ವಿಮೋಚನಕಾಂಡ 28 : 1 (ERVKN)
ಯಾಜಕರು ಧರಿಸಬೇಕಾದ ಬಟ್ಟೆಗಳು ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ನಿನ್ನ ಬಳಿಗೆ ಬರಲು ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಾದ ನಾದ್ವಾ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೂ ಹೇಳು. ಇವರು ಯಾಜಕರಾಗಿ ನನ್ನ ಸೇವೆ ಮಾಡುವರು.
ವಿಮೋಚನಕಾಂಡ 28 : 2 (ERVKN)
“ನಿನ್ನ ಅಣ್ಣನಾದ ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿಸು. ಈ ಬಟ್ಟೆಗಳು ಅವನಿಗೆ ಘನತೆಯನ್ನೂ ಗೌರವವನ್ನೂ ನೀಡುತ್ತವೆ.
ವಿಮೋಚನಕಾಂಡ 28 : 3 (ERVKN)
ಈ ಬಟ್ಟೆಗಳನ್ನು ಮಾಡುವಂಥ ಕೆಲವು ನಿಪುಣರಿದ್ದಾರೆ. ನಾನು ಅವರಿಗೆ ವಿಶೇಷ ಜ್ಞಾನವನ್ನು ಕೊಟ್ಟಿದ್ದೇನೆ. ಆರೋನನಿಗೆ ಬೇಕಾದ ಬಟ್ಟೆಗಳನ್ನು ಮಾಡಲು ಅವರಿಗೆ ಹೇಳು. ಅವನು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾನೆಂದು ಈ ಬಟ್ಟೆಗಳು ತೋರಿಸುತ್ತವೆ. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು.
ವಿಮೋಚನಕಾಂಡ 28 : 4 (ERVKN)
ಅವರು ಮಾಡತಕ್ಕ ಬಟ್ಟೆಗಳು ಯಾವುವೆಂದರೆ: ದೈವನಿರ್ಣಯಕ ಪದಕ, ಏಫೋದು, ನೀಲಿಯ ನಿಲುವಂಗಿ, ಹೆಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಡುಕಟ್ಟು. ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟೆಗಳನ್ನು ಅವರು ಮಾಡಬೇಕು. ಆಗ ಆರೋನನೂ ಅವನ ಗಂಡುಮಕ್ಕಳೂ ಯಾಜಕರಾಗಿ ನನ್ನ ಸೇವೆಮಾಡಬಹುದು.
ವಿಮೋಚನಕಾಂಡ 28 : 5 (ERVKN)
ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಲು ಅವರಿಗೆ ಹೇಳು.
ವಿಮೋಚನಕಾಂಡ 28 : 6 (ERVKN)
ಏಫೋದು ಮತ್ತು ನಡುಕಟ್ಟು “ಏಫೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಚಾಣಾಕ್ಷತೆಯಿಂದ ಹೆಣೆದು ತಯಾರಿಸಬೇಕು.
ವಿಮೋಚನಕಾಂಡ 28 : 7 (ERVKN)
ಏಫೋದಿನ ಪ್ರತಿಭುಜದಲ್ಲಿ ಭುಜದ ಪಟ್ಟಿಯಿರಬೇಕು. ಭುಜದ ಈ ಪಟ್ಟಿಗಳು ಏಫೋದಿನ ಎರಡು ಕೊನೆಗಳಿಗೆ ಕಟ್ಟಿರಬೇಕು.
ವಿಮೋಚನಕಾಂಡ 28 : 8 (ERVKN)
“ಇವರು ಏಫೋದಿಗೆ ಸೇರಿಸಲ್ಪಟ್ಟಿರುವ ನಡುಕಟ್ಟನ್ನು ಬಹಳ ಎಚ್ಚರಿಕೆಯಿಂದ ಹೆಣೆಯಬೇಕು. ಏಫೋದನ್ನು ತಯಾರಿಸಿದಂತೆಯೇ ಈ ನಡುಕಟ್ಟನ್ನು ತಯಾರಿಸಬೇಕು. ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.
ವಿಮೋಚನಕಾಂಡ 28 : 9 (ERVKN)
“ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು.
ವಿಮೋಚನಕಾಂಡ 28 : 10 (ERVKN)
ಒಂದು ರತ್ನದ ಮೇಲೆ ಆರು ಹೆಸರುಗಳನ್ನೂ ಇನ್ನೊಂದು ರತ್ನದ ಮೇಲೆ ಆರು ಹೆಸರುಗಳನ್ನೂ ಬರೆಸು. ಹಿರಿಮಗನಿಂದ ಹಿಡಿದು ಕಿರಿ ಮಗನವರೆಗೆ ಕ್ರಮಾನುಸಾರವಾಗಿ ಹೆಸರುಗಳನ್ನು ಬರೆಸು.
ವಿಮೋಚನಕಾಂಡ 28 : 11 (ERVKN)
ಈ ಕಲ್ಲುಗಳ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರನ್ನು ಕೆತ್ತಿಸು. ಒಬ್ಬ ಕೆಲಸಗಾರನು ಮುದ್ರೆಯನ್ನು ಮಾಡುವ ರೀತಿಯಲ್ಲಿ ಇದನ್ನು ಮಾಡಿಸು. ಚಿನ್ನದ ಕುಂದಣದಲ್ಲಿ ರತ್ನಗಳನ್ನಿಡು.
ವಿಮೋಚನಕಾಂಡ 28 : 12 (ERVKN)
ಬಳಿಕ ಈ ಎರಡು ರತ್ನಗಳನ್ನು ಏಫೋದಿನ ಪ್ರತಿಭುಜದ ಪಟ್ಟಿಯಲ್ಲಿಡು. ಆರೋನನು ಯೆಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ರೇಲನ ಗಂಡುಮಕ್ಕಳ ಹೆಸರುಗಳುಳ್ಳ ಎರಡು ರತ್ನಗಳು ಏಫೋದಿನ ಮೇಲಿರುತ್ತವೆ. ದೇವರು ಇಸ್ರೇಲರನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು.
ವಿಮೋಚನಕಾಂಡ 28 : 13 (ERVKN)
ಏಫೋದಿನಲ್ಲಿ ಕಲ್ಲುಗಳು ಬಿಗಿಯಾಗಿ ಹಿಡಿದುಕೊಂಡಿರಲು ಉತ್ತಮ ಚಿನ್ನವನ್ನು ಉಪಯೋಗಿಸು.
ವಿಮೋಚನಕಾಂಡ 28 : 14 (ERVKN)
ಹೆಣಿಗೆ ಕೆಲಸದಿಂದ ಶುದ್ಧಬಂಗಾರದ ಎರಡು ಸರಪಣಿಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.
ವಿಮೋಚನಕಾಂಡ 28 : 15 (ERVKN)
ದೈವನಿರ್ಣಯದ ಪದಕ “ಮಹಾಯಾಜಕನಿಗೆ ದೈವನಿರ್ಣಯದ ಪದಕವನ್ನು ಮಾಡಿಸು. ಏಫೋದನ್ನು ಮಾಡಿಸಿದಂತೆ ನಿಪುಣರಾದ ಕೆಲಸಗಾರರಿಂದ ಇದನ್ನು ಮಾಡಿಸಬೇಕು. ಚಿನ್ನದ ದಾರಗಳು, ಉತ್ಕೃಷ್ಟವಾದ ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪು ದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.
ವಿಮೋಚನಕಾಂಡ 28 : 16 (ERVKN)
ಅದು ಚೌಕವಾಗಿದ್ದು ಒಂಭತ್ತು ಇಂಚು ಉದ್ದವಾಗಿಯೂ ಒಂಭತ್ತು ಇಂಚು ಅಗಲವಾಗಿಯೂ ಇರಬೇಕು.
ವಿಮೋಚನಕಾಂಡ 28 : 17 (ERVKN)
ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ, ಸ್ಪಟಿಕಗಳಿರಬೇಕು.
ವಿಮೋಚನಕಾಂಡ 28 : 18 (ERVKN)
ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ, ಪಚ್ಚೆಗಳಿರಬೇಕು.
ವಿಮೋಚನಕಾಂಡ 28 : 19 (ERVKN)
ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಮತ್ತು ಧೂಮ್ರಮಣಿಗಳಿರಬೇಕು.
ವಿಮೋಚನಕಾಂಡ 28 : 20 (ERVKN)
ನಾಲ್ಕನೆಯ ಸಾಲಿನಲ್ಲಿ ಪೀತ ರತ್ನ, ಗೋಮೇಧಕರತ್ನ, ವೈಡೂರ್ಯಗಳಿರಬೇಕು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.
ವಿಮೋಚನಕಾಂಡ 28 : 21 (ERVKN)
ಇಸ್ರೇಲನ ಗಂಡುಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿರಬೇಕು. ಪ್ರತಿಯೊಂದು ಕಲ್ಲುಗಳಲ್ಲಿ ಇಸ್ರೇಲನ ಗಂಡುಮಕ್ಕಳ ಒಬ್ಬೊಬ್ಬರ ಹೆಸರನ್ನು ಬರೆಸಬೇಕು. ಒಬ್ಬ ಕೆಲಸಗಾರನು ಮುದ್ರೆಯನ್ನು ಕೆತ್ತುವಂತೆ ಈ ಹೆಸರುಗಳನ್ನು ಪ್ರತಿ ರತ್ನದ ಮೇಲೆ ಕೆತ್ತಿಸಬೇಕು.
ವಿಮೋಚನಕಾಂಡ 28 : 22 (ERVKN)
“ದೈವನಿರ್ಣಯ ಪದಕದಲ್ಲಿ ಶುದ್ಧಬಂಗಾರದ ಸರಪಣಿಗಳನ್ನು ಮಾಡಿಸು. ಈ ಸರಪಣಿಗಳು ಹುರಿಗಳಂತಿರುವ ಹಗ್ಗದಂತೆ ಇರಬೇಕು.
ವಿಮೋಚನಕಾಂಡ 28 : 23 (ERVKN)
ಬಂಗಾರದ ಎರಡು ಬಳೆಗಳನ್ನು ಮಾಡಿಸಿ ಅದರ ಎರಡು ಕೊನೆಗಳಲ್ಲಿ ಸಿಕ್ಕಿಸಬೇಕು.
ವಿಮೋಚನಕಾಂಡ 28 : 24 (ERVKN)
ಅದರ ಕೊನೆಯಲ್ಲಿರುವ ಎರಡು ಬಳೆಗಳ ಮೂಲಕ ಚಿನ್ನದ ಎರಡು ಸರಪಣಿಗಳನ್ನು ಸಿಕ್ಕಿಸಬೇಕು.
ವಿಮೋಚನಕಾಂಡ 28 : 25 (ERVKN)
ಚಿನ್ನದ ಸರಪಣಿಗಳ ಇನ್ನೊಂದು ಕೊನೆಗಳನ್ನು ಎರಡು ಪಟ್ಟಿಗಳಿಗೆ ಬಿಗಿಯಾಗಿ ಕಟ್ಟಿಸಬೇಕು. ಇದು ಮುಂಬದಿಯಲ್ಲಿರುವ ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಬಿಗಿಯಾಗಿ ಹಿಡಿದುಕೊಂಡಿರುವಂತೆ ಮಾಡುವುದು.
ವಿಮೋಚನಕಾಂಡ 28 : 26 (ERVKN)
ಇನ್ನೂ ಎರಡು ಚಿನ್ನದ ಬಳೆಗಳನ್ನು ಮಾಡಿಸಿ, ಅವುಗಳನ್ನು ದೈವನಿರ್ಣಯದ ಪದಕದ ಬೇರೆ ಎರಡು ಕೊನೆಗಳಿಗೆ ಸಿಕ್ಕಿಸು. ಇದು ದೈವನಿರ್ಣಯದ ಪದಕದ ಒಳಗಣ ಅಂಚಿನಲ್ಲಿರುವುದು.
ವಿಮೋಚನಕಾಂಡ 28 : 27 (ERVKN)
ಇನ್ನೆರಡು ಚಿನ್ನದ ಬಳೆಗಳನ್ನು ಮಾಡಿಸಿ ಅವುಗಳನ್ನು ಏಫೋದಿನ ಭುಜಪಟ್ಟಿಗಳ ಮುಂಭಾಗದ ಕೆಳಗೆ ಸಿಕ್ಕಿಸು. ಈ ಚಿನ್ನದ ಬಳೆಗಳನ್ನು ಏಫೋದಿನ ನಡುಕಟ್ಟಿನ ಮೇಲ್ಗಡೆ ಇರಿಸು.
ವಿಮೋಚನಕಾಂಡ 28 : 28 (ERVKN)
ದೈವನಿರ್ಣಯದ ಪದಕದ ಬಳೆಗಳನ್ನು ಏಫೋದಿನ ಬಳೆಗಳಿಗೆ ಜೋಡಿಸಲು ನೀಲಿದಾರವನ್ನು ಉಪಯೋಗಿಸು. ಈ ರೀತಿಯಲ್ಲಿ ದೈವನಿರ್ಣಯದ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿರುವುದು.
ವಿಮೋಚನಕಾಂಡ 28 : 29 (ERVKN)
“ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು.
ವಿಮೋಚನಕಾಂಡ 28 : 30 (ERVKN)
ದೈವನಿರ್ಣಯದ ಪದಕದೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಡು. ಆರೋನನು ಯೆಹೋವನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋನನು ಯೆಹೋವನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀರ್ಪು ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.
ವಿಮೋಚನಕಾಂಡ 28 : 31 (ERVKN)
ಯಾಜಕರ ಇತರ ಬಟ್ಟೆಗಳು “ಏಫೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟೆಯಿಂದ ಮಾಡಿಸಬೇಕು.
ವಿಮೋಚನಕಾಂಡ 28 : 32 (ERVKN)
ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು.
ವಿಮೋಚನಕಾಂಡ 28 : 33 (ERVKN)
ಬಟ್ಟೆಯ ಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬೆ ಹಣ್ಣಿನ ಚೆಂಡುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಸಿಕ್ಕಿಸಬೇಕು.
ವಿಮೋಚನಕಾಂಡ 28 : 34 (ERVKN)
ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು.
ವಿಮೋಚನಕಾಂಡ 28 : 35 (ERVKN)
ಆರೋನನು ಯಾಜಕನಾಗಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವನ ಮುಂದೆ ನಿಲ್ಲುವುದಕ್ಕೆ ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ ಗೆಜ್ಜೆಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜೆಗಳು ಶಬ್ಧ ಮಾಡುತ್ತಿರುತ್ತವೆ. ಹೀಗಾಗಿ ಆರೋನನು ಸಾಯುವುದಿಲ್ಲ.
ವಿಮೋಚನಕಾಂಡ 28 : 36 (ERVKN)
“ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಯೆಹೋವನಿಗೆ ಮೀಸಲು ಎಂಬ ಮಾತುಗಳನ್ನು ಚಿನ್ನದಲ್ಲಿ ಕೆತ್ತಿಸಬೇಕು.
ವಿಮೋಚನಕಾಂಡ 28 : 37 (ERVKN)
ಚಿನ್ನದ ಪಟ್ಟಿಯನ್ನು ನೀಲಿದಾರಕ್ಕೆ ಬಿಗಿಯಾಗಿ ಕಟ್ಟಿಸಬೇಕು. ನೀಲಿದಾರವನ್ನು ಮುಂಡಾಸದ ಸುತ್ತಲೂ ಅದರಲ್ಲಿ ಕೆತ್ತಿಸಬೇಕು. ಚಿನ್ನದ ಪಟ್ಟಿಯು ಮುಂಡಾಸದ ಮುಂಭಾಗದಲ್ಲಿರಬೇಕು.
ವಿಮೋಚನಕಾಂಡ 28 : 38 (ERVKN)
ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.
ವಿಮೋಚನಕಾಂಡ 28 : 39 (ERVKN)
“ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಠವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು.
ವಿಮೋಚನಕಾಂಡ 28 : 40 (ERVKN)
ಆರೋನನ ಗಂಡುಮಕ್ಕಳಿಗೂ ಅಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸು. ಇವು ಅವರಿಗೆ ಘನತೆ ಮತ್ತು ಗೌರವಗಳನ್ನು ಕೊಡುತ್ತವೆ.
ವಿಮೋಚನಕಾಂಡ 28 : 41 (ERVKN)
ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.
ವಿಮೋಚನಕಾಂಡ 28 : 42 (ERVKN)
“ಯಾಜಕರಿಗೆ ಒಳಗಿನ ಉಡುಪುಗಳನ್ನು ಮಾಡಲು ನಾರುಬಟ್ಟೆಯನ್ನು ಉಪಯೋಗಿಸು. ಈ ಒಳಗಿನ ಉಡುಪುಗಳು ಅವರನ್ನು ಸೊಂಟದಿಂದ ತೊಡೆಯವರೆಗೆ ಮುಚ್ಚುವುದು.
ವಿಮೋಚನಕಾಂಡ 28 : 43 (ERVKN)
ಆರೋನನು ಮತ್ತು ಅವನ ಗಂಡುಮಕ್ಕಳು ದೇವದರ್ಶನ ಗುಡಾರದೊಳಗೆ ಪ್ರವೇಶಿಸುವಾಗಲೆಲ್ಲಾ ಈ ಉಡುಪುಗಳನ್ನು ಧರಿಸಿಕೊಳ್ಳಬೇಕು. ಪವಿತ್ರಸ್ಥಳದಲ್ಲಿ ಯಾಜಕರಾಗಿ ಸೇವೆಮಾಡಲು ಯಜ್ಞವೇದಿಕೆಯ ಬಳಿಗೆ ಬರುವಾಗ ಅವರು ಈ ಬಟ್ಟೆಗಳನ್ನು ಧರಿಸಿಕೊಂಡಿರಬೇಕು. ಅವರು ಈ ಉಡುಪುಗಳನ್ನು ಧರಿಸಿಕೊಳ್ಳದಿದ್ದರೆ, ದೋಷಿಗಳಾಗಿ ಸಾಯುವರು. ಇವುಗಳೆಲ್ಲಾ ಆರೋನನಿಗೂ ಅವನ ನಂತರ ಅವನ ಕುಟುಂಬಸ್ಥರೆಲ್ಲರಿಗೂ ಶಾಶ್ವತವಾದ ಕಟ್ಟಳೆಯಾಗಿವೆ.”
❮
❯