ವಿಮೋಚನಕಾಂಡ 8 : 1 (ERVKN)
ಆಗ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗಿ ಯೆಹೋವನು ಹೀಗೆನ್ನುತ್ತಾನೆ ಎಂದು ಹೇಳು: ‘ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ.
ವಿಮೋಚನಕಾಂಡ 8 : 2 (ERVKN)
ನನ್ನ ಜನರನ್ನು ನೀನು ಹೋಗಗೊಡಿಸದಿದ್ದರೆ ನಾನು ಈಜಿಪ್ಟನ್ನು ಕಪ್ಪೆಗಳಿಂದ ತುಂಬಿಸುವೆನು.
ವಿಮೋಚನಕಾಂಡ 8 : 3 (ERVKN)
ನೈಲ್ ನದಿಯು ಕಪ್ಪೆಗಳಿಂದ ತುಂಬಿ ಹೋಗುವುದು. ಕಪ್ಪೆಗಳು ನದಿಯಿಂದ ಬಂದು ನಿಮ್ಮ ಮನೆಗಳನ್ನು ಪ್ರವೇಶಿಸುವವು; ನಿಮ್ಮ ಮಲಗುವ ಕೋಣೆಯಲ್ಲಿಯೂ ನಿಮ್ಮ ಹಾಸಿಗೆಗಳಲ್ಲಿಯೂ ನಿಮ್ಮ ಅಧಿಕಾರಿಗಳ ಮನೆಗಳಲ್ಲಿಯೂ ನಿಮ್ಮ ಒಲೆಗಳಲ್ಲಿಯೂ ನೀರಿನ ಜಾಡಿಗಳಲ್ಲಿಯೂ ಹಿಟ್ಟುನಾದುವ ತಟ್ಟೆಗಳಲ್ಲಿಯೂ ಇರುವವು;
ವಿಮೋಚನಕಾಂಡ 8 : 4 (ERVKN)
ನಿನ್ನ ಮೇಲೆಯೂ ನಿನ್ನ ಪ್ರಜೆಗಳ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ಇರುವವು’ ” ಅಂದನು.
ವಿಮೋಚನಕಾಂಡ 8 : 5 (ERVKN)
ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆಗಳ, ಕಾಲುವೆಗಳ ಮತ್ತು ಕೆರೆಗಳ ಮೇಲೆ ಕೈಚಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೊರಬರುವವು” ಎಂದು ಹೇಳಿದನು.
ವಿಮೋಚನಕಾಂಡ 8 : 6 (ERVKN)
ಅಂತೆಯೇ ಆರೋನನು ಈಜಿಪ್ಟಿನ ನೀರುಗಳ ಮೇಲೆ ತನ್ನ ಕೈಯನ್ನು ಚಾಚಿದಾಗ ಕಪ್ಪೆಗಳು ನೀರುಗಳಿಂದ ಹೊರಬಂದು ಈಜಿಪ್ಟ್ ದೇಶವನ್ನು ಆವರಿಸಿಕೊಳ್ಳತೊಡಗಿದವು.
ವಿಮೋಚನಕಾಂಡ 8 : 7 (ERVKN)
ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.
ವಿಮೋಚನಕಾಂಡ 8 : 8 (ERVKN)
ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನನ್ನಿಂದ ಮತ್ತು ನನ್ನ ಜನರ ಮೇಲಿಂದ ಕಪ್ಪೆಗಳನ್ನು ತೊಲಗಿಸಬೇಕೆಂದು ಯೆಹೋವನನ್ನು ಕೇಳಿಕೊಳ್ಳಿರಿ. ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ನಾನು ಆತನ ಜನರನ್ನು ಹೋಗಗೊಡಿಸುವೆನು” ಎಂದು ಹೇಳಿದನು.
ವಿಮೋಚನಕಾಂಡ 8 : 9 (ERVKN)
ಮೋಶೆಯು ಫರೋಹನಿಗೆ, “ಕಪ್ಪೆಗಳು ಯಾವಾಗ ಬಿಟ್ಟುಹೋಗಬೇಕೆಂದು ತಿಳಿಸು. ನಾನು ನಿನಗೋಸ್ಕರ, ನಿನ್ನ ಜನರಿಗೋಸ್ಕರ ಮತ್ತು ನಿನ್ನ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವೆನು. ಆಗ ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿಯುತ್ತವೆ” ಎಂದು ಹೇಳಿದನು.
ವಿಮೋಚನಕಾಂಡ 8 : 10 (ERVKN)
ಅದಕ್ಕೆ ಫರೋಹನು, “ನಾಳೆ” ಅಂದನು. ಮೋಶೆ, “ನೀನು ಹೇಳಿದಂತೆಯೇ ಆಗುವುದು. ನಮ್ಮ ದೇವರಾದ ಯೆಹೋವನಿಗೆ ಸಮಾನನಾದ ದೇವರೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ.
ವಿಮೋಚನಕಾಂಡ 8 : 11 (ERVKN)
ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಅಧಿಕಾರಿಗಳನ್ನೂ ನಿನ್ನ ಜನರನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಕೊಳ್ಳುವವು” ಎಂದು ಹೇಳಿದನು.
ವಿಮೋಚನಕಾಂಡ 8 : 12 (ERVKN)
ಮೋಶೆ ಆರೋನರು ಫರೋಹನ ಬಳಿಯಿಂದ ಹೋದರು. ಫರೋಹನ ವಿರುದ್ಧವಾಗಿ ಕಳುಹಿಸಿದ ಕಪ್ಪೆಗಳನ್ನು ತೊಲಗಿಸಬೇಕೆಂದು ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು.
ವಿಮೋಚನಕಾಂಡ 8 : 13 (ERVKN)
ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಕಪ್ಪೆಗಳು ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಸತ್ತುಹೋದವು.
ವಿಮೋಚನಕಾಂಡ 8 : 14 (ERVKN)
ಅವುಗಳನ್ನು ಕೂಡಿಸಿದಾಗ ರಾಶಿರಾಶಿಗಳಾದವು. ದೇಶವು ದುರ್ವಾಸನೆಯಿಂದ ತುಂಬಿಹೋಯಿತು.
ವಿಮೋಚನಕಾಂಡ 8 : 15 (ERVKN)
ಕಪ್ಪೆಗಳಿಂದ ಬಿಡುಗಡೆಯಾದದ್ದನ್ನು ಫರೋಹನು ಕಂಡು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಮೋಶೆ ಆರೋನರ ಬೇಡಿಕೆಯನ್ನು ಅವನು ಈಡೇರಿಸಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ವಿಮೋಚನಕಾಂಡ 8 : 16 (ERVKN)
ಹೇನುಗಳು ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆ’ ಎಂದು ಹೇಳು. ಆಗ ಧೂಳು ಈಜಿಪ್ಟಿನಲ್ಲೆಲ್ಲಾ ಹೇನುಗಳಾಗುವವು” ಎಂದು ಹೇಳಿದನು.
ವಿಮೋಚನಕಾಂಡ 8 : 17 (ERVKN)
ಅವರು ಹಾಗೆಯೇ ಮಾಡಿದರು. ಆರೋನನು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆದನು. ಆಗ ಈಜಿಪ್ಟಿನ ಪ್ರತಿಯೊಂದು ಸ್ಥಳದ ಧೂಳು ಹೇನುಗಳಾಗಿ ಪ್ರಾಣಿಗಳ ಮೇಲೂ ಜನರ ಮೇಲೂ ಏರಿಕೊಂಡವು.
ವಿಮೋಚನಕಾಂಡ 8 : 18 (ERVKN)
ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಲು ಪ್ರಯತ್ನಿಸಿದರೂ ಧೂಳಿನಿಂದ ಹೇನುಗಳನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೇನುಗಳು ಪ್ರಾಣಿಗಳ ಮೇಲೂ ಜನರ ಮೇಲೂ ಉಳಿದುಕೊಂಡವು.
ವಿಮೋಚನಕಾಂಡ 8 : 19 (ERVKN)
ಆದ್ದರಿಂದ ಮಾಂತ್ರಿಕರು ಫರೋಹನಿಗೆ, “ಇದು ದೇವರ ಕಾರ್ಯವೇ” ಎಂದು ಹೇಳಿದರು. ಆದರೆ ಫರೋಹನು ಅವರ ಮಾತಿಗೆ ಕಿವಿಗೊಡಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ವಿಮೋಚನಕಾಂಡ 8 : 20 (ERVKN)
ಹುಳಗಳು ಯೆಹೋವನು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಬಳಿಗೆ ಹೋಗು. ಫರೋಹನು ನದಿಗೆ ಹೋಗುವನು. ನೀನು ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನನ್ನ ಜನರು ಹೋಗಿ ನನ್ನನ್ನು ಆರಾಧಿಸಲಿ!
ವಿಮೋಚನಕಾಂಡ 8 : 21 (ERVKN)
ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿಮ್ಮ ಮನೆಗಳಲ್ಲಿಯೂ ತುಂಬಿಕೊಳ್ಳುವವು; ನೆಲದ ಮೇಲೆಲ್ಲಾ ಇರುವವು.
ವಿಮೋಚನಕಾಂಡ 8 : 22 (ERVKN)
ಆದರೆ ನಾನು ಈಜಿಪ್ಟಿನವರೊಡನೆ ವರ್ತಿಸುವಂತೆ ಇಸ್ರೇಲರೊಡನೆ ವರ್ತಿಸುವುದಿಲ್ಲ. ನನ್ನ ಜನರು ವಾಸಿಸುವ ಗೋಷೆನ್ ಪ್ರದೇಶದಲ್ಲಿ ಯಾವ ಹುಳವೂ ಇರುವುದಿಲ್ಲ. ನಾನೇ ಭೂಲೋಕವನ್ನು ಆಳುವ ಯೆಹೋವನೆಂದು ಆಗ ನೀನು ತಿಳಿದುಕೊಳ್ಳುವೆ.
ವಿಮೋಚನಕಾಂಡ 8 : 23 (ERVKN)
ಆದ್ದರಿಂದ ನಾಳೆ ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು. ಅದೇ ನನ್ನ ಸಾಕ್ಷಿ’ ಎಂದು ಹೇಳಬೇಕು” ಎಂದು ಹೇಳಿದನು.
ವಿಮೋಚನಕಾಂಡ 8 : 24 (ERVKN)
ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೆಕ್ಕವಿಲ್ಲದಷ್ಟು ಹುಳಗಳು ಈಜಿಪ್ಟಿಗೆ ಬಂದು ಫರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡವು. ಇಡೀ ಈಜಿಪ್ಟನ್ನೇ ಅವು ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು.
ವಿಮೋಚನಕಾಂಡ 8 : 25 (ERVKN)
ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನಿಮ್ಮ ದೇವರಿಗೆ ಈ ದೇಶದಲ್ಲಿಯೇ ಯಜ್ಞಗಳನ್ನು ಅರ್ಪಿಸಿರಿ” ಎಂದು ಹೇಳಿದನು.
ವಿಮೋಚನಕಾಂಡ 8 : 26 (ERVKN)
ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಪಿಸುವ ಯಜ್ಞಗಳು ಈಜಿಪ್ಟಿನವರಿಗೆ ನಿಷಿದ್ಧವಾಗಿವೆ. ಹೀಗಿರಲು ಅವರ ಕಣ್ಣೆದುರಿಗೇ ಅಂಥ ಯಜ್ಞಗಳನ್ನು ಅರ್ಪಿಸಿದರೆ, ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವುದಿಲ್ಲವೇ?
ವಿಮೋಚನಕಾಂಡ 8 : 27 (ERVKN)
ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸುವಂತಾಗಲಿ. ಹೀಗೆ ಮಾಡಲು ಯೆಹೋವನೇ ನಮಗೆ ಹೇಳಿದ್ದಾನೆ” ಅಂದನು.
ವಿಮೋಚನಕಾಂಡ 8 : 28 (ERVKN)
ಅದಕ್ಕೆ ಫರೋಹನು, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ನಾನು ನಿಮಗೆ ಅಪ್ಪಣೆ ಕೊಡುವೆನು; ಆದರೆ ಬಹುದೂರ ಹೋಗಬೇಡಿ; ಈಗ ಹೋಗಿ ನನಗೋಸ್ಕರ ಪ್ರಾರ್ಥಿಸಿರಿ” ಅಂದನು.
ವಿಮೋಚನಕಾಂಡ 8 : 29 (ERVKN)
ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋದಾಗ, ನಿನಗೂ ನಿನ್ನ ಪ್ರಜೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಚಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು.
ವಿಮೋಚನಕಾಂಡ 8 : 30 (ERVKN)
ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು.
ವಿಮೋಚನಕಾಂಡ 8 : 31 (ERVKN)
ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಯೆಹೋವನು ಫರೋಹನಿಂದಲೂ ಅವನ ಅಧಿಕಾರಿಗಳಿಂದಲೂ ಅವನ ಜನರಿಂದಲೂ ಹುಳಗಳನ್ನು ತೊಲಗಿಸಿದನು. ಯಾವ ಹುಳಗಳೂ ಉಳಿಯಲಿಲ್ಲ.
ವಿಮೋಚನಕಾಂಡ 8 : 32 (ERVKN)
ಆದರೆ ಫರೋಹನು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ಜನರನ್ನು ಹೋಗಗೊಡಿಸಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32