ವಿಮೋಚನಕಾಂಡ 30 : 1 (ERVKN)
ಧೂಪವೇದಿಕೆ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿಸು.
ವಿಮೋಚನಕಾಂಡ 30 : 2 (ERVKN)
ಈ ಧೂಪವೇದಿಕೆಯು ಚೌಕವಾಗಿ ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದರ ನಾಲ್ಕು ಮೂಲೆಗಳಲ್ಲೂ ಕೊಂಬುಗಳಿರಬೇಕು. ಈ ಕೊಂಬುಗಳು ಧೂಪವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು.
ವಿಮೋಚನಕಾಂಡ 30 : 3 (ERVKN)
ಧೂಪವೇದಿಕೆಯ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಅದರ ಕೊಂಬುಗಳನ್ನೂ ಶುದ್ಧಬಂಗಾರದ ತಗಡಿನಿಂದ ಹೊದಿಸಬೇಕು ಮತ್ತು ಸುತ್ತಲೂ ಚಿನ್ನದ ಕಟ್ಟನ್ನು ಕಟ್ಟಿಸಬೇಕು.
ವಿಮೋಚನಕಾಂಡ 30 : 4 (ERVKN)
ಧೂಪವೇದಿಕೆಯ ಎದುರುಬದುರಾಗಿರುವ ಎರಡು ಗೋಡೆಗಳಲ್ಲಿ ಕಟ್ಟಿನ ಕೆಳಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸು. ಧೂಪವೇದಿಕೆಯನ್ನು ಹೊರುವ ಕೋಲುಗಳನ್ನು ಈ ಬಳೆಗಳು ಹಿಡಿದುಕೊಂಡಿರುತ್ತವೆ.
ವಿಮೋಚನಕಾಂಡ 30 : 5 (ERVKN)
ಕೋಲುಗಳನ್ನು ಜಾಲೀಮರದಿಂದ ಮಾಡಿಸು. ಚಿನ್ನದ ತಗಡಿನಿಂದ ಆ ಕೋಲುಗಳನ್ನು ಹೊದಿಸು.
ವಿಮೋಚನಕಾಂಡ 30 : 6 (ERVKN)
ವಿಶೇಷ ಪರದೆಯ (ಒಡಂಬಡಿಕೆಯ ಪೆಟ್ಟಿಗೆಯನ್ನು ಆವರಿಸಿಕೊಂಡಿರುವ) ಮುಂಭಾಗದಲ್ಲಿ ಧೂಪವೇದಿಕೆಯನ್ನು ಇಡು. ಧೂಪವೇದಿಕೆಯು ಒಡಂಬಡಿಕೆ ಪೆಟ್ಟಿಗೆಯ ಕೃಪಾಸನದ ಮುಂಭಾಗದಲ್ಲಿರುವುದು. ಇದು ನಾನು ನಿನ್ನನ್ನು ಸಂಧಿಸುವ ಸ್ಥಳವಾಗಿದೆ.
ವಿಮೋಚನಕಾಂಡ 30 : 7 (ERVKN)
“ಆರೋನನು ಪ್ರತಿಮುಂಜಾನೆ ಧೂಪವೇದಿಕೆಯ ಮೇಲೆ ಸುಗಂಧದ್ರವ್ಯಗಳ ಧೂಪವನ್ನು ಉರಿಸಬೇಕು. ಅವನು ದೀಪಗಳನ್ನು ಸರಿಪಡಿಸಲು ಬರುವಾಗ ಇದನ್ನು ಮಾಡುವನು.
ವಿಮೋಚನಕಾಂಡ 30 : 8 (ERVKN)
ತಿರುಗಿ ಸಾಯಂಕಾಲದಲ್ಲಿ ಧೂಪವನ್ನು ಉರಿಸಬೇಕು. ಇದು ಸಾಯಂಕಾಲಗಳಲ್ಲಿ ಅವನು ದೀಪಗಳನ್ನು ಹೊತ್ತಿಸುವ ಸಮಯವಾಗಿರುತ್ತದೆ. ಹೀಗೆ ಪ್ರತಿದಿನ ಯೆಹೋವನ ಮುಂದೆ ನಿತ್ಯವಾದ ಧೂಪಸಮರ್ಪಣೆ ಇರುವುದು.
ವಿಮೋಚನಕಾಂಡ 30 : 9 (ERVKN)
ಈ ಧೂಪವೇದಿಕೆಯನ್ನು ಬೇರೆ ವಿಧದ ಧೂಪಸಮರ್ಪಣೆಗಾಗಲಿ ಸರ್ವಾಂಗಹೋಮವನ್ನು ಅರ್ಪಿಸುವುದಕ್ಕಾಗಲಿ ಯಾವುದೇ ಧಾನ್ಯಸಮರ್ಪಣೆಗಾಗಲಿ ಪಾನದ್ರವ್ಯಸಮರ್ಪಣೆಗಾಗಲಿ ಉಪಯೋಗಿಸಬಾರದು.
ವಿಮೋಚನಕಾಂಡ 30 : 10 (ERVKN)
“ಆರೋನನು ವರ್ಷಕ್ಕೊಮ್ಮೆ ಯೆಹೋವನಿಗೆ ವಿಶೇಷ ಯಜ್ಞವನ್ನು ಸಮರ್ಪಿಸಬೇಕು. ಜನರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆರೋನನು ದೋಷಪರಿಹಾರಕ ಯಜ್ಞದ ರಕ್ತವನ್ನು ಉಪಯೋಗಿಸುವನು. ಆರೋನನು ಇದನ್ನು ಈ ಯಜ್ಞವೇದಿಕೆಯ ಕೊಂಬುಗಳಲ್ಲಿ ಮಾಡುವನು. ಆ ದಿನವು ದೋಷಪರಿಹಾರಕ ದಿನವೆಂದು ಕರೆಯಲ್ಪಡುವುದು. ಯೆಹೋವನಿಗೆ ಇದು ಅತೀ ಪರಿಶುದ್ಧವಾದ ವಿಶೇಷ ದಿನವಾಗಿದೆ.”
ವಿಮೋಚನಕಾಂಡ 30 : 11 (ERVKN)
ದೇವಾಲಯದ ತೆರಿಗೆ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ವಿಮೋಚನಕಾಂಡ 30 : 12 (ERVKN)
“ಇಸ್ರೇಲರನ್ನು ಲೆಕ್ಕಿಸು. ಹೀಗಾಗಿ ಎಷ್ಟು ಮಂದಿ ಜನರಿರುತ್ತಾರೆಂದು ನೀನು ತಿಳಿದುಕೊಳ್ಳುವೆ. ಪ್ರತಿಸಾರಿ ಇದನ್ನು ಮಾಡಿದಾಗ, ಪ್ರತಿಯೊಬ್ಬನು ತನಗೋಸ್ಕರವಾಗಿ ಯೆಹೋವನಿಗೆ ತೆರಿಗೆಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳೂ ಉಂಟಾಗುವುದಿಲ್ಲ.
ವಿಮೋಚನಕಾಂಡ 30 : 13 (ERVKN)
ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನು ಅಧಿಕೃತ ಅಳತೆಗನುಸಾರವಾಗಿರುವ ಅರ್ಧಶೆಕೆಲ್ ಕಪ್ಪಕಾಣಿಕೆಯನ್ನು ಕೊಡಬೇಕು. ಈ ಅರ್ಧಶೆಕೆಲ್ ಯೆಹೋವನಿಗೆ ಕಾಣಿಕೆಯಾಗಿರುತ್ತದೆ.
ವಿಮೋಚನಕಾಂಡ 30 : 14 (ERVKN)
ಲೆಕ್ಕಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೆ ಮೇಲ್ಪಟ್ಟವರೂ ಈ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು.
ವಿಮೋಚನಕಾಂಡ 30 : 15 (ERVKN)
ಐಶ್ವರ್ಯವಂತರು ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು; ಬಡವರು ಅರ್ಧಶೆಕೆಲಿಗಿಂತ ಕಡಿಮೆ ಕೊಡಬಾರದು. ಜನರೆಲ್ಲರೂ ಈ ಕಾಣಿಕೆಯನ್ನು ಯೆಹೋವನಿಗೆ ಅರ್ಪಿಸಬೇಕು. ಇದು ನಿಮ್ಮ ಪ್ರಾಣರಕ್ಷಣೆಯ ತೆರಿಗೆಯಾಗಿದೆ.
ವಿಮೋಚನಕಾಂಡ 30 : 16 (ERVKN)
ಇಸ್ರೇಲರಿಂದ ಈ ಹಣವನ್ನು ಒಟ್ಟುಗೂಡಿಸಬೇಕು. ದೇವದರ್ಶನಗುಡಾರದ ಸೇವೆಗಾಗಿ ಹಣವನ್ನು ಉಪಯೋಗಿಸಬೇಕು. ಯೆಹೋವನು ತನ್ನ ಜನರನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿ ಈ ಕಪ್ಪವು ಒಂದು ಮಾರ್ಗವಾಗಿದೆ. ಅವರು ತಮ್ಮ ಪ್ರಾಣರಕ್ಷಣೆಗಾಗಿ ಹಣವನ್ನು ಕೊಡುತ್ತಿರುವರು.”
ವಿಮೋಚನಕಾಂಡ 30 : 17 (ERVKN)
ಗಂಗಾಳ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ವಿಮೋಚನಕಾಂಡ 30 : 18 (ERVKN)
“ತಾಮ್ರದ ಗಂಗಾಳವನ್ನು ಮಾಡಿ ಅದನ್ನು ತಾಮ್ರದ ಪೀಠದ ಮೇಲಿಡು. ತೊಳೆದುಕೊಳ್ಳುವುದಕ್ಕೆ ನೀವು ಇದನ್ನು ಉಪಯೋಗಿಸುವಿರಿ. ಗಂಗಾಳವನ್ನು ದೇವದರ್ಶನಗುಡಾರ ಮತ್ತು ಯಜ್ಞವೇದಿಕೆಯ ನಡುವೆ ಇಡು. ಗಂಗಾಳದಲ್ಲಿ ನೀರನ್ನು ತುಂಬಿಸು.
ವಿಮೋಚನಕಾಂಡ 30 : 19 (ERVKN)
ಆರೋನನು ಮತ್ತು ಅವನ ಪುತ್ರರು ಈ ಗಂಗಾಳದಲ್ಲಿರುವ ನೀರಿನಿಂದ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು.
ವಿಮೋಚನಕಾಂಡ 30 : 20 (ERVKN)
ಪ್ರತಿಸಾರಿ ದೇವದರ್ಶನಗುಡಾರಕ್ಕೆ ಪ್ರವೇಶಿಸುವಾಗ ಅಥವಾ ಯೆಹೋವನಿಗಾಗಿ ಸರ್ವಾಂಗಹೋಮಗಳನ್ನು ಅರ್ಪಿಸಲು ಯಜ್ಞವೇದಿಕೆಯ ಹತ್ತಿರಕ್ಕೆ ಬರುವಾಗ ಅವರು ನೀರಿನಿಂದ ತೊಳೆದುಕೊಳ್ಳಬೇಕು. ಆಗ ಅವರು ಸಾಯುವುದಿಲ್ಲ.
ವಿಮೋಚನಕಾಂಡ 30 : 21 (ERVKN)
ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದರಿಂದ ಅವರು ಸಾಯುವುದಿಲ್ಲ. ಆರೋನನಿಗೂ ಅವನ ಸಂತತಿಯವರಿಗೂ ಇದು ಶಾಶ್ವತವಾದ ನಿಯಮ. ತಲೆಮಾರುಗಳವರೆಗೆ ಆರೋನನ ಸಂತತಿಯವರಿಗೆಲ್ಲಾ ಇದೇ ಕಟ್ಟಳೆಯಿರುವುದು.”
ವಿಮೋಚನಕಾಂಡ 30 : 22 (ERVKN)
ಅಭಿಷೇಕತೈಲ ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ವಿಮೋಚನಕಾಂಡ 30 : 23 (ERVKN)
“ಶ್ರೇಷ್ಠವಾದ ಸುಗಂಧದ್ರವ್ಯಗಳನ್ನು ಮಾಡಿಸು. ಹನ್ನೆರಡು ಪೌಂಡುಗಳಷ್ಟು ಅಚ್ಚ ರಕ್ತಬೋಳ, ಅದರ ಅರ್ಧದಷ್ಟು ಅಂದರೆ ಆರು ಪೌಂಡು ಸುವಾಸನೆಯುಳ್ಳ ದಾಲ್ಚಿನ್ನಿ, ಹನ್ನೆರಡು ಪೌಂಡುಗಳಷ್ಟು ಸುವಾಸನೆಯುಳ್ಳ ಬಜೆ,
ವಿಮೋಚನಕಾಂಡ 30 : 24 (ERVKN)
ಮತ್ತು ಹನ್ನೆರಡು ಪೌಂಡುಗಳಷ್ಟು ಲವಂಗಚಕ್ಕೆಯನ್ನು ತೆಗೆದುಕೊಂಡು ಬಾ. ಇವುಗಳನ್ನೆಲ್ಲ ಅಧಿಕೃತ ಅಳತೆಮಾಪಕದಿಂದ ಅಳತೆಮಾಡು. ಒಂದು ಗ್ಯಾಲನ್ ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬಾ.
ವಿಮೋಚನಕಾಂಡ 30 : 25 (ERVKN)
“ಸುವಾಸನೆಯುಳ್ಳ ಪವಿತ್ರ ಅಭಿಷೇಕತೈಲವನ್ನು ಮಾಡಲು ಇವುಗಳನ್ನೆಲ್ಲ ಒಟ್ಟಿಗೆ ಬೆರೆಸು.
ವಿಮೋಚನಕಾಂಡ 30 : 26 (ERVKN)
ದೇವದರ್ಶನಗುಡಾರವನ್ನು ಮತ್ತು ಒಡಂಬಡಿಕೆಯ ಪೆಟ್ಟಿಗೆಯನ್ನು ಅಭಿಷೇಕಿಸಲು ಈ ತೈಲವನ್ನು ಉಪಯೋಗಿಸು.
ವಿಮೋಚನಕಾಂಡ 30 : 27 (ERVKN)
ಈ ತೈಲವನ್ನು ಮೇಜಿನ ಮೇಲಿರುವ ಎಲ್ಲಾ ಉಪಕರಣಗಳ ಮೇಲೆ ಸುರಿ. ಈ ತೈಲವನ್ನು ದೀಪ ಮತ್ತು ಅದರ ಉಪಕರಣಗಳೆಲ್ಲದರ ಮೇಲೆ ಸುರಿ. ಆ ಯಜ್ಞವೇದಿಕೆಯ ಮೇಲಿರುವ ಅದರ ಉಪಕರಣಗಳ ಮೇಲೆಯೂ ಈ ತೈಲವನ್ನು ಸುರಿ. ತೈಲವನ್ನು ಧೂಪವೇದಿಕೆಯ ಮೇಲೆ ಸುರಿ.
ವಿಮೋಚನಕಾಂಡ 30 : 28 (ERVKN)
ದೇವರಿಗೆ ಬೆಂಕಿಯ ಮೂಲಕ ಅರ್ಪಿಸುವ ಹೋಮಗಳ ಮೇಲೆಯೂ ತೈಲವನ್ನು ಸುರಿ. ಈ ತೈಲವನ್ನು ಗಂಗಾಳದ ಮೇಲೆಯೂ ಮತ್ತು ಗಂಗಾಳದ ಕೆಳಗಿರುವ ಪೀಠದ ಮೇಲೆಯೂ ಸುರಿ.
ವಿಮೋಚನಕಾಂಡ 30 : 29 (ERVKN)
ಆಗ ನೀನು ಈ ಉಪಕರಣಗಳನ್ನೆಲ್ಲ ಪವಿತ್ರಗೊಳಿಸುವೆ. ಅವುಗಳು ಯೆಹೋವನಿಗೆ ಬಹು ವಿಶೇಷವಾಗಿವೆ. ಅವುಗಳಿಗೆ ಸೋಂಕಿದ್ದೆಲ್ಲವೂ ಪವಿತ್ರವಾಗುತ್ತವೆ.
ವಿಮೋಚನಕಾಂಡ 30 : 30 (ERVKN)
“ಆರೋನನನ್ನು ಮತ್ತು ಅವನ ಪುತ್ರರನ್ನು ಈ ತೈಲದಿಂದ ಅಭಿಷೇಕಿಸು. ಅವರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾರೆಂದು ಇದು ತೋರಿಸುವುದು. ಆಗ ಅವರು ಅಭಿಷೇಕಿಸಲ್ಪಟ್ಟ ಯಾಜಕರಾಗಿ ನನ್ನ ಸೇವೆಮಾಡಬಹುದು.
ವಿಮೋಚನಕಾಂಡ 30 : 31 (ERVKN)
ಅಭಿಷೇಕತೈಲವು ಪವಿತ್ರವಾದದ್ದು. ಅದನ್ನು ಯಾವಾಗಲೂ ನನಗಾಗಿ ಮಾತ್ರವೇ ಉಪಯೋಗಿಸಬೇಕೆಂದು ಇಸ್ರೇಲರಿಗೆ ಹೇಳು.
ವಿಮೋಚನಕಾಂಡ 30 : 32 (ERVKN)
ಯಾರೂ ಇದನ್ನು ಸಾಮಾನ್ಯವಾದ ಸುಗಂಧ ವಾಸನೆಯುಳ್ಳ ತೈಲವಾಗಿ ಉಪಯೋಗಿಸಬಾರದು. ಈ ವಿಶೇಷವಾದ ತೈಲವನ್ನು ಮಾಡುವ ರೀತಿಯಲ್ಲಿ ಸಾಮಾನ್ಯವಾದ ಸುಗಂಧ ತೈಲವನ್ನು ಮಾಡಬಾರದು. ಈ ತೈಲವು ಪವಿತ್ರವಾದದ್ದು. ಇದು ನಿಮಗೆ ಬಹಳ ವಿಶೇಷವಾದದ್ದಾಗಿರಬೇಕು.
ವಿಮೋಚನಕಾಂಡ 30 : 33 (ERVKN)
ಯಾವನಾದರೂ ಸುಗಂಧ ತೈಲವನ್ನು ಈ ಪವಿತ್ರತೈಲದಂತೆ ಮಾಡಿ ಯಾಜಕನಲ್ಲದ ಒಬ್ಬನಿಗೆ ಅದನ್ನು ಕೊಟ್ಟರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ವಿಮೋಚನಕಾಂಡ 30 : 34 (ERVKN)
ಧೂಪ ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಹಾಲು, ಮಡ್ಡಿ, ಗುಗ್ಗುಲ, ಗಂಧದ ಚೆಕ್ಕೆ ಎಂಬ ಸುಗಂಧ ದ್ರವ್ಯಗಳನ್ನು ಸಮವಾಗಿ ತೆಗೆದುಕೊ.
ವಿಮೋಚನಕಾಂಡ 30 : 35 (ERVKN)
ಸುವಾಸನೆಯುಳ್ಳ ಧೂಪವನ್ನು ಮಾಡುವುದಕ್ಕೆ ಈ ಸುಗಂಧ ದ್ರವ್ಯಗಳನ್ನು ಒಟ್ಟಾಗಿ ಬೆರೆಸು. ಸುಗಂಧದ್ರವ್ಯಕಾರನು ಮಾಡುವ ಪ್ರಕಾರವೇ ಇದನ್ನು ಮಾಡು. ಈ ಧೂಪಕ್ಕೆ ಉಪ್ಪನ್ನು ಬೆರೆಸು. ಉಪ್ಪು ಅದನ್ನು ಶುದ್ಧಗೊಳಿಸುವುದು.
ವಿಮೋಚನಕಾಂಡ 30 : 36 (ERVKN)
ಸ್ವಲ್ಪ ಧೂಪವನ್ನು ಅರೆದು ಪುಡಿ ಮಾಡು. ಈ ಪುಡಿಯನ್ನು ದೇವದರ್ಶನಗುಡಾರದಲ್ಲಿರುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿಡು. ಈ ಧೂಪದ ಪುಡಿಯನ್ನು ಅದರ ವಿಶೇಷ ಉದ್ದೇಶಕ್ಕಾಗಿ ಮಾತ್ರವೇ ಉಪಯೋಗಿಸಬೇಕು. ಅದು ಅತಿ ಪರಿಶುದ್ಧವಾದದ್ದು.
ವಿಮೋಚನಕಾಂಡ 30 : 37 (ERVKN)
ನೀನು ಈ ಧೂಪವನ್ನು ಯೆಹೋವನಿಗಾಗಿ ವಿಶೇಷವಾದ ರೀತಿಯಲ್ಲಿ ಮಾತ್ರ ಉಪಯೋಗಿಸಬೇಕು. ನೀನು ಈ ಧೂಪವನ್ನು ವಿಶೇಷವಾದ ರೀತಿಯಲ್ಲಿ ತಯಾರಿಸಬೇಕು. ಈ ರೀತಿ ವಿಶೇಷವಾಗಿ ಬೇರೆ ಯಾವ ಧೂಪವನ್ನೂ ಮಾಡಬಾರದು.
ವಿಮೋಚನಕಾಂಡ 30 : 38 (ERVKN)
ಸುವಾಸನೆಗೋಸ್ಕರ ಒಬ್ಬನು ತನಗಾಗಿ ಸ್ವಲ್ಪ ಧೂಪವನ್ನು ಈ ರೀತಿಯಲ್ಲಿ ಮಾಡಿದರೆ ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38