ವಿಮೋಚನಕಾಂಡ 9 : 1 (ERVKN)
ಹೊಲದ ಪ್ರಾಣಿಗಳ ವ್ಯಾಧಿ ಆಗ ಯೆಹೋವನು ಮೋಶೆಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವನು ಹೇಳುವುದೇನೆಂದರೆ, ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ.
ವಿಮೋಚನಕಾಂಡ 9 : 2 (ERVKN)
ನೀನು ಅವರನ್ನು ಬಿಡದೆ ಇನ್ನೂ ತಡೆದರೆ,
ವಿಮೋಚನಕಾಂಡ 9 : 3 (ERVKN)
ನಾನು ಕೈಯೆತ್ತಿ ಹೊಲಗಳಲ್ಲಿರುವ ನಿನ್ನ ಪಶುಗಳನ್ನೂ ನಿನ್ನ ಎಲ್ಲಾ ಕುದುರೆಗಳನ್ನೂ ಕತ್ತೆಗಳನ್ನೂ ಒಂಟೆಗಳನ್ನೂ ದನಕರುಗಳನ್ನೂ ಕುರಿಗಳನ್ನೂ ಘೋರವ್ಯಾದಿಯಿಂದ ಸಾಯಿಸುವೆನು.
ವಿಮೋಚನಕಾಂಡ 9 : 4 (ERVKN)
ಆದರೆ ಇಸ್ರೇಲರ ಪಶುಗಳಿಗೂ ಈಜಿಪ್ಟಿನವರ ಪಶುಗಳಿಗೂ ವ್ಯತ್ಯಾಸ ಮಾಡುವೆನು. ಇಸ್ರೇಲರ ಯಾವ ಪಶುವೂ ಸಾಯುವುದಿಲ್ಲ.
ವಿಮೋಚನಕಾಂಡ 9 : 5 (ERVKN)
ಇದು ನಡೆಯತಕ್ಕ ಕಾಲವನ್ನು ನಿರ್ಣಯಿಸಿ ನಾಳೆಯೇ ಇದನ್ನು ಕಾರ್ಯರೂಪಕ್ಕೆ ತರುವೆನು’ ಎಂದು ಹೇಳಬೇಕು” ಅಂದನು.
ವಿಮೋಚನಕಾಂಡ 9 : 6 (ERVKN)
ಮರುದಿನ ಯೆಹೋವನು ಈ ಕಾರ್ಯವನ್ನು ಮಾಡಿದನು. ಈಜಿಪ್ಟಿನ ಹೊಲಗಳಲ್ಲಿದ್ದ ಪಶುಗಳೆಲ್ಲಾ ಸತ್ತುಹೋದವು; ಆದರೆ ಇಸ್ರೇಲರಿಗೆ ಸೇರಿದ ಯಾವ ಪಶುವೂ ಸಾಯಲಿಲ್ಲ.
ವಿಮೋಚನಕಾಂಡ 9 : 7 (ERVKN)
ಇಸ್ರೇಲರ ಯಾವ ಪಶುವಾದರೂ ಸತ್ತಿದೆಯೋ ಎಂದು ತಿಳಿದುಕೊಳ್ಳಲು ಫರೋಹನು ಜನರನ್ನು ಕಳುಹಿಸಿದನು. ಇಸ್ರೇಲರ ಪಶುಗಳಲ್ಲಿ ಒಂದಾದರೂ ಸತ್ತಿರಲಿಲ್ಲ. ಆದರೂ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡದ್ದರಿಂದ ಇಸ್ರೇಲರನ್ನು ಹೋಗಗೊಡಿಸಲಿಲ್ಲ.
ವಿಮೋಚನಕಾಂಡ 9 : 8 (ERVKN)
ಹುಣ್ಣುಗಳು ಯೆಹೋವನು ಮೋಶೆ ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬ ತೆಗೆದುಕೊಳ್ಳಿರಿ. ಮೋಶೆಯು ಅದನ್ನು ಫರೋಹನ ಮುಂದೆ ಗಾಳಿಯಲ್ಲಿ ತೂರಲಿ.
ವಿಮೋಚನಕಾಂಡ 9 : 9 (ERVKN)
ಅದು ಧೂಳಾಗಿ ಈಜಿಪ್ಟಿನಲ್ಲೆಲ್ಲಾ ಹರಡಿಕೊಳ್ಳುವುದು; ಈ ಧೂಳು ಈಜಿಪ್ಟಿನಲ್ಲಿರುವ ಮನುಷ್ಯರನ್ನಾಗಲಿ ಪಶುಗಳನ್ನಾಗಲಿ ತಾಗಿದಾಗ ಅವರ ಚರ್ಮದ ಮೇಲೆ ಹುಣ್ಣುಗಳಾಗುತ್ತವೆ” ಎಂದು ಹೇಳಿದನು.
ವಿಮೋಚನಕಾಂಡ 9 : 10 (ERVKN)
ಆದ್ದರಿಂದ ಮೋಶೆ ಆರೋನರು ಒಲೆಯಿಂದ ಬೂದಿಯನ್ನು ತೆಗೆದುಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡರು. ಅವರು ಬೂದಿಯನ್ನು ಗಾಳಿಯಲ್ಲಿ ತೂರಿದಾಗ ಜನರ ಮೇಲೂ ಪ್ರಾಣಿಗಳ ಮೇಲೂ ಹುಣ್ಣುಗಳಾಗತೊಡಗಿದವು.
ವಿಮೋಚನಕಾಂಡ 9 : 11 (ERVKN)
ಮೋಶೆಯ ಈ ಕಾರ್ಯವನ್ನು ವಿಫಲಗೊಳಿಸಲು ಮಾಂತ್ರಿಕರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಈಜಿಪ್ಟಿನ ಎಲ್ಲಾ ಜನರಂತೆ ಮಾಂತ್ರಿಕರ ಮೇಲೆಯೂ ಹುಣ್ಣುಗಳಾದವು.
ವಿಮೋಚನಕಾಂಡ 9 : 12 (ERVKN)
ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ವಿಮೋಚನಕಾಂಡ 9 : 13 (ERVKN)
ಆಲಿಕಲ್ಲು ಬಳಿಕ ಯೆಹೋವನು ಮೋಶೆಗೆ, “ಮುಂಜಾನೆ ಎದ್ದು ಫರೋಹನ ಬಳಿಗೆ ಹೋಗಿ, ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನನ್ನನ್ನು ಆರಾಧಿಸಲು ನನ್ನ ಜನರು ಹೋಗಲಿ!
ವಿಮೋಚನಕಾಂಡ 9 : 14 (ERVKN)
ಇಲ್ಲವಾದರೆ, ನಾನು ನಿನ್ನ ವಿರುದ್ಧವಾಗಿಯೂ ನಿನ್ನ ಅಧಿಕಾರಿಗಳ ವಿರುದ್ಧವಾಗಿಯೂ ನಿನ್ನ ಜನರ ವಿರುದ್ಧವಾಗಿಯೂ ನನ್ನ ಪೂರ್ಣಶಕ್ತಿಯಿಂದ ಉಪದ್ರವಗಳನ್ನು ಕಳುಹಿಸುವೆನು. ಆಗ ನನ್ನಂಥ ದೇವರು ಲೋಕದಲ್ಲಿ ಇಲ್ಲವೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ.
ವಿಮೋಚನಕಾಂಡ 9 : 15 (ERVKN)
ನಾನು ನನ್ನ ಶಕ್ತಿಯಿಂದ ನಿನಗೂ ನಿನ್ನ ಜನರಿಗೂ ವ್ಯಾಧಿಯನ್ನು ಬರಮಾಡಿ ನಿಮ್ಮನ್ನು ನಿರ್ಮೂಲ ಮಾಡಬಹುದಿತ್ತು.
ವಿಮೋಚನಕಾಂಡ 9 : 16 (ERVKN)
ಆದರೆ, ನನ್ನ ಶಕ್ತಿಯನ್ನು ನಿನಗೆ ತೋರಿಸಬೇಕೆಂದೂ ಲೋಕದ ಜನರೆಲ್ಲರು ನನ್ನ ಬಗ್ಗೆ ತಿಳಿದುಕೊಳ್ಳಬೇಕೆಂದೂ ನಾನು ನಿನ್ನನ್ನು ಇನ್ನೂ ಉಳಿಸಿದ್ದೇನೆ.
ವಿಮೋಚನಕಾಂಡ 9 : 17 (ERVKN)
ಆದರೂ ನೀನು ನನ್ನ ಜನರಿಗೆ ವಿರುದ್ಧವಾಗಿರುವೆ; ಅವರಿಗೆ ಸ್ವತಂತ್ರವನ್ನು ಕೊಡದಿರುವೆ.
ವಿಮೋಚನಕಾಂಡ 9 : 18 (ERVKN)
ಆದ್ದರಿಂದ ನಾಳೆ ಇದೇ ಸಮಯಕ್ಕೆ ಸರಿಯಾಗಿ ಭೀಕರವಾದ ಆಲಿಕಲ್ಲಿನ ಮಳೆಯನ್ನು ಸುರಿಸುವೆನು. ಈಜಿಪ್ಟ್ ರಾಜ್ಯವು ಸ್ಥಾಪನೆಯಾದಂದಿನಿಂದ ಇಂಥ ಆಲಿಕಲ್ಲಿನ ಮಳೆ ಬಿದ್ದಿಲ್ಲ.
ವಿಮೋಚನಕಾಂಡ 9 : 19 (ERVKN)
ಈಗ ನೀನು ನಿನ್ನ ಪಶುಗಳನ್ನೂ ನಿನ್ನ ಹೊಲದಲ್ಲಿರುವ ನಿನ್ನ ಪ್ರತಿಯೊಂದನ್ನೂ ಸುರಕ್ಷಿತವಾದ ಸ್ಥಳದಲ್ಲಿ ಇರಿಸಬೇಕು. ಮನೆಯೊಳಗಿರದೆ ಹೊಲದಲ್ಲಿರುವ ಮನುಷ್ಯರೂ ಪಶುಗಳೂ ಆಲಿಕಲ್ಲಿನ ಮಳೆಗೆ ಸಿಕ್ಕಿಕೊಂಡು ಸಾಯುವರು’ ಎಂದು ಹೇಳಬೇಕು” ಅಂದನು.
ವಿಮೋಚನಕಾಂಡ 9 : 20 (ERVKN)
ಫರೋಹನ ಅಧಿಕಾರಿಗಳಲ್ಲಿ ಕೆಲವರು ಯೆಹೋವನ ಸಂದೇಶಕ್ಕೆ ಕಿವಿಗೊಟ್ಟು ತಮ್ಮ ಎಲ್ಲಾ ಪಶುಗಳನ್ನೂ ಗುಲಾಮರನ್ನೂ ಮನೆಯೊಳಗೆ ಸೇರಿಸಿಕೊಂಡರು.
ವಿಮೋಚನಕಾಂಡ 9 : 21 (ERVKN)
ಆದರೆ ಇತರರು ಯೆಹೋವನ ಸಂದೇಶವನ್ನು ನಿರ್ಲಕ್ಷ್ಯಮಾಡಿ ತಮ್ಮ ಎಲ್ಲಾ ಗುಲಾಮರನ್ನೂ ಪಶುಗಳನ್ನೂ ಹೊಲಗಳಲ್ಲಿಯೇ ಬಿಟ್ಟರು.
ವಿಮೋಚನಕಾಂಡ 9 : 22 (ERVKN)
ಯೆಹೋವನು ಮೋಶೆಗೆ, “ನಿನ್ನ ತೋಳುಗಳನ್ನು ಆಕಾಶದ ಕಡೆಗೆ ಚಾಚು; ಆಗ ಈಜಿಪ್ಟಿನಲ್ಲೆಲ್ಲಾ ಆಲಿಕಲ್ಲಿನ ಮಳೆ ಬೀಳತೊಡಗುವುದು. ಆಲಿಕಲ್ಲಿನ ಮಳೆಯು ಜನರ, ಪ್ರಾಣಿಗಳ ಮತ್ತು ಈಜಿಪ್ಟಿನ ಹೊಲಗಳಲ್ಲಿರುವ ಎಲ್ಲಾ ಸಸ್ಯಗಳ ಮೇಲೆ ಬೀಳುವುದು” ಎಂದು ಹೇಳಿದನು.
ವಿಮೋಚನಕಾಂಡ 9 : 23 (ERVKN)
ಆದ್ದರಿಂದ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದನು. ಕೂಡಲೇ ಯೆಹೋವನು, ಗುಡುಗು ಮಿಂಚುಗಳಿಂದ ಕೂಡಿದ ಆಲಿಕಲ್ಲಿನ ಮಳೆಯನ್ನು ಈಜಿಪ್ಟಿನಲ್ಲೆಲ್ಲಾ ಸುರಿಸಿದನು.
ವಿಮೋಚನಕಾಂಡ 9 : 24 (ERVKN)
ಆಲಿಕಲ್ಲಿನ ಮಳೆಯು ಭೀಕರವಾಗಿತ್ತು, ಝಗಝಗಿಸುವ ಮಿಂಚೂ ಅದರೊಂದಿಗಿತ್ತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಇಂಥ ಭೀಕರವಾದ ಆಲಿಕಲ್ಲಿನ ಮಳೆ ಎಂದೂ ಆಗಿರಲಿಲ್ಲ.
ವಿಮೋಚನಕಾಂಡ 9 : 25 (ERVKN)
ಈಜಿಪ್ಟಿನ ಹೊಲಗಳಲ್ಲಿದ್ದ ಪ್ರತಿಯೊಂದನ್ನೂ ಬಿರುಗಾಳಿ ನಾಶಮಾಡಿತು. ಆಲಿಕಲ್ಲು ಜನರನ್ನೂ ಪ್ರಾಣಿಗಳನ್ನೂ ಸಸ್ಯಗಳನ್ನೂ ನಾಶಮಾಡಿತು; ಹೊಲಗಳಲ್ಲಿದ್ದ ಎಲ್ಲಾ ಮರಗಳನ್ನು ಮುರಿದುಹಾಕಿತು.
ವಿಮೋಚನಕಾಂಡ 9 : 26 (ERVKN)
ಇಸ್ರೇಲರು ವಾಸವಾಗಿದ್ದ ಗೋಷೆನ್ ಪ್ರದೇಶದಲ್ಲಿ ಮಾತ್ರ ಆಲಿಕಲ್ಲಿನ ಮಳೆಯಾಗಲಿಲ್ಲ.
ವಿಮೋಚನಕಾಂಡ 9 : 27 (ERVKN)
ಫರೋಹನು ಮೋಶೆ ಆರೋನರನ್ನು ಕರೆಸಿ ಅವರಿಗೆ, “ಈ ಸಾರಿ ನಾನು ಪಾಪಮಾಡಿದ್ದೇನೆ. ಯೆಹೋವನೇ ನೀತಿವಂತನು. ನಾನೂ ನನ್ನ ಜನರೂ ದೋಷಿಗಳಾಗಿದ್ದೇವೆ.
ವಿಮೋಚನಕಾಂಡ 9 : 28 (ERVKN)
ಭಯಂಕರವಾದ ಗುಡುಗೂ ಆಲಿಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸಬೇಕೆಂದು ದೇವರನ್ನು ಪ್ರಾರ್ಥಿಸಿರಿ; ನಿಮ್ಮನ್ನು ಈ ದೇಶದಿಂದ ಕಳುಹಿಸಿಕೊಡುತ್ತೇನೆ; ತಡೆಯುವುದಿಲ್ಲ” ಎಂದು ಹೇಳಿದನು.
ವಿಮೋಚನಕಾಂಡ 9 : 29 (ERVKN)
ಮೋಶೆಯು ಫರೋಹನಿಗೆ, “ನಾನು ಪಟ್ಟಣದಿಂದಾಚೆಗೆ ಹೋದಕೂಡಲೇ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸುವೆನು, ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋಗುವವು. ಭೂಲೋಕವು ಯೆಹೋವನ ಅಧೀನದಲ್ಲಿದೆಯೆಂದು ಆಗ ನೀನು ತಿಳಿದುಕೊಳ್ಳುವೆ.
ವಿಮೋಚನಕಾಂಡ 9 : 30 (ERVKN)
ಆದರೆ ನೀನಾಗಲಿ ನಿನ್ನ ಅಧಿಕಾರಿಗಳಾಗಲಿ ಇನ್ನೂ ದೇವರಿಗೆ ಭಯಪಡುವುದಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಹೇಳಿದನು.
ವಿಮೋಚನಕಾಂಡ 9 : 31 (ERVKN)
ಅಗಸೆಗೆ ಮೊಗ್ಗೆಯೂ ಬಾರ್ಲಿಗೆ ತೆನೆಯೂ ಬಂದಿದ್ದರಿಂದ ಈ ಎರಡು ಬೆಳೆಗಳು ನಾಶವಾದವು.
ವಿಮೋಚನಕಾಂಡ 9 : 32 (ERVKN)
ಆದರೆ ಗೋಧಿಯೂ ಕಡಲೆಯೂ ಬೇರೆ ಧಾನ್ಯಗಳ ನಂತರ ಆಗುವ ಬೆಳೆಗಳಾಗಿದ್ದವು. ಆದ್ದರಿಂದ ಈ ಪೈರುಗಳು ನಾಶವಾಗಲಿಲ್ಲ.
ವಿಮೋಚನಕಾಂಡ 9 : 33 (ERVKN)
ಮೋಶೆಯು ಫರೋಹನ ಬಳಿಯಿಂದ ಹೊರಟು ಪಟ್ಟಣದಾಚೆಗೆ ಹೋದಾಗ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋದವು; ಮಳೆಯೂ ನಿಂತುಹೋಯಿತು.
ವಿಮೋಚನಕಾಂಡ 9 : 34 (ERVKN)
ಮಳೆಯೂ ಆಲಿಕಲ್ಲಿನ ಮಳೆಯೂ ಗುಡುಗೂ ನಿಂತುಹೋದದ್ದನ್ನು ಕಂಡ ಫರೋಹನು ಮತ್ತು ಅವನ ಅಧಿಕಾರಿಗಳು ಮತ್ತೆ ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡು ಪಾಪ ಮಾಡಿದರು.
ವಿಮೋಚನಕಾಂಡ 9 : 35 (ERVKN)
ಇಸ್ರೇಲರು ಸ್ವತಂತ್ರರಾಗಿ ಹೋಗಲು ಫರೋಹನು ಬಿಡಲಿಲ್ಲ. ಯೆಹೋವನು ಮೋಶೆಯ ಮೂಲಕ ಹೇಳಿಸಿದಂತೆಯೇ ಇದಾಯಿತು.
❮
❯