ಯೆಹೆಜ್ಕೇಲನು 8 : 1 (ERVKN)
ದೇವಾಲಯದಲ್ಲಿನ ಪಾಪಕೃತ್ಯಗಳು ಒಂದು ದಿವಸ ನಾನು ನನ್ನ ಮನೆಯಲ್ಲಿ ಕುಳಿತುಕೊಂಡಿದ್ದೆನು. ಯೆಹೂದದ ನಾಯಕರು ನನ್ನ ಮುಂದೆ ಕುಳಿತಿದ್ದರು. ಇದು ಸೆರೆಹಿಡಿದ ಆರನೇ ವರ್ಷದ, ಆರನೆಯ ತಿಂಗಳಿನ, ಐದನೇ ದಿವಸವಾಗಿತ್ತು. ಫಕ್ಕನೆ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ನಾನು ಪರವಶನಾದೆನು.
ಯೆಹೆಜ್ಕೇಲನು 8 : 2 (ERVKN)
ಮನುಷ್ಯನಂತೆ ಕಾಣುತ್ತಿದ್ದ ರೂಪವೊಂದನ್ನು ನಾನು ನೋಡಿದೆನು. ಅದರ ಸೊಂಟದಿಂದಿಡಿದು ಕೆಳಭಾಗದವರೆಗೆ ಬೆಂಕಿಯಂತೆ ಕಾಣುತ್ತಿತ್ತು. ಸೊಂಟದಿಂದ ಮೇಲ್ಭಾಗದವರೆಗೆ ಕಾದಲೋಹದಂತೆ ಹೊಳೆಯುತ್ತಿತ್ತು.
ಯೆಹೆಜ್ಕೇಲನು 8 : 3 (ERVKN)
ಆಗ ಅದು ಕೈಯಂತಿದ್ದ ಒಂದನ್ನು ಚಾಚಿ ನನ್ನ ತಲೆಯ ಕೂದಲನ್ನು ಹಿಡಿದುಕೊಂಡಿತು. ಬಳಿಕ ಆತ್ಮವು ನನ್ನನ್ನು ಮೇಲಕ್ಕೆ ಎತ್ತಿ ದಿವ್ಯದರ್ಶನದಲ್ಲಿ ಜೆರುಸಲೇಮಿಗೆ ಕೊಂಡೊಯ್ಯಿತು. ಅದು ನನ್ನನ್ನು ಒಳದ್ವಾರಕ್ಕೆ ಕೊಂಡೊಯ್ಯಿತು. ಇದು ಉತ್ತರ ದಿಕ್ಕಿನಲ್ಲಿತ್ತು. ದೇವರನ್ನು ಸಿಟ್ಟಿಗೆಬ್ಬಿಸುವ ವಿಗ್ರಹವು ಈ ದ್ವಾರದ ಬಳಿ ಇತ್ತು.
ಯೆಹೆಜ್ಕೇಲನು 8 : 4 (ERVKN)
ಇಸ್ರೇಲಿನ ದೇವರ ಮಹಿಮೆಯು ಅಲ್ಲಿ ಇತ್ತು. ಆ ಮಹಿಮೆ ನಾನು ಕೆಬಾರ್ ಕಾಲುವೆಯ ಪಕ್ಕದ ಕಣಿವೆಯಲ್ಲಿ ಕಂಡ ದರ್ಶನದಂತಿತ್ತು.
ಯೆಹೆಜ್ಕೇಲನು 8 : 5 (ERVKN)
ದೇವರು ನನ್ನೊಂದಿಗೆ ಮಾತನಾಡುತ್ತಾ, “ನರಪುತ್ರನೇ, ಉತ್ತರ ದಿಕ್ಕಿಗೆ ನೋಡು” ಎಂದು ಹೇಳಿದನು. ನಾನು ಉತ್ತರ ದಿಕ್ಕಿಗೆ ನೋಡಿದಾಗ, ದೇವರನ್ನು ರೋಷಗೊಳಿಸುವ ವಿಗ್ರಹವು ಯಜ್ಞವೇದಿಕೆಯ ದ್ವಾರದ ಉತ್ತರ ದಿಕ್ಕಿನಲ್ಲಿರುವ ಪ್ರವೇಶದ ಸ್ಥಳದಲ್ಲಿ ಇತ್ತು.
ಯೆಹೆಜ್ಕೇಲನು 8 : 6 (ERVKN)
ಆಗ ದೇವರು ನನಗೆ, “ನರಪುತ್ರನೇ, ನನ್ನನ್ನು ನನ್ನ ಆಲಯದಿಂದ ಓಡಿಸಲು ಇಲ್ಲಿ ಇಸ್ರೇಲರು ಮಾಡುತ್ತಿರುವ ಭಯಂಕರವಾದ ಕೃತ್ಯಗಳು ನಿನಗೆ ಕಾಣುತ್ತಿಲ್ಲವೇ? ಆದರೆ ಇದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯಗಳನ್ನು ನೀನು ನೋಡುವೆ” ಎಂದು ಹೇಳಿದನು.
ಯೆಹೆಜ್ಕೇಲನು 8 : 7 (ERVKN)
ಬಳಿಕ ಆತನು ನನ್ನನ್ನು ಅಂಗಳದ ದ್ವಾರಕ್ಕೆ ತಂದನು. ನಾನು ಗೋಡೆಯಲ್ಲಿದ್ದ ಒಂದು ರಂಧ್ರವನ್ನು ಕಂಡೆನು.
ಯೆಹೆಜ್ಕೇಲನು 8 : 8 (ERVKN)
ಆಗ ದೇವರು ನನಗೆ, “ನರಪುತ್ರನೇ, ಗೋಡೆಯ ರಂಧ್ರವನ್ನು ಅಗೆದು ದೊಡ್ಡದನ್ನಾಗಿ ಮಾಡು” ಎಂದು ಹೇಳಿದನು. ನಾನು ಗೋಡೆಯನ್ನು ಅಗೆದೆನು. ಆಗ ಬಾಗಿಲೊಂದು ನನಗೆ ಕಾಣಿಸಿತು.
ಯೆಹೆಜ್ಕೇಲನು 8 : 9 (ERVKN)
ಆಗ ದೇವರು ನನಗೆ, “ಜನರು ಇಲ್ಲಿ ಮಾಡುತ್ತಿರುವ ಅಸಹ್ಯವಾದ ದುಷ್ಕೃತ್ಯಗಳನ್ನು ಹೋಗಿ ನೋಡು” ಎಂದು ಹೇಳಿದನು.
ಯೆಹೆಜ್ಕೇಲನು 8 : 10 (ERVKN)
ನಾನು ಒಳಗೆ ಹೋದಾಗ, ಗೋಡೆಗಳ ಮೇಲೆಲ್ಲಾ ಕೆತ್ತಲ್ಪಟ್ಟಿದ್ದ ಎಲ್ಲಾ ಬಗೆಯ ಕ್ರಿಮಿಕೀಟಗಳನ್ನು ಮತ್ತು ಅಸಹ್ಯಕರವಾದ ಪ್ರಾಣಿಗಳ ವಿಗ್ರಹಗಳನ್ನು ಕಂಡೆನು.
ಯೆಹೆಜ್ಕೇಲನು 8 : 11 (ERVKN)
ನಾನು ಅಲ್ಲಿ ಶಾಫಾನನ ಮಗನಾದ ಯಾಜನ್ಯನು ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಈ ಚಿತ್ರಗಳ ಮತ್ತು ವಿಗ್ರಹಗಳ ಮುಂದೆ ನಿಂತಿರುವುದನ್ನು ಕಂಡೆನು. ಪ್ರತಿಯೊಬ್ಬನು ಒಂದು ಧೂಪಾರತಿಯನ್ನು ಹಿಡಿದುಕೊಂಡಿದ್ದನು. ಆ ಧೂಪದ ಹೊಗೆಯು ಆಕಾಶದವರೆಗೂ ಏರಿ ಹೋಗುತ್ತಿತ್ತು.
ಯೆಹೆಜ್ಕೇಲನು 8 : 12 (ERVKN)
ಆಗ ದೇವರು ನನಗೆ, “ನರಪುತ್ರನೇ, ಇಸ್ರೇಲಿನ ಹಿರಿಯರು ಕತ್ತಲೆಯಲ್ಲಿ ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ವಿಶೇಷ ಕೋಣಿಯಿದೆ. ಅದರೊಳಗೆ ಅವರ ದೇವರ ವಿಗ್ರಹಗಳನ್ನಿಟ್ಟುಕೊಂಡಿದ್ದಾರೆ. ಅವರು, ‘ಯೆಹೋವನು ನಮ್ಮನ್ನು ನೋಡುವದಿಲ್ಲ. ಆತನು ಈ ದೇಶವನ್ನು ತೊರೆದುಬಿಟ್ಟಿದ್ದಾನೆ’ ಎಂದು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದಾರೆ” ಎಂದನು.
ಯೆಹೆಜ್ಕೇಲನು 8 : 13 (ERVKN)
ಬಳಿಕ ದೇವರು ನನಗೆ, “ನೀನು ನನ್ನೊಂದಿಗೆ ಬಂದರೆ, ಜನರು ಮಾಡುವ ಇನ್ನೂ ಭಯಂಕರ ಸಂಗತಿಗಳನ್ನು ನೀನು ನೋಡುವೆ” ಎಂದು ಹೇಳಿದನು.
ಯೆಹೆಜ್ಕೇಲನು 8 : 14 (ERVKN)
ಆಗ ದೇವರು ನನ್ನನ್ನು ಯೆಹೋವನಾಲಯದ ಉತ್ತರ ದ್ವಾರದ ಪ್ರವೇಶ ಸ್ಥಳಕ್ಕೆ ನಡೆಸಿದನು. ಅಲ್ಲಿ ಹೆಂಗಸರು ಕುಳಿತುಕೊಂಡು ರೋಧಿಸುವುದನ್ನು ನೋಡಿದೆನು. ಅವರು ತಮ್ಮೂಜ್ ಎಂಬ ಸುಳ್ಳುದೇವತೆಗೋಸ್ಕರ ದುಃಖಪಡುತ್ತಿದ್ದರು.
ಯೆಹೆಜ್ಕೇಲನು 8 : 15 (ERVKN)
ದೇವರು ನನಗೆ, “ನರಪುತ್ರನೇ, ಈ ದುರಾಚಾರಗಳನ್ನು ನೋಡಿದ್ದೀಯಾ? ನನ್ನೊಂದಿಗೆ ಬಾ, ಇವುಗಳಿಗಿಂತ ಇನ್ನೂ ಹೆಚ್ಚಿನ ಭಯಂಕರ ಸಂಗತಿಗಳನ್ನು ನಿನಗೆ ತೋರಿಸುವೆನು” ಎಂದನು.
ಯೆಹೆಜ್ಕೇಲನು 8 : 16 (ERVKN)
ದೇವರು ನನ್ನನ್ನು ಯೆಹೋವನಾಲಯದ ಒಳಗಿನ ಅಂಗಳಕ್ಕೆ ಕರಕೊಂಡು ಹೋದನು. ಯೆಹೋವನಾಲಯದ ಪ್ರವೇಶ ಸ್ಥಳದಲ್ಲಿ ಮಂಟಪಕ್ಕೂ ಯಜ್ಞವೇದಿಕೆಗೂ ನಡುವೆ ಪವಿತ್ರ ಸ್ಥಳದ ಕಡೆಗೆ ಬೆನ್ನು ಮಾಡಿಕೊಂಡಿದ್ದ ಇಪ್ಪತ್ತೈದು ಮಂದಿ ಇದ್ದರು. ಪೂರ್ವಕ್ಕೆ ಮುಖಮಾಡಿಕೊಂಡಿದ್ದ ಅವರು ಸೂರ್ಯನನ್ನು ಪೂಜಿಸುತ್ತಿದ್ದರು.
ಯೆಹೆಜ್ಕೇಲನು 8 : 17 (ERVKN)
ಆಗ ದೇವರು ನನಗೆ, “ನರಪುತ್ರನೇ, ಅವರು ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಯೆಹೂದದ ಜನರಿಗೆ ತಾವು ಮಾಡುತ್ತಿರುವ ಈ ಭಯಂಕರ ಕೃತ್ಯಗಳು ಸಾಕಾಗಿಲ್ಲ. ಇಡೀ ದೇಶವು ದುಷ್ಟತನದಿಂದ ತುಂಬಿಹೋಗಿದೆ. ಅವರು ನನ್ನನ್ನು ಇನ್ನೂ ಹೆಚ್ಚಿಗೆ ಕೋಪಗೊಳಿಸುತ್ತಿದ್ದಾರೆ. ವಿಗ್ರಹಾರಾಧನೆಯ ಪ್ರತೀಕವಾಗಿ ತಮ್ಮ ಮೂಗುಗಳಿಗೆ ಎಳೆಯ ಕೊಂಬೆಗಳನ್ನು ಸೋಕಿಸುತ್ತಾರೆ.
ಯೆಹೆಜ್ಕೇಲನು 8 : 18 (ERVKN)
ಅವರಿಗೆ ನಾನು ನನ್ನ ರೌದ್ರವನ್ನು ತೋರಿಸುವೆನು. ಅವರಿಗೆ ನಾನು ಕರುಣೆಯನ್ನು ಎಂದಿಗೂ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದೂ ಇಲ್ಲ. ಅವರು ನನ್ನನ್ನು ಕೂಗುವರು, ಆದರೆ ನಾನು ಅವರಿಗೆ ಕಿವಿಗೊಡುವುದಿಲ್ಲ.”

1 2 3 4 5 6 7 8 9 10 11 12 13 14 15 16 17 18