ವಿಮೋಚನಕಾಂಡ 37 : 1 (ERVKN)
ಬೆಚಲೇಲನು ಜಾಲೀಮರದಿಂದ ಪವಿತ್ರ ಪೆಟ್ಟಿಗೆಯನ್ನು ಮಾಡಿದನು. ಪೆಟ್ಟಿಗೆಯು ಎರಡೂವರೆ ಮೊಳ ಉದ್ದ ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರವಿತ್ತು.
ವಿಮೋಚನಕಾಂಡ 37 : 2 (ERVKN)
ಪೆಟ್ಟಿಗೆಯ ಹೊರಗಿನ ಮತ್ತು ಒಳಗಿನ ಭಾಗವನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಬಳಿಕ ಪೆಟ್ಟಿಗೆಯ ಸುತ್ತಲೂ ಚಿನ್ನದ ಗೋಟು ಕಟ್ಟಿಸಿದನು.
ವಿಮೋಚನಕಾಂಡ 37 : 3 (ERVKN)
ಅವನು ಚಿನ್ನದ ನಾಲ್ಕು ಬಳೆಗಳನ್ನು ಮಾಡಿಸಿ ಪೆಟ್ಟಿಗೆಯ ನಾಲ್ಕು ಮೂಲೆಗಳಲ್ಲಿ ಇರಿಸಿದನು. ಈ ಬಳೆಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸಲ್ಪಡುತ್ತಿದ್ದವು. ಪ್ರತಿಯೊಂದು ಬದಿಯಲ್ಲೂ ಎರಡು ಬಳೆಗಳಿದ್ದವು.
ವಿಮೋಚನಕಾಂಡ 37 : 4 (ERVKN)
ಬಳಿಕ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಕೋಲುಗಳನ್ನು ಜಾಲೀಮರದಿಂದ ಮಾಡಿಸಿದನು. ಅದನ್ನು ಅಪ್ಪಟ ಬಂಗಾರದಿಂದ ಹೊದಿಸಿದನು.
ವಿಮೋಚನಕಾಂಡ 37 : 5 (ERVKN)
ಪೆಟ್ಟಿಗೆಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಅವನು ಕೋಲುಗಳನ್ನು ಸೇರಿಸಿದನು.
ವಿಮೋಚನಕಾಂಡ 37 : 6 (ERVKN)
ಬಳಿಕ ಅವನು ಅಪ್ಪಟ ಬಂಗಾರದ ಕೃಪಾಸನವನ್ನು ಮಾಡಿಸಿದನು. ಅದು ಎರಡೂವರೆ ಮೊಳ ಉದ್ದ ಮತ್ತು ಒಂದೂವರೆ ಮೊಳ ಅಗಲ ಇತ್ತು.
ವಿಮೋಚನಕಾಂಡ 37 : 7 (ERVKN)
ಬಳಿಕ ಬೆಚಲೇಲನು ಬಂಗಾರವನ್ನು ಸುತ್ತಿಗೆಯಿಂದ ಕೆತ್ತಿ ಎರಡು ಕೆರೂಬಿಗಳ ಆಕಾರಗಳನ್ನು ಮಾಡಿದನು. ಅವನು ಕೆರೂಬಿದೂತರನ್ನು ಕೃಪಾಸನದ ಕೊನೆಗಳಲ್ಲಿ ಇಟ್ಟನು.
ವಿಮೋಚನಕಾಂಡ 37 : 8 (ERVKN)
ಒಂದು ಕೆರೂಬಿಯನ್ನು ಕೃಪಾಸನದ ಒಂದು ಕೊನೆಯಲ್ಲೂ ಇನ್ನೊಂದನ್ನು ಮತ್ತೊಂದು ಕೊನೆಯಲ್ಲೂ ಇಟ್ಟನು. ಅವುಗಳನ್ನು ಒಟ್ಟಾಗಿ ಕೃಪಾಸನಕ್ಕೆ ಜೋಡಿಸಿ ಒಂದೇ ವಸ್ತುವನ್ನಾಗಿ ಮಾಡಿದನು.
ವಿಮೋಚನಕಾಂಡ 37 : 9 (ERVKN)
ಕೆರೂಬಿಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿದ್ದವು. ಅವುಗಳು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.
ವಿಮೋಚನಕಾಂಡ 37 : 10 (ERVKN)
ತರುವಾಯ, ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇತ್ತು.
ವಿಮೋಚನಕಾಂಡ 37 : 11 (ERVKN)
ಅವನು ಮೇಜನ್ನು ಅಪ್ಪಟ ಬಂಗಾರದಿಂದ ಹೊದಿಸಿದನು; ಮೇಜಿನ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು.
ವಿಮೋಚನಕಾಂಡ 37 : 12 (ERVKN)
ಬಳಿಕ ಅವನು ಮೇಜಿನ ಸುತ್ತಲೂ ಮೂರು ಇಂಚು ಅಗಲದ ಚೌಕಟ್ಟನ್ನು ಮಾಡಿದನು; ಆ ಚೌಕಟ್ಟಿಗೆ ಚಿನ್ನದ ಗೋಟನ್ನು ಕಟ್ಟಿಸಿದನು.
ವಿಮೋಚನಕಾಂಡ 37 : 13 (ERVKN)
ಬಳಿಕ ಅವನು ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿ ಅವುಗಳನ್ನು ಇರಿಸಿದನು.
ವಿಮೋಚನಕಾಂಡ 37 : 14 (ERVKN)
ಅವನು ಬಳೆಗಳನ್ನು ಮೇಜಿನ ತುದಿಯಲ್ಲಿರುವ ಚೌಕಟ್ಟಿಗೆ ಹತ್ತಿರವಾಗಿ ಇರಿಸಿದನು. ಕೋಲುಗಳಿಂದ ಮೇಜನ್ನು ಹೊರುವುದಕ್ಕಾಗಿ ಈ ಬಳೆಗಳು ಇದ್ದವು.
ವಿಮೋಚನಕಾಂಡ 37 : 15 (ERVKN)
ಬಳಿಕ ಮೇಜನ್ನು ಹೊರುವುದಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಕೋಲುಗಳನ್ನು ಜಾಲೀಮರದಿಂದ ಮಾಡಿದನು. ಕೋಲುಗಳನ್ನು ಅಪ್ಪಟ ಬಂಗಾರದಿಂದ ಹೊದಿಸಿದನು.
ವಿಮೋಚನಕಾಂಡ 37 : 16 (ERVKN)
ಬಳಿಕ ಅವನು ಮೇಜಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ಎಲ್ಲಾ ವಸ್ತುಗಳನ್ನು ಮಾಡಿದನು. ಅವನು ಅಪ್ಪಟ ಬಂಗಾರದ ತಟ್ಟೆ, ಚಮಚ, ಬೋಗುಣಿ ಮತ್ತು ಹೂಜೆಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜೆಗಳು ಪಾನದ್ರವ್ಯ ಸಮರ್ಪಣೆಗಳನ್ನು ಅರ್ಪಿಸುವುದಕ್ಕೆ ಉಪಯುಕ್ತವಾಗಿದ್ದವು.
ವಿಮೋಚನಕಾಂಡ 37 : 17 (ERVKN)
ಬಳಿಕ ಅವನು ದೀಪಸ್ತಂಭವನ್ನು ಮಾಡಿದನು. ಅವನು ಅಪ್ಪಟ ಬಂಗಾರದಿಂದ ಕಂಬವನ್ನು ಮಾಡಿದನು. ತರುವಾಯ ಹೂವು, ಮೊಗ್ಗು, ಮತ್ತು ದಳಗಳನ್ನು ಮಾಡಿ ಜೋಡಿಸಿದನು. ಹೀಗೆ ಅವು ಪುಷ್ಪಾಲಂಕಾರವಾದ ಒಂದೇ ವಸ್ತುವಾಯಿತು.
ವಿಮೋಚನಕಾಂಡ 37 : 18 (ERVKN)
ದೀಪಸ್ತಂಭಕ್ಕೆ ಆರು ಕೊಂಬೆಗಳಿದ್ದವು. ಮೂರು ಕೊಂಬೆಗಳು ಒಂದು ಕಡೆಯಲ್ಲೂ ಇನ್ನು ಮೂರು ಕೊಂಬೆಗಳು ಇನ್ನೊಂದು ಕಡೆಯಲ್ಲಿಯೂ ಇದ್ದವು.
ವಿಮೋಚನಕಾಂಡ 37 : 19 (ERVKN)
ಪ್ರತಿಯೊಂದು ಕೊಂಬೆಗಳಲ್ಲಿ ಮೂರುಮೂರು ಹೂವುಗಳಿದ್ದವು. ಈ ಹೂವುಗಳು ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಹೂವುಗಳಂತೆ ಮಾಡಲ್ಪಟ್ಟವು.
ವಿಮೋಚನಕಾಂಡ 37 : 20 (ERVKN)
ದೀಪಸ್ತಂಭದ ಕಂಬದಲ್ಲಿ ಇನ್ನೂ ನಾಲ್ಕು ಹೂವುಗಳಿದ್ದವು. ಅವುಗಳು ಸಹ ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಯ ಹೂವುಗಳಂತೆ ಮಾಡಲ್ಪಟ್ಟವು.
ವಿಮೋಚನಕಾಂಡ 37 : 21 (ERVKN)
ಕಂಬದ ಪ್ರತಿಯೊಂದು ಕಡೆಯಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿದ್ದವು. ಕೊಂಬೆಗಳು ಕವಲೊಡೆದಿರುವ ಮೂರು ಸ್ಥಳಗಳಲ್ಲೂ ಒಂದೊಂದು ಹೂವು ಇತ್ತು. ಆ ಹೂವಿಗೆ ಮೊಗ್ಗುಗಳು ಮತ್ತು ದಳಗಳು ಇದ್ದವು.
ವಿಮೋಚನಕಾಂಡ 37 : 22 (ERVKN)
ಹೂವು ಮತ್ತು ಕೊಂಬೆಗಳಿಂದ ಕೂಡಿದ ಇಡೀ ದೀಪಸ್ತಂಭವು ಅಪ್ಪಟ ಬಂಗಾರದಿಂದ ಅಖಂಡವಾಗಿ ಮಾಡಲ್ಪಟ್ಟಿತ್ತು.
ವಿಮೋಚನಕಾಂಡ 37 : 23 (ERVKN)
ಅವನು ಈ ದೀಪಸ್ತಂಭಕ್ಕೆ ಏಳು ಹಣತೆಗಳನ್ನು ಮಾಡಿದನು; ಬಳಿಕ ಅಪ್ಪಟ ಬಂಗಾರದಿಂದ ಬತ್ತಿಗಳನ್ನು ಸರಿಪಡಿಸುವ ಕತ್ತರಿಗಳನ್ನೂ ಹರಿವಾಣಗಳನ್ನೂ ಮಾಡಿದನು.
ವಿಮೋಚನಕಾಂಡ 37 : 24 (ERVKN)
ದೀಪಸ್ತಂಭವನ್ನು ಮತ್ತು ಅದರ ಉಪಕರಣಗಳನ್ನು ಮಾಡಲು ಎಪ್ಪತ್ತೈದು ಪೌಂಡು ಅಪ್ಪಟ ಬಂಗಾರವನ್ನು ಉಪಯೋಗಿಸಿದನು.
ವಿಮೋಚನಕಾಂಡ 37 : 25 (ERVKN)
ಅವನು ಧೂಪವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಧೂಪವೇದಿಕೆಯು ಚೌಕವಾಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಎರಡು ಮೊಳ ಎತ್ತರ ಇತ್ತು. ಧೂಪವೇದಿಕೆಯಲ್ಲಿ ನಾಲ್ಕು ಕೊಂಬುಗಳಿದ್ದವು. ಪ್ರತಿ ಮೂಲೆಯಲ್ಲಿಯೂ ಒಂದೊಂದು ಕೊಂಬುಗಳಿದ್ದವು. ಈ ಕೊಂಬುಗಳು ಒಟ್ಟಾಗಿ ಧೂಪವೇದಿಕೆಗೆ ಜೋಡಿಸಲ್ಪಟ್ಟು ಅವಿಭಾಜ್ಯವಾಗಿತ್ತು.
ವಿಮೋಚನಕಾಂಡ 37 : 26 (ERVKN)
ಅವನು ಅಪ್ಪಟ ಬಂಗಾರದಿಂದ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಕೊಂಬುಗಳನ್ನೂ ಹೊದಿಸಿದನು. ಬಳಿಕ ಅವನು ಧೂಪವೇದಿಕೆಯ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು.
ವಿಮೋಚನಕಾಂಡ 37 : 27 (ERVKN)
ಅವನು ಧೂಪವೇದಿಕೆಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸಿ ಗೋಟಿನ ಕೆಳಗೆ ವೇದಿಕೆಯ ಪ್ರತಿಯೊಂದು ಬದಿಯಲ್ಲಿ ಇರಿಸಿದನು. ಈ ಚಿನ್ನದ ಬಳೆಗಳು ವೇದಿಕೆಯನ್ನು ಕೋಲುಗಳ ಮೂಲಕ ಹೊರುವುದಕ್ಕೆ ಉಪಯುಕ್ತವಾಗಿದ್ದವು.
ವಿಮೋಚನಕಾಂಡ 37 : 28 (ERVKN)
ಅವನು ಜಾಲೀಮರದಿಂದ ಕೋಲುಗಳನ್ನು ಮಾಡಿಸಿ ಚಿನ್ನದಿಂದ ಅವುಗಳನ್ನು ಹೊದಿಸಿದನು.
ವಿಮೋಚನಕಾಂಡ 37 : 29 (ERVKN)
ತರುವಾಯ ಅವನು ಪವಿತ್ರವಾದ ಅಭಿಷೇಕತೈಲವನ್ನು ಮಾಡಿದನು. ಅವನು ಶುದ್ಧವಾದ ಪರಿಮಳಧೂಪವನ್ನು ಮಾಡಿದನು. ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಈ ವಸ್ತುಗಳನ್ನು ಮಾಡಲಾಯಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: