ವಿಮೋಚನಕಾಂಡ 11 : 1 (ERVKN)
ಚೊಚ್ಚಲು ಮಕ್ಕಳ ಮರಣ ಬಳಿಕ ಯೆಹೋವನು ಮೋಶೆಗೆ, “ನಾನು ಫರೋಹನಿಗೂ ಈಜಿಪ್ಟಿಗೂ ಮತ್ತೊಂದು ವಿಪತ್ತನ್ನು ಬರಮಾಡುತ್ತೇನೆ. ಆಗ ಅವನು ನಿಮ್ಮನ್ನು ಈಜಿಪ್ಟಿನಿಂದ ಕಳುಹಿಸುವನು; ನಿಮ್ಮನ್ನು ಬಲವಂತದಿಂದ ಕಳುಹಿಸಿಬಿಡುವನು.
ವಿಮೋಚನಕಾಂಡ 11 : 2 (ERVKN)
ನೀನು ಇಸ್ರೇಲರಿಗೆ ಈ ಸಂದೇಶವನ್ನು ತಿಳಿಸು: ‘ಸ್ತ್ರೀಯರೂ ಪುರುಷರೂ ತಮ್ಮ ನೆರೆಯವರಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ಕೇಳಿಕೊಳ್ಳಬೇಕು.’
ವಿಮೋಚನಕಾಂಡ 11 : 3 (ERVKN)
ಈಜಿಪ್ಟಿನವರು ನಿಮಗೆ ದಯೆತೋರುವಂತೆ ಯೆಹೋವನು ಅವರನ್ನು ಪ್ರೇರೇಪಿಸುವನು. ಈಜಿಪ್ಟಿನ ಜನರು ಮತ್ತು ಫರೋಹನ ಅಧಿಕಾರಿಗಳು ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡಿದ್ದಾರೆ” ಎಂದು ಹೇಳಿದನು.
ವಿಮೋಚನಕಾಂಡ 11 : 4 (ERVKN)
ಮೋಶೆಯು ಜನರಿಗೆ, “ಯೆಹೋವನು ಹೀಗೆನ್ನುತ್ತಾನೆ: ‘ಇಂದು ಮಧ್ಯರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗುವೆನು.
ವಿಮೋಚನಕಾಂಡ 11 : 5 (ERVKN)
ಈಜಿಪ್ಟಿನ ಚೊಚ್ಚಲು ಮಕ್ಕಳೆಲ್ಲರೂ ಅಂದರೆ ಫರೋಹನ ಚೊಚ್ಚಲು ಮಗನಿಂದಿಡಿದು ಧಾನ್ಯವನ್ನು ಬೀಸುವ ಸೇವಕಿಯ ಚೊಚ್ಚಲು ಮಗನವರೆಗೂ ಇರುವ ಚೊಚ್ಚಲು ಮಕ್ಕಳೆಲ್ಲರೂ ಸಾಯುವರು. ಇದಲ್ಲದೆ ಚೊಚ್ಚಲು ಪಶುಗಳೂ ಸಾಯುತ್ತವೆ.
ವಿಮೋಚನಕಾಂಡ 11 : 6 (ERVKN)
ಈಜಿಪ್ಟಿನಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ.
ವಿಮೋಚನಕಾಂಡ 11 : 7 (ERVKN)
ಆದರೆ ಇಸ್ರೇಲರಲ್ಲಿ ಯಾರಿಗೂ ಕೇಡಾಗುವುದಿಲ್ಲ. ಒಂದು ನಾಯಿಯೂ ಅವರಿಗೆ ಬೊಗಳುವುದಿಲ್ಲ. ಇಸ್ರೇಲಿನ ಜನರಿಗಾಗಲಿ ಪಶುಗಳಿಗಾಗಲಿ ಕೇಡಾಗುವುದಿಲ್ಲ. ಇಸ್ರೇಲರಿಗೂ ಮತ್ತು ಈಜಿಪ್ಟಿನವರಿಗೂ ನಾನು ವ್ಯತ್ಯಾಸ ಮಾಡಿದ್ದೇನೆಂದು ಆಗ ನೀವು ತಿಳಿದುಕೊಳ್ಳುವಿರಿ.
ವಿಮೋಚನಕಾಂಡ 11 : 8 (ERVKN)
ಆಗ ನಿಮ್ಮ ಈ ಗುಲಾಮರೆಲ್ಲರೂ (ಈಜಿಪ್ಟಿನ ಅಧಿಕಾರಿಗಳು) ನನ್ನ ಬಳಿಗೆ ಬಂದು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸುವರು.’ ಅವರು, ‘ಹೊರಟುಹೋಗಿ, ನಿಮ್ಮ ಜನರೆಲ್ಲರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿರಿ’ ಎಂದು ಹೇಳುವರು. ಆಗ ನಾನು ಫರೋಹನ ಬಳಿಯಿಂದ ಬಿಟ್ಟುಹೋಗುವೆನು” ಅಂದನು.
ವಿಮೋಚನಕಾಂಡ 11 : 9 (ERVKN)
ಬಳಿಕ ಯೆಹೋವನು ಮೋಶೆಗೆ, “ಫರೋಹನು ನಿನ್ನ ಮಾತಿಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಾನು ನನ್ನ ಮಹಾಶಕ್ತಿಯನ್ನು ಈಜಿಪ್ಟಿನಲ್ಲಿ ತೋರಿಸಬೇಕಾಗಿದೆ” ಅಂದನು.
ವಿಮೋಚನಕಾಂಡ 11 : 10 (ERVKN)
ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ; ಆದ್ದರಿಂದ ಮೋಶೆ ಆರೋನರು ಈ ಅದ್ಭುತಕಾರ್ಯಗಳನ್ನೆಲ್ಲಾ ಮಾಡಿದರು.

1 2 3 4 5 6 7 8 9 10