಿಂದ ಹೊಗೆ ಮೇಲೇರುತ್ತಿರುವುದನ್ನು ಕಂಡನು; ಧಗಧಗಿಸುವ ಬೆಂಕಿಯಿಂದ ಬರುವ ಹೊಗೆಯಂತೆ ಅದು ಕಂಡಿತು.
ಆದಿಕಾಂಡ 19 : 29 (ERVKN)
ದೇವರು ಆ ಸೀಮೆಯ ನಗರಗಳನ್ನು ನಾಶಮಾಡಿದರೂ ಅಬ್ರಹಾಮನನ್ನು ಜ್ಞಾಪಿಸಿಕೊಂಡು ಲೋಟನ ಪ್ರಾಣವನ್ನು ಉಳಿಸಿದನು; ಆದರೆ ಲೋಟನು ವಾಸಿಸುತ್ತಿದ್ದ ನಗರವನ್ನು ನಾಶಮಾಡಿದನು.
ಆದಿಕಾಂಡ 19 : 30 (ERVKN)
ಲೋಟ ಮತ್ತು ಅವನ ಹೆಣ್ಣುಮಕ್ಕಳು ಚೋಗರ್ ಊರಿನಲ್ಲಿ ವಾಸಮಾಡಿಕೊಂಡಿರಲು ಲೋಟನಿಗೆ ಹೆದರಿಕೆಯಾಯಿತು. ಆದ್ದರಿಂದ ಅವನು ಮತ್ತು ಅವನ ಹೆಣ್ಣುಮಕ್ಕಳು ಬೆಟ್ಟಪ್ರದೇಶಕ್ಕೆ ಹೋಗಿ ಗುಹೆಯೊಂದರಲ್ಲಿ ವಾಸಿಸತೊಡಗಿದರು.
ಆದಿಕಾಂಡ 19 : 31 (ERVKN)
ಒಂದು ದಿನ ಹಿರಿಯ ಮಗಳು ತನ್ನ ತಂಗಿಗೆ, “ಭೂಲೋಕದಲ್ಲೆಲ್ಲಾ ಸ್ತ್ರೀಯರೂ ಪುರುಷರೂ ಮದುವೆಯಾಗುತ್ತಾರೆ. ಆದರೆ ಇಲ್ಲಿ ನಾವು ಮದುವೆಯಾಗಲು ಯಾವ ಗಂಡಸರೂ ಇಲ್ಲ. ನಮ್ಮ ತಂದೆಗೂ ವಯಸ್ಸಾಗಿದೆ.
ಆದಿಕಾಂಡ 19 : 32 (ERVKN)
ಆದರೆ ನಾವು ಮಕ್ಕಳನ್ನು ನಮ್ಮ ತಂದೆಯಿಂದಲೇ ಪಡೆದುಕೊಳ್ಳೋಣ. ಆಗ ನಮ್ಮ ಕುಟುಂಬ ಕೊನೆಗೊಳ್ಳುವುದಿಲ್ಲ. ನಮ್ಮ ತಂದೆಯನ್ನು ಮತ್ತನನ್ನಾಗಿ ಮಾಡಿ ಅವನೊಂದಿಗೆ ಮಲಗಿಕೊಳ್ಳೋಣ” ಎಂದು ಹೇಳಿದಳು.
ಆದಿಕಾಂಡ 19 : 33 (ERVKN)
ಆ ರಾತ್ರಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅಮಲೇರಿಸಿದರು. ಬಳಿಕ ಹಿರಿಯ ಮಗಳು ತನ್ನ ತಂದೆಯ ಹಾಸಿಗೆಗೆ ಹೋಗಿ ಅವನೊಂದಿಗೆ ಮಲಗಿಕೊಂಡಳು. ಲೋಟನು ಮತ್ತನಾಗಿದ್ದುದರಿಂದ ಆಕೆ ಅವನೊಂದಿಗೆ ಮಲಗಿಕೊಂಡದ್ದು ಅವನಿಗೆ ತಿಳಿಯಲಿಲ್ಲ.
ಆದಿಕಾಂಡ 19 : 34 (ERVKN)
ಮರುದಿನ, ಹಿರಿಯ ಮಗಳು ತನ್ನ ತಂಗಿಗೆ, “ಕಳೆದ ರಾತ್ರಿ ನಾನು ನನ್ನ ತಂದೆಯೊಂದಿಗೆ ಮಲಗಿಕೊಂಡೆ. ಈ ರಾತ್ರಿಯೂ ಅವನನ್ನು ದ್ರಾಕ್ಷಾರಸ ಕುಡಿಸಿ ಅಮಲೇರಿಸೋಣ. ಆಮೇಲೆ ನೀನು ಹಾಸಿಗೆಯ ಮೇಲೆ ಅವನೊಂದಿಗೆ ಮಲಗಿಕೊಳ್ಳಬಹುದು. ಹೀಗೆ ನಾವು ಮಕ್ಕಳನ್ನು ನಮ್ಮ ತಂದೆಯಿಂದಲೇ ಪಡೆದುಕೊಳ್ಳೋಣ” ಎಂದು ಹೇಳಿದಳು.
ಆದಿಕಾಂಡ 19 : 35 (ERVKN)
ಆ ರಾತ್ರಿಯೂ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅಮಲೇರಿಸಿದರು. ಆಮೇಲೆ ಚಿಕ್ಕಮಗಳು ಅವನ ಹಾಸಿಗೆಗೆ ಹೋಗಿ ಅವನೊಂದಿಗೆ ಮಲಗಿಕೊಂಡಳು. ಆಕೆ ಮಲಗಿಕೊಂಡದ್ದು ಲೋಟನಿಗೆ ತಿಳಿಯಲಿಲ್ಲ.
ಆದಿಕಾಂಡ 19 : 36 (ERVKN)
ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದಲೇ ಗರ್ಭಧರಿಸಿದರು.
ಆದಿಕಾಂಡ 19 : 37 (ERVKN)
ಹಿರಿಯ ಮಗಳು ಗಂಡುಮಗನನ್ನು ಹೆತ್ತಳು. ಆಕೆ ಅವನಿಗೆ ಮೋವಾಬ್ ಎಂದು ಹೆಸರಿಟ್ಟಳು. ಈಗ ಜೀವಿಸುತ್ತಿರುವ ಎಲ್ಲಾ ಮೋವಾಬ್ಯರಿಗೆ ಮೋವಾಬನೇ ಮೂಲಪುರುಷ.
ಆದಿಕಾಂಡ 19 : 38 (ERVKN)
ಚಿಕ್ಕಮಗಳು ಸಹ ಗಂಡುಮಗುವನ್ನು ಹೆತ್ತಳು. ಆಕೆ ತನ್ನ ಮಗನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಈಗ ಜೀವಿಸುತ್ತಿರುವ ಅಮ್ಮೋನಿಯರಿಗೆ ಬೆನಮ್ಮಿಯೇ ಮೂಲಪುರುಷ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38