ವಿಮೋಚನಕಾಂಡ 15 : 1 (ERVKN)
ಮೋಶೆಯ ಗೀತೆ ಬಳಿಕ ಮೋಶೆ ಮತ್ತು ಇಸ್ರೇಲರು ಯೆಹೋವನಿಗೆ ಈ ಗೀತೆಯನ್ನು ಹಾಡತೊಡಗಿದರು: “ನಾನು ಯೆಹೋವನಿಗೆ ಹಾಡುವೆನು. ಆತನು ಮಹಾಕಾರ್ಯಗಳನ್ನು ಮಾಡಿದ್ದಾನೆ. ಆತನು ಕುದುರೆಯನ್ನೂ ಸವಾರನನ್ನೂ ಸಮುದ್ರದೊಳಗೆ ಮುಳುಗಿಸಿದನು.
ವಿಮೋಚನಕಾಂಡ 15 : 2 (ERVKN)
ಯೆಹೋವನೇ ನನ್ನ ಬಲ, ಆತನು ನನ್ನನ್ನು ರಕ್ಷಿಸುತ್ತಾನೆ. ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನಮಗೆ ರಕ್ಷಣೆ ಉಂಟಾಯಿತು. ಯೆಹೋವನು ನನ್ನ ದೇವರು. ಮತ್ತು ನಾನು ಆತನನ್ನು ಸ್ತುತಿಸುತ್ತೇನೆ. ಯೆಹೋವನೇ ನಮ್ಮ ಪೂರ್ವಿಕರ ದೇವರು. ನಾನು ಆತನನ್ನು ಸನ್ಮಾನಿಸುತ್ತೇನೆ.
ವಿಮೋಚನಕಾಂಡ 15 : 3 (ERVKN)
ಯೆಹೋವನೇ ಯುದ್ಧವೀರನು. ಆತನ ನಾಮಧೇಯವು ಯೆಹೋವನೇ.
ವಿಮೋಚನಕಾಂಡ 15 : 4 (ERVKN)
ಆತನು ಫರೋಹನ ರಥಗಳನ್ನೂ ಸೈನಿಕರನ್ನೂ ಸಮುದ್ರದೊಳಗೆ ಕೆಡವಿದನು; ಫರೋಹನ ಮಹಾವೀರರನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ವಿಮೋಚನಕಾಂಡ 15 : 5 (ERVKN)
ಸಾಗರವು ಅವರನ್ನು ಮುಚ್ಚಿಕೊಂಡಿತು; ಆಳವಾದ ನೀರಿನಲ್ಲಿ ಅವರು ಬಂಡೆಗಳಂತೆ ಮುಳುಗಿದರು.
ವಿಮೋಚನಕಾಂಡ 15 : 6 (ERVKN)
“ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ. ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
ವಿಮೋಚನಕಾಂಡ 15 : 7 (ERVKN)
ನೀನು ಅತ್ಯಧಿಕ ಮಹತ್ವವುಳ್ಳವನಾಗಿ, ನನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ. ಬೆಂಕಿಯು ಹುಲ್ಲನ್ನು ಸುಡುವಂತೆ ನಿನ್ನ ಕೋಪವು ಅವರನ್ನು ನಾಶಮಾಡಿತು.
ವಿಮೋಚನಕಾಂಡ 15 : 8 (ERVKN)
ನೀನು ಊದಿದ ಮಹಾಗಾಳಿಯಿಂದ ನೀರು ಒತ್ತಟ್ಟಿಗೆ ಸೇರಿತು. ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು. ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.
ವಿಮೋಚನಕಾಂಡ 15 : 9 (ERVKN)
“ ‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು; ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು. ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು. ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’ ಎಂದುಕೊಂಡರು ವೈರಿಗಳು.
ವಿಮೋಚನಕಾಂಡ 15 : 10 (ERVKN)
ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ ಸಮುದ್ರವು ಅವರನ್ನು ಮುಚ್ಚಿಕೊಂಡಿತು; ಅವರು ಸೀಸದಂತೆ ಅಗಾಧವಾದ ಸಮುದ್ರದಲ್ಲಿ ಮುಳುಗಿದರು.
ವಿಮೋಚನಕಾಂಡ 15 : 11 (ERVKN)
“ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು. ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ. ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.
ವಿಮೋಚನಕಾಂಡ 15 : 12 (ERVKN)
ನೀನು ನಿನ್ನ ಬಲಗೈಯನ್ನು ಚಾಚಿದಾಗ ಭೂಮಿಯು ಶತ್ರುಗಳನ್ನು ನುಂಗಿಬಿಟ್ಟಿತು!
ವಿಮೋಚನಕಾಂಡ 15 : 13 (ERVKN)
ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು ಪ್ರೀತಿಯಿಂದ ನಡೆಸುವೆ. ನಿನ್ನ ಬಲದಿಂದ ನೀನು ಈ ಜನರನ್ನು ನಿನ್ನ ಪವಿತ್ರವಾದ ದೇಶಕ್ಕೆ ನಡಿಸುವೆ.
ವಿಮೋಚನಕಾಂಡ 15 : 14 (ERVKN)
“ಬೇರೆ ಜನಾಂಗಗಳವರು ಇದನ್ನು ಕೇಳಿ ಭಯಭೀತರಾಗುವರು; ಫಿಲಿಷ್ಟಿಯರು ಭಯದಿಂದ ತಲ್ಲಣಿಸುವರು.
ವಿಮೋಚನಕಾಂಡ 15 : 15 (ERVKN)
ಆಗ ಎದೋಮಿನ ಕುಟುಂಬಗಳು ಭಯಭೀತರಾಗುವರು. ಮೋವಾಬಿನ ನಾಯಕರು ಭಯದಿಂದ ನಡುಗುವರು. ಕಾನಾನಿನ ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
ವಿಮೋಚನಕಾಂಡ 15 : 16 (ERVKN)
ನಿನ್ನ ಭುಜಬಲವನ್ನು ಅವರು ಕಂಡು ಭಯಭೀತರಾಗುವರು. ಯೆಹೋವನ ಜನರು ದಾಟಿ ಹೋಗುವವರೆಗೆ, ನೀನು ರೂಪಿಸಿದ ಜನರು ದಾಟಿ ಹೋಗುವವರೆಗೆ, ಅವರು ಬಂಡೆಯಂತೆ ಮೌನವಾಗಿರುವರು.
ವಿಮೋಚನಕಾಂಡ 15 : 17 (ERVKN)
ನೀನು ನಿನ್ನ ಜನರನ್ನು ನಿನ್ನ ಬೆಟ್ಟದ ಸೀಮೆಗೂ ನಿನ್ನ ಸಿಂಹಾಸನಕ್ಕಾಗಿ ನೀನು ಸಿದ್ಧಮಾಡಿದ ಸ್ಥಳಕ್ಕೂ ನಡಿಸುವೆ. ಯೆಹೋವನೇ, ಒಡೆಯನೇ, ನಿನ್ನ ಕೈಗಳಿಂದ ನಿನ್ನ ಆಲಯವನ್ನು ಕಟ್ಟು.
ವಿಮೋಚನಕಾಂಡ 15 : 18 (ERVKN)
“ಯೆಹೋವನು ಎಂದೆಂದಿಗೂ ಆಳುವನು!”
ವಿಮೋಚನಕಾಂಡ 15 : 19 (ERVKN)
ಫರೋಹನ ಕುದುರೆಗಳು, ಸವಾರರು, ರಥಗಳು ಸಮುದ್ರದೊಳಕ್ಕೆ ಹೋದಾಗ ಸಮುದ್ರದ ನೀರು ಅವರನ್ನು ಆವರಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಇಸ್ರೇಲರಾದರೊ ಸಮುದ್ರದೊಳಗಿನ ಒಣನೆಲದಲ್ಲಿ ಸಮುದ್ರವನ್ನು ದಾಟಿಹೋದರು.
ವಿಮೋಚನಕಾಂಡ 15 : 20 (ERVKN)
ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು.
ವಿಮೋಚನಕಾಂಡ 15 : 21 (ERVKN)
ಮಿರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು: “ಯೆಹೋವನಿಗೆ ಗಾನಮಾಡಿರಿ; ಆತನು ಮಹಾಜಯಶಾಲಿಯಾದನು. ಕುದುರೆಗಳನ್ನೂ ರಾಹುತರನ್ನೂ ಸಮುದ್ರದೊಳಗೆ ಮುಳುಗಿಸಿ ನಾಶಮಾಡಿದನು…”
ವಿಮೋಚನಕಾಂಡ 15 : 22 (ERVKN)
ಅರಣ್ಯದಲ್ಲಿ ಕಹಿನೀರು ಸಿಹಿಯಾದದ್ದು ಮೋಶೆಯು ಇಸ್ರೇಲರನ್ನು ಕೆಂಪುಸಮುದ್ರದಿಂದ ಮುನ್ನಡೆಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ.
ವಿಮೋಚನಕಾಂಡ 15 : 23 (ERVKN)
ಆ ಬಳಿಕ ಅವರು ಮಾರಾ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕೆಂದರೆ ಅದು ಬಹು ಕಹಿಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ “ಮಾರಾ” ಎಂಬುದಾಗಿ ಹೆಸರು ಕೊಡಲ್ಪಟ್ಟಿತ್ತು.)
ವಿಮೋಚನಕಾಂಡ 15 : 24 (ERVKN)
ಅವರು ಮೋಶೆಗೆ ದೂರು ಹೇಳತೊಡಗಿದರು. “ಈಗ, ನಾವೇನು ಕುಡಿಯೋಣ?” ಎಂದು ಅವರು ಕೇಳಿದರು.
ವಿಮೋಚನಕಾಂಡ 15 : 25 (ERVKN)
ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು. ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು.
ವಿಮೋಚನಕಾಂಡ 15 : 26 (ERVKN)
ಆತನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಯೋಗ್ಯವಾದವುಗಳನ್ನು ಮಾಡಬೇಕು; ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಬೇಕು. ಆಗ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ಕಾಯಿಲೆಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನಾಗಿದ್ದೇನೆ” ಎಂದು ಹೇಳಿದನು.
ವಿಮೋಚನಕಾಂಡ 15 : 27 (ERVKN)
ಬಳಿಕ ಜನರು ಏಲೀಮಿಗೆ ಪ್ರಯಾಣ ಮಾಡಿದರು. ಏಲೀಮಿನಲ್ಲಿ ನೀರಿನ ಹನ್ನೆರಡು ಬುಗ್ಗೆಗಳಿದ್ದವು; ಅಲ್ಲಿ ಎಪ್ಪತ್ತು ಖರ್ಜೂರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಳೆಯ ಹಾಕಿದರು.
❮
❯